ಮೊದಲಿಗೆ ಗಲ್ಲ ಎಂದರೇನು? ಗಲ್ಲ ಎಂದರೆ ಮುಖದ ಒಂದು ಭಾಗ. ಆಂಗ್ಲದಲ್ಲಿ cheeks ಎನ್ನುತ್ತಾರೆ. ಮುಖದ ಮೇಲಿನ ವಿಶಾಲವಾದ ಭಾಗ ಈ ಗಲ್ಲ. ನಿಮ್ಮ ಗಲ್ಲ ಎಲ್ಲಿದೆ ಅಂತ ಯಾರಾದರೂ ವಿಳಾಸ ಕೇಳಿದರೆ ಕಿವಿ ಮತ್ತು ಮೂಗಿನ ಮಧ್ಯೆ ಒಂದು ಗೆರೆ ಎಳೆದರೆ ಅಲ್ಲಿದೆ ಗಲ್ಲ ಅಂತ ಹೇಳಬಹುದು. ಕಂಗಳ ಕೆಳಗೆ ಸೀದಾ ಇಳಿದರೆ ಅಲ್ಲೇ ಸಿಗುತ್ತೆ ಗಲ್ಲ ಎನ್ನಬಹುದು.
ಆದರೆ ತುಂಬಾ ಕೆಳಕ್ಕೆ ಹೋದರೆ ಗದ್ದ ಸಿಗುತ್ತದೆ, ಹುಷಾರು, ತ್ವಚೆ ತುಂಬಾ ನುಣುಪಾಗಿದ್ದರೆ ಜಾರಿ ಬಿದ್ದು ಹೋಗ್ತೀರಾ. ಒಂದು ವೇಳೆ ಗಂಡಾಗಿದ್ದು, ಗದ್ದದ ಮೇಲೆ ಗಡ್ಡ ಇದ್ದರೆ, ಜಾರಿ ಹೀಗದಂತೆ ಹಿಡಿದುಕೊಳ್ಳಲು ಗಡ್ಡದ ಕೂದಲು ಇರುತ್ತದೆ. ಅರರೇ! ಹೀಗೆಲ್ಲಾ ಹೇಳಿದ್ದು ನಿಮಗಲ್ಲ. ಗಲ್ಲ ಎಲ್ಲಿದೆ ಅಂತ ಕಣ್ಣಿನಿಂದ ಹರಿದ ನೀರು ನನ್ನನ್ನು ವಿಳಾಸ ಕೇಳಿದಾಗ ಈ ಮಾತು ಹೇಳಿದ್ದು. ಕಣ್ಣಿಂದ ಹರಿದ ಅಳುವಿನ ನೀರಿಗಾ ಇಷ್ಟೆಲ್ಲಾ ಹೇಳಿದ್ದು ಎನ್ನಬೇಡಿ, ನಾನು ವಿಳಾಸ ಹೇಳಿದ್ದು ಆನಂದಭಾಷ್ಪಕ್ಕೆ.
ಗಲ್ಲ ಎಂದ ಕೂಡಲೇ ನಿಮಗೆ ನೆನಪಾಗೋದು ಏನು? ಮೇಲೆ ಹೇಳಿದ ಕಣ್ಣೀರಿನ ಕಥೆಯನ್ನೇ ಕೊಂಚ ಭಿನ್ನವಾಗಿ ಹೇಳೋಣ. ಎಷ್ಟೋ ವರುಷಗಳ ಕಾಲ ದೂರಾಗಿದ್ದ ಮಗನನ್ನು ಕಂಡಾಗ ತಾಯಿಯ ಕಣ್ಣಿನಿಂದ ಹರಿದ ನೀರು ಗಲ್ಲದ ಮೇಲೆ ಹರಿದಾಗ ಆ ಗಲ್ಲಗಳಿಗೆ ಧನ್ಯತಾಭಾವ ಮೂಡಿತು. ಈವರೆಗೆ ಕಣ್ಣೀರಿನ ಉಪ್ಪಿನಾಂಶ ಉಂಡೇ ಬೇಸರ ಮೂಡಿಸಿಕೊಂಡ ಗಲ್ಲದ ಚರ್ಮದ ಪದರಗಳು, ಇಂದು ಸಿಹಿನೀರನ್ನು ಉಂಡು ಧನ್ಯವಾದವು.
ನಲ್ಲೆಯ ಗಲ್ಲ ಮನಸ್ಸಿಗೆ ಬಾರದೇ ಇರುವುದೇ?
