“ಇಲ್ಲಿ ಯಾವುದೇ ರಜೆಯ ಆಯ್ಕೆ, ವಿರಾಮ. ಅಥವಾ ಯಾವುದೇ ನಿಗದಿತ ಕೆಲಸದ ಸಮಯ ಇರುವುದಿಲ್ಲ.”

ಶೇಕ್ ಸಲಾವುದ್ದೀನ್, ಹೈದರಾಬಾದ್ ಮೂಲದ 37 ವರ್ಷದ ಪದವೀಧರ. ಅವರು ಅಲ್ಲಿನ ಕ್ಯಾಂಬ್‌ ಕಂಪನಿಯೊಂದಕ್ಕೆ ಡ್ರೈವರ್‌ ಆಗಿ ಕೆಲಸ ಮಾಡುತ್ತಾರೆ. ಅವರು ಕಂಪನಿ ಹೆಸರು ಹೇಳಲು ಇಚ್ಚಿಸಲಿಲ್ಲ. ಅವರು ತಾನು ಕೆಲಸ ಮಾಡುವ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಕಂಪನಿ ನೀಡಿದ ಒಪ್ಪಂದ ಪತ್ರವನ್ನು ಓದಿಲ್ಲ. "ಅದು ಹಲವಾರು ನಿಯಮಗಳಿಂದ ತುಂಬಿ ಹೋಗಿದೆ" ಎನ್ನುತ್ತಾರೆ. ಒಪ್ಪಂದದ ದಾಖಲೆಯು ಅವರು ಡೌನ್‌ಲೋಡ್‌ ಮಾಡಿದ ಅಪ್ಲಿಕೇಷನ್ನಿನಲ್ಲಷ್ಟೇ ಇರುತ್ತದೆ. ಅವರಿಗೆ ಯಾವುದೇ ಭೌತಿಕ ಪ್ರತಿಯನ್ನು ನೀಡಲಾಗಿಲ್ಲ.

"ನಾನು ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ" ಎನ್ನುತ್ತಾರೆ ಡೆಲಿವರಿ ಏಜೆಂಟ್ ರಮೇಶ್ ದಾಸ್ (ಹೆಸರು ಬದಲಾಯಿಸಲಾಗಿದೆ). ಕೋಲ್ಕತ್ತಾಕ್ಕೆ ವಲಸೆ ಬಂದ ಅವರಿಗೆ ಕಾನೂನು ಗ್ಯಾರಂಟಿಗಳನ್ನು ಹುಡುಕುವುದಕ್ಕಿಂತ ಹೆಚ್ಚಾಗಿ ಅವಸರದಲ್ಲಿ ಒಂದು ಕೆಲಸ ಬೇಕಿತ್ತು. ಪಶ್ಚಿಮ ಬಂಗಾಳದ ಪಶ್ಚಿಮ್ ಮೇದಿನಿಪುರ್ ಜಿಲ್ಲೆಯ ಬಹಾ ರುನಾ ಎನ್ನುವ ಊರಿನಿಂದ ಬಂದಿದ್ದ ಅವರು ತುರ್ತಾಗಿ ಸಿಗುವ ಕೆಲಸ ಹುಡುಕುತ್ತಿದ್ದರು. "ಯಾವುದೇ ರೀತಿಯ ನೇಮಕಾತಿ ಇತ್ಯಾದಿ ಇರಲಿಲ್ಲ. ನಮ್ಮ ಐಡಿ [ಗುರುತನ್ನು] ಅಪ್ಲಿಕೇಶನ್‌ನಲ್ಲಿ ಹಾಕಲಾಯಿತು. ಅದೊಂದೇ ಗುರುತಿನ ಪುರಾವೆ. ನಾವು ವೆಂಡರ್ ಮೂಲಕ [ಮೂರನೇ ವ್ಯಕ್ತಿಗಳ ಮೂಲಕ ಹೊರಗುತ್ತಿಗೆ] ಕೆಲಸ ಮಾಡುತ್ತಿದ್ದೇವೆ, ”ಎಂದು ಅವರು‌ ಹೇಳುತ್ತಾರೆ.

ರಮೇಶ್‌ ಅವರಿಗೆ ಒಂದು ಪಾರ್ಸೆಲ್‌ ತಲುಪಿಸಿದರೆ ಅದಕ್ಕೆ ಪ್ರತಿಯಾಗಿ 12-14 ರೂಪಾಯಿ ಸಿಗುತ್ತದೆ. ದಿನಕ್ಕೆ 40ರಿಂದ 45 ಪಾರ್ಸೆಲ್‌ ತಲುಪಿಸಿದರೆ 600 ರೂಪಾಯಿ ಸಂಪಾದಿಸಬಹುದು. “ಪೆಟ್ರೋಲ್‌ ಖರ್ಚು, ವಿಮೆ, ವೈದ್ಯಕೀಯ ಪ್ರಯೋಜನಗಳು ಅಥವಾ ಇತರ ಭತ್ಯೆಗಳು ಸಿಗುವುದಿಲ್ಲ” ಎಂದು ಅವರು ಹೇಳುತ್ತಾರೆ.

PHOTO • Amrutha Kosuru
PHOTO • Smita Khator

ಎಡ: ಶೇಕ್ ಸಲಾವುದ್ದೀನ್, ಹೈದರಾಬಾದ್ ಮೂಲದ  ಕ್ಯಾಬ್ ಕಂಪನಿಯೊಂದರಲ್ಲಿ ಚಾಲಕ. ಅವರು ಕಲಿಯಲು ಸುಲಭವಾದ ಕೌಶಲವಾಗಿರುವುದರಿಂದ ಚಾಲನೆ ಕಲಿತೆ ಎಂದು ಅವರು ಹೇಳುತ್ತಾರೆ. ಬಲ: ಮಳೆಗಾಲದಲ್ಲಿ ವಿತರಣೆ ಕೆಲಸ ಮಾಡುವುದು ಬಹಳ ಕಷ್ಟ

ಮೂರು ವರ್ಷಗಳ ಹಿಂದೆ ಬಿಲಾಸ್‌ಪುರದ ತನ್ನ ಮನೆಯಿಂದ ರಾಯ್‌ಪುರಕ್ಕೆ  ಬಂದ ಸಾಗರ್ ಕುಮಾರ್ (24) ಸುಸ್ಥಿರ ಸಂಪಾದನೆಗಾಗಿ ಎರಡೆರಡು ಕಡೆ ಕೆಲಸ ಮಾಡುತ್ತಾರೆ. ಛತ್ತೀಸ್‌ಗಢದ ರಾಜಧಾನಿ ನಗರದಲ್ಲಿರುವ ಕಚೇರಿ ಕಟ್ಟಡದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಅವರು ಅಲ್ಲಿನ ಕೆಲಸ ಮುಗಿದ ನಂತರ ರಾತ್ರಿ 12ರವರೆಗೆ ತನ್ನ ಬೈಕಿನಲ್ಲಿ ಸ್ವಿಗ್ಗಿ ಆರ್ಡರ್‌ಗಳನ್ನು ತಲುಪಿಸುವ ಕೆಲಸ ಮಾಡುತ್ತಾರೆ.

ಬೆಂಗಳೂರಿನ ಪ್ರಸಿದ್ಧ ಉಪಾಹಾರ ಗೃಹದ ಹೊರಗೆ, ಸ್ವಿಗ್ಗಿ ಡೆಲಿವರಿ ಏಜೆಂಟ್‌ಗಳ ಉದ್ದನೆಯ ಸಾಲು ಕಾಯುತ್ತಿದೆ, ಎಲ್ಲರ ಕೈಯಲ್ಲೂ ಒಂದೊಂದು ಸ್ಮಾರ್ಟ್‌ ಫೋನ್‌ ಇದೆ. ಸುಂದರ್ ಬಹದ್ದೂರ್ ಬಿಷ್ಟ್ ತಮ್ಮ ಮುಂದಿನ ಆರ್ಡರ್‌ನ ಮೆಸೇಜ್‌ ಸದ್ದು ಬರುವುದನ್ನೇ ಕಾಯುತ್ತಿದ್ದಾರೆ. 8ನೇ ತರಗತಿಯವರೆಗೆ ಓದಿರುವ ಅವರು ತಾನು ಈಗಷ್ಟೇ ಕಲಿಯುತ್ತಿರುವ ಭಾಷೆಯಲ್ಲಿ ಬರುವ ಸಂದೇಶವನ್ನು ಓದಲು ಬಹಳ ಕಷ್ಟಪಡುತ್ತಾರೆ.

“ಇಂಗ್ಲಿಷಿನಲ್ಲಿ ಬರುವ ಸಂದೇಶಗಳನ್ನು ಹಾಗೂ ಹೀಗೂ ಓದುತ್ತೇನೆ. ಅದರಲ್ಲಿ ಓದಲು ಹೆಚ್ಚೇನೂ ಇರುವುದಿಲ್ಲ. ಫಸ್ಟ್‌ ಫ್ಲೋರ್‌, ಫ್ಲಾಟ್‌ 1ಏ…” ಎಂದು ಓದ ತೊಡಗಿದರು. ಅವರ ಬಳಿ ಯಾವುದೇ ಒಪ್ಪಂದ ಪತ್ರವಿಲ್ಲ. ಮಾತಿಗೆ ಸಿಗಬಲ್ಲ ಮುಖವಿರುವ ಕಚೇರಿಯೂ ಅವರ ಪಾಲಿಗಿಲ್ಲ. “ಲೀವ್‌, ಸಿಕ್‌ ಲೀವ್‌ ಅವೆಲ್ಲ ಸಿಗಲ್ಲ.” ದೇಶಾದ್ಯಂತ ಶೇಕ್‌, ರಮೇಶ್‌, ಸಾಗರ್‌ ಮತ್ತು ಸುಂದರ್‌ ಅವರಂತಹ ಸುಮಾರು 77 ಲಕ್ಷ ಇಂತಹ ಗುತ್ತಿಗೆ ಕಾರ್ಮಿಕರು ಇದ್ದಾರೆ ಎನ್ನುತ್ತದೆ 2022ರಲ್ಲಿ ಪ್ರಕಟವಾದ ನೀತಿ ಆಯೋಗದ ವರದಿ.

PHOTO • Purusottam Thakur
PHOTO • Priti David

ಎಡ: ಸಾಗರ್‌ ಕುಮಾರ್‌ ಉತ್ತಮ ಸಂಪಾದನೆ ಗಳಿಸುವ ಸಲುವಾಗಿ ತಮ್ಮ ಊರಾದ ಬಿಲಾಸಪುರದಿಂದ ರಾಯ್‌ಪುರಕ್ಕೆ ಬಂದಿದ್ದಾರೆ. ಬಲ: ಸುಂದರ್ ಬಹದ್ದೂರ್‌ ಬಿಷ್ಟ್‌ ತಮಗೆ ಆರ್ಡರ್‌ ತಲುಪಿಸಲು ಸಂದೇಶ ಕಳುಹಿಸುವ ಅಪ್ಲಿಕೇಷನ್‌ ಹೇಗೆ ಕೆಲಸ ಮಾಡುತ್ತದೆಯೆನ್ನುವುದನ್ನು ತೋರಿಸುತ್ತಿದ್ದಾರೆ

ಇದರಲ್ಲಿ ಕ್ಯಾಬ್‌ ಡ್ರೈವರ್‌ಗಳು, ಆಹಾರ ಮತ್ತು ಇತರ ಪಾರ್ಸೆಲ್‌ಗಳನ್ನುತಲುಪಿಸುವವರು, ಮನೆಗಳಿಗೆ ಹೋಗಿ ಬ್ಯೂಟಿ ಮೇಕ್‌ ಓವರ್‌ ಸೇವೆ ನೀಡುವ ಗುತ್ತಿಗೆ ಕಾರ್ಮಿಕರು ಕೂಡ ಸೇರಿದ್ದಾರೆ. ಈ ಕೆಲಸದಲ್ಲಿ ತೊಡಗಿರುವವರಲ್ಲಿ ಬಹುತೇಕರು ಯುವಕರು ಮತ್ತು ಅವರ ಫೋನುಗಳೇ ಅವರ ಕೆಲಸದ ಸ್ಥಳವಾಗಿ ಮಾರ್ಪಟ್ಟಿವೆ. ಅವರ ಕೆಲಸದ ವಿವರಗಳನ್ನು ಬಾಟ್‌ (bot)ಗಳು ಸೃಷ್ಟಿಸುತ್ತವೆ ಮತ್ತು ಇವರ ಉದ್ಯೋಗ ಭದ್ರತೆಯೆನ್ನುವುದು ದಿನಗೂಲಿ ನೌಕರರಷ್ಟೇ ಅಭದ್ರ. ಕಳೆದ ಎರಡು ತಿಂಗಳಿನಲ್ಲಿ ಕನಿಷ್ಟ ಎರಡು ಕಂಪನಿಗಳು ವೆಚ್ಚ ಕಡಿತದ ಹೆಸರಿನಲ್ಲಿ ಸಾವಿರಾರು ಜನರ ಕೆಲಸ ಕಿತ್ತುಕೊಂಡು ಮನೆಗೆ ಕಳಿಸಿವೆ.

ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (ಜುಲೈ-ಸೆಪ್ಟೆಂಬರ್ 2022) ಪ್ರಕಾರ, 15-29 ವರ್ಷ ವಯಸ್ಸಿನ ಕಾರ್ಮಿಕರಲ್ಲಿ ನಿರುದ್ಯೋಗ ದರವು ಶೇಕಡಾ 18.5ರಷ್ಟಿದ್ದು, ಕಾನೂನು ಮತ್ತು ಗುತ್ತಿಗೆ ಅಂತರಗಳ ಹೊರತಾಗಿಯೂ ಯಾವುದೇ ಉದ್ಯೋಗವನ್ನು ಪಡೆಯಲು ಹತಾಶರಾಗಿ ಪ್ರಯತ್ನಿಸುತ್ತಿದ್ದಾರೆ. ನಗರದ ಇತರ ದಿನಗೂಲಿ ಕೆಲಸಕ್ಕಿಂತ ಗಿಗ್-ವರ್ಕ್ (gig-work) ಜನರನ್ನು ಸೆಳೆಯಲು ಅನೇಕ ಕಾರಣಗಳಿವೆ.

“ನಾನು ಕೂಲಿಯಾಗಿ ಮತ್ತು ಬಟ್ಟೆ ಮತ್ತು ಚೀಲಗಳ ಅಂಗಡಿಗಳಲ್ಲಿ ಕೆಲಸ ಮಾಡಿದ್ದೇನೆ. ಈ ಸ್ವಿಗ್ಗಿ [ವಿತರಣೆ] ಕೆಲಸದಲ್ಲಿ ಭಾರ ಎತ್ತಬೇಕಿಲ್ಲ. ಅದಕ್ಕೆ ಬೇಕಿರುವುದು ಒಂದು ಫೋನ್‌ ಮತ್ತು ಬೈಕ್.‌ ಈ ಕೆಲಸದಿಂದ ದೇಹಕ್ಕೆ ದಣಿವಾಗುವುದಿಲ್ಲ" ಎಂದು ಸಾಗರ್‌ ಹೇಳುತ್ತಾರೆ. ಸಂಜೆ 6 ಗಂಟೆಯ ನಂತರ ರಾಯ್‌ಪುರದಲ್ಲಿ ಆಹಾರ ಮತ್ತು ಇತರ ವಸ್ತುಗಳನ್ನು ತಲುಪಿಸಿ, ಅವರು ದಿನಕ್ಕೆ 300 ರಿಂದ 400 ರೂ. ಹಾಗೂ ಹಬ್ಬ ಹರಿದಿನಗಳಲ್ಲಿ ದಿನಕ್ಕೆ 500 ರೂ. ಗಳಿಸುತ್ತಾರೆ. ಅವರ ID ಕಾರ್ಡ್ 2039ರವರೆಗೆ ಮಾನ್ಯವಾಗಿದೆ ಆದರೆ ಅವರ ರಕ್ತದ ಗುಂಪು ಮತ್ತು ತುರ್ತು ಸಂಪರ್ಕ ಸಂಖ್ಯೆಯ ವಿವರ ಇದರಲ್ಲಿ ಸೇರಿಲ್ಲ. ಆ ವಿವರಗಳನ್ನು ಅಪ್ಡೇಟ್‌ ಮಾಡಿಸಲು ನನಗೆ ಸಮಯವಿಲ್ಲ ಎನ್ನುತ್ತಾರವರು.

ಸಾಗರ್‌ ಸೆಕ್ಯುರಿಟಿ ಏಜೆನ್ಸಿಯಲ್ಲಿಯೂ ಕೆಲಸ ಮಾಡುತ್ತಿರುವುದರಿಂದಾಗಿ ಅವರಿಗೆ ಅಲ್ಲಿ ಮಾಸಿಕ ಆದಾಯ 11,000 ರೂಗಳ ಜೊತೆಗೆ ವೈದ್ಯಕೀಯ ವಿಮೆ ಮತ್ತು ಭವಿಷ್ಯ ನಿಧಿ ಸೌಲಭ್ಯವೂ ದೊರಕುತ್ತಿದೆ. ಈ ಆದಾಯದ ಸ್ಥಿರತೆಯಿಂದಾಗಿ ಅವರಿಗೆ ಹೆಚ್ಚುವರಿ ಆದಾಯವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ. "ನನಗೆ ಉಳಿತಾಯ, ಮನೆಗೆ ಕಳುಹಿಸಲು, ಮತ್ತು ಕೊರೋನಾ ಸಮಯದಲ್ಲಿ ಮಾಡಿದ ಸಾಲವನ್ನು ತೀರಿಸಲು ಒಂದು ಸಂಬಳದಿಂದ ಸಾಧ್ಯವಾಗುತ್ತಿರಲಿಲ್ಲ. ಈಗ ಸ್ವಲ್ಪವಾದರೂ ಹಣ ಉಳಿಸಲು ಸಾಧ್ಯವಾಗುತ್ತಿದೆ.

PHOTO • Purusottam Thakur

ಸಾಗರ್ ಹೇಳುತ್ತಾರೆ, ʼನಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ನಾನು 10ನೇ ತರಗತಿಯ ನಂತರ [ಬಿಲಾಸ್ಪುರದಲ್ಲಿ] ಶಾಲೆಯನ್ನು ಬಿಡಬೇಕಾಯಿತು. ಹೀಗಾಗಿ ನಗರಕ್ಕೆ (ರಾಯ್ಪುರ) ಹೋಗಿ ಕೆಲಸ ಮಾಡಲು ನಿರ್ಧರಿಸಿದೆʼ

ಅತ್ತ ಬಿಲಾಸ್‌ಪುರ ಪಟ್ಟಣದಲ್ಲಿ ಸಾಗರ್‌ ಅವರ ತಂದೆ ಸಾಯಿರಾಂ ತರಕಾರಿ ವ್ಯಾಪಾರ ಮಾಡುತ್ತಾರೆ. ಮತ್ತು ಅವರ ತಾಯಿ ಸುನೀತಾ ಅವರ ಕಿರಿಯ ಸಹೋದರರಾದ ಆರು ವರ್ಷದ ಭಾವೇಶ್ ಮತ್ತು ಒಂದು ವರ್ಷದ ಚರಣ್ ಅವರನ್ನು ನೋಡಿಕೊಳ್ಳುತ್ತಾರೆ. ಈ ಕುಟುಂಬವು ಛತ್ತೀಸ್‌ಗಢದ ದಲಿತ ಸಮುದಾಯಕ್ಕೆ ಸೇರಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ನಾನು 10ನೇ ತರಗತಿಗೆ ಶಾಲೆ ಕೊನೆಗೊಳಿಸಬೇಕಾಯಿತು. ನಂತರ ನಾನು ನಗರಕ್ಕೆ ತೆರಳಿ ಕೆಲಸ ಮಾಡಲು ನಿರ್ಧರಿಸಿದೆ,” ಎಂದು ಅವರು ಹೇಳುತ್ತಾರೆ.

