ಆ ದಿನಗಳೇ ಚೆನ್ನಾಗಿತ್ತು, ಇವತ್ತಿನ ದಿನಗಳಲ್ಲಿ ಆ ದಿನಗಳ ಸೂರ್ಯ, ಚಂದ್ರ, ನಕ್ಷತ್ರ ಬಿಟ್ಟರೆ ಅದೇನ್ ಇದೆ ಬಿಡ್ರಿ ಅಂತ ಬಿಲ್ಡ್ಅಪ್ ಕೊಡೋದಕ್ಕೆ ನಾನೇನೂ ಬಂದಿಲ್ಲ ಬಿಡಿ. ಹಾಗೆ ಒಂದಷ್ಟು ಹಳೆಯ ನೆನಪುಗಳ ಸುರುಳಿಯನ್ನು ನಿಮ್ಮ ಮುಂದೆ ಹರವಿ ಇಡಲು ಬಂದಿದ್ದೇನೆ. ಈ ನೆನಪುಗಳು ನಿಮ್ಮ ಜೀವನದಲ್ಲೂ ಆಗಿರುತ್ತದೆ, ನಿಮ್ಮ ಅನುಭವಗಳು ಪ್ರತಿಕ್ರಿಯೆ ರೂಪದಲ್ಲಿ ಬರಲಿದೆ ಎಂಬ ನಂಬಿಕೆಯ ಮೇಲೆ ಮುಂದೆ ಸಾಗುತ್ತೇನೆ.
'ಸ್ಕೂಲಿಗೆ ಲೇಟಾಗುತ್ತೆ ಏಳೋ' ಎಂಬ ಅಮ್ಮನ ಕೂಗು ಅಡುಗೆ ಮನೆಯಿಂದ ಮೂರನೆಯ ಬಾರಿಗೆ ಬಂದಾಗ, ನಿದಿರಾದೇವಿಗೆ ಬಾಯ್ ಮತ್ತೆ ಸಿಗ್ತೀನಿ ಅಂತ ಹೇಳಿ, ಏಳಲೇಬೇಕಾಯ್ತು. ಹಾಸಿಗೆಯ ಮೇಲೆ ಚಕ್ಕಂಬಕ್ಕಳ ಹಾಕಿ ಕೂತು, ಪುಟ್ಟ ಅಂಗೈಗಳನ್ನು ಬಾಳೆಯ ಎಲೆಯಂತೆ ಹರಡಿ 'ಕರಾಗ್ರೇ ವಸತೇ ಲಕ್ಷ್ಮಿ' ಹೇಳಿಕೊಂಡೆ. ಕರಾಗ್ರೇ ಅಂದ್ರೆ ಕರವನ್ನು ಬಾಳೆಯ ಅಗ್ರದಂತೆ ಹರಡಿಕೊಳ್ಳಬೇಕು ಅಂತಲೇ ಬಹಳ ಕಾಲ ಅರ್ಥಮಾಡಿಕೊಂಡಿದ್ದೆ. ಹಸ್ತದ ಮ್ಯಾಲಿನ ಭಾಗದಲ್ಲಿ ಲಕ್ಷ್ಮಿ ಇರ್ತಾಳೆ ಅಂತ ಅರ್ಥವಾಯ್ತು.
ಲಕ್ಷ್ಮಮ್ಮ ಅಲ್ಲಿ ಕೂತಿರುತ್ತಾಳೆ
ಕರಾಗ್ರೇ ವಸತೇ ಲಕ್ಷ್ಮಿ ವಿಷಯದಲ್ಲಿ ಅಂದು ಬಾಳಾ ಬಾಳಾ ಅನುಮಾನ ಇತ್ತು ಬಿಡಿ. ಬರೆಯುವಾಗ ಅರ್ಥಾತ್ ಪೆನ್ನು ಪೆನ್ಸಿಲ್ ಹಿಡಿದುಕೊಳ್ಳುವಾಗ, eraser ಹಿಡಿದುಕೊಂಡು ಅಳಿಸುವಾಗ, ಪುಸ್ತಕದ ಹಾಳೆಯನ್ನು ತಿರುವುವಾಗ ಬಳಸುವುದೇ ಬೆರಳ ತುದಿಯನ್ನು ಬಳಸಿಕೊಂಡು ಎಂದ ಮೇಲೆ, ಅಲ್ಲಿರಬೇಕಾದುದು ಸರಸ್ವತಮ್ಮ ಅಲ್ಲವೇ? ಬಹುಶಃ ಹಣ ಎಣಿಸುವಾಗ ಬೆರಳ ತುದಿ ಬಳಸುವುದರಿಂದ, ಹಣ ಎನ್ನುವಾಗ ಹೆಬ್ಬೆಟ್ಟಿನ ತುದಿಯನ್ನು ಚಿಮ್ಮುವಂತೆ ತೋರುವುದರಿಂದ, ಲಕ್ಷ್ಮಮ್ಮ ಅಲ್ಲಿ ಕೂತಿರುತ್ತಾಳೆ ಅಂತ ನಾನೇ ಅರ್ಥ ಹುಡುಕಿಕೊಂಡೆ.
ಬ್ರಷ್‌ಗೆ ಶೇವಿಂಗ್ ಕ್ರೀಮ್ ಹಾಕಿಕೊಂಡಿದ್ದೆ
ಇರಲಿ ಬಿಡಿ, ಶ್ಲೋಕ ಮುಗಿಸಿ ಹಲ್ಲುಜ್ಜಲು ಬಚ್ಚಲಿಗೆ ಹೋಗಿ ಬಾಗಿಲು ಬಡಿದುಕೊಳ್ಳಲು, 'ನಾನು ಸ್ನಾನ ಮಾಡಬೇಕು, ಆಯ್ತಾ ನಿಂದು? ಅದೇನು ಹಲ್ಲು ಉಜ್ಜುತ್ತಾ ಇದ್ದೀಯೋ? ಬಚ್ಚಲು ಉಜ್ಜುತ್ತಿದ್ದೀಯೋ?' ಅಂತ ಬಾಗಿಲ ಹೊರಗಿನಿಂದ ಕೂಗು ಕೇಳಿಸಿತು. ಅಯ್ಯೋ! ಇನ್ನೂ ಹಲ್ಲುಜ್ಜಲು ಶುರುವೇ ಮಾಡಿಲ್ಲ! ಬ್ರಷ್‌ಗೆ ಪೇಸ್ಟ್ ಹಾಕಿಕೊಳ್ಳುವ ಬದಲು ಹೊಸತಾಗಿ ತಂದಿದ್ದ ಶೇವಿಂಗ್ ಕ್ರೀಮ್ ಹಾಕಿಕೊಂಡಿದ್ದೆ. ಪೇಸ್ಟ್ ಮತ್ತೆ ಶೇವಿಂಗ್ ಕ್ರೀಮ್ ಎರಡೂ ಟ್ಯೂಬ್ ಅನ್ನು ಒಂದೇ ರೀತಿಯೇ ಡಿಸೈನ್ ಮಾಡಿದ್ದು ಅದ್ಯಾರಪ್ಪಾ ತಂದೆ? ನಿದ್ದೆಗಣ್ಣಲ್ಲಿ ಎರಡೂ ಟ್ಯೂಬ್ ಒಂದೇ ರೀತಿ ಕಾಣಬಹುದು ಅಂತ ಈ ಡಿಸೈನರ್‌ಗೆ ಗೊತ್ತಾಗಲಿಲ್ಲವೇ? ಒಟ್ಟಿನಲ್ಲಿ ಹೇಗೋ ಹಲ್ಲುಜ್ಜಿ ಹೊರಗೆ ಬಂದು ಕಾಫಿ ಕುಡಿಯುತ್ತಾ ಪ್ರಜಾವಾಣಿ ಕೈಗೆ ಎತ್ತಿಕೊಂಡೆ.
ಹಂಡೆಯಲ್ಲಿ ವಿಷ ತೊಗೊಳ್ಳೋಕ್ಕೂ ನೀರಿಲ್ಲ
ಬಚ್ಚಲ ಮನೆಯಲ್ಲಿ ಯಾರೂ ಇಲ್ಲದ್ದು ನೋಡಿ, ಟವೆಲ್ ತೆಗೆದುಕೊಂಡು ಸ್ನಾನಕ್ಕೆ ಹೋದೆ. ಅರ್ಧ ಹಂಡೆ ಬಿಸಿ ಬಿಸಿ ನೀರಿತ್ತು. ಕೇವಲ ಅರ್ಧ ತಂಬಿಗೆಯಲ್ಲಿ ಮುಖ ತೊಳೆದುಕೊಂಡು ಸೋಪುಜ್ಜಿ ಮುಖ ತೊಳೆದು, ಮಿಕ್ಕ ನೀರಿನಿಂದ ಮಸ್ತಾಗಿ ಸ್ನಾನ ಮಾಡಿ ಹೊರಬಂದರೂ ಮೈಬಣ್ಣವಂತೂ ಏನೇನೂ ಬದಲಾಗಿರಲಿಲ್ಲ ಬಿಡಿ. ಆರಾಮವಾಗಿ ಹೊರಗೆ ಬಂದು ದೇವರಮನೆಗೆ ನುಗ್ಗುವ ಮುನ್ನ, ಬಚ್ಚಲ ಮನೆಯಿಂದ ಮತ್ಯಾರದ್ದೋ ಏರಿದ ದನಿ ಕೇಳಿಸಿತು 'ಹಂಡೆಯಲ್ಲಿ ವಿಷ ತೊಗೊಳ್ಳೋಕ್ಕೂ ನೀರಿಲ್ಲ. ಮೊದಲೇ ಲೇಟಾಗಿದೆ, ಇದು ಬೇರೆ. ಕೊನೆಯಲ್ಲಿ ಸ್ನಾನ ಮಾಡಿದ್ದು ಯಾರು? ನನಗೇನು ಗೊತ್ತು? ವಕ್ರತುಂಡ ಮಹಾಕಾಯ' ಅಂತ ಮೆಲ್ಲಗೆ ಹೇಳಿಕೊಂಡು ಆಮೇಲೆ ಹೊರಬಿದ್ದೆ.
ಈ ಸಂಪತ್ತಿಗೆ ನಾನ್ಯಾಕೆ ಕಷ್ಟಪಡಬೇಕು
ರಾತ್ರಿ ಮಲಗುವ ಮುನ್ನ ದಿಂಬಿನ ಅಡಿಯಲ್ಲಿ ಇರಿಸಿದ್ದ ಯುನಿಫಾರ್ಮ್ ಬಟ್ಟೆಯನ್ನು ತೆಗೆದುಕೊಂಡು, ಕೈಯಲ್ಲೇ ಮತ್ತೊಮ್ಮೆ ಇಸ್ತ್ರಿ ಮಾಡಿ. ಒಪ್ಪವಾಗಿ shirt-in ಮಾಡಿ ಅಲಂಕರಿಸಿಕೊಂಡು, ಅಮ್ಮ ಕೊಟ್ಟ ಉಪ್ಪಿಟ್ಟಿನ ತಟ್ಟೆಯನ್ನು ಸೊಟ್ಟ ಮುಖ ಮಾಡಿಕೊಂಡು, ಕೈಗೆತ್ತಿಕೊಂಡೆ. ಕೊತ್ತಂಬರಿ, ಕರಿಬೇವು, ಮೆಣಸಿನಕಾಯಿ, ಹುರುಳೀಕಾಯಿ ಎಲ್ಲವನ್ನೂ ಪಕ್ಕಕ್ಕೆ ಇಟ್ಟು ಮಿಕ್ಕಿದ್ದನ್ನು ತಿಂದೆ. 'ಈ ಸಂಪತ್ತಿಗೆ ನಾನ್ಯಾಕೆ ಕಷ್ಟಪಡಬೇಕು? ನಾಳೆಯಿಂದ ಬರಿಯ ರವೆಗೆ ಉಪ್ಪು ಹಾಕಿ ಕೊಡ್ತೀನಿ' ಅಂತ ಅಮ್ಮ ಉವಾಚ. ಸ್ನಾನ ಮಾಡುವಾಗ ಕಿವಿಯೊಳಗೆ ನೀರು ಹೋಗದೇ ಇರಲಿ ಇಟ್ಟುಕೊಂಡ ಹತ್ತಿ ಇನ್ನೂ ಅಲ್ಲೇ ಠಿಕಾಣಿ ಹೂಡಿತ್ತು. ಹಾಗಾಗಿ ಬೈಗುಳ ಕೇಳಿಸಲಿಲ್ಲ.
ಶಾಲೆಗೆ ಹೊರಡಲು ಮಣಭಾರದ ಬ್ಯಾಗನ್ನು ಬೆನ್ನ ಮೇಲೆ ಹೊರಲು 'ಓದು ಅಂತ ಮುಗಿದ ಮೇಲೆ ಕೆಲಸ ಸಿಗದೇ ಹೋದರೆ, ಮಂಡಿಪೇಟೆಯಲ್ಲಿ ಮೂಟೆ ಹೊರುವ ಕೆಲಸ ಸಿಕ್ಕೇ ಸಿಗುತ್ತೆ' ಅಂತ ಶ್ಲಾಘನೆ ಸಿಕ್ಕಿತು. ಆ ನಂತರ ಕಾಳಜಿಯಿಂದ ರೋಡ್ ಕ್ರಾಸ್ ಮಾಡುವಾಗ ಹುಷಾರು, ಯಾರಾದರೂ ಸೈಕಲ್‌ನವರು ಗುದ್ದಿಯಾರು ಅಂತ ಅಮ್ಮ ಉವಾಚ.
ಪಾಸ್ ಅಂದಿದ್ದಕ್ಕೆ ಆ ಕಂಡಕ್ಟರ್ ಫೇಲ್ ಆಲ್ವಾ ಅಂದ
ಬಸ್ ಸ್ಟಾಪಿಗೆ ಬಂದು ಅರ್ಧ ಗಂಟೆಯಾದರೂ ಬಸ್ ಬರಲಿಲ್ಲ ಅಂತೇನಲ್ಲ, ಯಾವ ಬಸ್ಸೂ ನಮ್ಮ ಸ್ಟಾಪಿನಲ್ಲಿ ನಿಲ್ಲಿಸಲಿಲ್ಲ ಎನ್ನಬಹುದು. ಆಮೇಲೆ ಬಂದ ಯಾವುದೋ ತುಂಬು ಗರ್ಭಿಣಿ ಬಸ್ಸಿನಿಂದ, ಒಬ್ಬರು ಇಳಿದು, ಹತ್ತು ಮಂದಿ ಹತ್ತಿಕೊಂಡ ಮೇಲೆ ಏರಲಾರದೇ ಏರುತ್ತಾ ಸಾಗಿತ್ತು ಬಸ್ಸು. ಕಂಡಕ್ಟರ್ ಎಲ್ಲಿಗೆ ಅಂತ ಕಣ್ಣಲ್ಲೇ ಕೇಳಲು "ಪಾಸ್' ಅಂತ ನಾನು ಬಾಯಲ್ಲಿ ಹೇಳಿದ್ದೆ. ಪಾಸ್ ಎಂಬುದನ್ನು ಕಣ್ಣಿನಲ್ಲಿ ಹೇಳೋದು ಹೇಗೆ ಅಂತ ನನಗೆ ಗೊತ್ತಿರಲಿಲ್ಲ. ಪಾಸ್ ಅಂದಿದ್ದಕ್ಕೆ ಆ ಕಂಡಕ್ಟರ್ 'ಫೇಲ್ ಆಲ್ವಾ?' ಅಂತ ಹುರುಳೇ ಇಲ್ಲ ಜೋಕ್ ಮಾಡಬಹುದಾ? ಆ ನೂಕುನುಗ್ಗಲಿನ ಬಸ್ಸಿನಲ್ಲಿ ಮಿಕ್ಕ ಪಯಣ ಮುಗಿಸಿ ಶಾಲೆಯ ಬಳಿ ಇಳಿಯುವಾಗ ಯುನಿಫಾರ್ಮ್ ಗಜ್ಜಿಬಿಜ್ಜಿ ಆಗಿತ್ತು. ಶಾಲೆಗೆ ಮುನ್ನ ಮತ್ತು ಇಂಟರ್ವಲ್‌ನಲ್ಲಿ ಕ್ರಿಕೆಟ್ ಆಡಿ, ಶಾಲೆ ಮುಗಿದ ಮೇಲೆ ಮತ್ತೆ ಬಸ್ ಏರಿ ಮನೆಗೆ ಬರುವಷ್ಟರಲ್ಲಿ ಹೆಚ್ಚುಕಮ್ಮಿ ಕೂಲಿ ಕೆಲಸ ಮಾಡಿ ಬಂದ ಹಾಗಿತ್ತು ಬಟ್ಟೆ.
ಸ್ಕೂಲಿಗೆ ಹೋಗಿದ್ಯೋ? ಕೂಲಿ ಕೆಲಸಕ್ಕೆ ಹೋಗಿದ್ಯೋ?
'ಸ್ಕೂಲಿಗೆ ಹೋಗಿದ್ಯೋ? ಅಥವಾ ಕೂಲಿ ಕೆಲಸಕ್ಕೆ ಹೋಗಿದ್ಯೋ? ನಾಳೆ ಬಟ್ಟೆ ಒಗೆದರೆ ಒಣಗೋದು ಯಾವಾಗ? ಈ ಮಳೆಗೆ ಮೂರು ದಿನದ ಹಿಂದೆ ಒಗೆದ ಬಟ್ಟೆಯೇ ಇನ್ನೂ ಆರಿಲ್ಲ' ಅಂತ ಅಮ್ಮ ಹೇಳಿದ್ದು ನನಗೆ ಅರ್ಥವಾಯ್ತೋ ಇಲ್ಲವೋ ಗೊತ್ತಿಲ್ಲ. ರಾತ್ರಿ ಸ್ವಲ್ಪ ಸೀರಿಯಸ್ ಆಗಿ ಓದುವಾಗ ಶಾಲೆಯ ಬಳಿ ನನ್ನ ಸೋದರ ಮಾವ ಬಂದು, ಮುಂದಿನ ಭಾನುವಾರ ನಾವು ಬರ್ತಾ ಇದ್ದೀವಿ ಅಮ್ಮನಿಗೆ ಮನೆಯಲ್ಲೇ ಇರಬೇಕಂತೆ, ಅಂತ ಸಂದೇಶ ನನ್ನ ಮೂಲಕ ಕಳಿಸಿದ್ದನ್ನು ಅಮ್ಮನಿಗೆ ತಲುಪಿಸಿದ್ದೆ. ನಾವು ಅಂದ್ರೆ ಯಾರ್ಯಾರು ಅಂತ ಅಮ್ಮ ಕೇಳಿದರು. ನನ್ನ ಉತ್ತರ ಗೊತ್ತಿಲ್ಲ. ದೊಡ್ಡವರು ಏನಾದರೂ ಹೇಳಿದರೆ ಮರುಪ್ರಶ್ನೆ ಕೇಳಬಾರದಂತೆ!
ಲೇಡಿ ಸೊಳ್ಳೆಗಳು ಕೋಟೆಯೊಳಗೆ ಬಂದಿದ್ದರು
ರಾತ್ರಿಯ ಊಟಕ್ಕೆ ಕೂತಾಗ ಗೋರಿಕಾಯಿ ಹುಳಿ! ಅಯ್ಯೋ, ಇದಾವ ಶಿಕ್ಷೆ ನನಗೆ ಅಂತೀನಿ? ನನಗೆ ಮೊದಲೇ ತರಕಾರಿ ಸೇರುವುದಿಲ್ಲ. ಅದರಲ್ಲೂ ನನಗೂ ಗೋರೀಕಾಯಿಗೂ ಆಜನ್ಮ ವೈರತ್ವ. ಇದು ಏಳೇಳು ಜನುಮದ hate! ಅಮ್ಮಾ, ತಿಳೀ ಹಾಕು ಅಂದೆ. ಅಮ್ಮ ಏನೂ ಬೈಯಲಿಲ್ಲ ಸುಮ್ಮನೆ ಗುರ್ ಅಂದರು ಅಷ್ಟೇ. ಊಟವೂ ಆಯ್ತು. ಹಾಸಿಗೆಯನ್ನು ಹಾಸಿಕೊಂಡು ಸೊಳ್ಳೆಯ ಪರದೆ ಹಾಕಿಕೊಂಡು, ಆಯತಾಕಾರದ ಹಾಸಿಗೆಯ ಸುತ್ತ ಸೊಳ್ಳೆಯ ಪರದೆಯನ್ನು ಸಿಕ್ಕಿಸಿಕೊಂಡು, ಅಲ್ಲೊಂದು ಕೋಟೆಯನ್ನು ನಿರ್ಮಿಸಿಕೊಂಡ ಮೇಲೆ ನೆನಪಾಯ್ತು, ಶೆಲ್ಫ್‌ನಲ್ಲಿರುವ ಒಂದು ಪುಸ್ತಕ ನಾಳೆ ಶಾಲೆಗೆ ಬೇಕಿತ್ತು ಅಂತ. ಈಗ ಇಟ್ಟುಕೊಳ್ಳದೇ, ನಾಳೆ ಮರೆತು ಹೋದರೆ ಇಡೀ ಒಂದು ಪೀರಿಯಡ್ ಬೆಂಚಿನ ಮೇಲೆ ನಿಲ್ಲಬೇಕಾಗುತ್ತದೆ. ಹೀಗಾಗಿ ಮೆಲ್ಲನೆ ಹೊರಗೆ ಹೋಗಿ ಪುಸ್ತಕ ತೆಗೆದುಕೊಂಡು ಬ್ಯಾಗಿನೊಳಗೆ ಹಾಕಿಕೊಂಡು, ವಾಪಸ್ ಬಂದರೆ, ನನ್ನ ಹಿಂದೆಯೇ ಮೂರು ಲೇಡಿ ಸೊಳ್ಳೆಗಳು ಕೋಟೆಯೊಳಗೆ ಬಂದಿದ್ದರು.
ಬಾಳಾ ದೊಡ್ಡವನಾಗಿದ್ದೀನಿ ವಯಸ್ಸಿನಲ್ಲಿ ಅಷ್ಟೇ
ಮೂರು ಸೊಳ್ಳೆಗಳನ್ನು ಹತ್ತೇ ನಿಮಿಷದಲ್ಲಿ ಕೊಂದು, ವಿಜಯೋತ್ಸಾಹದಲ್ಲಿ ಮಲಗಲು ಸ್ಕೂಲಿಗೆ ಲೇಟಾಯ್ತು ಏಳೋ ಅಂತ ಅಮ್ಮನ ಕೂಗು ಕೇಳಿಸಿತು. ಅರೇ! ಈಗ ತಾನೇ ಮಲಗಿದ್ದೆ ಅಲ್ಲವೇ? ಏನನ್ಯಾಯ? ಅಂತ ಕಣ್ಣುಜ್ಜಿಕೊಳ್ಳಲು ಹೋದರೆ ನಿದ್ದೆ ಮಾಡಿದ್ದ ಲಕ್ಷಣವೇ ಕಾಣಲಿಲ್ಲ. ಆಗ ಅಮ್ಮ ಒಂದು ಸಾರಿ ಕರೆದರೆ ಏಳ್ತೀನಿ ಅಂತ ಹೇಳಿದ್ಯಲ್ಲಾ, ಟೆಸ್ಟ್ ಮಾಡಿದೆ, ಗುಡ್ ಎಂಬಲ್ಲಿಗೆ ಹಲವಾರು ಕಲ್ಪನೆಗಳನ್ನು ಹೊತ್ತ ಈ ಬರಹ ಆಯ್ತು.
ಕಲ್ಪನೆಯಲ್ಲದ ವಿಷಯ ಏನಪ್ಪಾ ಅಂದ್ರೆ, ಇಂದು ಬಾಳಾ ದೊಡ್ಡವನಾಗಿದ್ದೀನಿ, ವಯಸ್ಸಿನಲ್ಲಿ ಅಷ್ಟೇ. ಯಾರೂ ಎಬ್ಬಿಸದೇ ಏಳಬಲ್ಲೆ. ಎಬ್ಬಿಸುವ ಅವಶ್ಯಕತೆ ಇಲ್ಲ ಅಂತಲ್ಲ, ಎಬ್ಬಿಸುವವರು ಇಲ್ಲಾ ಅಂತ. ಅಂದು ಎಬ್ಬಿಸಿದವರು ಇಂದು ಇಲ್ಲಾ ಅಂತ. ವಯಸ್ಸನ್ನು ಅಲ್ಲೇ ಹಿಡಿದಿಡುವ ಹಾಗಿದ್ದರೆ, ಎಬ್ಬಿಸುವವರು ಬಿಟ್ಟು ಹೋಗುತ್ತಿರಲಿಲ್ಲ ಅಲ್ಲವೇ? ಏನಂತೀರಾ?