ಗಲ್ಲ ಎಂದ ಕೂಡಲೇ ನಲ್ಲೆಯ ಗಲ್ಲ ಮನಸ್ಸಿಗೆ ಬಾರದೇ ಇರುವುದೇ? ಮೊದಲಲ್ಲಿ ವಧು- ವರರ ಭೇಟಿಯ ದಿನಗಳಿಂದಲೇ ಆರಂಭಿಸಿದರೆ, ಅಂದಿನ ದಿನಕ್ಕೇ ಹೋಗೋಣ. ಗಂಡನ್ನು ನೋಡಿದ ಹೆಣ್ಣಿನ ಗಲ್ಲ ರಂಗೇರೋದು ಒಂದು ಸುಂದರ ಅನುಭವ. ಈ ಗಲ್ಲ ರಂಗೇರೋದು ನಾಚಿಕೆಯಿಂದಲೂ ಆಗಬಹುದು, ಸಿಟ್ಟಿನಿಂದಲೂ ಆಗಬಹುದು. ನಾಚಿಕೆಯಿಂದ ಕೆಂಪೇರಿದ್ದು ಪಿಂಕ್ ಆಗಿದ್ದು, ಸಿಟ್ಟಿನಿಂದ ಆದ ಕೆಂಪು ಗಾಢ ಅಂತೇನಲ್ಲಾ ಎಂದುಕೊಂಡಿದ್ದೇನೆ. ಈ ಮಾತನ್ನು ಕೇಳಿ ನಾಚಿದ ಅಥವಾ ಸಿಟ್ಟಿಗೆದ್ದ ಹೆಂಗಳು ಕನ್ನಡಿಯಲ್ಲಿ ನಿಮ್ಮ ಮೊಗ ನೋಡಿಕೊಂಡು ಆ ಬಣ್ಣದ ಬಗ್ಗೆ ಹೇಳಬೇಕಾಗಿ ವಿನಂತಿ.
ನಲ್ಲನ ಗಲ್ಲಕ್ಕೆ ಹೂಮುತ್ತನೊಂದನ್ನಿತ್ತಳು ನಲ್ಲೆ ಎನ್ನುವಂತೆಯೇ, ತನ್ನನ್ನು ರೇಗಿಸಿದವನ ಗಲ್ಲಕ್ಕೆ ಬೀಸಿ ಹೊಡೆದು ಕೆನ್ನೆಯ ಮೇಲೆ ಬೆರಳುಗಳ ಅಚ್ಚನ್ನು ಮೂಡಿಸಿದಳು ಮುನಿದ ನಾರಿ ಎನ್ನಬಹುದು. ಮುತ್ತನಿರಿಸಿಕೊಂಡವನ ಕೆನ್ನೆ ಕೆಂಪಾಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಹೊಡೆಸಿಕೊಂಡವನ ಕೆನ್ನೆಯಂತೂ ಕೆಂಪಾಯಿತು.
ಕೆಂಪುಗಲ್ಲದ ಹನುಮಂತನೇ ನಮ್ಮ ಕೆಂಗಲ್ಲ ಹನುಮ
ಹೊಡೆಸಿಕೊಂಡವನ ಕೆನ್ನೆ ಕೆಂಪಾಯಿತು ಎಂದಾಗ ನಿಮಗೆ ನೆನಪಾಗೋದು ಯಾರು? ಇಲ್ಲಾ ಬಿಡಿ, ಕಮರ್ಷಿಯಲ್ ಆಗಿ ಆಲೋಚಿಸದಿರಿ. ನಾನು ಹೇಳ ಹೊರಟಿರುವುದು ನಮ್ಮ ಹನುಮನ ಬಗ್ಗೆ. ಸೂರ್ಯನನ್ನೇ ಹಣ್ಣು ಎಂದುಕೊಂಡು ತಿನ್ನಲು ಹೋಗಿ ಪೆಟ್ಟು ತಿನ್ನಿಸಿಕೊಂಡ ಹನುಮನ ಬಗ್ಗೆ. ಈತನೇ ನಮ್ಮ ಕೆಂಗಲ್ಲ ಹನುಮಂತರಾಯ. ಕೆಂಪುಗಲ್ಲದ ಹನುಮಂತನೇ ನಮ್ಮ ಕೆಂಗಲ್ಲ ಹನುಮ. ಹೆಚ್ಚು ಕಮ್ಮಿ ಇದೇ ಹೆಸರಿನವರೇ ನಮ್ಮ ರಾಜ್ಯದ ಎರಡನೆಯ ಮುಖ್ಯಮಂತ್ರಿ, ಕೆಂಗಲ್ ಹನುಮಂತಯ್ಯ.
ಗಲ್ಲಾಪೆಟ್ಟಿಗೆಯ 'ಗಲ್ಲಾ' ಪದವು ಇಂದಿನ ವಿಷಯದ 'ಗಲ್ಲ' ಅಲ್ಲಾ! ಹ್ರಸ್ವಕ್ಕೂ, ದೀರ್ಘಕ್ಕೂ ವ್ಯತ್ಯಾಸವಿದೆ. ಒಂದು ಅಕ್ಷರಕ್ಕೆ ಹೊಟ್ಟೆ ಸೀಳೋದಕ್ಕೂ ಸೀಳದೇ ಇರೋದಕ್ಕೂ ಇರುವ ವ್ಯತ್ಯಾಸದಂತೆ.
ಇಷ್ಟೆಲ್ಲಾ ವಿಷಯಗಳನ್ನು ಹೇಳಿದ ಮೇಲೆ ಈಗ ಹೇಳಲಿರುವ ಮುಖ್ಯವಾದ ವಿಷಯ ಏನಪ್ಪಾ ಅಂದ್ರೆ, ಇಂದು ನಾನು ಹೇಳಲು ಇದ್ದ ವಿಷಯ ಈ 'ಗಲ್ಲ'ದ ಬಗ್ಗೆ ಅಲ್ಲವೇ ಅಲ್ಲ!
ಸೋಲುವುದಲ್ಲ ಬದಲಿಗೆ ಸೋಲನ್ನು ಒಪ್ಪಿಕೊಳ್ಳೋದು
'ಈ ಕೆಲಸ ನನ್ನಿಂದ ಆಗಲ್ಲ' ಎಂಬ ವಾಕ್ಯದಲ್ಲಿನ ಆಗಲ್ಲ ಎಂಬುದನ್ನೇ ಗಮನಿಸಿದರೆ ಮೊದಲ ಗಲ್ಲ ಇಲ್ಲೇ ಸಿಕ್ಕಿತು ನೋಡಿ. ಎಷ್ಟೋ ಸಾರಿ ಶಸ್ತ್ರಾಸ್ತ್ರ ಎತ್ತುವ ಮುಂಚೆಯೇ ಈ ಯುದ್ಧ ನನ್ನಿಂದ ಆಗಲ್ಲ ಎಂದು ಸೋಲೊಪ್ಪಿಕೊಂಡರೆ, ಇದಕ್ಕಿಂತಾ ಉತ್ತರಕುಮಾರನೇ ಶ್ರೇಷ್ಠ ಅಂತಾಯಿತು ಅಲ್ಲವೇ? ಅವನಾದರೋ ಕನಿಷ್ಠ ಪಕ್ಷ ಕೌರವರನ್ನು ಧೂಳೀಪಟ ಮಾಡಿಬಿಡುತ್ತೇನೆ ಎಂದುಕೊಂಡೇ ಸಿದ್ಧನಾಗಿ ಹೋದವನು ಆದರೆ ವಾಪಸ್ ಓಡಿಬಂದಿದ್ದ. 'ಆಗಲ್ಲ' ಎಂಬುದು ಸೋಲುವುದಲ್ಲ ಬದಲಿಗೆ ಸೋಲನ್ನು ಒಪ್ಪಿಕೊಳ್ಳೋದು.
ನಾವು ಗೆಲ್ಲಲು ಆಗಲ್ಲ ಅಂತ ಸುಮ್ಮನಾಗೋದಿಲ್ಲ
ಎಷ್ಟೋ ಸಾರಿ ಜೀವನದಲ್ಲಿ ಎಂಥಾ ಸನ್ನಿವೇಶ ಬಂದೊದಗುತ್ತದೆ ಎಂದರೆ ಇನ್ನೇನೇ ಮಾಡಿದರೂ ವಿಜಯ ನಮ್ಮದಲ್ಲ ಎಂಬ ಅರಿವು ಮೂಡೋದು. ಚಿಕ್ಕ ಉದಾಹರಣೆ ಎಂದರೆ ಕ್ರಿಕೆಟ್ ಆಟದಲ್ಲಿ ಹತ್ತು ಬಾಲುಗಳಲ್ಲಿ ಐದು ರನ್ ಬೇಕಿರುವ ತಂಡವು ಕೇವಲ ಒಂದೇ ವಿಕೆಟ್ ಕಳೆದುಕೊಂಡಿರೋದು. ಇಂಥಾ ಸಂದರ್ಭದಲ್ಲಿ ಆ ಎದುರಾಳಿಯ ತಂಡವು ಇನ್ನೇನೇ ಮಾಡಿದರೂ ಗೆಲ್ಲಲು ಆಗುವುದಿಲ್ಲ ಎಂದು ಇರುವಾಗಲೂ, ಬ್ಯಾಟ್ಸಮನ್ ಚೆಂಡನ್ನು ಬೀಸಿ ಹೊಡೆದಾಗ ಬೌಂಡರಿಗೆ ಹೋಗುವುದನ್ನು ತಡೆಯಲು fielder ಖಂಡಿತ ಯತ್ನಿಸುತ್ತಾನೆ. ನಾವು ಗೆಲ್ಲಲು ಆಗಲ್ಲ ಅಂತ ಸುಮ್ಮನಾಗೋದಿಲ್ಲ. ಇಂಥದ್ದೇ ಇನ್ನೊಂದು ಸನ್ನಿವೇಶ ಎಂದರೆ ಸೋಲುತ್ತಿರುವ ಬ್ಯಾಟಿಂಗ್ ತಂಡವೂ ಕೊನೆಯ ಒಂದು ಓವರಿನಲ್ಲಿ ಐವತ್ತು ರನ್ ಬೇಕಿದೆ ಎನ್ನುವಾಗಲೂ ರನ್ ಗಾಳಿಸುವತ್ತಲೇ ಗಮನ ಹರಿಸುತ್ತಾರೆ. ಆಗಲ್ಲ ಅಂತ ಕೈಕಟ್ಟಿ ಕೂರುವುದಿಲ್ಲ.
ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು...
ಇಂಥಾ ಸಂದರ್ಭದಲ್ಲೇ ನೆನಪಾಗೋದು ಬಂಗಾರದ ಮನುಷ್ಯ ಚಿತ್ರದ 'ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ'. ಅಲ್ಲಿನ ಸನ್ನಿವೇಶ ಹೇಗಿತ್ತು? ಬಂಡೆಗಳನ್ನೇ ಒಡೆದು ಊಳಲು ಸಾಧ್ಯವೇ ಇಲ್ಲ ಎಂಬ ಭೂಮಿಯಿಂದ ಫಸಲು ತೆಗೆವ ಕೆಲಸ. ರಾಜೀವ ಕೆಲಸವನ್ನು ಕೈಗೆತ್ತಿಕೊಳ್ಳುವ ತನಕ, ಮಿಕ್ಕೆಲ್ಲರೂ ಈ ಕೆಲಸಕ್ಕೆ ಹೇಳಿದ್ದೇ ಆಗಲ್ಲ ಅಂತ. ಇದೇ ಹಾಡಿನಲ್ಲಿ ಅದೆಷ್ಟು 'ಆಗಲ್ಲ'ಗಳು ಸಾಧ್ಯವಾಗಿವೆ ಎಂಬುದು ನಿಜಕ್ಕೂ ಗಮನಾರ್ಹ. 'ಆಗಲ್ಲ'ಗಳನ್ನು ಆಯ್ತು ಎಂದು ಸಾಧಿಸಿ ತೋರಿದ ಮಹನೀಯರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು ಅಲ್ಲವೇ?
ಈಗ ಮುಂದಿನ ಗಲ್ಲಕ್ಕೆ ಹೋಗುವ. ಒಂದು ಉದಾಹರಣೆಯಾಗಿ ವ್ಯಾಯಾಮ ಅಂತ ತೆಗೆದುಕೊಳ್ಳೋಣ. ತೂಕ ಹೆಚ್ಚಾಗಿಬಿಟ್ಟಿದೆ, ಆರೋಗ್ಯ ಕೆಡಲು ಒಂದು ಹೆಜ್ಜೆ ಇಟ್ಟಿದೆ, ವೈದ್ಯರು ಹೇಳಿಬಿಟ್ಟಿದ್ದಾರೆ ನಿಮ್ಮ ಜೀವನ ಪದ್ಧತಿ ಬದಲಿಸಬೇಕು ಎಂಬುದೆಲ್ಲಾ ಸನ್ನಿವೇಶಗಳಿವೆ ಅಂದುಕೊಳ್ಳಿ. ವ್ಯಾಯಾಮ ಮಾಡೋದು ಅನಿವಾರ್ಯ ಆಗಿದೆ. ಎಲ್ಲ ಅನಿವಾರ್ಯತೆಗಳೂ ಬದಲಾವಣೆಗೆ ದಾರಿ ಮಾಡಿಕೊಡಲೇಬೇಕು ಅಂತೇನಿಲ್ಲ. ಮೊದಲಿಗೆ ಆ ಅಗ್ನಿ ನಮ್ಮಿಂದಲೇ ಉದ್ದೀಪನವಾಗಬೇಕು. Self Motivation ಸಾಧ್ಯವಾಗದೆ ಹೋದಾಗ ಮತ್ತೋರ್ವರ ಸಹಕಾರ ಬೇಕೇಬೇಕು. ಸ್ವಪ್ರೇರಣೆ ಅಥವಾ ಸಹಕಾರ ಇಲ್ಲದೆ ಹೋದಾಗಲೇ "ಈಗಲ್ಲ' ಎಂಬ ಆಲೋಚನೆ ಮೂಡೋದು.
ಇಂದು ಮಾಡುವುದನ್ನು ಈಗಲೇ ಮಾಡು
ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈಗಲೇ ಮಾಡು ಎಂಬ ನೀತಿಯನ್ನು ಪಾಲಿಸುವುದು ಕಷ್ಟ. ನಾಳೆ ಮಾಡಲಿರುವ ಬೋಂಡಕ್ಕೆ ಇಂದೇ ಬಾಂಡ್ಲೆ ತೆಗೆದು ಇರಿಸಿರಬಹುದು, ನಾಳೆಯೇಕೆ ಬಾಂಡ್ಲೆ ಇಡೋದು ಅಂತ ಇಂದೇ ಬಾಂಡ್ಲೆಗೆ ಎಣ್ಣೆ ಹಾಕಿ ಕಾಯಿಸಿ ಇಡುತ್ತೇವೆಯೇ ಹೊರತು ಇಂದಿನಿಂದ ಅನ್ನ ತಿನ್ನಬಾರದು ಅಂತ ವೈದ್ಯರು ಹೇಳಿದಾಗ 'ಈಗಲ್ಲ' ನಾಳೆಯಿಂದ ಸ್ಟಾಪ್ ಮಾಡ್ತೀನಿ ಅಂತ ಹೇಳೋದು. ಯಾವುದೋ ಒಂದು ಓದು ಮುಂದುವರೆಸಬೇಕು ಎಂದಾಗ 'ಈಗಲ್ಲ', ಇಷ್ಟು ಹಣ ಈ ತಿಂಗಳಿನಿಂದ ಸೇವ್ ಮಾಡಬೇಕು ಎಂದಾಗ 'ಈಗಲ್ಲ' ಅಂತ ಮುಂದಕ್ಕೆ ಹಾಕೋದು, ಹೀಗೇ ಒಂದೊಂದೂ ವಿಷಯಕ್ಕೆ ಮುಹೂರ್ತ ಮುಂದಕ್ಕೆ ಹಾಕೋದು ಮಾಡಿದಾಗ ಅವಕಾಶಗಳು ಕೈತಪ್ಪಿ ಹೋಗುವ ಸಂಭವನೀಯತೆ ಹೆಚ್ಚು.
'ಈಗಲ್ಲ' ಎಂಬುದನ್ನು ತಲೆಗೆ ತಂದುಕೊಳ್ಳುವ ಮುಂಚೆ ಒಂದು ಆಲೋಚನೆ ಮಾಡಬೇಕು, ನಾಳೆ ಹೇಗೋ ಏನೋ ಬಲ್ಲವರಾರು? ನಾಳೆಗಳನ್ನು ಮಾಡುವುದು ಬೇಡ. ನಾನಾ ಕಾರಣಗಳಿಂದ ಕೆಲವು ವಿಚಾರಗಳನ್ನು ಇಂದೇ ಅಥವಾ ಈಗಲೇ ಮಾಡಲಾಗದು ಆದರೆ ಹಲವಂತೂ ನಮ್ಮಿಂದ ಸಾಧ್ಯ, ಕನಿಷ್ಠ ಪಕ್ಷ ಅವುಗಳನ್ನು ಮುಂದಕ್ಕೆ ಹಾಕುವ ಆಲೋಚನೆ ಮಾಡದೇ, 'ಈಗಲ್ಲ' ಎಂಬುದನ್ನು "ಈಗಲೇ' ಎಂದು ಪರಿವರ್ತಿಸುವ.
ಅಂದ ಹಾಗೆ, ಈ ಬರಹ ಇಷ್ಟವಾದರೆ ಬೇಗ ಲೈಕ್ ಮಾಡಿ, ಕಾಮೆಂಟ್ ಮಾಡಿ. ಈಗಲ್ಲ, ಆಗಲ್ಲ ಅಂತೆಲ್ಲಾ ಕಾಲ ಮುಂದೂಡಬೇಡ, ಮೆಚ್ಚನು ಆ ಗೊಲ್ಲ!