ಒಂದು ವಿಷಯವನ್ನು ಇಡಿಯಾಗಿ ನೋಡಿದಾಗ, ಎಲ್ಲವೂ ಒಂದೇನೇ. ಆದರೆ ಸ್ವಲ್ಪ ಸ್ವಲ್ಪವೇ ಸಮೀಪ ಸಾಗುತ್ತಿದ್ದಂತೆ ಬೇರೆ ಬೇರೆಯಾಗಿ ಕಾಣ ತೊಡಗುತ್ತದೆ. ಯಾಕೋ ವಿಷಯ ಕೊಂಚ ಗೊಂದಲವಾಗಿದೆ ಅಂತ ಅನ್ನಿಸಿದರೆ ಸೀದಾ ಭೂಮಿಯಿಂದ ಆಚೆ ಹೋಗಿ ಆಮೇಲೆ ಭೂಲೋಕದ ಒಳಗೆ ಇಳಿಯೋಣ ಬನ್ನಿ.
ಸೀದಾ ಭುವಿಯಿಂದ ಆಚೆ ಹೋಗಿ ಲೈಟಾಗಿ ಹಿಂದಿರುಗಿ ನೋಡಿದಾಗ ಇಡೀ ಭೂಮಿ ಗುಂಡಾಗಿಯೋ ಅಥವಾ ಹೇಗೋ ಕಾಣಬಹುದು. ಆದರೆ ಅಲ್ಲಿಂದಾ ನೋಡಿದಾಗ ಬಹುಶಃ ನಮ್ಮ ಮನೆ, ಬೀದಿ, ನಗರ, ರಾಜ್ಯ ಬಿಡಿ ದೇಶವೂ ಕಾಣದೆಯೇ ಹೋಗಬಹುದು. ಇಡೀ ಭುವಿಯೇ ಒಂದಾದರೂ ಅದರೊಳಗಿನ ಖಂಡ, ದೇಶ, ರಾಜ್ಯಗಳು ಬೇರೆ ಬೇರೆಯೇ ಅಲ್ಲವೇ? ಎಲ್ಲವೂ ಒಂದೇ ಆದರೂ ಸಕಲವೂ ಭಿನ್ನ. ಎಲ್ಲವೂ ಭಿನ್ನವೇ ಆದರೂ ಬೇರೆ ಗ್ರಹದವರಿಗೆ ಭುವಿಯು ಒಂದೇ!
ದೇವ- ದಾನವ- ಮನುಜರನ್ನು ನೋಡೋಣ ಬನ್ನಿ
ಇದೊಂದು ರೀತಿ ದೇವನೊಬ್ಬ ನಾಮ ಹಲವು ಎಂಬಂತೆ. ಈಗ ದೇವ- ದಾನವ- ಮನುಜರನ್ನು ನೋಡೋಣ ಬನ್ನಿ. ಎಲ್ಲರೂ ಒಂದೇ ಕಡೆ ಸಿಗಬಹುದು ಎಂದರೆ ಅದು ಭುವಿಯೊಂದೇ. ಎಲ್ಲರೂ ಒಬ್ಬರಲ್ಲಾ ಒಬ್ಬರನ್ನು ಆರಾಧಿಸುತ್ತಾರೆ ಎಂಬುದು ನಿಜ. ಆಸ್ತಿಕರು ದೈವವನ್ನು ಆರಾಧಿಸಬಹುದು, ನಾಸ್ತಿಕರು ಮತ್ಯಾರನ್ನೋ ಅಥವಾ ಯಾವುದನ್ನೋ. ಈಗ ಆಸ್ತಿಕರ ವಿಚಾರವನ್ನೇ ತೆಗೆದುಕೊಂಡರೆ ಎಲ್ಲರೂ ಒಂದೇ ದೈವವನ್ನು ಆರಾಧಿಸುವರೇ? ಬಹುಶಃ ಇಲ್ಲ. ತಮಗಿಷ್ಟ ಬಂದವರನ್ನು ಆರಾಧಿಸಿದ ಹಲವರದ್ದು ಒಂದು ಪಂಗಡವಾಯ್ತು. ಆಸ್ತಿಕರು ಎಂಬ ಗುಂಪು ಒಂದಾದರೂ ಅದರೊಳಗೆ ಇರುವುದು ಬಹಳಷ್ಟು ಭಿನ್ನ ಗುಂಪುಗಳು. ಒಂದರಲ್ಲಿ ಹಲವುಗಳು, ಹಲವು ಸೇರಿ ಒಂದು ಎಂಬ ಇಲ್ಲಿ ಅರಿವಾಗುತ್ತದೆ.
ಯಾವುದಾದರೂ ಒಬ್ಬ ಋಷಿವರ್ಯರ ಸಂತತಿ
ದೇವ ಋಷಿಗಳು, ರಾಜರ್ಷಿಗಳು, ಮತ್ತು ಬ್ರಹ್ಮರ್ಷಿಗಳು ಎಲ್ಲರೂ ಋಷಿವರ್ಯರೇ ನಿಜ ಆದರೆ ಅಲ್ಲೂ ಭಿನ್ನ. ಎಲ್ಲವೂ ಮನ್ವಂತರಗಳೇ ಆದರೂ ಹಲವಾರು ಮನುಗಳಿಂದ ಅವು ಭಿನ್ನ. ಸದ್ಯಕ್ಕಂತೂ ನಮ್ಮ ಮನು ವೈವಸ್ವತ. ಇಲ್ಲಿನ ಸಪ್ತರ್ಷಿಗಳು ವಸಿಷ್ಠ, ಕಶ್ಯಪ, ಅತ್ರಿ, ಜಮದಗ್ನಿ, ಗೌತಮ, ವಿಶ್ವಾಮಿತ್ರ ಹಾಗೂ ಭಾರದ್ವಾಜ. ನಾವು ಈ ಯಾವುದಾದರೂ ಒಬ್ಬ ಋಷಿವರ್ಯರ ಸಂತತಿ. ನಾವೆಲ್ಲರೂ ಒಂದೇ ಅನ್ನಿಸಿದರೂ ಭಿನ್ನ ಗೋತ್ರದವರೇ ಅಲ್ಲವೇ?
ಇನ್ನು ಇಂದ್ರ. ನಮಗೆಲ್ಲಾ ಅರಿವಿರುವಂತೆ ರಾಜೇಂದ್ರ ಎಂದರೆ ದೇವತೆಗಳ ರಾಜ. ಆದರೆ ಇಂದ್ರ ಎಂದರೆ ಒಬ್ಬನೇ ಅಲ್ಲ. ಇಂದ್ರ ಎಂಬುದು ಒಂದು ಪದವಿ. ಪ್ರಧಾನಮಂತ್ರಿ ಪದವಿಯಂತೆ. ಈಗಿನ ಇಂದ್ರ ಕಶ್ಯಪ- ಅದಿತಿಯರ ಪುತ್ರನಾದ ಪುರಂದರ ಎಂದು ಓದಿ ಬಲ್ಲೆ. ಎಲ್ಲ ಏಳೂ ಮಂದಿ ಚಿರಂಜೀವಿಗಳೇ, ಆದರೂ ಏಳು ಜನರೂ ಭಿನ್ನ. ಅವರ ಹುಟ್ಟೂ ಭಿನ್ನ, ಜನ್ಮ ತಳೆದ ಕಾರಣವೂ ಭಿನ್ನ, ಚಿರಂಜೀವಿಗಳಾಗಿದ್ದೂ ಭಿನ್ನವೇ.
ಹಲ್ಲುಗಳು ಒಂದೇ ಆದರೂ ಕಾರ್ಯ ಭಿನ್ನ
ಹೋಗ್ಲಿ ಬಿಡಿ, ಆ ಹೈ-ಲೆವೆಲ್ ಅನ್ನು ಅಲ್ಲಿಯೇ ಬಿಟ್ಟು ಈಗ ಸೀದಾ ಸಾದಾ ಜೀವನಕ್ಕೆ ಬರೋಣ. ನಮ್ಮ ದಿನನಿತ್ಯದ ಜೀವನಕ್ಕೆ ಬರೋಣ. ನಿತ್ಯಕರ್ಮವಾದ ಹಲ್ಲುಜ್ಜುವಿಕೆಯನ್ನೇ ಆಲೋಚಿಸಿ. ಉಜ್ಜುವುದು ಹಲ್ಲುಗಳೇ, ಆ ಎಲ್ಲ ಹಲ್ಲುಗಳು ಇರುವುದೂ ನಮ್ಮ ಬಾಯಲ್ಲೇ ಆದರೂ ಅಲ್ಲೂ ವೈವಿಧ್ಯತೆ. ಹಲ್ಲುಜ್ಜಿದೆ ಎನ್ನುತ್ತೇವೆಯೇ ಹೊರತು Incisor ಉಜ್ಜಿದೆ, Canine ಉಜ್ಜಿದೆ ಅಥವಾ Molar ಹಲ್ಲುಗಳನ್ನು ಉಜ್ಜಿದೆ ಅಂತ ವಿಭಾಗಿಸಿ ಹೇಳುವುದಿಲ್ಲ. ಹಲ್ಲುಗಳು ಒಂದೇ ಆದರೂ ಕಾರ್ಯ ಭಿನ್ನ. ಅವು ಭಿನ್ನವೇ ಆದರೂ ಒಂದೇ !
ಇನ್ನು ಹಲ್ಲುಜ್ಜುವಿಕೆಯ ಸಾಧನ ಬೆರಳು, ಬೇವಿನ ಕಡ್ಡಿ ಅಥವಾ ಬ್ರಷ್ ಕೂಡಾ ಆಗಿರಬಹುದು. ಅದು ಬೆರಳೇ ಆದರೂ ತೋರುಬೆರಳು ಮಾತ್ರ ತಾನೇ ಎನ್ನಬಹುದು. ಆದರೆ ಆ ಬೆರಳು ನಿಮ್ಮದೂ ಆಗಬಹುದು ಅಥವಾ ಅಮ್ಮ ಅಥವಾ ಅಪ್ಪನ ಬೆರಳೂ ಆಗಬಹುದು ಅಲ್ಲವೇ? ಇನ್ನು Toothbrush ಬಗ್ಗೆ ಹೇಳಲೇಬೇಕೆ? ಒಬ್ಬರು ಕೋಲ್‌ಗೇಟ್, ಮತ್ತೊಬ್ಬರು ಓರಲ್-ಬಿ. ಒಬ್ಬರು ಪ್ರಾಮಿಸ್ ಮತ್ತೊಬ್ಬರು ಫಿಲಿಪ್ಸ್‌ನ ಬ್ಯಾಟರಿ ಚಾಲಿತ. ಎಲ್ಲವೂ ಒಂದೇ ಆದರೂ ಭಿನ್ನ. ಎಲ್ಲವೂ ಭಿನ್ನ ಆದರೂ ಕಾರ್ಯ ಒಂದೇ.
ಒರೆಸಿಕೊಂಡ ಟವೆಲ್ ಕೊಳೆಯಾಗುವುದು ಯಾಕೆ ಹೇಳಿ?
ಇನ್ನು ಟೂತ್‌ಪೇಸ್ಟ್ ಬಗ್ಗೆ ಹೇಳಲೇಬೇಕೇ? ಒಬ್ಬರು ಪೇಸ್ಟ್‌ನಲ್ಲಿ ಉಪ್ಪಿದ್ದರೆ, ಮತ್ತೊಬ್ಬರ ಪೇಸ್ಟ್‌ನಲ್ಲಿ ಹುಣಿಸೇ ಹಣ್ಣು. ಒಬ್ಬರ ಪೇಸ್ಟ್‌ನಲ್ಲಿ ಕಲ್ಲಿದ್ದಲು ಇದ್ದರೆ ಮತ್ತೊಬ್ಬರ ಪೇಸ್ಟ್‌ನಲ್ಲಿ ಮೆಣಸಿನಪುಡಿ ಇರುತ್ತೇನೋ ಯಾರಿಗೆ ಗೊತ್ತು.
ಸ್ನಾನಕ್ಕೆ ಬಳಸುವ ಸಾಬೂನಿನದು ಮತ್ತೊಂದು ಜಗತ್ತು. ಈ ಸಾಬೂನು ಕೇವಲ ಕೊಳಕನ್ನು ಸಡಿಲಗೊಳಿಸಲು ಎಂದೇ ಉತ್ಪಾದನೆಯಾಗಿದ್ದು. ಹೀಗೆ ಸಡಿಲಗೊಂಡು ಕೊಳಕು ನೀರಿನಲ್ಲಿ ತೊಳೆದುಹೋಗುತ್ತದೆ. ಮಿಕ್ಕಿದ್ದು ಮೈಯೊರೆಸಿಕೊಂಡಾಗ ಟವೆಲ್‌ಗೆ ಸೇರುತ್ತದೆ. ಇಲ್ಲದಿದ್ದರೆ ಸೋಪ್ ಉಜ್ಜಿ ಸ್ನಾನ ಮಾಡಿ ಒರೆಸಿಕೊಂಡ ಟವೆಲ್ ಕೊಳೆಯಾಗುವುದು ಯಾಕೆ ಹೇಳಿ? ಎಲ್ಲ ಸೋಪುಗಳ ಕೆಲಸವೂ ಒಂದೇಯಾದರೂ ಅವು ಭಿನ್ನ. ಅವನ್ನು ಒಂದು ಗುಂಪಿನಡಿ ತಂದರೆ ಅವು ಸೌಂದರ್ಯವರ್ಧಕ. ಅರ್ಥಾತ್ ಸೌಂದರ್ಯವನ್ನು ವರ್ಧಿಸುವ ಸಾಧನ. ಮೊದಲು ಸೌಂದರ್ಯ ಇರಬೇಕು. ಆ ಸೋಪು ಆ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಎಲ್ಲ ಸಾಬೂನುಗಳ ಕೆಲಸ ಒಂದೇ, ಆದರೂ...
ಯಾವುದೇ ಸೋಪು ಕೂಡಾ ಸೌಂದರ್ಯವನ್ನು ಹುಟ್ಟುಹಾಕುವುದಿಲ್ಲ. ಎಲ್ಲ ಸಾಬೂನುಗಳ ಕೆಲಸ ಒಂದೇ ಆದರೂ ಸಾವಿರಾರು ಬಗೆಗಳು. ಎಲ್ಲವೂ ಭಿನ್ನ ಆದರೂ ಒಂದೇ. ಎಲ್ಲವೂ ಒಂದೇ ಆದರೂ ಭಿನ್ನ. ಒಂದು ಸಾಬೂನು ಬೆಳ್ಳಗಾಗಿಸುವೆ ಎಂದರೆ ಮತ್ತೊಂದು ಚಿಕ್ಕವನನ್ನಾಗಿಸುವೆ ಎನ್ನುತ್ತದೆ. ಒಂದು ಸಾಬೂನು ಕಾಂತಿಯುಕ್ತ ಮಾಡುತ್ತೇನೆ ಎಂದರೆ ಮತ್ತೊಂದು ಚರ್ಮವನ್ನು ತಾಜಾ ಮಾಡುತ್ತದೆಯಂತೆ. ಎಲ್ಲವೂ ಭಿನ್ನ ಎನಿಸಿದರೂ ಎಲ್ಲವೂ ಚರ್ಮದ ಮೇಲೆಯೇ ಪ್ರಭಾವ ಬೀರೋದು. ಎಲ್ಲ ಚರ್ಮಗಳೂ ಒಂದೇ ಅನ್ನಿಸಿದರೂ ಪ್ರತೀ ವ್ಯಕ್ತಿಯ ಚರ್ಮ ಭಿನ್ನ.
ಇನ್ನು ಕಚೇರಿಗೆ ಹೋಗೋಣವೇ? ಎಲ್ಲವೂ ಕೆಲಸಕ್ಕೆ ಅಂತಲೇ ಹೋದರೂ, ಜನರು ಒಂದು ನಗರದ ಉತ್ತರ ಭಾಗದಿಂದ ದಕ್ಷಿಣಕ್ಕೆ ಸಾಗಬಹುದು. ದಕ್ಷಿಣದವರು ಉತ್ತರಕ್ಕೆ ಸಾಗಬಹುದು, ಪೂರ್ವದವರು ಪಶ್ಚಿಮ, ಪಶ್ಚಿಮದವರು ಪೂರ್ವಕ್ಕೆ. ಇದೊಂದು ಸನ್ನಿವೇಶ ಅಷ್ಟೇ. ಇಂಥಾ ನೂರಾರು ಸನ್ನಿವೇಶ ಸೃಷ್ಟಿ ಮಾಡಬಹುದು. ಒಟ್ಟಾರೆ ಹೇಳಿದರೆ ಇಲ್ಲಿಯವರು ಅಲ್ಲಿಗೆ, ಅಲ್ಲಿಯವರು ಇಲ್ಲಿಗೆ ಅನ್ನಿ. ಅಲ್ಲಿರುವವರು ಅಲ್ಲಿ, ಇಲ್ಲಿರುವವರು ಇಲ್ಲಿ ಯಾಕೆ ಕೆಲಸ ಮಾಡಬಾರದು?
ಯಾವುದೇ ಮೂಲೆಯಲ್ಲಿದ್ದರೂ ಗಮ್ಯ ಮಾತ್ರ ಮೇಲಿನ ಲೋಕ
ಹೋಗಲಿ ಬಿಡಿ, ಅವರವರ ಗಮ್ಯ ಅವರಿಗೆ ಬಿಡುವ. ಕೆಲವರು ಎರಡು ಚಕ್ರ ಏರಿ ಸಾಗಿದರೆ ಕೆಲವರು ನಾಲ್ಕು ಚಕ್ರ. ಕೆಲವರು ಎಂಟು ಚಕ್ರ ಏರಿದರೆ ಕೆಲವರು ಹಲವಾರು ಚಕ್ರದ ವಾಹನ ಏರಿರುತ್ತಾರೆ. ಎಷ್ಟೇ ಚಕ್ರದ ಗಾಡಿ ಏರಿದ್ದರೂ ಚಕ್ರಗಳೆಲ್ಲಾ ಭಿನ್ನ ಆದರೆ ಎಲ್ಲವೂ ಒಂದೇ. ಎಲ್ಲವೂ ವೃತ್ತಾಕಾರವೇ. ಇನ್ನು ಪಯಣ, ಆರಂಭ ಯಾವುದಾದರೇನು ಗಮ್ಯ ಮಾತ್ರ ಒಂದೇ. ಎಲ್ಲಿಯೋ ಹೋಗಿ ಕೆಲಸ ಮಾಡುತ್ತಾರೆ ಎಂಬುದು ಒಂದರ್ಥವಾದರೆ, ಭುವಿಯ ಯಾವುದೇ ಮೂಲೆಯಲ್ಲಿದ್ದರೂ ಗಮ್ಯ ಮಾತ್ರ ಮೇಲಿನ ಲೋಕ ಎಂದೂ ಅರ್ಥೈಸಿಕೊಳ್ಳಬಹುದು.
ಇನ್ನು ಈ ಗಮ್ಯದ ಪಯಣದಲ್ಲೂ ಅದೆಷ್ಟು ಭಿನ್ನ. ಒಬ್ಬರು ನೆಲದೊಳಗೆ ನೇರವಾಗಿ ಹೋದರೆ, ಕೆಲವರು ಡಬ್ಬದೊಳಗೆ ಕೂತು ಸಾಗುತ್ತಾರೆ. ಕೆಲವರು ಬೂದಿಯಾದರೆ ಈಗಿನ ಪರಿಸ್ಥಿತಿಯಲ್ಲಿ ಚೀಲದಲ್ಲಿ ಸೇರಿ ಸಾಗುತ್ತಾರೆ. ದೇಹ ಇಲ್ಲೇ ಉಳಿದರೂ ಆತ್ಮ ಮಾತ್ರ ಮೇಲೆ ಸಾಗುತ್ತದೆ ಎಂಬುದನ್ನು ಇಷ್ಟೇ ನೇರವಾಗಿ ಅರ್ಥೈಸಿಕೊಳ್ಳೋಣ. ಹುಟ್ಟಿನ ಭಿನ್ನತೆಯು ಗಮ್ಯದಲ್ಲಿ ಒಂದೇ ಅಂತಾಗಿ ಅದು ಆತ್ಮ ಎಂದಾಯ್ತು. ಎಲ್ಲವೂ ಒಂದೇ ಎಂಬ ಆತ್ಮ ಆದರೂ, ಪುನರಪಿ ಜನನಂ ಎಂಬುದನ್ನು ಈ ಆತ್ಮ ಪಾಲಿಸುತ್ತದೆ ಎಂಬುದಾದರೆ ಅದಾವ ಜೀವಿಯಲ್ಲಿ ಈ ಆತ್ಮ ಸೇರುತ್ತದೋ ಬಲ್ಲವರಾರು?
ನಮಗೆ ಯಾವಾಗ ಬುದ್ಧಿ ಬರುತ್ತೆ ಅಂತೀನಿ?
ಒಂದು ಆತ್ಮ ಕೀಟ ಸೇರಬಹುದು, ಮತ್ತೊಂದು ಕ್ರಿಮಿಯಲ್ಲಿ ಸೇರಬಹುದು. ಒಂದು ಆತ್ಮ ಸಾಧುಪ್ರಾಣಿಯಲ್ಲಿ ಸೇರಬಹುದು. ಆದರೆ ಮತ್ತೊಂದು ಆತ್ಮ ಕ್ರೂರಪ್ರಾಣಿಯಲ್ಲಿ ಸೇರಬಹುದು. ಆತ್ಮದ ಆರಂಭ ಒಂದೇ ಆದರೂ ಗಮ್ಯ ಭಿನ್ನ ಆಯಿತು ಅಲ್ಲವೇ? ಈಗ ಹೇಳಿ ಎಲ್ಲವೂ ಒಂದೇನೇ? ಅಥವಾ ಎಲ್ಲವೂ ಭಿನ್ನವೇ? ಭಿನ್ನತೆಯಲ್ಲಿ ಏಕತೆಯೇ? ಏಕತೆಯಲ್ಲಿ ಭಿನ್ನತೆಯೇ? ಇಷ್ಟೆಲ್ಲಾ ಇದ್ದರೂ ನಾವು ಮತ್ತೊಬ್ಬರಂತಿಲ್ಲಾ ಎಂಬುದಾಗಿ ಚಿಂತಿಸುವುದರಲ್ಲಿ ಅರ್ಥವಿದೆಯೇ? ಅಲ್ಲಾ, ನಮಗೆ ಯಾವಾಗ ಬುದ್ಧಿ ಬರುತ್ತೆ ಅಂತೀನಿ?