ಹೈದರಬಾದಿನಲ್ಲಿ ಆ್ಯಪ್ ಆಧಾರಿತವಾಗಿ ನಡೆಯುವ ಕ್ಯಾಬ್‌ ಒಂದರ ಚಾಲಕನಾಗಿ ಕೆಲಸ ಮಾಡುವ ಶೇಕ್‌ ಗಾಡಿ ಓಡಿಸುವುದನ್ನು ಕಲಿಯುವುದು ಸುಲಭವೆನ್ನುವ ಕಾರಣಕ್ಕೆ ಡ್ರೈವಿಂಗ್‌ ಕೆಲಸ ಕಲಿತರು. ಮೂವರು ಹೆಣ್ಣು ಮಕ್ಕಳ ತಂದೆಯಾಗಿರುವ ಅವರು ತಮ್ಮ ಸಮಯವನ್ನು ಯೂನಿಯನ್ ಕೆಲಸ ಮತ್ತು ಡ್ರೈವಿಂಗ್ ನಡುವೆ ಕಳೆಯುತ್ತಾರೆ. "ಕಡಿಮೆ ಟ್ರಾಫಿಕ್‌ ಮತ್ತು ಒಂದಷ್ಟು ಹೆಚ್ಚು ಸಂಪಾದನೆ" ಆಗುತ್ತದೆನ್ನುವ ಕಾರಣಕ್ಕೆ ತಾನು ರಾತ್ರಿ ಹೊತ್ತು ಗಾಡಿ ಓಡಿಸುತ್ತೇನೆ ಎನ್ನುವ ಶೇಕ್‌ ಅವರು ತಿಂಗಳಿಗೆ 15,000 - 18,000 ರೂಪಾಯಿಗಳನ್ನು ಗಳಿಸುತ್ತಾರೆ.

ಕೋಲ್ಕತ್ತಾಕ್ಕೆ ವಲಸೆ ಬಂದ ರಮೇಶ್‌ ಅವರಿಗೆ ಆ್ಯಪ್ ಆಧಾರಿತ ಡೆಲಿವರಿ ವ್ಯವಹಾರಕ್ಕೆ ಸೇರುವುದಕ್ಕಿಂತ ಒಳ್ಳೆಯ ಆಯ್ಕೆ ಇದ್ದಿರಲಿಲ್ಲ. ಏಕೆಂದರೆ ಇದು ಒಂದಷ್ಟು ಹಣ ಸಂಪಾದಿಸಲು ಇರುವ ತ್ವರಿತ ಮಾರ್ಗವಾಗಿದೆ. 10 ತರಗತಿಯಲ್ಲಿ ಓದುತ್ತಿರುವಾಗ ಅವರ ತಂದೆ ತೀರಿಕೊಂಡ ಕಾರಣ ಕುಟುಂಬದ ಪಾಲನೆಗಾಗಿ ಶಾಲೆ ಬಿಡಬೇಕಾಯಿತು. "ನನ್ನ ತಾಯಿಗೆ ಸಹಾಯ ಮಾಡುವ ಸಲುವಾಗಿ ನಾನು ದುಡಿಯಲೇಬೇಕಿತ್ತು. ನನ್ನ ತಮ್ಮ ಚಿಕ್ಕವನು. ಅಂಗಡಿಯಲ್ಲಿ ದುಡಿಯುವದೂ ಸೇರಿದಂತೆ ನಾನು ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ." ಎಂದು ಅವರು ಕಳೆದ 10 ವರ್ಷಗಳ ಅನುಭವದ ಬಗ್ಗೆ ಮಾತನಾಡುತ್ತಾರೆ.

ಕೋಲ್ಕತ್ತಾದ ಜಾಧವಪುರದಲ್ಲಿ ಪಾರ್ಸೆಲ್ಲುಗಳನ್ನು ತಲುಪಿಸಲು ಹೋಗುವಾಗ ಸಿಗ್ನಲ್‌ಗಳಲ್ಲಿ ಟೆನ್ಷನ್‌ ಹೆಚ್ಚಾಗಿ ತಲೆ ಸಿಡಿಯುತ್ತದೆ ಎನ್ನುತ್ತಾರೆ. "ನಾನು ಯಾವಾಗಲೂ ಅವಸರದಲ್ಲಿರುತ್ತೇನೆ. ಸದಾ ವೇಗವಾಗಿ ಸೈಕಲ್‌ ತುಳಿಯುತ್ತಿರುತ್ತೇನೆ. ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ತಲುಪಿಸುವ ತುರ್ತಿರುತ್ತದೆ. ಮಳೆಗಾಲದಲ್ಲಿ ಕೆಲಸ ಮಾಡುವುದು ಬಹಳ ಕಷ್ಟ. ನಮಗಿರುವ ಟಾರ್ಗೆಟ್‌ ತಲುಪುವ ಸಲುವಾಗಿ ನಾವು ನಮ್ಮ ವಿಶ್ರಾಂತಿ, ಆಹಾರ, ಆರೋಗ್ಯವನ್ನು ತ್ಯಾಗ ಮಾಡುತ್ತೇವೆ" ಎಂದು ಅವರು ಹೇಳುತ್ತಾರೆ. ದೊಡ್ಡ ಗಾತ್ರದ  ಬ್ಯಾಗನ್ನು ಸದಾ ಬೆನ್ನ ಮೇಲೆ ಹೊರುವ ಕಾರಣ ಬೆನ್ನಿನಲ್ಲಿ ಗಾಯಗಳಾಗುತ್ತವೆ. "ನಾವೆಲ್ಲರೂ ಬಹಳ ಭಾರದ ಸರಕುಗಳನ್ನು ಸಾಗಿಸುತ್ತೇವೆ. ಪ್ರತಿಯೊಬ್ಬ ಡೆಲಿವರಿ ಪರ್ಸನ್‌ ಕೂಢಾ ಬೆನ್ನು ನೋವಿನಿಂದ ಬಳಲುತ್ತಿದ್ದಾನೆ. ಆದರೆ ನಮ್ಮಲ್ಲಿ ಯಾರಿಗೂ ‌ವೈದ್ಯಕೀಯ ಸೌಲಭ್ಯ [ಕವರೇಜ್] ಇಲ್ಲ" ಎಂದು ಅವರು ಮುಂದುವೆರೆದು ಹೇಳುತ್ತಾರೆ.

PHOTO • Anirban Dey
PHOTO • Priti David

ಸುಂದರ್ (ಬಲ) ಅವರಂತಹ ಕೆಲವು ಡೆಲಿವರಿ ಏಜೆಂಟರು ಸಣ್ಣ ಪಾರ್ಸೆಲ್ಲುಗಳನ್ನಷ್ಟೇ ಸಾಗಿಸುತ್ತಾರೆ ಆದರೆ ರಮೇಶ್ (ಎಡ) ಅವರಂತಹ ಇತರರು ದೊಡ್ಡ ಚೀಲಗಳನ್ನು ಬೆನ್ನ ಮೇಲೆ ಇಟ್ಟುಕೊಂಡಿರುತ್ತಾರೆ, ಆ ಚೀಲಗಳು ಅವುಗಳನ್ನು ಸಾಗಿಸುವ ವ್ಯಕ್ತಿಯ ಬೆನ್ನುನೋವಿಗೆ ಕಾರಣವಾಗುತ್ತದೆ

ಬೆಂಗಳೂರು ಸುತ್ತಬೇಕಾದ ಈ ಉದ್ಯೋಗಕ್ಕೆ ಸೇರಲೆಂದು, ನಾಲ್ಕು ತಿಂಗಳ ಹಿಂದೆ ಸ್ಕೂಟರ್ ಖರೀದಿಸಿದರು. ವಾರಕ್ಕೆ 5,000 ದಿಂದ 7,000 ರೂಗಳ ನಡುವೆ ಗಳಿಸಬಹುದು ಎಂದು ಅವರು ಹೇಳುತ್ತಾರೆ. ಅದರಲ್ಲಿ ಅವರ ಖರ್ಚುಗಳು, ಸ್ಕೂಟರಿನ ಕಂತು, ಪೆಟ್ರೋಲ್, ಕೋಣೆಯ ಬಾಡಿಗೆ ಮತ್ತು ಮನೆಯ ಖರ್ಚು ಸೇರಿದಂತೆ ಸುಮಾರು  4,000 ರೂ ಖರ್ಚು ಬರುತ್ತದೆ.

ರೈತರು ಮತ್ತು ದಿನಗೂಲಿ ಕಾರ್ಮಿಕರ ಕುಟುಂಬಕ್ಕೆ ಸೇರಿದ ಸುಂದರ್ ಎಂಟು ಮಂದಿ ಒಡಹುಟ್ಟಿದವರಲ್ಲಿ ಕಿರಿಯವರು. ಕೆಲಸದ ನಿಮಿತ್ತ ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿ ನೇಪಾಳದ ಆ ಕುಟುಂಬದಿಂದ ಹೊರಬಂದವರು ಅವನೊಬ್ಬರೇ. "ನಾನು ಸಾಲ ಮಾಡಿ ಜಮೀನು ಖರೀದಿಸಿದೆ. ಸಾಲ ತೀರುವವರೆಗೆ ಈ ಕೆಲಸ ಮಾಡುತ್ತೇನೆ" ಎಂದು ಅವರು ಹೇಳಿದರು.

*****

"ಮೇಡಂ, ನಿಮಗೆ ಕಾರು ಓಡಿಸಲು ಬರುತ್ತಾ?"

ಇದು ಶಬನಂಬಾನು ಶೆಹದಾಲಿ ಶೇಖ್ ಅವರನ್ನು ಜನರು ಆಗಾಗ್ಗೆ ಕೇಳುವ ಪ್ರಶ್ನೆಯಾಗಿದೆ. ಈ 26 ವರ್ಷದ ಮಹಿಳಾ ಕ್ಯಾಬ್ ಡ್ರೈವರ್ ಅಹಮದಾಬಾದ್‌ನಲ್ಲಿ ನಾಲ್ಕು ವರ್ಷಗಳಿಂದ ಚಾಲನೆ ಮಾಡುತ್ತಿದ್ದಾರೆ. ಈಗ ಅವರು ಆ ಸೆಕ್ಸಿಸ್ಟ್‌ ಕಾಮೆಂಟನ್ನು ನಿರ್ಲಕ್ಷಿಸುತ್ತಾರೆ.

PHOTO • Umesh Solanki
PHOTO • Umesh Solanki

ಶಬನಂಬಾನು ಶೆಹದಾಲಿ ಶೇಖ್ ಅವರು ಅಹಮದಾಬಾದ್‌ನಲ್ಲಿ ಆಪ್ ಆಧಾರಿತ ಕ್ಯಾಬ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂಟಿ ತಾಯಿಯಾದ ಆಕೆ ತನ್ನ ಸಂಪಾದನೆಯಲ್ಲಿ ಮಗಳನ್ನು ಶಾಲೆಗೆ ಕಳುಹಿಸುವುದರಲ್ಲಿ ಸಂತೋಷವನ್ನು ಕಾಣುತ್ತಿದ್ದಾರೆ

ಪತಿ ತೀರಿಕೊಂಡ ನಂತರ ಅವರು ಈ ಕೆಲಸವನ್ನು ಕೈಗೆತ್ತಿಕೊಂಡರು. "ನನಗೆ ರಸ್ತೆ ದಾಟುವುದು ಹೇಗೆ ಎಂದು ತಿಳಿದಿರಲಿಲ್ಲ" ಎಂದು ಅವರು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಶಬನಂಬಾನು ಅವರು ಮೊದಲು ಸಿಮ್ಯುಲೇಟರ್ ಮೂಲಕ ಮತ್ತು ನಂತರ ರಸ್ತೆಯಲ್ಲಿ ತರಬೇತಿ ಪಡೆದರು. ಒಂದು ಮಗುವಿನ ತಾಯಿಯಾಗಿರುವ ಶಬ್ನಮ್, 2018ರಲ್ಲಿ ಕಾರನ್ನು ಬಾಡಿಗೆಗೆ ಪಡೆದು ಈ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವೆಯೊಂದಿಗೆ ಕೆಲಸ ಮಾಡತೊಡಗಿದರು.

"ಈಗ ನಾನು ಕೆಲವೊಮ್ಮೆ ಹೆದ್ದಾರಿಯಲ್ಲಿ ಓಡಿಸುತ್ತೇನೆ" ಎಂದು ಅವರು ನಗುತ್ತಾ ಹೇಳುತ್ತಾರೆ.

ನಿರುದ್ಯೋಗ ದತ್ತಾಂಶವು ಶೇಕಡಾ 24.7ರಷ್ಟಿದ್ದು, ಇದರಿಂದ ಪುರುಷರಿಗಿಂತ ಮಹಿಳೆಯರು ಉದ್ಯೋಗದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ತೋರಿಸುತ್ತದೆ. ಶಬ್ನಂಬಾನು ಇದಕ್ಕೆ ಅಪವಾದಗಳಲ್ಲಿ ಒಬ್ಬರು ಮತ್ತು ಅವರು ತನ್ನ ಸಂಪಾದನೆಯಿಂದ ಮಗಳಿಗೆ ಶಿಕ್ಷಣ ನೀಡುತ್ತಿದ್ದೇನೆ ಎಂಬ ಅಂಶದ ಬಗ್ಗೆ ಹೆಮ್ಮೆಪಡುತ್ತಾರೆ.

[ತನ್ನ ಪ್ರಯಾಣಿಕರಿಗೆ] ಲಿಂಗ ಸಂಬಂಧಿ ಅಚ್ಚರಿ ಇಳಿದಿದ್ದರೂ, 26 ವರ್ಷದ ಈ ಮಹಿಳೆಗೆ ಹೆಚ್ಚು ಒತ್ತಡದ ಕಾಳಜಿಗಳಿವೆ: "ರಸ್ತೆಯಲ್ಲಿ, ಶೌಚಾಲಯಗಳು ಬಹಳ ದೂರದಲ್ಲಿವೆ. ಪೆಟ್ರೋಲ್ ಪಂಪ್‌ಗಳು ಅವುಗಳನ್ನು ಲಾಕ್ ಮಾಡುತ್ತವೆ. ಕೀಲಿಯನ್ನು ಕೇಳಲು ನನಗೆ ಮುಜುಗರವಾಗುತ್ತದೆ ಏಕೆಂದರೆ ಅಲ್ಲಿ ಪುರುಷರು ಮಾತ್ರ ಇದ್ದಾರೆ." ಭಾರತದಲ್ಲಿ ಗಿಗ್ ಆರ್ಥಿಕತೆಯಲ್ಲಿ ಮಹಿಳಾ ಕಾರ್ಮಿಕರು ಎಂಬ 'ಅನ್ವೇಷಣಾತ್ಮಕ ಅಧ್ಯಯನ' ಶೌಚಾಲಯದ ಲಭ್ಯತೆಯ ಕೊರತೆಯ ಜೊತೆಗೆ, ಮಹಿಳಾ ಕಾರ್ಮಿಕರು ಪುರುಷರೊಂದಿಗಿನ ವೇತನದ ಅಂತರ ಮತ್ತು ಕೆಲಸದಲ್ಲಿ ಕಡಿಮೆ ಸುರಕ್ಷತೆ ಮತ್ತು ಭದ್ರತೆಯನ್ನು ಎದುರಿಸುತ್ತಿದ್ದಾರೆ ಎಂದು ಗಮನಸೆಳೆದಿದೆ.

PHOTO • Umesh Solanki

ʼರಸ್ತೆಗಳಲ್ಲಿ ಶೌಚಾಲಯಗಳು ದೂರದ್ಲಲಿರುತ್ತವೆʼ ಹೀಗಾಗಿ ಶಬನಂಬಾನು ಶೌಚಾಲಯ ಹುಡುಕಲು ಗೂಗಲ್‌ ಮೊರೆ ಹೋಗುತ್ತಾರೆ. ಅವರು ಅವುಗಳನ್ನು ಹುಡುಕಿಕೊಂಡು ಎರಡು ಮೂರು ಕಿಲೋಮೀಟರ್‌ ಕಾರು ಓಡಿಸುತ್ತಾರೆ

ಶೌಚಾಲಯಕ್ಕೆ ಹೋಗಲೇಬೇಕಾದ ಅನಿವಾರ್ಯ ಒತ್ತಡ ಸೃಷ್ಟಿಯಾದಾಗ ಅವರು ಗೂಗಲ್‌ ಮೂಲಕ ಹತ್ತಿರದ ಶೌಚಾಲಯ ಹುಡುಕಿ ಅಲ್ಲಿಗೆ ಹೋಗುತ್ತಾರೆ. ಕೆಲವೊಮ್ಮೆ ಇದಕ್ಕಾಗಿ ಎರಡು ಮೂರು ಕಿಲೋಮೀಟರ್‌ ಗಾಡಿ ಓಡಿಸಬೇಕಾಗುತ್ತದೆ. “ಈ ಸಮಸ್ಯೆಯಿಂದ ಹೊರ ಬರಲು ಕಡಿಮೆ ನೀರು ಕುಡಿಯುವುದನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ. ಆದರೆ ಕಡಿಮೆ ನೀರು ಕುಡಿದರೆ ಈ ಬಿಸಿಲಿಗೆ ತಲೆ ತಿರುಗಿ ಪ್ರಜ್ಞೆ ತಪ್ಪುವ ಹಾಗಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಕಾರನ್ನು ಬದಿಗೆ ನಿಲ್ಲಿಸಿ ಒಂದಷ್ಟು ಹೊತ್ತು ಬಿಟ್ಟು ಹೊರಡುತ್ತೇನೆ.” ಎನ್ನುತ್ತಾರೆ.

ಇದು ಕೋಲ್ಕತ್ತಾದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವಾಗ ರಮೇಶ್ ಎದುರಿಸುತ್ತಿರುವ ಸಮಸ್ಯೆಯೂ ಹೌದು. ‘ದೈನಂದಿನ ಗುರಿ ಮುಟ್ಟುವ ಧಾವಂತದಲ್ಲಿ ಇವುಗಳಿಗೆ (ಶೌಚಾಲಯ ಬ್ರೇಕ್) ಆದ್ಯತೆ ಇಲ್ಲದಂತಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು. ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯೂಯು) ಸಂಸ್ಥಾಪಕ ಮತ್ತು ಅಧ್ಯಕ್ಷರೂ ಆಗಿರುವ ಶೇಕ್, “ಡ್ರೈವರ್ ಶೌಚಾಲಯಕ್ಕೆ ಹೋಗಬೇಕಾದಾಗ ರೈಡ್ ವಿನಂತಿಯನ್ನು ಪಡೆದಾಗ, ಅದನ್ನು ತಿರಸ್ಕರಿಸುವ ಮೊದಲು ಅವನು ಎರಡು ಬಾರಿ ಯೋಚಿಸಬೇಕು." ಎನ್ನುತ್ತಾರೆ

ಆರ್ಡರ್ / ರೈಡ್ ಅನ್ನು ತಿರಸ್ಕರಿಸುವುದರಿಂದ ಅಪ್ಲಿಕೇಶನ್‌ನಲ್ಲಿ ನಿಮ್ಮನ್ನು ಕೆಳಗಿಳಿಸಲಾಗುವುದು, ನಿಮಗೆ ದಂಡ ವಿಧಿಸಲಾಗುತ್ತದೆ. ಇಲ್ಲದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಅಥವಾ ಬದಿಗೆ ಸರಿಸಲಾಗುತ್ತದೆ. ನೀವು ಮಾಡಬಹುದಾದ ಎಲ್ಲವು ಅಸ್ತಿತ್ವದಲ್ಲಿಲ್ಲದ ಸಂಸ್ಥೆಗೆ ಪರಿಹಾರವನ್ನು ಕೋರಿ ದೂರು ಸಲ್ಲಿಸುವುದು ಮತ್ತು ಉತ್ತಮವಾದದ್ದನ್ನು ನಿರೀಕ್ಷಿಸುವುದು.

ನೀತಿ ಆಯೋಗವು 'ಇಂಡಿಯಾಸ್‌ ರೋಡ್‌ ಮ್ಯಾಪ್‌ ಫಾರ್‌ ಎಸ್‌ಡಿಜಿ' ಎಂಬ ವರದಿಯಲ್ಲಿ, "ಭಾರತದ ಸುಮಾರು 92 ಪ್ರತಿಶತದಷ್ಟು ಉದ್ಯೋಗಿಗಳು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ... ಅಪೇಕ್ಷಿತ ಸಾಮಾಜಿಕ ಭದ್ರತೆ ಅವರಿಗೆ ಸಿಗುವುದಿಲ್ಲ..." ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು -8 ಇತರ ವಿಷಯಗಳ ಜೊತೆಗೆ, "ಕಾರ್ಮಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಸುರಕ್ಷಿತ ಮತ್ತು ಸುಭದ್ರ ಕೆಲಸದ ವಾತಾವರಣವನ್ನು ಉತ್ತೇಜಿಸುವುದರ" ಮೇಲೆ ಗಮನ ಕೇಂದ್ರೀಕರಿಸುತ್ತದೆ.

PHOTO • Amrutha Kosuru

ಶೇಕ್ ಸಲಾವುದ್ದೀನ್ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯೂಯು) ಸಂಸ್ಥಾಪಕ ಮತ್ತು ಅಧ್ಯಕ್ಷ

ಸಂಸತ್ತು 2020ರಲ್ಲಿ ಸಾಮಾಜಿಕ ಭದ್ರತೆ ಸಂಹಿತೆಯನ್ನು ಅಂಗೀಕರಿಸಿತು ಮತ್ತು ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಕರೆ ನೀಡಿತು - 2029-30ರ ವೇಳೆಗೆ ಈ ಕಾರ್ಮಿಕರ ಸಂಖ್ಯೆಯು 23.5 ಮಿಲಿಯನ್‌ ಎಂದರೆ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.

*****

ಈ ಲೇಖನಕ್ಕಾಗಿ ಮಾತನಾಡಿದ ಅನೇಕ ಕಾರ್ಮಿಕರು "ಮಾಲಿಕ್ (ಉದ್ಯೋಗದಾತ)" ನಿಂದ ಸ್ವಾತಂತ್ರ್ಯವನ್ನು ಬಯಸಿದ್ದರು. ಪರಿಯೊಂದಿಗಿನ ಅವರ ಸಂಭಾಷಣೆಯ ಮೊದಲ ನಿಮಿಷದಲ್ಲಿ, ಸುಂದರ್ ಅವರು ಬೆಂಗಳೂರಿನಲ್ಲಿ ಈ ಹಿಂದೆ ಇದ್ದ ಲೌಕಿಕ ಕ್ಲೆರಿಕಲ್ ಉದ್ಯೋಗಕ್ಕಿಂತ ಈ ಕೆಲಸಕ್ಕೆ ಏಕೆ ಆದ್ಯತೆ ನೀಡುತ್ತಾರೆ ಎಂದು ನಮಗೆ ಹೇಳಿದರು: “ನಾನು ನನ್ನ ಸ್ವಂತ ಬಾಸ್. ನಾನು ಬಯಸಿದಾಗ ಕೆಲಸ ಮಾಡಬಹುದು, ಮತ್ತು ಈ ಕ್ಷಣದಲ್ಲಿ ಹೊರಬರಲು ಬಯಸಿದರೆ ಬರಬಹುದು." ಆದರೆ ಅವರು ಸಾಲವನ್ನು ತೀರಿಸಿದ ನಂತರ ಹೆಚ್ಚು ಸ್ಥಿರವಾದ, ಹೆಚ್ಚು  ಹಣ ಪೂರೈಸುವ ಕೆಲಸವನ್ನು ಹುಡುಕುವುದಾಗಿ ಸ್ಪಷ್ಟಪಡಿಸಿದರು.

ತ್ರಿಪುರದ ಶಂಭುನಾಥರ ಬಳಿ ಮಾತನಾಡಲು ಹೆಚ್ಚು ಸಮಯವಿರಲಿಲ್ಲ. ಪುಣೆಯಲ್ಲಿ ತುಂಬ ಜನಜಂಗುಳಿಯಿಂದ ಕೂಡಿದ್ದ ಪ್ರಸಿದ್ಧ ಫುಡ್‌ ಜಾಯಿಂಟ್‌ನ ಹೊರಗೆ ಅವರು ಕಾಯುತ್ತಿದ್ದರು. Zomato ಮತ್ತು Swiggy ಏಜೆಂಟ್‌ಗಳ ಸಾಲು ಆಹಾರ ಪೊಟ್ಟಣಗಳನ್ನು ಸಂಗ್ರಹಿಸಲು ತಮ್ಮ ಬೈಕ್‌ಗಳಲ್ಲಿ ಕಾಯುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪುಣೆಯಲ್ಲಿ ನೆಲೆಸಿರುವ ಇವರು ಮರಾಠಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.

ಸುಂದರ್ ಅವರಂತೂ ಈ ಹಿಂದೆ ರೂ. 17,000 ಸಂಬಳ ತರುತ್ತಿದ್ದ ಉದ್ಯೋಗಕ್ಕಿಂತ ಈ ಕೆಲಸಕ್ಕೆ ಆದ್ಯತೆ ನೀಡುತ್ತಾರೆ. “ಈ ಕೆಲಸ ಚೆನ್ನಾಗಿದೆ. ನಾವೆಲ್ಲ (ಅವನ ಸ್ನೇಹಿತರು) ಒಂದು ಫ್ಲಾಟ್ ಬಾಡಿಗೆಗೆ ಪಡೆದು ಅದರಲ್ಲಿ ವಾಸವಾಗಿದ್ದೇವೆ. ದಿನಕ್ಕೆ ಸುಮಾರು ಸಾವಿರ ರೂಪಾಯಿ ಸಂಪಾದಿಸುತ್ತೇನೆ’ ಎನ್ನುತ್ತಾರೆ ಶಂಭುನಾಥ್.

PHOTO • Riya Behl
PHOTO • Riya Behl

ತನ್ನ ಗಳಿಕೆಯ ಹೆಚ್ಚಿನ ಭಾಗವನ್ನು ಅನ್ಯಾಯವಾಗಿ ತೆಗೆದುಕೊಳ್ಳುತ್ತಿದೆ ಎಂದು ಭಾವಿಸಿದ ರೂಪಾಲಿ ಕೋಲಿ ಅಪ್ಲಿಕೇಶನ್ ಆಧಾರಿತ ಕಂಪನಿಯನ್ನು ತಿರಸ್ಕರಿಸಿದರು. ಅವರು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಾರೆ ಮತ್ತು ತನ್ನ ಹೆತ್ತವರಿಗೆ, ಪತಿ ಮತ್ತು ಅತ್ತೆಗೆ ಸಹಾಯ ಮಾಡುತ್ತಾರೆ

ಕೋವಿಡ್-19 ಲಾಕ್‌ಡೌನ್‌ನ ಅವಧಿಯು ರೂಪಾಲಿ ಕೋಲಿಗೆ ಸ್ವತಂತ್ರವಾಗಿ ಬ್ಯೂಟಿಷಿಯನ್ ಆಗಿ ತನ್ನ ಕೌಶಲಗಳ ಬಳಸಬೇಕಾದ ಅನಿವಾರ್ಯತೆಗೆ ಒಳಗಾದರು. "ನಾನು ಕೆಲಸ ಮಾಡುತ್ತಿದ್ದ ಪಾರ್ಲರ್ ನಮ್ಮ ಸಂಬಳವನ್ನು ಅರ್ಧಕ್ಕೆ ಕಡಿತಗೊಳಿಸಿತು. ಹಾಗಾಗಿ ನಾನು ಸ್ವತಂತ್ರವಾಗಿ ಮಾಡಲು ನಿರ್ಧರಿಸಿದೆ." ಅವರು ಆರಂಭದಲ್ಲಿ ಅಪ್ಲಿಕೇಶನ್ ಆಧಾರಿತ ಕೆಲಸವನ್ನು ತೆಗೆದುಕೊಳ್ಳಲು ಯೋಚಿಸಿದರು, ಆದರೆ ಅದರ ವಿರುದ್ಧ ನಿರ್ಧರಿಸಿದರು. “ನಾನು ಕಷ್ಟಪಟ್ಟು ಕೆಲಸ ಮಾಡುವಾಗ, (ಸೌಂದರ್ಯ) ಉತ್ಪನ್ನವನ್ನು ತರುವಾಗ ಮತ್ತು ಓಡಾಟಕ್ಕೂ ನಾನೇ ಖರ್ಚು ಮಾಡುವಾಗ, ಯಾರಿಗೋ ಏಕೆ ನನ್ನ ಸಂಪಾದನೆಯ 40ರಷ್ಟು ಭಾಗವನ್ನು ನೀಡಬೇಕು? ನನ್ನ ಪಾಲಿನ ನೂರರ ಬದಲು ಅರವತ್ತು ಪಡೆಯುವುದು ನನಗೆ ಇಷ್ಟವಿಲ್ಲ."

ಮುಂಬೈನ ಅಂಧೇರಿ ತಾಲೂಕಿನ ಮಾಧ್ ದ್ವೀಪದಲ್ಲಿರುವ ಮೀನುಗಾರ ಕುಟುಂಬದ ರೂಪಾಲಿ ಕೋಲಿ, 32, ತನ್ನ ಪೋಷಕರು, ಪತಿ ಮತ್ತು ಅತ್ತೆಗೆ ಸಹಾಯ ಮಾಡಲು ಸ್ವತಂತ್ರ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಾರೆ. "ನನ್ನ ಸ್ವಂತ ಮನೆ, ನನ್ನ ಮದುವೆಗೆ ನಾನು ಹೀಗೆಯೇ ಪಾವತಿಸಿದ್ದೇನೆ" ಎಂದು ಅವರು ಹೇಳಿದರು. ಆಕೆಯ ಕುಟುಂಬವು ಕೋಲಿ ಸಮುದಾಯಕ್ಕೆ ಸೇರಿದ್ದು, ಮಹಾರಾಷ್ಟ್ರದಲ್ಲಿ ವಿಶೇಷ ಹಿಂದುಳಿದ ವರ್ಗ (SBC) ಎಂದು ಪಟ್ಟಿ ಮಾಡಲಾಗಿದೆ.

ರೂಪಾಲಿ ಸುಮಾರು ಎಂಟು ಕಿಲೋಗ್ರಾಂ ತೂಕದ ಟ್ರಾಲಿ ಬ್ಯಾಗ್ ಮತ್ತು ಮೂರು ಕಿಲೋಗ್ರಾಂ ತೂಕದ ಬೆನ್ನುಹೊರೆಯನ್ನು ನಗರದಾದ್ಯಂತ ಸಾಗಿಸುತ್ತಾರೆ. ಅವರು ತನ್ನ ಮನೆಗೆಲಸ ಮತ್ತು ತನ್ನ ಕುಟುಂಬಕ್ಕೆ ದಿನಕ್ಕೆ ಮೂರು ಹೊತ್ತಿನ ಅಡುಗೆ ಮಾಡುವುದರ ನಡುವೆ ಈ ಕೆಲಸವನ್ನೂ ಮಾಡುತ್ತಾರೆ. "ಅಪ್ನಾ ಮನ್ ಕಾ ಮಾಲಿಕ್ ಹೋನೆ ಕಾ (ಪ್ರತಿಯೊಬ್ಬರೂ ಅವರದೇ ಬಾಸ್ ಆಗಿರಬೇಕು)" ಎಂದು ದೃಢವಾಗಿ ಹೇಳುತ್ತಾರೆ.

ಈ ಲೇಖನವನ್ನು ಹೈದರಾಬಾದ್‌ನ ಮೇಧಾ ಕಾಳೆ , ಪ್ರತಿಷ್ಠಾ ಪಾಂಡ್ಯ , ಜೋಶುವಾ ಬೋಧಿನೇತ್ರ , ಸಾನ್ವಿತಿ ಅಯ್ಯರ್ , ರಿಯಾ ಬೆಹಲ್ , ಪ್ರೀತಿ ಡೇವಿಡ್ ಮತ್ತು ಅಮೃತಾ ಕೊಸೂರು ಸಂಪಾದಿಸಿದ್ದಾರೆ ; ರಾಯಪುರದಿಂದ ಪುರುಷೋತ್ತಮ ಠಾಕೂರ್ ; ಅಹಮದಾಬಾದ್‌ನಿಂದ ಉಮೇಶ್ ಸೋಲಂಕಿ ; ಕೋಲ್ಕತ್ತಾದಿಂದ ಸ್ಮಿತಾ ಖ ಟೋ ರ್ ; ಬೆಂಗಳೂರಿನ ಪ್ರೀತಿ ಡೇವಿಡ್ ; ಪುಣೆಯ ಮೇಧಾ ಕಾಳೆ ; ರಿಯಾ ಬೆಹಲ್ ಮುಂಬೈನಿಂದ ವರದಿ ಮಾಡಿದ್ದಾರೆ.

ಕವರ್ ಫೋಟೋ: ಪ್ರೀತಿ ಡೇವಿಡ್

ಅನುವಾದ : ಶಂಕರ . ಎನ್ . ಕೆಂಚನೂರು

Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru