“ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನನ್ನ ಈ ಬದುಕು ಬೇಡ. ಅವರು ಬದುಕನ್ನು ಬೇರೆ ರೀತಿ ಕಟ್ಟಿಕೊಳ್ಳಲಿ” ಒಣ ಹಾಕುತ್ತಿದ್ದ ಬಿಳಿ ಮೀನು ರಾಶಿಗೆ ಉಪ್ಪು ಹಾಕುತ್ತಿದ್ದ ವಿಶಾಲಾಕ್ಷಿ ನಿಟ್ಟುಸಿರಿಡುತ್ತಾ ಹೇಳಿದರು. 42 ವರ್ಷದ ಈ ಮಹಿಳೆ ತಮಿಳುನಾಡಿನ ಕಡಲೂರು ಓಲ್ಡ್ ಟೌನ್ ಬಂದರಿನಲ್ಲಿ 20 ವರ್ಷಗಳಿಂದ ಮೀನುಗಳನ್ನು ಒಣಗಿಸುತ್ತಿದ್ದಾರೆ.

“ನಾನು ಭೂರಹಿತ ದಲಿತ ಕುಟುಂಬದಲ್ಲಿ ಜನಿಸಿದವಳು. ನನ್ನ ತಂದೆ ತಾಯಿ ಓದಿದವರಲ್ಲ. ಕೃಷಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ನಾನು ಅವರಿಗೆ ಸಹಾಯ ಮಾಡುತ್ತಿದ್ದೆ” ಎನ್ನುವ ವಿಶಾಲಾಕ್ಷಿಯವರಿಗೆ ಅವರ 15 ವಯಸ್ಸಿನಲ್ಲಿ ಶಕ್ತಿವೇಲ್‌ ಎನ್ನುವವರ ಜೊತೆ ಮದುವೆ ಮಾಡಿಸಲಾಯಿತು. ಅವರ ಮೊದಲ ಮಗಳಾದ ಶಾಲಿನಿ ಮದುವೆಯಾದ ಕೇವಲ ಎರಡು ವರ್ಷಗಳ ನಂತರ ಕಡಲೂರು ಜಿಲ್ಲೆಯ ಭೀಮಾ ರಾವ್ ನಗರದಲ್ಲಿ ಜನಿಸಿದರು.

ಭೀಮರಾವ್‌ ನಗರದಲ್ಲಿ ಕೃಷಿ ಕೂಲಿ ಕೆಲಸ ಸಿಗದ ಕಾರಣ ವಿಶಾಲಕ್ಷಿ ಕೆಲಸ ಹುಡುಕಿಕೊಂಡು ಕಡಲೂರು ಓಲ್ಡ್ ಟೌನ್ ಬಂದರಿಗೆ ಬಂದರು. ಅಲ್ಲಿ ಅವರು ಕಮಲವೇಣಿಯವರನ್ನು ಭೇಟಿಯಾದರು. ಆಗ ವಿಶಾಲಕ್ಷಿಯವರಿಗೆ 17 ವರ್ಷ. ಕಮಲವೇಣಿ ಇವರಿಗೆ ಮೀನು ಒಣಗಿಸುವುದು ಮತ್ತು ಅದರ ವ್ಯಾಪಾರದ ಕೌಶಲವನ್ನು ಕಲಿಸಿದರು. ಈ ವ್ಯವಹಾರ ಅವರ ಕೈ ಹಿಡಿಯಿತು.

ಬಯಲಿನಲ್ಲಿ ಮೀನುಗಳನ್ನು ಒಣಗಿಸುವುದು ಮೀನು ಸಂಸ್ಕರಣೆಯ ಅತ್ಯಂತ ಹಳೆಯ ರೂಪವಾಗಿದೆ ಮತ್ತು ಉಪ್ಪು ಹಾಕುವುದು, ಹೊಗೆಯಲ್ಲಿಡುವುದು, ಉಪ್ಪಿನಲ್ಲಿ ನೆನೆ ಹಾಕುವುದು ಮತ್ತು ಹೆಚ್ಚಿನ ಚಟುವಟಿಕೆಗಳನ್ನು ಒಳಗೊಂಡಿದೆ. ಕೊಚ್ಚಿಯ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೊರತಂದ 2016ರ ಸಾಗರ ಮೀನುಗಾರಿಕೆ ಗಣತಿಯ ಪ್ರಕಾರ, ಕಡಲೂರು ಜಿಲ್ಲೆಯ 5,000ಕ್ಕೂ ಹೆಚ್ಚು ಸಕ್ರಿಯ ಮೀನುಗಾರ ಮಹಿಳೆಯರಲ್ಲಿ ಸರಿಸುಮಾರು 10 ಪ್ರತಿಶತದಷ್ಟು ಜನರು ಮೀನುಗಳನ್ನು ಒಣಗಿಸುವುದು, ಕ್ಯೂರಿಂಗ್‌ ಮಾಡುವುದು ಮತ್ತು ಚರ್ಮ ಸುಲಿಯುವಲ್ಲಿ ತೊಡಗಿಸಿಕೊಂಡಿದ್ದಾರೆ.

2020-2021ರಲ್ಲಿ ತಮಿಳುನಾಡಿನಲ್ಲಿ ಸಮುದ್ರ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರ ಸಂಖ್ಯೆ ಸುಮಾರು 2.6 ಲಕ್ಷ ಎಂದು ಮೀನುಗಾರಿಕೆ ಇಲಾಖೆಯ ರಾಜ್ಯ ವೆಬ್ಸೈಟ್ ಹೇಳುತ್ತದೆ.

PHOTO • M. Palani Kumar

ಒಣ ಹಾಕಿದ ಮೀನುಗಳ ಬಳಿ ವಿಶಾಲಕ್ಷಿ. ಮೀನುಗಳನ್ನು ಒಣಗಿಸುವುದು ಮೀನು ಸಂಸ್ಕರಣೆಯ ಅತ್ಯಂತ ಹಳೆಯ ರೂಪವಾಗಿದೆ ಮತ್ತು ಇದು ಉಪ್ಪು ಹಾಕುವುದು, ಸ್ಮೋಕಿಂಗ್, ಉಪ್ಪು ಊಡುವುದು ಮತ್ತು ಹೆಚ್ಚಿನ ಚಟುವಟಿಕೆಗಳನ್ನು ಒಳಗೊಂಡಿದೆ

PHOTO • M. Palani Kumar
PHOTO • M. Palani Kumar

ಎಡ: ಮೀನಿನ ಮೇಲೆ ಉಪ್ಪಿನ ಕಾಳುಗಳನ್ನು ಎಸೆಯುತ್ತಿರುವ ವಿಶಾಲಾಕ್ಷಿ. ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರ ಸಂಖ್ಯೆ (2020-2021) ಸುಮಾರು 2.6 ಲಕ್ಷ ಎಂದು ಅಂದಾಜಿಸಲಾಗಿದೆ. ಬಲ: ಕಡಲೂರು ಓಲ್ಡ್ ಟೌನ್ ಬಂದರಿನಲ್ಲಿ ಮೀನು ಒಣಗಿಸುವುದು

ಅವರು ಕೆಲಸಕ್ಕೆ ಬರಲು ಆರಂಭಿಸಿದ ಸಮಯದಲ್ಲಿ, ಅವರ ಮಾರ್ಗದರ್ಶಿ ಕಮಲವೇಣಿ ತನ್ನ 40ರ ಹರೆಯದಲ್ಲಿದ್ದರು ಮತ್ತು ಮೀನು ಹರಾಜು, ಮಾರಾಟ ಮತ್ತು ಒಣಗಿಸುವುದು ಸೇರಿದಂತೆ ಸ್ಥಾಪಿತ ಮೀನು ವ್ಯವಹಾರವನ್ನು ನಡೆಸುತ್ತಿದ್ದರು. ಅವರು ತಮ್ಮ ಬಳಿ 20 ಮಹಿಳಾ ಉದ್ಯೋಗಿಗಳನ್ನು ಹೊಂದಿದ್ದರು ಮತ್ತು ಅವರಲ್ಲಿ ವಿಶಾಲಾಕ್ಷಿ ಕೂಡಾ ಒಬ್ಬರಾಗಿದ್ದರು. ಅದು ಬಹಳ ಕಷ್ಟದ ಕೆಲಸವಾಗಿತ್ತು - ವಿಶಾಲಾಕ್ಷಿ ಬೆಳಿಗ್ಗೆ 4 ಗಂಟೆಗೆ ಬಂದರನ್ನು ತಲುಪಬೇಕಾಗಿತ್ತು ಮತ್ತು ಸಂಜೆ 6 ಗಂಟೆಯ ನಂತರವಷ್ಟೇ ಮನೆಗೆ ಬರಬಹುದಿತ್ತು. ಅವರಿಗೆ 200 ರೂಪಾಯಿಗಳ ಸಂಬಳ ದೊರೆಯುತ್ತಿತ್ತು ಮತ್ತು ಕಾರ್ಮಿಕರಿಗೆ ಉಪಾಹಾರ, ಚಹಾ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗುತ್ತಿತ್ತೆಂದು ಅವರು ನೆನಪಿಸಿಕೊಳ್ಳುತ್ತಾರೆ, "ನಮಗೆ ಕಮಲವೇಣಿಯೆಂದರೆ ನಿಜವಾಗಿಯೂ ಇಷ್ಟ. ಹರಾಜು ಹಾಕುವುದು, ಮೀನು ಮಾರಾಟ ಮಾಡುವುದು ಅಥವಾ ಕೆಲಸಗಾರರನ್ನು ಮೇಲ್ವಿಚಾರಣೆ ಮಾಡುವುದು ಹೀಗೆ ದಿನವಿಡೀ ಕೆಲಸ ಮಾಡುತ್ತಿದ್ದರು."

*****

2004ರ ಸುನಾಮಿಯ ನಂತರ ವಿಶಾಲಾಕ್ಷಿಯವರ ಬದುಕು ಬದಲಾಯಿತು. “ನನ್ನ ಸಂಬಳ ಸುನಾಮಿಯ ನಂತರ 350 ರೂಪಾಯಿಗಳಿಗೆ ಏರಿತು. ಜೊತೆಗೆ ಮೀನಿನ ಉತ್ಪಾದನೆಯೂ ಹೆಚ್ಚಿತ್ತು.”

ರಿಂಗ್ ಸೀನ್ ಮೀನುಗಾರಿಕೆ ಹೆಚ್ಚಾದಂತೆ ಮೀನುಗಾರಿಕೆ ವಲಯವು ತ್ವರಿತ ಬೆಳವಣಿಗೆಯನ್ನು ಕಂಡಿತು, ಇದು ಹೆಚ್ಚಿನ ಮೀನುಗಳನ್ನು ಹಿಡಿಯಲು ಕಾರಣವಾಗುತ್ತದೆ. ರಿಂಗ್ ಸೀನ್ ಸಾಮಾನ್ಯವಾಗಿ ಬಳಸುವ ಮೀನುಗಾರಿಕೆ ಬಲೆಯಾಗಿದ್ದು ಅದು ವೃತ್ತಾಕಾರದ ಬಲೆಯನ್ನು ಹೊಂದಿರುತ್ತದೆ. ಮನಂಗು ಮೀನು, ಬಂಗುಡೆ ಮತ್ತು ಬೂತಾಯಿ ಮೀನುಗಳನ್ನು ಹಿಡಿಯಲು ಇದು ಹೆಚ್ಚು ಸೂಕ್ತವಾಗಿದೆ. 1990ರ ದಶಕದ ಉತ್ತರಾರ್ಧದಲ್ಲಿ ಕಡಲೂರು ಜಿಲ್ಲೆಯಲ್ಲಿ ರಿಂಗ್ ಸೀನ್ ಅಗಾಧವಾಗಿ ಜನಪ್ರಿಯವಾಯಿತು. ಓದಿರಿ: ವೇಣಿಯ ಕಥೆ: ‘ ಧೈರ್ಯವಂತ ಮಹಿಳೆಯಾಗುತ್ತಿದ್ದೇನೆ

“ಆಗ ಕೆಲಸ, ಲಾಬ, ಸಂಬಳ ಎಲ್ಲವೂ ಹೆಚ್ಚಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ವಿಶಾಲಕ್ಷಿ. ನಂಬಿಕಸ್ಥ ಕೆಲಸಗಾರ್ತಿಯಾಗಿದ್ದ ಅವರಿಗೆ ಕಮಲವೇಣಿ ಹೊರಗೆ ಹೋಗುವಾಗ ಶೆಡ್‌ನ ಕೀಲಿಗಳನ್ನು ಕೊಟ್ಟು ಹೋಗುತ್ತಿದ್ದರು. “ನಮಗೆ ಯಾವುದೇ ರಜೆ ಸಿಗುತ್ತಿರಲಿಲ್ಲ. ಆದರೆ ಘನತೆಯಿಂದ ನಡೆಸಿಕೊಳ್ಳುತ್ತಿದ್ದರು.” ಎಂದು ಅವರು ಹೇಳುತ್ತಾರೆ.

ಮೀನಿನ ಬೆಲೆಗಳು ಹೆಚ್ಚಾದಂತೆ, ಅಗತ್ಯ ವಸ್ತುಗಳ ಬೆಲೆಯೂ ಏರಿತು. ಈ ದಂಪತಿಗೆ ಈಗ ಶಾಲಿನಿ ಮತ್ತು ಸೌಮ್ಯ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು, ಅವರು ಶಾಲೆಗೆ ಹೋಗುತ್ತಿದ್ದರು.  ಪತಿ ಶಕ್ತಿವೇಲ್ ವಾಟರ್ ಟ್ಯಾಂಕ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು ಆದರೆ ಪತಿಯ ದೈನಂದಿನ ವೇತನ 300 ರೂ.ಗಳು ಬದುಕು ನಡೆಸಲು ಸಾಲುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿ ಹಣಕಾಸಿನ ಬಿಕ್ಕಟ್ಟು ತಲೆದೋರತೊಡಗಿತು.

PHOTO • M. Palani Kumar

ವಿಶಾಲಾಕ್ಷಿ ಮತ್ತು ಅವರ ಒಬ್ಬನೌಕರರು ಆಗಷ್ಟೇ ಖರೀದಿಸಿದ ಮೀನನ್ನುಸಾಗಿಸುತ್ತಿರುವುದು. ಅವರು ತಮ್ಮ ಬಳಿ ಕೆಲಸ ಮಾಡುವವರಿಗೆ ದಿನಕ್ಕೆ 300 ರೂಪಾಯಿಗಳ ಸಂಬಳ ಮತ್ತು ಊಟ, ಚಾ ಕೊಡುತ್ತಾರೆ

PHOTO • M. Palani Kumar

ತಾವು ಆಗಷ್ಟೇ ಖರೀದಿಸಿದ ಮೀನನ್ನು ಪರಿಶೀಲಿಸುತ್ತಿರುವ ವಿಶಾಲಕ್ಷಿ. 3-4 ಕಿಲೋ ಹಸಿ ಮೀನಿನಿಂದ ಒಂದು ಕಿಲೋ ಒಣ ಮೀನು ದೊರೆಯುತ್ತದೆ

“ನಾನು ಕಮಲವೇಣಿಯವರನ್ನು ಬಹಳವಾಗಿ ಇಷ್ಟಪಡುತ್ತಿದ್ದೆನಾದರೂ, ಆಗ ಎಷ್ಟೇ ಲಾಭವಿದ್ದರೂ ನನಗೆ ಸಿಗುತ್ತಿದ್ದಿದ್ದು ಕೇವಲ ದಿನಗೂಲಿ ಮಾತ್ರ” ಎಂದರು ತಾನು ಮುಂದೆ ಏನು ಮಾಡಿದೆ ಎನ್ನುವುದನ್ನು ವಿವರಿಸುವ ಮೊದಲು.

ಇದೇ ಸಮಯದಲ್ಲಿ ವಿಶಾಲಾಕ್ಷಿ ಮೀನು ಒಣಗಿಸಿ ಮಾರುವ ಉದ್ದೇಶದಿಂದ ಒಂದಷ್ಟು ಮೀನು ಖರೀದಿಸಿದರು. ಪ್ರಯಾಣದಲ್ಲಿದ್ದ ಕಮಲವೇಣಿಗೆ ಇವರ ಸ್ವತಂತ್ರರಾಗುವ ಪ್ರಯತ್ನದ ಕುರಿತು ತಿಳಿದು 12 ವರ್ಷದಿಂದ ತನ್ನ ಬಳಿ ಕೆಲಸಕ್ಕಿದ್ದ ವಿಶಾಲಾಕ್ಷಿಯನ್ನು ಕೆಲಸದಿಂದ ತೆಗೆದು ಹಾಕಿದರು.

ಇದರಿಂದಾಗಿ ಅವರಿಗೆ ತಮ್ಮ ಮಕ್ಕಳ ವಾರ್ಷಿಕ ಶಾಲಾ ಶುಲ್ಕ 6,000 ರೂ. ಕಟ್ಟುವುದಕ್ಕೂ ಕಷ್ಟವಾಗತೊಡಗಿತು. ಕುಟುಂಬ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು.

ಇದಾದ ಒಂದು ತಿಂಗಳ ನಂತರ ಅವರು ಕುಪ್ಪಮಾಣಿಕ್ಕಮ್ಮ ಎನ್ನುವ ಮೀನಿನ ವ್ಯಾಪಾರಿಯನ್ನು ಭೇಟಿಯಾದರು. ಆ ವ್ಯಕ್ತಿ ವಿಶಾಲಕ್ಷಿಯವರಿಗೆ ಮತ್ತೆ ಬಂದರಿಗೆ ಮರಳುವಂತೆ ಹೇಳಿದರು. ಜೊತೆಗೆ ಒಣಗಿಸಲು ಬುಟ್ಟಿಯಷ್ಟು ಮೀನು, ಮತ್ತು ತನ್ನ ಶೆಡ್ಡಿನಲ್ಲಿ ಒಂದಷ್ಟು ಜಾಗವನ್ನು ಉಚಿತವಾಗಿ ನೀಡಿದರು. ಆದರೆ ಈ ಸಂಪಾದನೆ ಸಾಲುತ್ತಿರಲಿಲ್ಲ.

2010ರಲ್ಲಿ ಸ್ವಂತವಾಗಿ ವ್ಯವಹಾರ ಪ್ರಾರಂಭಿಸಲು ನಿರ್ಧರಿಸಿದ ವಿಶಾಲಾಕ್ಷಿ ಸ್ಥಳೀಯ ದೋಣಿ ಮಾಲಿಕರೊಬ್ಬರಿಂದ ಒಂದು ವಾರದವರೆಗೆ ದಿನಾಲೂ 2,000 ರೂಪಾಯಿಗಳ ಮೀನನ್ನು ಸಾಲವಾಗಿ ಪಡೆದರು. ಮೀನು ಖರೀದಿಸಲು ಮುಂಜಾನೆ 3 ಗಂಟೆಗೆ ಬಂದರಿಗೆ ಬಂದು, ಒಣಗಿಸಿ ಮಾರಾಟ ಮಾಡಿ ರಾತ್ರಿ 8 ಗಂಟೆಯ ಹೊತ್ತಿಗೆ ಮನೆಗೆ ತಲುಪಬೇಕಿತ್ತು. ಅವರು ಮಹಿಳಾ ಸ್ವಸಹಾಯ ಗುಂಪಿನಿಂದ (ಎಸ್ಎಚ್‌ಜಿ) ವಾರ್ಷಿಕ ಶೇಕಡಾ 40 ಕ್ಕಿಂತ ಹೆಚ್ಚಿನ ಬಡ್ಡಿಯಲ್ಲಿ 30,000 ರೂ.ಗಳ ಸಾಲವನ್ನು ಪಡೆದರು, ಅದನ್ನು ಅವರು ಎರಡು ವರ್ಷಗಳಲ್ಲಿ ಮರುಪಾವತಿಸಬೇಕಾಗಿತ್ತು. SHG ಬಡ್ಡಿದರಗಳು ಹೆಚ್ಚಾಗಿದ್ದರೂ, ಅವು ಖಾಸಗಿ ಲೇವಾದೇವಿದಾರರ ಬಡ್ಡಿ ದರಗಳಿಗಿಂತ ಕಡಿಮೆಯಿದ್ದವು.

ಮೀನು ಒಣಗಿಸಲು ಕುಪ್ಪ ಮಾಣಿಕ್ಕಮ್‌ ಅವರ ಶೆಡ್ಡನ್ನೇ ಬಳಸುತ್ತಿದ್ದರು. “ಹಾಣಕಾಸಿನ ವಿಚಾರದಲ್ಲಿ ತಕರಾರು ನಡೆಯುತ್ತಿತ್ತು. ತಾನು ನನಗೆ ಸಹಾಯ ಮಾಡಿದ್ದೇನೆ ಎನ್ನವುದನ್ನು ಪದೆಪದೇ ನೆನಪಿಸುತ್ತಿದ್ದರು” ಎಂದು ಅವರು ವಿವರಿಸುತ್ತಾರೆ. ನಂತರ ವಿಶಾಲಾಕ್ಷಿ 1,000 ರೂ. ಬಾಡಿಗೆಗೆ ಒಣ ಮೀನು ಸಂಗ್ರಹಿಸಲು ತಮ್ಮದೇ ಆದ ಶೆಡ್‌ ಹೊಂದಲು ನಿರ್ಧರಿಸಿದರು.

PHOTO • M. Palani Kumar
PHOTO • M. Palani Kumar

ಒಣಗಿದ ಮೀನುಗಳನ್ನು ಸಂಗ್ರಹಿಸಲು ಶೆಡ್ಡಿನಿಂದ ಬಾಕ್ಸ್‌ ಒಂದನ್ನು ತರುತ್ತಿರುವ ವಿಶಾಲಾಕ್ಷಿ. (ಎಡ) ಊಟದ ನಂತರ ಇಬ್ಬರು ಕೂಲಿ ಕಾರ್ಮಿಕರೊಂದಿಗೆ (ಬಲಕ್ಕೆ) ವಿಶ್ರಾಂತಿ ಪಡೆಯುತ್ತಿರುವುದು. ತಮಿಳುನಾಡು ಸರ್ಕಾರವು 2020ರಲ್ಲಿ ರಿಂಗ್ ಸೀನ್ ಮೀನುಗಾರಿಕೆಯನ್ನು ನಿಷೇಧಿಸಿದ ನಂತರ, ಅವರ ಆದಾಯವು ತೀವ್ರವಾಗಿ ಕುಸಿಯಿತು ಮತ್ತು ಅವರು ತಮ್ಮ ಕಾರ್ಮಿಕರ ಕೈ ಬಿಡಬೇಕಾಯಿತು

PHOTO • M. Palani Kumar
PHOTO • M. Palani Kumar

ಎಡ: ವಿಶಾಲಾಕ್ಷಿ ಮತ್ತು ಅವರ ಪತಿ ಶಕ್ತಿವೇಲ್ (ನಿಂತಿರುವವರು) ಮತ್ತು ಮೀನುಗಳನ್ನು ಸ್ವಚ್ಛಗೊಳಿಸುವ ಮತ್ತು ಒಣಗಿಸುವ ಕೆಲಸಗಾರ. ಬಲ: ಸಂಜೆ ಸಮೀಪಿಸುತ್ತಿದ್ದಂತೆ, ಶಕ್ತಿವೇಲ್ ಒಣಗಿಸುವ ಮೀನುಗಳನ್ನು ಸಂಗ್ರಹಿಸುತ್ತಾರೆ

ತನ್ನ ಸ್ವಾತಂತ್ರ್ಯ ಮತ್ತು ಉದ್ಯಮದಿಂದಾಗಿ, ವಿಶಾಲಾಕ್ಷಿ ತನ್ನ ಸುತ್ತಲಿನವರಿಂದ ಆಗಾಗ್ಗೆ ಮೌಖಿಕ ನಿಂದನೆಯನ್ನು ಎದುರಿಸಿದ್ದಾರೆ. ಕಡಲೂರಿನಲ್ಲಿ, ಅತ್ಯಂತ ಹಿಂದುಳಿದ ವರ್ಗಗಳಿಗೆ (ಎಂಬಿಸಿ) ಸೇರಿದ ಪಟ್ಟಣವರ್ ಮತ್ತು ಪರ್ವತರಾಜಕುಲಂ ಸಮುದಾಯಗಳು ಮೀನುಗಾರಿಕೆ ವ್ಯಾಪಾರದಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ವಿಶಾಲಾಕ್ಷಿ ದಲಿತ ಸಮುದಾಯಕ್ಕೆ ಸೇರಿದವರು.   "ಬಂದರಿನಲ್ಲಿ ಕೆಲಸ ಮಾಡಲು ಮತ್ತು ವ್ಯವಹಾರವನ್ನು ನಡೆಸಲು ನನಗೆ ಅವಕಾಶ ನೀಡುವ ಮೂಲಕ ಅವರು ಉಪಕಾರ ಮಾಡುತ್ತಿದ್ದಾರೆ ಎಂದು ಮೀನುಗಾರ ಸಮುದಾಯವು ಭಾವಿಸಿತು. ಅವರು ಬಾಯಿಗೆ ಬಂದಂತೆ ಮಾತನಾಡುವುದು ನನಗೆ ನೋವುಂಟು ಮಾಡುತ್ತಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಮೊದಲಿಗೆ ಒಬ್ಬರೇ ಮೀನುಗಳನ್ನು ಒಣಗಿಸಲು ಪ್ರಾರಂಭಿಸಿದ್ದರೂ, ನಂತರ ಅವರ ಪತಿ ಅವರಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ವ್ಯವಹಾರವು ಬೆಳೆಯಲು ಪ್ರಾರಂಭಿಸುತ್ತಿದ್ದಂತೆ, ವಿಶಾಲಾಕ್ಷಿ ಇಬ್ಬರು ಮಹಿಳಾ ಕಾರ್ಮಿಕರನ್ನು ನೇಮಿಸಿಕೊಂಡರು ಮತ್ತು ಅವರಿಗೆ ಊಟ ಮತ್ತು ಚಹಾದೊಂದಿಗೆ 300 ರೂ.ಗಳ ದೈನಂದಿನ ವೇತನವನ್ನು ನೀಡಿದರು. ಮೀನುಗಳನ್ನು ಪ್ಯಾಕ್ ಮಾಡಿ ಒಣಗಿಸಲು ಇಡುವ ಜವಾಬ್ದಾರಿ ಮಹಿಳೆಯರ ಮೇಲಿತ್ತು.  ಮೀನಿಗೆ ಉಪ್ಪು ಹಾಕಲು ಮತ್ತು ಸಣ್ಣಪುಟ್ಟ ಕೆಲಸಗಳನ್ನು ಮಾಡಲು ದಿನನಕ್ಕೆ 300 ರೂ. ಸಂಬಳಕ್ಕೆ ಹುಡುಗನೊಬ್ಬನನ್ನು ನೇಮಿಸಿಕೊಂಡರು.

ರಿಂಗ್ ಸೀನ್ ಮೀನುಗಾರರಿಂದ ಹೇರಳವಾದ ಮೀನುಗಳು ಲಭ್ಯವಿರುತ್ತಿದ್ದ ಕಾರಣ ವಿಶಾಲಾಕ್ಷಿ ವಾರಕ್ಕೆ 8000-10,000 ರೂ.ಗಳನ್ನು ಗಳಿಸುತ್ತಿದ್ದರು.

ಈ ಸಂಪಾದನೆಯಿಂದಾಗಿ ಅವರು ತಮ್ಮ ಕಿರಿಯ ಮಗಳು ಸೌಮ್ಯಾರನ್ನು ನರ್ಸಿಂಗ್ ಕೋರ್ಸಿಗೆ ಸೇರಿಸಲು ಸಾಧ್ಯವಾಯಿತು ಮತ್ತು ಹಿರಿಯರಾದ ಶಾಲಿನಿ ರಸಾಯನಶಾಸ್ತ್ರ ಪದವೀಧರರಾದರು. ಅವರ ಕೆಲಸವು ಅವರ ಮದುವೆಗಳ ಖರ್ಚಿಗೆ ಸಹಾಯ ಮಾಡಿತು.

*****

ವಿಶಾಲಾಕ್ಷಿ ಮತ್ತು ಇತರರು ರಿಂಗ್ ಸೀನ್ ಮೀನುಗಾರಿಕೆಯಿಂದ ಲಾಭ ಪಡೆದಿರಬಹುದು, ಆದರೆ ಇದು ಮೀನಿನ ಸಂಗ್ರಹವನ್ನು ಕ್ಷೀಣಿಸುವಂತೆ ಮಾಡುತ್ತಿದೆ ಎಂದು ಪರಿಸರಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ವ್ಯಾಪಕವಾಗಿ ದೂಷಿಸಿದ್ದಾರೆ. ಆದ್ದರಿಂದ ಈ ಅಭ್ಯಾಸವನ್ನು ನಿಷೇಧಿಸಲು ದೀರ್ಘಕಾಲದ ಹೋರಾಟ ನಡೆಯುತ್ತಿತ್ತು. ರಿಂಗ್ ಸೀನ್ ಸೇರಿದಂತೆ ಪರ್ಸೀನ್ ಬಲೆಗಳ ಬಳಕೆಯು 2000 ದಿಂದಲೂ ಕಾನೂನುಬಾಹಿರವಾಗಿದ್ದರೂ, ಮೀನು ಹಿಡಿಯಲು ದೊಡ್ಡ ಬಲೆಗಳ ಬಳಕೆಯನ್ನು ನಿಷೇಧಿಸುವ 2020 ರ ತಮಿಳುನಾಡು ಸರ್ಕಾರದ ಆದೇಶದವರೆಗೆ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿರಲಿಲ್ಲ.

PHOTO • M. Palani Kumar

ಉಪ್ಪು ಹಾಕಿದ ಮೀನನ್ನು ಒಣಗಿಸಲು ಕೊಂಡು ಹೋಗುವ ಸಲುವಾಗಿ ಬಾಕ್ಸ್‌ ಒಂದರೊಳಗೆ ಹಾಕುತ್ತಿರುವ ವಿಶಾಲಾಕ್ಷಿ

PHOTO • M. Palani Kumar

ವಿಶಾಲಾಕ್ಷಿಯವರಿಗೆ ಮೀನಿಗೆ ಉಪ್ಪು ಹಾಕಲು ಸಹಾಯ ಮಾಡುತ್ತಿರುವ ಹುಡುಗ


“ಆಗ ನಮಗೆಲ್ಲ ಒಳ್ಳೆಯ ಸಂಪಾದನೆಯಿತ್ತು. ಆದರೆ ಈಗ ಹೊಟ್ಟೆಪಾಡಿಗೆ ಸಾಲುವಷ್ಟು ಮಾತ್ರವೇ ದುಡಿಯುತ್ತಿದ್ದೇವೆ” ಎನ್ನುತ್ತಾರೆ ವಿಶಾಲಾಕ್ಷಿ. ಈ ನಿಷೇಧ ವಿಶಾಲಾಕ್ಷಿಯವರ ಮೇಲಷ್ಟೇ ಅಲ್ಲ ಅಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ಇಡೀ ಸಮುದಾದಯದ ಮೇಲೆ ಪರಿಣಾಮ ಬೀರಿತು. ನಿಷೇಧದ ನಂತರ ಅವರಿಗೆ ರಿಂಗ್‌ ಸೀನ್‌ ದೋಣಿಗಳಿಂದ ಮೀನು ಖರೀದಿ ಸಾಧ್ಯವಿರಲಿಲ್ಲ. ಅವರು ವಿಶಾಲಾಕ್ಷಿಯವರಿಗೆ ಉಳಿದ ಮತ್ತು ಹಾನಿಗೊಳಗಾದ ಮೀನುಗಳನ್ನು ಕಡಿಮೆ ಬೆಲೆಗೆ ನೀಡುತ್ತಿದ್ದರು.

ಪ್ರಸ್ತುತ ಅವರು ಹೆಚ್ಚಿನ ಬೆಲೆಗೆ ಮೀನುಗಳನ್ನು ಮಾರಾಟ ಮಾಡುವ ಟ್ರಾಲರ್ ದೋಣಿಗಳನ್ನು ತಮ್ಮ ಏಕೈಕ ಮೀನಿನ ಮೂಲವಾಗಿ ಅವಲಂಬಿಸಿದ್ದಾರೆ. ಮೀನು ಸಂತಾನೋತ್ಪತ್ತಿ ಅವಧಿಯಲ್ಲಿ ಏಪ್ರಿಲ್-ಜೂನ್ ಮಧ್ಯದಿಂದ ಟ್ರಾಲರ್ ದೋಣಿಗಳು ಕಾರ್ಯಾಚರಣೆಯನ್ನು ನಿಲ್ಲಿಸಿದಾಗ, ತಾಜಾ ಮೀನುಗಳನ್ನು ಇನ್ನೂ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಫೈಬರ್ ದೋಣಿಗಳನ್ನು ಹುಡುಕಬೇಕಾಗುತ್ತದೆ.

ವಾತಾವರಣ ಅನುಕೂಲಕರವಾಗಿದ್ದಾಗ ಮತ್ತು ಮೀನು ಹೆಚ್ಚು ಲಭ್ಯವಿದ್ದ ಕಾಲದಲ್ಲಿ ಅವರು ವಾರಕ್ಕೆ 4,000-5,000 ರೂ.ಗಳನ್ನು ಸಂಪಾದಿಸುತ್ತಾರೆ. ಕುರಿಚಿ (ಕಾರೈ) ಮತ್ತು ಕೊಕ್ಕರ (ಪಾರೈ) ಮೀನಿನಂತಹ ಅಗ್ಗದ ಒಣ ಮೀನುಗಳ ಮೂಲಕ ಈ ಸಂಪಾದನೆ ಮಾಡಲಾಗುತ್ತದೆ. ಕಾರೈ ಮೀನಿಗೆ ಕಿಲೋ ಒಂದಕ್ಕೆ 150-200 ರೂ. ಸಿಕ್ಕಿದರೆ, ಪಾರೈ ಮೀನಿಗೆ 200-300 ರೂ ಸಿಗುತ್ತದೆ. ಒಂದು ಕಿಲೋ ಒಣ ಮೀನು ತಯಾರಿಸಲು ಸುಮಾರು 3-4 ಕಿಲೋ ತಾಜಾ ಮೀನು ಬೇಕಾಗುತ್ತದೆ. ತಾಜಾ ಮೀನಿನ ಬೆಲೆ ಕಾರೈ ಮತ್ತು ಮೀನುಗಳಿಗೆ ಕ್ರಮವಾಗಿ 30 ಮತ್ತು 70 ರೂಪಾಯಿಗಳಿವೆ.

"ನಾವು 120 ರೂ.ಗೆ ಖರೀದಿಸಿದ ಮೀನನ್ನು 150 ರೂ.ಗೆ ಮಾರಾಟ ಮಾಡಬಹುದು, ಆದರೆ ದರವು ಒಣಗಿದ ಮೀನು ಮಾರುಕಟ್ಟೆಗೆ ಎಷ್ಟು ಬರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ದಿನಗಳಲ್ಲಿ ಸಂಪಾದಿಸಿದರೆ, ಇನ್ನು ಕೆಲವು ದಿನಗಳಲ್ಲಿ ಹಣ ಕಳೆದುಕೊಳ್ಳುತ್ತೇವೆ" ಎಂದು ಅವರು ತಮ್ಮ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ.

ವಾರಕ್ಕೊಮ್ಮೆ, ಅವರು ಮೀನುಗಳನ್ನು ಎರಡು ಒಣ ಮೀನು ಮಾರುಕಟ್ಟೆಗಳಿಗೆ ಸಾಗಿಸಲು ವಾಹನವನ್ನು ಬಾಡಿಗೆಗೆ ಪಡೆಯುತ್ತಾರೆ - ಒಂದು ಕಡಲೂರಿನಲ್ಲಿ ಮತ್ತು ಇನ್ನೊಂದು ನೆರೆಯ ನಾಗಪಟ್ಟಿಣಂ ಜಿಲ್ಲೆಯಲ್ಲಿ. ಸರಿಸುಮಾರು 30 ಕೆಜಿ ತೂಕದ ಒಣಗಿದ ಮೀನುಗಳ ಪ್ರತಿ ಪೆಟ್ಟಿಗೆಯನ್ನು ಸಾಗಿಸಲು 20 ರೂ. ಬಾಡಿಗೆ ಕೊಡಬೇಕು.  ಅವರು ತಿಂಗಳಿಗೆ ಸುಮಾರು 20 ಪೆಟ್ಟಿಗೆಗಳನ್ನು ತಯಾರಿಸಲು ಪ್ರಯತ್ನಿಸುತ್ತಾರೆ.

PHOTO • M. Palani Kumar
PHOTO • M. Palani Kumar

ದೀರ್ಘ ಕೆಲಸದ ದಿನವೊಂದರ ನಂತರ ವಿಶ್ರಾಂತಿ ಪಡೆಯುತ್ತಿರುವ ವಿಶಾಲಾಕ್ಷಿ. ಬಿಡುವಿಲ್ಲದ ಕೆಲಸದ ಕಾರಣ ಅವರಿಗೆ ವಿಶ್ರಾಂತಿ ಸಿಗುವುದು ಅಪರೂಪ

PHOTO • M. Palani Kumar
PHOTO • M. Palani Kumar

ವಿಶಾಲಾಕ್ಷಿ ಮತ್ತು ಶಕ್ತಿವೇಲ್ ತಮ್ಮ ಮನೆಯ ಹೊರಗೆ ನಿಂತಿರುವುದು (ಬಲ). ಶಕ್ತಿವೇಲ್ ವ್ಯವಹಾರದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದಾರೆ. ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆ ಮತ್ತು ಶಿಕ್ಷಣಕ್ಕೆ ಹಣವನ್ನು ಹೊಂದಿಸಲು ಸಾಧ್ಯವಾದ ಕುರಿತು ವಿಶಾಲಾಕ್ಷಿ ಸಂತಸ ವ್ಯಕ್ತಪಡಿಸುತ್ತಾರೆ. ಆದಾಗ್ಯೂ, ಅವರು ಪ್ರಸ್ತುತ ಸಾಲದ ಹೊರೆಯಿಂದ ಬಾಧಿತರಾಗಿದ್ದಾರೆ

ರಿಂಗ್ ಸೀನ್ ಮೀನುಗಾರಿಕೆ ನಿಷೇಧದಿಂದಾಗಿ ಮೀನಿನ ಬೆಲೆ ಏರಿಕೆ, ಉಪ್ಪಿನ ಬೆಲೆ ಏರಿಕೆ, ಸಾಗಣೆ ಮತ್ತು ಮೀನುಗಳನ್ನು ಪ್ಯಾಕ್ ಮಾಡಲು ಚೀಲಗಳು ಇವೆಲ್ಲವೂ ಅವರ ವ್ಯವಹಾರದ ಖರ್ಚನ್ನು ಹೆಚ್ಚಿಸಿವೆ. ಜೊತೆಗೆ ಕಾರ್ಮಿಕರಿಗೆ ನೀಡುತ್ತಿರುವ ವೇತನವನ್ನು 300 ರೂ.ಗಳಿಂದ 350 ರೂ.ಗಳಿಗೆ ಹೆಚ್ಚಿಸಲಾಗಿದೆ.

ಆದರೆ ಈ ಬೆಲೆಯೇರಿಕೆಯಂತೆ ಒಣ ಮೀನಿನ ಬೆಲೆ ಏರುತ್ತಿಲ್ಲ. ಇದರಿಂದಾಗಿ ವಿಶಾಲಾಕ್ಷಿಯವರಿಗೆ 2022ರ ಎಪ್ರಿಲ್‌ ತಿಂಗಳಿನಲ್ಲಿ 80,000 ರೂ.ಗಳ ಸಾಲವಿತ್ತು. ಇದರಲ್ಲಿ ಹಸಿ ಮೀನು ನೀಡಿದ ದೋಣಿ ಮಾಲಿಕರಿಗೆ ಕೊಡಬೇಕಿರುವುದು 60,000 ಮತ್ತು ಉಳಿದಿದ್ದು ಸ್ವಸಹಾಯ ಸಂಘಗಳ ಸಾಲ.

2022ರ ಆಗಸ್ಟ್‌ ತಿಂಗಳಿನಲ್ಲಿ ಅವರು ತಮ್ಮ ಕೆಲಸಗಾರರನ್ನು ಮನೆಗೆ ಕಳುಹಿಸಬೇಕಾಗಿ ಬಂತು. ಇದರೊಂದಿಗೆ ವ್ಯವಹಾರವನ್ನೂ ಕಡಿಮೆಗೊಳಿಸಬೇಕಾದ ಅನಿವಾರ್ಯತೆ ಎದುರಾಯಿತು. “ಈಗ ನಾನು ನನ್ನ ಗಂಡನ ಸಹಾಯದೊಂದಿಗೆ ಮೀನಿಗೆ ಉಪ್ಪು ಹಾಕುತ್ತೇನೆ. ಆಗಾಗ ಇತರ ಸಹಾಯ ಪಡೆಯುವುದರೊಂದಿಗೆ, ನಾವು ದಿನಕ್ಕೆ ಕೇವಲ ನಾಲ್ಕು ಗಂಟೆಗಳ ವಿಶ್ರಾಂತಿಯನ್ನಷ್ಟೇ ಪಡೆಯಲು ಸಾಧ್ಯವಾಗುತ್ತಿದೆ.” ಎಂದು ಅವರು ಹೇಳುತ್ತಾರೆ.

ಸದ್ಯಕ್ಕೆ ವಿಶಾಲಾಕ್ಷಿಯವರ ಪಾಲಿಗೆ ಉಳಿದಿರುವುದು ತನ್ನ ಹೆಣ್ಣುಮಕ್ಕಳಾದ ಶಾಲಿನಿ (26) ಮತ್ತು ಸೌಮ್ಯ (23) ಅವರಿಗೆ ಶಿಕ್ಷಣ ನೀಡಿ ಮದುವೆ ಮಾಡಿಸಲು ಸಾಧ್ಯವಾದ ನೆಮ್ಮದಿ ಮಾತ್ರ. ಆದರೆ ಬದುಕಿನ ಇತ್ತೀಚಿನ ಸನ್ನಿವೇಶಗಳನ್ನು ಅವರ ಬದುಕಿನ ಗತಿಯನ್ನು ಇಳಿಜಾರಿಗೆ ಕೊಂಡೊಯ್ದಿದೆ.

“ಈಗ ವ್ಯವಹಾರದ ಬಿಕ್ಕಟ್ಟಿನಿಂದಾಗಿ ನಾನು ಸಾಲದಲ್ಲಿ ಮುಳುಗಿದ್ದೇನೆ” ಎನ್ನುತ್ತಾರೆ.

ಜನವರಿ 2023ರಲ್ಲಿ, ಸುಪ್ರೀಂ ಕೋರ್ಟ್ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಸೀಮಿತ ರೀತಿಯಲ್ಲಿ ಪರ್ಸೀನ್ ಮೀನುಗಾರಿಕೆಗೆ ಅನುಮತಿ ನೀಡುವ ಮೂಲಕ ಪರಿಹಾರವನ್ನು ನೀಡಿತು . ಇದು ತನ್ನ ಬದುಕನ್ನು ಮತ್ತೆ ಹಳಿಗೆ ತರಬಹುದೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ ವಿಶಾಲಾಕ್ಷಿ.

ದಿವ್ಯಾಉದಿರನ್‌ ಅವರ ಬೆಂಬಲದೊಂದಿಗೆ

ಅನುವಾದ : ಶಂಕರ . ಎನ್ . ಕೆಂಚನೂರು

Text : Nitya Rao

Nitya Rao is Professor, Gender and Development, University of East Anglia, Norwich, UK. She has worked extensively as a researcher, teacher and advocate in the field of women’s rights, employment and education for over three decades.

Other stories by Nitya Rao
Photographs : M. Palani Kumar

M. Palani Kumar is PARI's Staff Photographer and documents the lives of the marginalised. He was earlier a 2019 PARI Fellow. Palani was the cinematographer for ‘Kakoos’, a documentary on manual scavengers in Tamil Nadu, by filmmaker Divya Bharathi.

Other stories by M. Palani Kumar
Editor : Urvashi Sarkar

Urvashi Sarkar is an independent journalist and a 2016 PARI Fellow.

Other stories by Urvashi Sarkar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru