ಸ. ರಘುನಾಥ ಅಂಕಣ: ಬುಲೋಟ್ ನಾರಾಯಣಸ್ವಾಮಿ ಬಗ್ಗೆ ವೆಂಕಟರಮಣನ ಮಾತು
ಇವನು ಆಗೊಮ್ಮೆ ಈಗೊಮ್ಮೆ ಬೈಕಿನಲ್ಲಿ ಹೋಗುತ್ತ ಕೊಂಚ ತಲೆ ಬಗ್ಗಿಸಿ ನಮಸ್ಕಾರದ ಭಂಗಿ ಪ್ರದರ್ಶಿಸಿ ಹೋಗುತ್ತಿದ್ದ. ನಾನೂ ಹಾಗೆ ಮಾಡಬೇಕೆಂದಿರುವಾಗಲೇ ದಾಟಿ ಹೋಗಿರುತ್ತಿದ್ದ. ಬಸ್ ನಿಲ್ದಾಣದಲ್ಲಿ ನಿಂತಿದ್ದಾಗಲೊಮ್ಮೆ ಬುಲೆಟ್ ಬೈಕಿನಲ್ಲಿ ತೀರಾ ಹತ್ತಿರದಿಂದ ವೇಗವಾಗಿ ಹಾದು ಹೋದ. ಆಕಸ್ಮಕವೆಂದುಕೊಂಡೆ.
ಆದರೆ ಪಕ್ಕದಲ್ಲಿ ನನ್ನೊಂದಿಗೆ ಮಾತನಾಡುತ್ತಿದ್ದ ಬೈಪಲ್ಲಿ ವೆಂಕಟರಮಣ ಅನ್ನುವಾತ, 'ದುರಹಂಕಾರಮು ಸಾ ಆನಾ ಕೊಡುಕ್ಕಿ' (ದುರಹಂಕಾರ ಸಾ ಆ ನನ್ನ ಮಗನಿಗೆ) ಅಂದ. ಹೋಗಲಿ ಬಿಡು, ಆಕಸ್ಮಿಕ ಇದ್ದೀತು ಅಂದೆ. ಅದೇನಲ್ಲ, ಅವನಿಗೆ ಕೊಬ್ಬು ಜಾಸ್ತಿ ಅಂದ. ನನಗೆ ಆ ಮಾತು ಮುಂದುವರೆಯುವುದು ಬೇಕಿರಲಿಲ್ಲ. ನಿನ್ನ ಮಗ ಓದುತ್ತಾನೆ. ಆದರೆ ಇನ್ನು ಚೆನ್ನಾಗಿ ಓದಲು ಹೇಳು ಅಂದೆ. ಅಧ್ಯಾಪಕರು ಬಳಸಿ ಬಳಸಿ ಸವಕಲಾದ ಮಾತಿದು. ನನಗೆ ಮಾತು ಬದಲಿಸಲು ಆಗ ಹೊಳೆದುದು ಇದೇ. ಅವನು ಬಹಳಷ್ಟು ಸಲ ನನ್ನಿಂದ ಕೇಳಿಸಿಕೊಂಡಿದ್ದ ಮಾತೂ ಹೌದು.
ಇಸ್ಪೀಟು ಆಡೋರಿಗೆ ಹತ್ತಕ್ಕೆ ಎರಡು ರುಪಾಯಿ ಅಂತ ತಗೊಂಡ
ಟೀ ಕುಡೀತೀರ ಅಂದ. ಬೇಡವೆಂದೆ, ಬಿಡಲಿಲ್ಲ, ಹೋಟೆಲಿನಲ್ಲಿ ಕುಳಿತೆವು. ಉಡುಪಿ ಕಡೆಯವರಾದ ದೇವೇಂದ್ರರಾಯರು ಮಾಲೀಕರು. ಬಹಳ ಪರಿಚಿತರು. ನನ್ನೊಂದಿಗೆ ಉಡುಪಿ ಕನ್ನಡದಲ್ಲಿ ಮಾತನಾಡುತ್ತಿದ್ದರು. ಓಹೋ, ರಾಯರು, ಇದೇನಿದು ಮಾರಾಯರೆ ಇಂದು ನಮ್ಮ ಹೋಟೆಲಿಗೆ ತಮ್ಮ ಪಾದ! ಬಲ್ಲಿ ಬಲ್ಲಿ, ಕುಲ್ಲಿ ಕುಲ್ಲಿ. ಲೇ ಯಾರೋ ಅಲ್ಲಿ ರಾಯರಿಗೆ ಏನು ಬೇಕು ಕೇಳು ಎಂದು ಸಪ್ಲೆಯರಿನಿಗೆ ಹೇಳಿದರು. ಎರಡು ಟೀ ರಾಯರೆ ಅಂದೆ. ಕಾಫಿ ಆಗಲಿ ಮಾರಾಯರೆ. ಇದೀಗ ಡಿಕಾಕ್ಷನ್ ಹಾಕಿ ಬಂದುದುಂಟು ಗೊತ್ತಲ್ಲವೊ ಅಂದರು. ಸರಿ ಕಾಫೀನೆ ಕೊಡಿ ಅಂದೆ. ದೊಡ್ಡ ಹೋಟೆಲ್ ಏನಲ್ಲ. ಕೈಕಾಲು ಆಡದಷ್ಟು ಗಿರಾಕಿಗಳ ಸಂದಣಿಯೂ ಇರುತ್ತಿರಲಿಲ್ಲ. ತಮ್ಮ ಕೆಲಸ ಮಾಡುತ್ತಲೇ ಗಿರಾಕಿಗಳಾಡುವ ಮಾತುಗಳನ್ನು ಕೇಳಿಸಿಕೊಳ್ಳುವ ಸೂಕ್ಷ್ಮಮತಿ ಅವರದು.
ವೆಂಕಟರಮಣ ಬುಲೋಟು (ಬುಲೆಟ್) ನಾರಾಯಣಸ್ವಾಮಿಯ ಮಾತನ್ನೇ ತೆಗೆದ. ಅವನಂತ ಧಿಮಾಕಿನೋನು ನಮ್ಮೂರಲ್ಲೇ ಇಲ್ಲ. ಗೌನಿಪಲ್ಲೀಲಿ ಎಂತೆಂತ ಸಾವಕಾರರು ಇದ್ದಾರೆ. ಅವನು ಬುಲೋಟು ಗಾಡಿ ತಂದಾಗ ಅವರೂ ತಂದಿರಲಿಲ್ಲ. ಅದನ್ನೇನು ಅವನು ಬೆವರು ಸುರಿಸಿ ಸಂಪಾದಿಸಿದ್ದಲ್ಲ. ಕಾಸಾಟ ಆಡೋರಿಗೆ ನಾಲ್ಕಾಣೆಗೆ ಐದುಪೈಸ ಬಡ್ಡಿ ತಗೋತಿದ್ದ. ಆಮೇಲೆ ಅವರನ್ನು ಬಿಟ್ಟು ಇಸ್ಪೀಟು ಆಡೋರಿಗೆ ಹತ್ತಕ್ಕೆ ಎರಡು ರುಪಾಯಿ ಅಂತ ತಗೊಂಡ.
ನೂರಕ್ಕೆ ಹತ್ತು ರುಪಾಯ್ ವಾರದ ಬಡ್ಡಿ
ಸಾಲ ಮಾಡಿ ಸೋತಾನ ಮನೆ ಕೋಳಿ ಹಿಡ್ಕೊಂಡೋಗೋನು. ಅದನ ಮಾರಿದ ದುಡ್ಡು ಅಸಲಾಗುವುದು. ಅದನ್ನು ಮತ್ತೆ ಬಡ್ಡೀಗೆ ಬಿಡ್ತಿದ್ದ. ನೂರಕ್ಕೆ ಹತ್ತು ರುಪಾಯ್ ವಾರದ ಬಡ್ಡಿ. ಈ ಕಾಸಿನಲ್ಲೆ ಬಡ್ಡಿಮಗ ಬುಲೋಟು ತಗೊಂಡಿದ್ದು. ಜನ ಬುಲೋಟು ನಾರಾಯಣಸ್ವಾಮಪ್ಪ ಅಂದ್ರು. ಆ ಮೇಲೆ ಕೊತ್ತಸಾವ್ಕಾರಿ ನಾರಾಯಣಸ್ವಾಮಪ್ಪನೋರು ಅಂದ್ರು. ಬಲ್ ಹಲ್ಕ ನನ್ಮಗ ಸಾ ಅವನು. ಮನೆಗೆ ಕರ್ದು ಅನ್ನ ಇಕ್ಕಿದ್ರೆ, ಮನೇಲಿ ಯಾರೂ ಇಲ್ದಾಗ ಹೋಗಿ ಅನ್ನ ಇಕ್ಕಿದ ಕೈನ ಹಿಡಿದು ಎಳಕೊಳೊ ನಾಯಿ ಸಾ ಅವನು. ಅವನು ಹತ್ರ ಬರೋ ಸಮಯ ಬಂದ್ರೂ ದೂರ ಇರಿ...
ಇಷ್ಟು ಕೇಳಿಸಿಕೊಳ್ಳುವುದರಲ್ಲಿಯೇ ಅವನ ಮಾತು ಸಾಕು ಅನ್ನಿಸಿತ್ತು. ಆಯ್ತು ಮಾರಾಯ. ನೀನು ಎಚ್ಚರಿಕೆ ಕೊಟ್ಟಿದ್ದು ಒಳ್ಳೇದಾಯ್ತು ಎಂದೆ. ಇದರ ಮರ್ಮ ಅವನಿಗೂ ಅರ್ಥವಾಗಿದ್ದೀತು, ನಮ್ಮ ಹುಡುಗನ ಕಡೆ ಸ್ವಲ್ಪ ಗಮನ ಇರಲಿ ಎಂದು ಹೇಳಿ, ಹಣ ಕೊಡಲು ಹೋದ. ರಾಯರು, ನೀನು ಹೋಗು. ಮೇಷ್ಟ್ರ ಲೆಕ್ಕದಲ್ಲಿರುತ್ತೆ ಅಂದರು.
ಹೋಟೆಲಿನಲ್ಲಿ ನಾನು ಮತ್ತು ರಾಯರು ಮಾತ್ರ ಇದ್ದೆವು. ಅವರು ನನ್ನ ಮೇಜಿಗೆ ಬಂದು ಕುಳಿತರು. ಲೇ ಎರಡು ಸ್ರಾಂಗ್ ಕಾಫಿ ತಾರೊ, ಮೇಷ್ಟ್ರಿಗೆ ತಲೆನೋವು ಬಂದಿರಬೇಕು ಅಂದರು.
ರಾತ್ರೋರಾತ್ರಿ ಕರೆದುಕೊಂಡು ಹೋಗಿ ಕಲ್ಯಾಣ ಮಾಡಿಕೊಂಡ
ಇವನೇನು ಕಡಿಮೆ ಅಲ್ಲ ರಾಯರೆ. ಅವನಿಗಿಂತ ದುಷ್ಟ. ಅವನಿಗೆ ನಡೆಯುತ್ತದೆ, ಇವನಿಗೆ ನಡೆಯುವುದಿಲ್ಲ ಅಷ್ಟೆ. ಇವನ ಅಣ್ಣನ ಮಗಳನ್ನು ರಾತ್ರೋರಾತ್ರಿ ಕರೆದುಕೊಂಡು ಹೋಗಿ ಕಲ್ಯಾಣ ಮಾಡಿಕೊಂಡ. ಜಾತಿ ಬೇರೆ ನೋಡಿ, ಅದಕ್ಕೆ ಹಗೆ. ಅವನು ಹೆಂಡತಿ ಮಕ್ಕಳ ಜೊತೆ ಸುಖವಾಗಿಯೇ ಇದ್ದಾನೆ. ಹಾಗೆ ನೋಡಿದರೆ ಕೆಟ್ಟಿರುವವನು ಇವನೇ. ನೀವು ಅವಕಾಶ ಕೊಟ್ಟಿದ್ದರೆ ಅವನ ವಂಶವೇ ಕೆಟ್ಟದ್ದು ಎಂದು ಹೇಳುತ್ತಿದ್ದ. ಇವನು ನಿಮ್ಮ ಪಕ್ಕದಲ್ಲಿಯೇ ಇದ್ದ ಅನ್ನಿಸುತ್ತದೆ. ಹಾಗಾಗಿಯೇ ಇವನ ಹೊಟ್ಟೆ ಉರಿಸಲು ಅವನು ಬರ್ ಎಂದು ಹೋಗಿರುತ್ತಾನೆ ಎಂದು, ನಾರಾಯಣಸ್ವಾಮಿ ವೇಗವಾಗಿ ಹೋಗಿದ್ದರ ಹಿನ್ನೆಲೆಯನ್ನು ಬಿಡಿಸಿಟ್ಟರು.
ಹೊರಡುತ್ತ, ಕಾಫಿ ಹಣ ಅಂದೆ. ನಾರಾಯಣನ ಲೆಕ್ಕಕ್ಕೆ ಇರಲಿ, ಹೋಗಿ ಬಲ್ಲಿ ಅಂದರು. ಹೋಟೆಲಿನ ಹೊರಬಂದು ಒಂದು ಹತ್ತು ಹೆಜ್ಜೆ ಹಾಕಿದ್ದೆ. ಬುಲೆಟ್ಟಿನಲ್ಲಿ ಬಂದ ನಾರಾಯಣಸ್ವಾಮಿ ಕೊಂಚ ದೂರವಾಗಿ ನಿಲ್ಲಿಸಿ, ನಮಸ್ಕಾರ ಎಂದು ಹೇಳಿ ಹೋದ.