ಇಸವಿ ಸರಿಯಾಗಿ ನೆನಪಿಲ್ಲ . ಟೌನ್ ಹಾಲ್ ಪಕ್ಕದಲ್ಲಿ ಪುಸ್ತಕ ಮಳಿಗೆ ಏರ್ಪಡಿಸಿದ್ದರು . ಅಂದು ಇವತ್ತಿನ ರೀತಿ ಗೂಗಲ್ ಗುರುಗಳು ಇರಲಿಲ್ಲ . ಹೀಗಾಗಿ ನಮ್ಮ ಜ್ಞಾನದ ದಣಿವಿಗೆ ನೀರೆರೆಯುವ ಏಕೈಕ ಸಾಧನ ಪುಸ್ತಕಗಳು . ವರ್ಷದಲ್ಲಿ ಹಲವಾರು ಇಂತಹ ಪುಸ್ತಕ ಮೇಳಗಳನ್ನ ಅಲ್ಲಲ್ಲಿ ಏರ್ಪಡಿಸುತ್ತಿದ್ದರು . ಕೈಲಿದ್ದ ಪುಡಿಗಾಸು ಜೊತೆಗೆ ಅಮ್ಮನ್ನ ಕಾಡಿ ಒಂದಷ್ಟು ಹಣ ಸೇರಿಸಿಕೊಂಡು ಇಂತಹ ಪುಸ್ತಕ ಮೇಳಕ್ಕೆ ಹೋಗುವುದು ನನಗೂ ಕಾಂತನಿಗೂ ಅಭ್ಯಾಸವಾಗಿಬಿಟ್ಟಿತ್ತು .
ಮೊದಲೇ ಹೇಳಿದಂತೆ ಸರಿಯಾದ ಟೈಮ್ ಲೈನ್ ಜ್ಞಾಪಕ ಇಲ್ಲ . ಆದರೆ ಟೌನ್ ಹಾಲ್ ಪಕ್ಕದಲ್ಲಿ ಎನ್ನುವುದು ನೆನಪಿದೆ . ಹೀಗೆ ಅಂದೂ ಕೂಡ ಒಂದಷ್ಟು ಹಣವನ್ನ ಸೇರಿಸಿಕೊಂಡು ಇಬ್ಬರೂ ಪೀಣ್ಯದಿಂದ ಮೆಜೆಸ್ಟಿಕ್ ನಲ್ಲಿ ಇಳಿದು ಟೌನ್ ಹಾಲ್ ಗೆ ನೆಡೆದುಕೊಂಡು ಹೋದೆವು . ಕೃ.ರಾ ಮಾರುಕಟ್ಟೆಗೆ ಹೋಗುವ ಬಸ್ ಹಿಡಿದಿದ್ದರೆ ಟೌನ್ ಹಾಲ್ ಮುಂದೆಯೇ ನಿಲ್ಲಿಸುತ್ತಿದ್ದರು . ಅಂದಿಗೆ ಜೆ ಸಿ ರೋಡ್ ಇನ್ನೂ ಒನ್ ವೇ ಆಗಿರಲಿಲ್ಲ . ಆದರೆ ನಾವು ಮೆಜೆಸ್ಟಿಕ್ ನಲ್ಲಿ ಇಳಿದು ನೆಡೆಯುವುದರ ಉದ್ದೇಶ ಹಣ ಉಳಿಸುವುದು .
ಇಲ್ಲದಾಗ ಹಸಿವು ಹೆಚ್ಚು! ಇದ್ದಾಗ ನೂರೆಂಟು ಅಡ್ಡಿ, ಸಾವಿರ ಕಾರಣ!
ಮೆಜೆಸ್ಟಿಕ್ ಆಗ 90ಪೈಸೆ . ಮಾರುಕಟ್ಟೆಗೆ 1ರೂಪಾಯಿ 25ಪೈಸೆ . ನಮ್ಮಿಬ್ಬರ ನಡುವೆ 70 ಪೈಸೆ ಉಳಿತಾಯವಾಗುತಿತ್ತು . ಅವತ್ತಿನ ದಿನದಲ್ಲಿ ಬೀಡಿ ಸಿಗರೇಟು ಮಾರುವ ಅಂಗಡಿಯ ಮುಂದೆ ಓಂಪುರಿ (ಕ್ಷಮೆ ಇರಲಿ -ಉದಾಹರಣೆಗೆ ಮಾತ್ರ ಬಳಸಿದ್ದು - ಬೇರೆ ಉದ್ದೇಶವಿಲ್ಲ ) ಮುಖವನ್ನ ಹೋಲುವ ಪಚ್ಚ ಬಾಳೆ ಹಣ್ಣು 30ಪೈಸಕ್ಕೆ ಸಿಗುತ್ತಿತ್ತು . ಹೀಗಾಗಿ 70ಪೈಸೆ ಉಳಿಸಿದರೆ ಅದರಿಂದ ಏನು ಕೊಳ್ಳಬಹದು ಎನ್ನುವುದು ತಿಳಿದಿತ್ತು . ಅಲ್ಲದೆ ಮೆಜೆಸ್ಟಿಕ್ ನಿಂದ ಟೌನ್ ಹಾಲ್ ಬಹಳ ದೂರವೂ ಇಲ್ಲ . ಅಂದಿನ ದಿನದಲ್ಲಿ ಮಾತನಾಡುತ್ತ ಪುಸ್ತಕ ಕೊಳ್ಳುವ ಜೋಷ್ ಮುಂದೆ ರಸ್ತೆ ಸವೆದದ್ದು ಕೂಡ ತಿಳಿಯುತ್ತಿರಲಿಲ್ಲ .
ಕಾಂತ ಎಲ್ಲದರಲ್ಲೂ ಮುಂದಾಳತ್ವ ವಹಿಸುವ ಗುಣದವನು . ಹೀಗಾಗಿ ಬಸ್ ಟಿಕೆಟ್ ಕೊಳ್ಳುವುದು , ಅಮ್ಮ ಕೊಟ್ಟ ಹಣವನ್ನ ಅವನ ಬಳಿ ಇಟ್ಟುಕೊಂಡು ಬೇಕಾದ್ದು ಕೊಳ್ಳುವುದು ಎಲ್ಲವೂ ಅವನದೇ ಜವಾಬ್ದಾರಿ . ಅದು ಬೇಸಿಗೆ ರಜಾ ದಿನಗಳು ಹೀಗಾಗಿ ನಮ್ಮ ಬಸ್ ಪಾಸ್ ಇರಲಿಲ್ಲ . ಬೇಸಿಗೆ ರಜೆಯಲ್ಲಿ ಎಲ್ಲರೂ ಅಜ್ಜಿಯ ಮನೆ ತಾತನ ಮನೆ ಅಂತ ಹೋದರೆ ನಮಗೆ ಮಾತ್ರ ಪೀಣ್ಯದ 400ಚದುರ ಅಡಿಯ ಮನೆಯೇ ಸರ್ವಸ್ವ .
ಸಾಲದಕ್ಕೆ ನ್ಯೂಸ್ ಪೇಪರ್ ಬಳಸಿ ಅಂಗಡಿಗಳಿಗೆ , ಮೆಡಿಕಲ್ ಶಾಪ್ ಗಳಿಗೆ ಬೇಕಾಗುವ ಪೇಪರ್ ಕವರ್ ಮಾಡುತ್ತಿದ್ದೆವು . ನೂರಕ್ಕೆ ಅಥವಾ ಸಾವಿರಕ್ಕೆ ನೆನಪಿಲ್ಲ ಹತ್ತು ರೂಪಾಯಿ ಸಿಗುತ್ತಿತ್ತು . ಅಮ್ಮ ಅದ್ಯಾವುದೋ ಹಿಟ್ಟು ಬಳಸಿ ಗೋಂದು ತಯಾರಿಸಿ ಕೊಡುತ್ತಿದ್ದಳು ಅದನ್ನ ನಾವು ಅಂಟಿನಂತೆ ಬಳಸುತ್ತಿದ್ದೆವು . ಇರಲಿ . ಹೀಗೆ ಅಂದು ನಮ್ಮ ಕೈಯಲ್ಲಿ ಮುನ್ನೂರು ರೂಪಾಯಿಯಿತ್ತು . ಕಾಂತನಿಗೆ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಪುಸ್ತಕಗಳು ಎಂದರೆ ಪಂಚಪ್ರಾಣ .
ತೂಕ ಇಳಿಸಿಕೊಳ್ಳಲು ಸರಳ ಉಪಾಯ ಏನಾದರೂ ಇದೆಯಾ?
ಇಷ್ಟವಾದ ಪುಸ್ತಕ ಕೈಗೆ ತೆಗೆದುಕೊಂಡು ಮೊದಲು ನೋಡುತ್ತಿದ್ದದ್ದು ಅದರ ಹಿಂಪುಟ ! ಕಣ್ಣು ಸದಾ ಬೆಲೆಯನ್ನ ಹುಡುಕುತ್ತಿತ್ತು . ಹೀಗೆ ನಮ್ಮಲ್ಲಿರುವ ಬಜೆಟ್ ಎಷ್ಟು , ಎಷ್ಟು ಪುಸ್ತಕ ಕೊಳ್ಳಬಹದು ಎನ್ನುವುದನ್ನ ಲೆಕ್ಕಾಚಾರ ಮಾಡಿ ಕೊಳ್ಳುತ್ತಿದ್ದೆವು . ಅಂದು ಕೂಡ ಲೆಕ್ಕಾಚಾರ ಸರಿಯಾಗೇ ಇತ್ತು . ಆದರೆ ಕೊನೆ ಗಳಿಗೆಯಲ್ಲಿ ಕಾಂತನ ಕಣ್ಣಿಗೆ ' ದೈತ್ಯ ಪೆಡಂಭೂತಗಳು ಅಳಿದವೇಕೆ ? ' ಎನ್ನುವ ಪುಸ್ತಕ ಬಿತ್ತು . ನಮ್ಮ ಬಳಿ ಇದ್ದ ಹಣಕ್ಕೂ ಪುಸ್ತಕದ ಬೆಲೆಗೂ ಒಂದು ರೂಪಾಯಿ ಕಡಿಮೆಯಿತ್ತು .
ಪುಣ್ಯಕ್ಕೆ ನನ್ನ ಜೇಬಿನಲ್ಲಿ ಒಂದು ರೂಪಾಯಿ ನಾಣ್ಯವಿತ್ತು . ' ಬೇಡ ನಡಿ ಇನ್ನೊಮ್ಮೆ ಕೊಂಡರಾಯ್ತು ' ಎಂದೇ . ಕಾಂತ ಯಾವುದನ್ನೂ ಅಷ್ಟು ಸುಲಭವಾಗಿ ಬಿಟ್ಟು ಕೊಡುವ ಅಸಾಮಿಯಲ್ಲ . ಅವನ ಆ ಗುಣವೇ ಅವನನ್ನ ಇಂದಿನ ಮಟ್ಟಕ್ಕೆ ಏರಿಸಿದೆ . ' ರಂಗ ಆಮೇಲೆ ಎಂದರೆ ಯಾವಾಗ ? ಇದಕ್ಕೆ ಅಂತ ನಮಗೆ ಬರಲು ಸಮಯ ಕೂಡ ಸಿಗುವುದಿಲ್ಲ , ಈ ಪುಸ್ತಕ ಬರಿ ವಿಜ್ಞಾನ ಅಲ್ಲ . ನೀನು ಕೂಡ ಓದಬಹದು' ಅಂತ ಆಸೆ ಹುಟ್ಟಿಸಿದ .
ಈ ಪುಸ್ತಕ ಮೇಳಕ್ಕೆ ಹೋಗುವ ಒಂದೆರೆಡು ವಾರ ಮುಂಚೆ 'ಉದಯ ' ಟಿವಿಯಲ್ಲಿ ಶೈಲಜಾ ಅವರು ನೆಡೆಸಿಕೊಡುತ್ತಿದ್ದ ಪರಿಚಯ ಕಾರ್ಯಕ್ರಮದಲ್ಲಿ ಅನಂತರಾಮು , ಭೂವಿಜ್ಞಾನಿಗಳು ಎನ್ನುವರ ಪರಿಚಯ ಕಾರ್ಯಕ್ರಮ ಬರುತ್ತಿತ್ತು . ಬೆಳಿಗ್ಗೆ ಅಮ್ಮನ ಉಪ್ಪಿನಕಾಯಿ , ಹಪ್ಪಳ ಮಾಡುವ ವ್ಯಾಪಾರಕ್ಕೆ ಸಹಾಯ ಮಾಡುತ್ತಾ ಕುಳಿತ್ತಿದ್ದಾಗ ಈ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು . ಅಮ್ಮ ' ನೋಡು , ಇವರು ಅನಂತರಾಮು ಅಂತ , ಉಮಾ ಅತ್ತೆಯ ಅಕ್ಕನ ಗಂಡ ' ಎಂದು ನನಗೆ ಹೇಳಿದಳು . ನಾನು ಮಾವಿನಕಾಯಿ ಹೆಚ್ಚುತ್ತಿದ್ದವನು ಒಮ್ಮೆ ತಲೆ ಎತ್ತಿ ಟಿವಿ ನೋಡಿ ಮತ್ತೆ ಕೇಳಿಸಿಕೊಳ್ಳುತ್ತಾ ನನ್ನ ಕೆಲಸದಲ್ಲಿ ಮಗ್ನನಾಗಿದ್ದೆ .
ಪುಸ್ತಕ ಮೇಳದಲ್ಲಿ ಕಾಂತನ ಕಣ್ಣಿಗೆ ಬಿದ್ದ ಆ ಪುಸ್ತಕ ' ದೈತ್ಯ ಪೆಡಂಭೂತಗಳು ಅಳಿದವೇಕೆ ? ' ಮೇಲೆ ಲೇಖಕರು ಅನಂತರಾಮು ಅಂತ ಬರೆದದ್ದು ನೋಡಿ ಮನಸ್ಸು ಇನ್ನಷ್ಟು ಗೊಂದಲವಾಯ್ತು . ಇವರ ಒಂದು ಪುಸ್ತಕ ಕೂಡ ಇಲ್ಲಿಯವರೆಗೆ ಓದಿಲ್ಲ ಸರಿ ಇದನ್ನ ಕೊಳ್ಳೋಣ ಅನ್ನಿಸಿ ಜೇಬಿನಲ್ಲಿದ್ದ ಒಂದು ರೂಪಾಯಿ ನಾಣ್ಯವನ್ನ ಕಾಂತನಿಗೆ ಕೊಟ್ಟೆ . ಅವನು ಪುಸ್ತಕವನ್ನ ಖುಷಿಯಿಂದ ಕೊಂಡ . ಎಲ್ಲಾ ಆಯ್ತು ಮೆಜೆಸ್ಟಿಕ್ ಕಡೆಗೆ ಖುಷಿಯಿಂದ ಹೊರೆಟವು .
ಖಂಡಾಂತರ ಮಾಡುವುದರಿಂದ ಕತ್ತೆ ಕುದುರೆಯಾಗದೆ ಇರಬಹದು, ಆದರೆ ಜೀವನಶೈಲಿ?
ದಾರಿಯಲ್ಲಿ ಕಾಂತ ' ರಂಗಿ ಬಸ್ ಚಾರ್ಜ್ ಗೆ ದುಡ್ಡಿಲ್ಲ ' ಎನ್ನುವ ಶಾಕ್ ಕೊಟ್ಟ . ಪುಸ್ತಕ ಕೊಳ್ಳುವ ಬರದಲ್ಲಿ ಬಸ್ ಚಾರ್ಜ್ ಸಪರೇಟ್ ವಿಗಂಡಿಸಿ ಇಟ್ಟು ಕೊಳ್ಳುವುದು ಮರೆತ್ತಿದ್ದ . ಟೌನ್ ಹಾಲ್ ನಿಂದ ಪೀಣ್ಯಾಗೆ ಹತ್ತಿರತ್ತಿರ 13/14 ಕಿಲೋಮೀಟರ್ ನಡೆದು ತಲುಪಿದೆವು . ಬಾರ್ಸಿಲೋನಾ ಗೆ ಕಾಂತ ಬಂದು ನನ್ನ ಸೇರುವ ವೇಳೆಗೆ ಬದುಕಿನಲ್ಲಿ ಸ್ಥಿರತೆ ಬಂದಿತ್ತು. ನಮ್ಮ ಪುಸ್ತಕ ಓದುವ ಹುಚ್ಚು ಕೂಡ ಇನ್ನಷ್ಟು ಬೆಳೆದಿತ್ತು. ಆದರೆ ಇಲ್ಲಿ ಇಂಗ್ಲಿಷ್ ಭಾಷೆಯ ನ್ಯೂಸ್ ಪೇಪರ್ ಸಿಕ್ಕುತ್ತಿರಲಿಲ್ಲ. ಅದು ಬೇಕೆಂದರೆ ಹುಡುಕಿಕೊಂಡು ಹೋಗಿ ತರಬೇಕಿತ್ತು.
ನಿರ್ದಿಷ್ಟ ಸ್ಥಳದಲ್ಲಿ ಬಿಟ್ಟು ಬೇರೆ ಕಡೆ ಸಿಗುತ್ತಿರಲಿಲ್ಲ. ಇಂಗ್ಲಿಷ್ ಪುಸ್ತಕಗಳಿಗೂ ಈ ಮಾತು ಅನ್ವಯ. ಎಲ್ಲೆಡೆ ಸ್ಪ್ಯಾನಿಷ್ , ಸ್ಪ್ಯಾನಿಷ್ ಮತ್ತು ಸ್ಪ್ಯಾನಿಷ್ . ಈ ಕಾರಣದಿಂದ ನಾವು ಸ್ಪ್ಯಾನಿಷ್ ಭಾಷೆಯನ್ನ ಬಹು ಬೇಗ ಗ ಕಲಿತೆವು ಎಂದು ಹೇಳಬಹದು. ಕಾಂತ ಭಾರತದಿಂದ ಪ್ರಥಮ ಬಾರಿಗೆ ಬರುವಾಗ ವಿದ್ಯಾರ್ಥಿ ಎನ್ನುವ ಕಾರಣಕ್ಕೆ 45/50 ಕೇಜಿ ಹೊತ್ತು ತರುವ ಅವಕಾಶವನ್ನ ನೀಡಿದ್ದರು. ಅದರಲ್ಲಿ 30ಕೇಜಿ ಪುಸ್ತಕವೇ ತೂಗುತ್ತಿತ್ತು.
ಬಾಲ್ಯದಲ್ಲಿ ಹಣದ ಕೊರತೆಯಿಂದ ಆ ಪೇಪರ್ ತುಂಡಿಗೆ ಇರುವ ಮಹತ್ವ ನೋಡಿ ಅಚ್ಚರಿಯಾಗುತ್ತಿತ್ತು . ಅರೆರೇ , ಒಂದು ಸಣ್ಣ ಪೇಪರ್ ತುಂಡಿಗೆ ಮನುಷ್ಯನ ಭಾವನೆ ಬದಲು ಮಾಡುವ ಅನುಮತಿ ಕೊಟ್ಟದ್ದು ಯಾರು ? ಎನ್ನುವ ಯೋಚನೆ ಮೂಡುತ್ತಿತ್ತು. ಕಾಸ ಆಸಿಯಾ ಎಂದರೆ ಏಶಿಯನ್ ಹೌಸ್ ಎಂದರ್ಥ. ಅಲ್ಲಿ ಏಷ್ಯಾ ದೇಶದ ಜನರೆಲ್ಲಾ ಸದಸ್ಯರು. ಇಲ್ಲಿಗೆ ಭಾರತೀಯ ಪ್ರವಾಸಿಗಳು ಕೂಡ ಭೇಟಿ ನೀಡಬಹದು. ಅಥವಾ ನಮ್ಮಂತೆ ಮುಂದಿನ ದಿನಗಳಲ್ಲಿ ಯಾರಾದರೂ ಕನ್ನಡಿಗರು ಇಲ್ಲಿನ ನಿವಾಸಿಗಳಾಗಿ ಬದಲಾದರೆ ?
ಅವರಿಗೆ ಓದಿಗೆ ಇರಲಿ ಎನ್ನುವ ಉದ್ದೇಶದಿಂದ , ಶ್ರೀ ಅನಂತರಾಮು , ಶ್ರೀ ನಾಗೇಶ್ ಹೆಗಡೆ ಮತ್ತು ಶ್ರೀ ರೋಹಿತ್ ಚಕ್ರತೀರ್ಥರ ವಿಜ್ಞಾನ ಪುಸ್ತಕಗಳನ್ನ ಅಲ್ಲಿ ಇರಿಸಿದ್ದೇವೆ. ಪುಸ್ತವೆಂದರೆ ಅದು ಕೇವಲ ಪುಸ್ತಕವಲ್ಲ ಅದು ಬದುಕುವ ರೀತಿ. ರಮ್ಯ ಬಾಳಿಗೆ , ಬಾರ್ಸಿಲೋನಾಗೆ ಬಂದು ಜೊತೆಯಾದ ದಿನದಿಂದ ಮತ್ತು ಇಂದಿಗೂ ರಮ್ಯಳಿಗೆ ' ನೋಡು ನಿಮ್ಮಪ್ಪನ ಪುಸ್ತಕ ಕೊಂಡು 14 ಕಿಲೋಮೀಟರ್ ನಡೆಯುವಂತಾಯ್ತು ' ಅಂತ ಹೇಳ್ತಾ ಇರುತ್ತೇನೆ.
ಅಪ್ಪಟ ಪುಸ್ತಕ ಪ್ರೇಮಿಯಾದ ಅವಳಿಗೆ ನಾನು ಹೇಳಿದ ಘಟನೆ ಅಚ್ಚರಿ ತರಲಿಲ್ಲ. ಅನನ್ಯಾಳಿಗೆ ಕಾತಲಾನ್ ಭಾಷೆ ಬರದಿದ್ದರೂ , ಆ ಭಾಷೆಯ ಪುಸ್ತಕವನ್ನ ಕೊಂಡು ಅವಳಿಗೆ ನೀಡಿದ್ದಾಳೆ. ಹೇಗೂ ರೋಮನ್ ಅಕ್ಷರಗಳೇ ತಾನೇ , ಓದಲಿ ಅರ್ಥವಾದಷ್ಟು ಆಗಲಿ ಎನ್ನುವುದು ಉದ್ದೇಶ. ಇಂದಿಗೂ ಮಾಸಿಕ ಐದಾರು ಸಾವಿರ ರೂಪಾಯಿ ಹಣವನ್ನ ಪುಸ್ತಕ ಕೊಳ್ಳಲು ಎಂದು ಬಜೆಟ್ ಮಾಡಿಡುತ್ತೇವೆ. ಸ್ಪೇನ್ ನಿಂದ ಬೆಂಗಳೂರಿಗೆ ಬಂದಾಗ ಬಹಳಷ್ಟು ಪುಸ್ತಕ ಕಾಸ ಆಸಿಯಾ ದಲ್ಲಿ ಇತ್ತು ಬಂದರೂ , ನಮ್ಮ ಲಗ್ಗೇಜ್ ನ ಅರ್ಧಕ್ಕೂ ಹೆಚ್ಚು ಪುಸ್ತಕಗಳೇ ಇದ್ದವು .
ಬೆಂಗಳೂರಿನಿಂದ ಮೈಸೂರಿಗೆ ಬಂದಾಗ ಕೂಡ ಮತ್ತದೆ ಪುನರಾವರ್ತನೆ! ಸಣ್ಣ ಪೇಪರ್ ತುಂಡು ಅರ್ಥಾತ್ ಹಣ ನಮ್ಮ ಇತರ ಬೇಡಿಕೆಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ಸು ಕಂಡಿರಬಹದು ಆದರೆ ನಮ್ಮ ಪುಸ್ತಕ ಪ್ರೇಮದ ಮುಂದೆ ಅದು ಖಂಡಿತ ಮಂಡಿಯೂರಿದೆ. ಪೀಣ್ಯದ ಬಡತನದ ದಿನಗಳಲ್ಲಿ ಕೂಡ ಮನೆಗೆ , ಬಾಲಮಿತ್ರ , ಚಂದಮಾಮ , ಬೊಂಬೆಮನೆ , ಮಯೂರ , ಕಸ್ತೂರಿ ,ತುಷಾರ , ತರಂಗ , ಸುಧಾ , ದಿಕ್ಸೂಚಿ ಇತ್ಯಾದಿ ವಾರ , ಮಾಸಿಕಗಳು ಮನೆ , ಮನವನ್ನ ಅಲಂಕರಿಸುತ್ತಿದ್ದವು.
ಒಂದು ಸಣ್ಣ ಕಷ್ಟ ಬಂದರೆ ಸಾಕು ಸೇಠು ಅಂಗಡಿಗೆ ಒಡವೆ ಗಿರವಿ ಇಡಲು ಹೋಗುತ್ತಿದ್ದ ಅಮ್ಮನ ಕುರಿತು ' ನೀವು ವೃಥಾ ಖರ್ಚು ಮಾಡುತ್ತೀರಿ , ನಿಮ್ಮ ಮಕ್ಕಳನ್ನ ಬೇಗ ಕೆಲಸಕ್ಕೆ ಹಾಕಿ ' ಎನ್ನುತ್ತಿದ್ದ ಸೇಠುವಿನ ಮಾತು , ಅದನ್ನ ಕೇಳಿ ಅಮ್ಮನ ಮುಖದ ಮೇಲೆ ಮೂಡಿ ಮಾಯವಾಗುತ್ತಿದ್ದ ನಗುವನ್ನ ಮರೆಯುವುದು ಹೇಗೆ ?