ಸಮಾಜ ಎಷ್ಟೇ ಪುರುಷ ಪ್ರಧಾನವಾಗಿರಲಿ, ಅಮ್ಮನಿಗೆ ಸಿಕ್ಕ ಗೌರವ ಅಪ್ಪನಿಗೆ ಸಿಕ್ಕಿಲ್ಲ . ಇದು ಭಾರತ ಅಂತ ಅಲ್ಲ ಜಗತ್ತಿನ ಬಹುಪಾಲು ದೇಶಗಳ ಕಥೆ . ನನಗನ್ನಿಸುತ್ತೆ ಜಗತ್ತಿನಲ್ಲಿ ಏನಿಲ್ಲದೆಯೂ ಜೀವನ ಕಳೆದು ಬಿಡಬಹುದು ಅಮ್ಮನ ಹೊರತುಪಡಿಸಿ . ಬಹಳ ಹಿಂದಿನಿಂದ ಕ್ಯಾಥೊಲಿಕ್ ದೇಶಗಳಲ್ಲಿ ಅಪ್ಪನ ದಿನ ಆಚರಣೆ ಮಾಡುತ್ತಾ ಬಂದಿದ್ದಾರೆ . ಸ್ಪ್ಯಾನಿಷ್ ಮತ್ತು ಪೋರ್ಚುಗೀಸರು ತಮ್ಮ ಈ ವಾಡಿಕೆಯನ್ನ ಲ್ಯಾಟಿನ್ ಅಮೇರಿಕಾಕ್ಕೆ ಕೂಡ ಕಲಿಸುತ್ತಾರೆ.
ಯೂರೋಪಿನ ದೇಶಗಳಲ್ಲಿ ಇದು ಬಹಳ ಹಳೆಯ ಸಂಪ್ರದಾಯ. ಪ್ರತಿ ವರ್ಷ ಮಾರ್ಚ್ 19 ಅನ್ನು ಸಂತ ಜೋಸೆಫರ ದಿನ ಎಂದು ಆಚರಿಸಲಾಗುತ್ತದೆ . ಆ ದಿನವನ್ನೇ ಫಾದರ್ಸ್ ಡೇ ಎಂದು ಆಚರಿಸಲಾಗುತ್ತದೆ . ಇದು ಯೂರೋಪಿನ ಕಥೆ. ಅಮೇರಿಕಾದ ಕತೆ ಬೇರೆಯೇ ಇದೆ . 1907ರ ಡಿಸೆಂಬರ್ ನಲ್ಲಿ ಮನೋಂಗ ಎನ್ನುವ ವೆಸ್ಟ್ ವರ್ಜೀನಿಯದ ಊರಿನಲ್ಲಿ ಗಣಿ ಅವಘಡದಿಂದ 300ಕ್ಕೂ ಹೆಚ್ಚು ಜನ ಸಾಯುತ್ತಾರೆ, ಅವರಲ್ಲಿ 250 ಜನ ಅಪ್ಪಂದಿರು .
ಕಾಫಿ ಎನ್ನುವ ನಾಲ್ಕು ದಶಕದ ಸಂಗಾತಿಯ ಪುರಾಣ! ಇದು ಇಲ್ಲದಿದ್ದರೆ..
ಇವರನ್ನ ಗೌರವಿಸಲು ಇವರ ನೆನಪಿಗಾಗಿ ಜೂಲೈ 4, 1908 ಪ್ರಥಮ ಬಾರಿಗೆ ಈ ದಿನವನ್ನ ಆಚರಿಸುತ್ತಾರೆ . ಅದರ ನಂತರ ಬಹಳ ವರ್ಷ ಇದು ನೆನೆಗುದಿಗೆ ಬೀಳುತ್ತದೆ . ಅಂದಿನಿಂದ 1966ರ ವರೆಗೆ ಫಾದರ್ಸ್ ಡೇ ಆಚರಣೆ ಮಾಡಬೇಕೆನ್ನುವ ಕೂಗು ವಿಫಲವಾಗುತ್ತದೆ . ಕೊನೆಗೆ 1966ರಲ್ಲಿ ಜೂನ್ ತಿಂಗಳ 3ನೇ ಭಾನುವಾರವನ್ನ ಅಪ್ಪನ ದಿನವನ್ನಾಗಿ ಆಚರಿಸುವುದಾಗಿ ಅಮೇರಿಕಾ ಘೋಷಣೆ ಮಾಡುತ್ತೆ . ಇದಾಗಿ ಆರು ವರ್ಷದ ಬಳಿಕ ಅಂದರೆ 1972ರಲ್ಲಿ ಇದು ಕಾನೂನಿನ ಅಧಿಕೃತ ಮನ್ನಣೆ ಪಡೆಯುತ್ತೆ . ಹೀಗಾಗಿ ಬಾರ್ಸಿಲೋನಾ ನೆನಪುಗಳಲ್ಲಿ ಕೂಡ ಅಣ್ಣ (ಅಪ್ಪ)ನ ನೆನಪನ್ನ ಮೆಲುಕು ಹಾಕುವ ಪ್ರಯತ್ನ ಮಾಡಿದ್ದೇನೆ.
ಅಣ್ಣನಿಗೆ ಹಿಂದಿ ಚಿತ್ರಗಳ ಗೀತೆಯೆಂದರೆ ಪಂಚಪ್ರಾಣ . ಮುಖೇಶ್ , ಮಹಮದ್ ರಫಿ ಮತ್ತು ಕಿಶೋರ್ ಕುಮಾರನ ಗೀತೆಗಳೆಂದರೆ ಹುಚ್ಚು . ಅವರಿಗೆ ಅದೆಷ್ಟು ಈ ಗೀತೆಗಳ ಮೇಲೆ ಹುಚ್ಚು ಎಂದರೆ ಆಗಿನ ಕಾಲದಲ್ಲಿ ಹೆಚ್ ಎಂ ವಿ ರೆಕಾರ್ಡ್ ಪ್ಲೇಯರ್ ತಂದು ಮನೆಯಲ್ಲಿ ಇಟ್ಟು ಕೊಂಡಿದ್ದರು. ಅಂದಿನ ಸಮಯದಲ್ಲಿ ಕ್ಯಾಸೆಟ್ ಅವಿಷ್ಕಾರವಾಗಿರಲಿಲ್ಲ . ಆಗೇನಿದ್ದರೂ ಗುಂಡಾಕಾರದ ಕಪ್ಪು ತಟ್ಟೆಗಳು !!
ಅದನ್ನ ರೆಕಾರ್ಡ್ ಪ್ಲೇಯರ್ ಮೇಲಿಟ್ಟು ಸಣ್ಣ ಮುಳ್ಳು ತಂತಿಯಂತಹ ವಸ್ತುವನ್ನ ಅದರ ಮೇಲೆ ನಾಜೂಕಾಗಿ ಇಡಬೇಕಾಗಿತ್ತು . ಅಲ್ಲೆಲ್ಲೂ ಅವಿತ್ತಿದ್ದ ಶಬ್ದಗಳು ಹೊರಬರುತ್ತಿದ್ದವು . ಅಪ್ಪನ ಈ ಹುಚ್ಚಾಟ ನೋಡಿ ಅಜ್ಜಿ ಇಷ್ಟು ದುಡ್ಡಿನಲ್ಲಿ ಇಪ್ಪತ್ತು ತೊಲ ಬಂಗಾರ ಖರೀದಿ ಮಾಡಬಹುದಿತ್ತು ಅಂತ ಗೊಣಗಿದ್ದರಂತೆ . ಇರಲಿ . ಇದೊಂದು ಉದಾಹರಣೆಯಷ್ಟೇ ಅಣ್ಣ ಹಣವಿರಲಿ ಬಿಡಲಿ ತನ್ನ ಇಚ್ಛೆಯನ್ನ ಪೂರ್ಣಗೊಳಿಸಿ ಕೊಂಡು ಬ್ಯಾಗೇಜ್ ಇಲ್ಲದೆ ತನ್ನ ರೀತಿ ನೀತಿಯಲ್ಲಿ ಬದುಕಿದ ವ್ಯಕ್ತಿ . ಅದು ಸರಿಯೋ ತಪ್ಪೋ ಅದು ಚರ್ಚಾಸ್ಪದ ವಿಷಯ .
ಕಣ್ಣಿಗೆ ಕಾಣುವ ಆನೆಯೇ ಲೆಕ್ಕವಿಲ್ಲ ,ಇನ್ನು ಪಾದದಡಿಯ ಕಾಣದ ಇರುವೆ ಯಾವ ಲೆಕ್ಕ?
99ರಲ್ಲಿ ಅಣ್ಣನಿಗೆ ಸ್ಟ್ರೋಕ್ ಜೊತೆಗೆ ಹಾರ್ಟ್ ಕೂಡ ಅಟ್ಯಾಕ್ ಗೆ ಒಳಗಾಗಿತ್ತು . ರಾಮ ಔರಂಗಾಬಾದ್ ನಲ್ಲಿ ವಿಡಿಯೋಕಾನ್ ಕಂಪನಿಯಲ್ಲಿ ಆಗತಾನೆ ಕೆಲಸಕ್ಕೆ ಸೇರಿದ್ದ . ಹೀಗಾಗಿ ಅವನಿಗೆ ರಜಾ ಸಿಗಲಿಲ್ಲ . ಕಾಂತ ಸೂರತ್ಕಲ್ ನಲ್ಲಿ ಎಂಟೆಕ್ ಗೆ ಸೇರಿದ್ದ ಹೊಸತು ಕೂಡ , ಒಂದುವಾರ ಇದ್ದು ಹೊರಟು ಹೋಗಿದ್ದ . ನಾನು ಅಮ್ಮ ಇಬ್ಬರೂ ಅಣ್ಣನಿಗೆ ಬಹಳಷ್ಟು ತೈಲಗಳ ತಿಕ್ಕಿ ಮಸಾಜ್ ಮಾಡುತ್ತಿದ್ದೆವು . ಮೂರು ತಿಂಗಳಲ್ಲಿ ಅಣ್ಣ ಇನ್ನು ಚನ್ನಾಗಿ ನೆಡೆಯಲು ಬಾರದ ಸಮಯದಲ್ಲಿ ನಾನು ದುಬೈ ಪಾಲಾದೆ .
ಮುಂದಿನ ಐದಾರು ವರ್ಷದಲ್ಲಿ ಅಣ್ಣ ನಿಗೆ ಸ್ಟ್ರೋಕ್ ಆಗಿತ್ತು ಅಂತ ನಾವು ಹೇಳಿದರೆ ಮಾತ್ರ ಬೇರೆಯವರಿಗೆ ತಿಳಿಯುತ್ತಿತ್ತು , ಅಷ್ಟರಮಟ್ಟಿಗೆ ಅಣ್ಣ ಚೇತರಿಸಿಕೊಂಡರು . 2007ರ ವೇಳೆಗೆ ಬಾರ್ಸಿಲೋನಾ ಸೇರಿ ಎಂಟು ವರ್ಷವಾಗಿತ್ತು . ಜೀವನ ಮಟ್ಟ ಬದಲಾಗಿತ್ತು . ನಿಜವಾದ ಕ್ವಾಲಿಟಿ ಆಫ್ ಲೈಫ್ ಎಂದರೇನು ಎನ್ನುವುದನ್ನ ಹತ್ತಿರದಿಂದ ಕಂಡ ನನಗೆ ಅಮ್ಮ -ಅಣ್ಣ ನನ್ನ ಹತ್ತಾರು ದೇಶ ಸುತ್ತಿಸಬೇಕು ಎನ್ನುವ ಬಯಕೆ .
ಅಮ್ಮ , ಅಣ್ಣನನ್ನ ಬಿಟ್ಟು ಬರುವುದಿಲ್ಲ ಎಂದಳು . ಹೀಗಾಗಿ 2007ರ ವರೆಗೆ ಕಾಯಬೇಕಾಯ್ತು . ಅಣ್ಣ ಫಿಟ್ ಆಗಿದ್ದಾರೆ ಅನ್ನಿಸಿದ ಮೇಲೆ ಅಮ್ಮ -ಅಣ್ಣನನ್ನ ಬಾರ್ಸಿಲೋನಾ ಗೆ ಕರೆಸಿಕೊಂಡೆವು . ಸ್ಪೇನ್ ನ ವಿವಿಧ ನಗರಗಳನ್ನ ತೋರಿಸಿ , ನಂತರ ಫ್ರಾನ್ಸ್ , ಇಟಲಿ ಮತ್ತು ಪೋರ್ಚುಗಲ್ ದೇಶಗಳನ್ನ ಸುತ್ತಾಡಿಸಿ , ಬೆಂಗಳೂರಿಗೆ ಹೊರಡುವ ಮುನ್ನ ಹದಿನೈದು ದಿನ ಬೇರೇನೂ ಪ್ಲಾನ್ ಮಾಡದೆ ಮನೆಯಲ್ಲಿ ಸುಧಾರಿಸಿಕೊಳ್ಳಿ ಎಂದಿದ್ದೆವು .
ನಾಯಿ ಸಾಕುವುದು ಶೋಕಿಯಲ್ಲ ! ಅದರ ಕಕ್ಕವನ್ನ ಎತ್ತುವುದು ಇಲ್ಲಿ ಶಿಷ್ಟಾಚಾರ !!
ಅಂದಿನ ದಿನದಲ್ಲಿ ನಾನಿದ್ದ ಜಾಗ ಬಾರ್ಸಿಲೋನಾ ಸಿಟಿ ಸೆಂಟರ್ ನಿಂದ 9 ಕಿಲೋಮೀಟರ್ ದೂರದಲ್ಲಿದ್ದ ಬಾದಲೋನಾ ಎನ್ನುವ ನಗರದಲ್ಲಿ , ಅದು ಸ್ಯಾನ್ ಜರೋಮಿ ದೆ ಲಾ ಮೊರ್ತ್ರಾ ಎನ್ನುವ ಬೆಟ್ಟಕ್ಕೆ ಬಹಳ ಹತ್ತಿರ . ಮಜಾ ಎಂದರೆ ಒಂದು ಭಾಗದಲ್ಲಿ ಬೆಟ್ಟ , ಇನ್ನೊಂದು ಭಾಗದಲ್ಲಿ ಮೆಡಿಟೇರಿಯನ್ ಸಮುದ್ರ ! ಅಲ್ಲಿ ಬದುಕಿದ ಪ್ರತಿ ದಿನವೂ ರೆಸಾರ್ಟ್ ನಲ್ಲಿ ಬದುಕಿದ ಅನುಭವ.
ಅಣ್ಣ -ಅಮ್ಮ ಬಹಳ ಖುಷಿಯಿಂದ ಓಡಾಡಿಕೊಂಡಿದ್ದರು . ಅಮ್ಮ ಸೀರೆ ಉಡುತ್ತಿದ್ದರಿಂದ ಸ್ಥಳೀಯರಿಗೆ ಆಕೆ ಆಕರ್ಷಣೆಯ ವಸ್ತುವಾಗಿದ್ದಳು .ಅಮ್ಮನಿಗೆ ಭಾಷೆ ಬರದಿದ್ದರೂ ಸನ್ನೆಯಲ್ಲಿ ಮಾತುಕತೆ ನೆಡೆಯುತ್ತಿತ್ತು . ಇಂತಹ ಒಂದು ಮಧ್ಯಾಹ್ನ ಊಟ ಮಾಡಿ ಮಲಗಿದ್ದೆವು . ಸ್ಪೇನ್ ನಲ್ಲಿ ಮಧ್ಯಾಹ್ನದ ನಿದ್ದೆ ಬಹಳ ಸಹಜ . ಇದಕ್ಕೆ ಇಲ್ಲಿ ಸಿಯಾಸ್ತ ಎನ್ನುತ್ತಾರೆ . ಅಣ್ಣ ಚಡಪಡಿಸಿ ಎದ್ದು ಮನೆಯಿಂದ ಹೊರಗೆ ಹೋದರು . ನಮಗೆಲ್ಲಾ ಆಶ್ಚರ್ಯ ಜೊತೆಗೆ ಇದೇನಿದು ಅಣ್ಣ ಎಲ್ಲಿಗೆ ಹೋದರು ಎನ್ನುವ ಧಾವಂತ .
ಹದಿನೈದು ನಿಮಿಷ ಅಣ್ಣ ಮತ್ತೆ ಮನೆಗೆ ಬಂದರು . ರಮ್ಯಳ ಕುರಿತು 'ನಮ್ಮ ಬಿಲ್ಡಿಂಗ್ ನಲ್ಲಿ ಯಾರಾದರೂ ಇಂಡಿಯನ್ಸ್ ಇದ್ದಾರಾ ?' ಎಂದು ಪ್ರಶ್ನಿಸಿದ್ದಾರೆ . ರಮ್ಯ ಇಲ್ಲವೆಂದಾಗ . ಅಣ್ಣನಿಗೆ ನಂಬಿಕೆ ಬಂದಿಲ್ಲ . ನಾನು ಈಗಷ್ಟೆ ' ಜಾನೆ ಕಹಾ ಗಯೇ ವೊ ದೀನ್ ' ಹಾಡನ್ನ ಕೇಳಿದೆ . ನನ್ನ ರೂಮಿಗೆ ಬಹಳ ಕ್ಷೀಣವಾಗಿ ಕೇಳಿಸುತ್ತಿತ್ತು ಅದಕ್ಕೆ ಎದ್ದು ಹೋಗಿ ಮನೆಯ ಕೆಳೆಗೆ ನಿಂತಿದ್ದೆ .., ಬಹಳ ಚನ್ನಾಗಿ ಕೇಳಿಸಿತು . ಖಂಡಿತ ನಮ್ಮ ಬಿಲ್ಡಿಂಗ್ ನಲ್ಲಿ ಇಂಡಿಯನ್ಸ್ ಇದ್ದಾರೆ , ನಿಮಗೆ ಗೊತ್ತಿಲ್ಲ ಅಂದರು .
ಅಣ್ಣ ಅಷ್ಟೊಂದು ಧಾವಂತದಿಂದ ಎದ್ದು ಹೋದ ಹಿಂದಿನ ರಹಸ್ಯ ತಿಳಿಯಿತು . ರಮ್ಯ ಆ ಹಾಡನ್ನ ನಾನೇ ಹಾಕಿದ್ದು ಎಂದು ಹೇಳಿ , ಮುಂದಿನ ಹದಿನೈದು ದಿನ ಅಣ್ಣನ ಇಷ್ಟದ ಹಾಡುಗಳನ್ನ ಕೇಳಿಸಿದಳು . ಸಾಮಾನ್ಯವಾಗಿ ತನ್ನ ಭಾವನೆಗಳನ್ನ ಹೆಚ್ಚು ವ್ಯಕ್ತಪಡಿಸದ ಅಣ್ಣನ ಮುಖದಲ್ಲಿ ಮಂದಹಾಸ ಕಾಣಿಸುತ್ತಿತ್ತು . ಅಣ್ಣನಿಗೆ ಹುರಳಿಕಾಯಿ ಟೊಮೊಟೊ ಮತ್ತು ಆಲೂಗೆಡ್ಡೆ ಹಾಕಿ ಹೋಟೆಲ್ ಶೈಲಿಯಲ್ಲಿ ಹೆಚ್ಚು ದಪ್ಪವಿಲ್ಲದ ಸಾಂಬಾರು ಬಹಳ ಇಷ್ಟ .
ಕಲ್ಸೊಟ್ಸ್ ! ಸುಟ್ಟ ಈರುಳ್ಳಿ ತಿನ್ನುವುದೂ ಇಲ್ಲಿ ಸಡಗರ !!
ಹೀಗಾಗಿ ಅಣ್ಣ ಬದುಕಿರುವವರೆಗೆ ವಾರಕ್ಕೆರೆಡು ಬಾರಿ ಹುರಳಿಕಾಯಿ ಹುಳಿ ತಪ್ಪುತ್ತಿರಲಿಲ್ಲ. ಪುಣ್ಯಕ್ಕೆ ಬಾರ್ಸಿಲೋನಾ ದಲ್ಲಿ ಹುರಳಿಕಾಯಿ ಹೇರಳವಾಗಿ ಸಿಗುತ್ತಿತ್ತು. ಹುರಳಿಕಾಯಿಗೆ ಸ್ಪ್ಯಾನಿಷ್ ಭಾಷೆಯಲ್ಲಿ ಹೂದಿಯಾಸ್ ಎನ್ನುತ್ತಾರೆ. ಇದೊಂದು ಬಿಟ್ಟರೆ ಮಿಕ್ಕ ಯಾವುದನ್ನೂ ಅಣ್ಣ ಯಾವುದನ್ನೂ ಹೆಚ್ಚು ಇಷ್ಟ ಅಂತ ಹೇಳಿಕೊಂಡು ತಿರುಗಿದ ವ್ಯಕ್ತಿಯಲ್ಲ , ಆದರೆ ಉಪ್ಪಿಟ್ಟನ್ನ ಮಾತ್ರ ನಖಶಿಕಾಂತ ದ್ವೇಷಿಸುತ್ತಿದ್ದರು .
ಅದನ್ನ ಎಂದೂ ಹೆಸರಿಡಿದು ಕರೆದವರಲ್ಲ ಅದಕ್ಕೆ ಅವರಿಟ್ಟ ಹೆಸರು ' ಕಾಂಕ್ರೀಟ್ ' . ಬದುಕು ಅದೆಷ್ಟು ವಿಚಿತ್ರ ನೋಡಿ ! ಬದುಕು ವಾಹ್ ಅನ್ನಿಸಿಕೊಳ್ಳುವುದೇ ವೈಚಿತ್ರಗಳಿಂದ , ಎಲ್ಲರೂ ಎಲ್ಲವೂ ಒಂದೇ ತೆರನಾಗಿದ್ದಿದ್ದರೆ ? ಬದುಕು ಬೋರ್ ಆಗಿ ಹೋಗುತ್ತಿತ್ತು ಅಲ್ವಾ ? ನನಗೆ ಉಪ್ಪಿಟ್ಟು ಅಂದರೆ ಪಂಚ ಪ್ರಾಣ !! 99 ರಿಂದ 2005 ರಮ್ಯ ಬಾರ್ಸಿಲೋನಾ ಗೆ ಬಂದು ನನ್ನ ಸೇರುವವರೆಗೆ ಕಳೆದ ಬ್ಯಾಚುಲರ್ ಲೈಫ್ ನಲ್ಲಿ ಉಪ್ಪಿಟ್ಟು ಇಲ್ಲದೆ ಒಂದು ದಿನ ಕಳೆದಿಲ್ಲ ಎಂದರೆ ನೀವು ನಂಬಬೇಕು. ಉಪಿಟ್ಟು ಇವತ್ತಿಗೂ ನನಗೆ ಪಂಚಪ್ರಾಣ .
ಮುಂದಿನ ಆರೆಂಟು ವರ್ಷ ಒಂದೇ ಸಮನೆ ಪ್ರತಿ ವರ್ಷ ಅಣ್ಣ -ಅಮ್ಮ ಸ್ಪೇನ್ ಗೆ ಬಂದರು . ಹತ್ತಾರು ದೇಶ ಸುತ್ತಿದರು . ಐಪೋಡ್ ಬಂದ ತಕ್ಷಣ ಅದರಲ್ಲಿ ಮುಖೇಶ್ , ಮಹಮದ್ ರಫಿ , ಕಿಶೋರ್ ಜೊತೆಗೆ ಅನೇಕ ಗಜಲ್ ಗಳನ್ನ ಕೂಡ ಸ್ಟೋರ್ ಮಾಡಿ ಕೊಟ್ಟೆವು . ಟೆಕ್ನಾಲಜಿ ಜೀವನದಲ್ಲಿ ಮಾಡಿದ ಬದಲಾವಣೆಯನ್ನ ಅಣ್ಣ ಬಹಳಷ್ಟು ಖುಷಿ ಪಟ್ಟು ಆಸ್ವಾದಿಸಿದರು . ವಿಡಿಯೋ ಗೇಮ್ ಕೂಡ ಮೊಬೈಲ್ ಗೆ ಹಾಕಿ ಕೊಟ್ಟಿದ್ದೆವು . ವಿಡಿಯೋ ಗೇಮ್ ಆಡುವುದು ಅಣ್ಣನಿಗೆ ಇನ್ನೊಂದು ಇಷ್ಟದ ವಿಷಯವಾಗಿತ್ತು .
ಏಷ್ಯಾ ಮತ್ತು ಯೂರೋಪು ಸುತ್ತಿದ್ದ ಅಣ್ಣನಿಗೆ ಅಮೇರಿಕಾ ನೋಡಬೇಕು ಎನ್ನುವ ಬಯಕೆಯಿತ್ತು . ಅದನ್ನ ಅವರು ಎಂದೂ ನನ್ನ ಬಳಿ ಹೇಳಿಕೊಳ್ಳಲಿಲ್ಲ . ಅದು ಬಹಳ ದೂರ, ಪ್ರಯಾಣದಲ್ಲಿ ಅಣ್ಣನಿಗೆ ಹೆಚ್ಚು ಕಡಿಮೆಯಾದರೆ ಎಂದು ನಾನು ' ಬೇಡ ' ಎಂದಿದ್ದೆ . ಕಾಂತ ಹುಸ್ಟೋನ್ ನ ತನ್ನ ಮನೆಯ ಮುಂದಿನ ಕೊಳದಲ್ಲಿ ಈಜುವ ಹಂಸಗಳನ್ನ ತೋರಿಸಿದಾಗೆಲ್ಲ ಅಣ್ಣನಿಗೆ ಅಲ್ಲಿಗೆ ಹೋಗಬೇಕು ಅಂತ ಅನ್ನಿಸುತ್ತಿತ್ತಂತೆ .
ಅದು ನನಗೆ ತಿಳಿಯಲಿಲ್ಲ . ಅಣ್ಣ ಅಮೆರಿಕಾ ನೋಡದೆ ಇಲ್ಲಿನ ಆಟಕ್ಕೆ ಬಾಯ್ ಹೇಳಿ ಹೊರಟೇಬಿಟ್ಟರು ಪಾಪ ... ! ಅಣ್ಣ ಇಂದು ನಮ್ಮೊಡನೆ ದೈಹಿಕವಾಗಿ ಇಲ್ಲ , ಆದರೆ ಅಣ್ಣನ ಇಷ್ಟವಾದ ಹಾಡು 'ಜಾನೆ ಕಹಾ ಗಯೇ ವೊ ದೀನ್ ' ಹಾಡು ಪ್ಲೇ ಆಗುತ್ತಿದೆ .