ಶ್ರೀನಾಥ್ ಭಲ್ಲೆ ಅಂಕಣ: ಅಪ್ಪನ ಬಗ್ಗೆ ಒಂದು ವಿಷಯ ಹೇಳಿ ಅಂದ್ರೆ ಅದೇನು?

|

Father's Day ಪ್ರಯುಕ್ತ ಎಲ್ಲ ತಂದೆಯರಿಗೂ ಆ ತಂದೆಯರ ತಂದೆ ಒಳಿತು ಮಾಡಲಿ ಎಂದು ಪ್ರಾಥಿಸುತ್ತಾ ಒಂದೆರಡು ವಿಚಾರಗಳನ್ನು ಮಾತನಾಡೋಣ ಬನ್ನಿ.

ಮೊದಲಿಗೆ ಈ fathers day ಬಗ್ಗೆ ಸ್ವಲ್ಪ ಹೇಳೋಣ. ಮೊದಲಿಗೆ ಈ ದಿನ ವಿಶ್ವಾದ್ಯಂತ ಒಂದೇ ದಿನ ಆಚರಿಸುವುದಿಲ್ಲ. ವಿಶ್ವದ ನೂರು ಚಿಲ್ಲರೆ ದೇಶಗಳಲ್ಲಿ ಮಾತ್ರ ಇಂಥಾ ಒಂದು ದಿನ ಆಚರಿಸುತ್ತಾರೆ. ಹೀಗಾಗಿ ಈ ದಿನ International Father's Day ಅಲ್ಲ. ಇನ್ನು ಈ ನೂರು ಚಿಲ್ಲರೆ ದೇಶಗಳೂ ಒಂದೇ ದಿನವೇ ಆಚರಿಸುವುದಿಲ್ಲ. ದೊಡ್ಡಣ್ಣನ ದೇಶದಲ್ಲಿ ಜೂನ್ ತಿಂಗಳ ಮೂರನೆಯ ಭಾನುವಾರ ಆಚರಿಸಲಾಗುತ್ತದೆ. ಭಾರತದಲ್ಲೂ ಇದೇ ಪ್ರಭಾವ ಬೀರಿದ್ದು, ಅದೇ ದಿನದಂದೇ ಆಚರಿಸಲಾಗುತ್ತದೆ. ಈ Father's day ಅನ್ನೋದು Commercial ಅರ್ಥಾತ್ ವ್ಯಾವಹಾರಿಕ ದೃಷ್ಟಿಯಲ್ಲಿ ಆಚರಿಸಲಾಗುವ ದಿನ. ಎಲ್ಲೆಡೆ sale, sale, ಸೇಲೋ ಸೇಲು.

ಒಬ್ಬ ತಂದೆ ಹ್ಯಾಪಿ ಅಂತ ಆಗೋದು ಯಾವಾಗ

ಇನ್ನು ಹ್ಯಾಪಿ ವಿಷಯ. ಒಬ್ಬ ತಂದೆ ಹ್ಯಾಪಿ ಅಂತ ಆಗೋದು ಯಾವಾಗ. ಒಬ್ಬ ತಾಯಿಗೆ ಆಗುವ ಖುಷಿಗೂ, ಒಬ್ಬ ತಂದೆಗೆ ಆಗುವ ಸಂತಸಕ್ಕೂ ವ್ಯತ್ಯಾಸವಿದೆ. ತಾಯಿ ತನ್ನ ಕೂಸು ಹೊಟ್ಟೆ ತುಂಬಾ ಉಂಡರೆ ತಾಯಿಗೆ ಖುಷಿಯಾಗಬಹುದು, ಆದರೆ ಅಪ್ಪನ ಸಂತಸವೇ ಬೇರೆ. ಒಂದು ಸಂಸಾರದಲ್ಲಿ ಒಬ್ಬ ತಂದೆ ಎಷ್ಟರ ಮಟ್ಟಿಗೆ ಅಥವಾ ಯಾವ ರೀತಿ ತನ್ನ ಸ್ಥಾನ ಕಾಪಾಡಿಕೊಂಡಿರುತ್ತಾನೆ ಎಂಬುದರ ಮೇಲೆ ಅವಲಂಬಿತ.

ನಮ್ಮ ಮನೆಯಲ್ಲಿ ಹೇಗೆ? ಅಪ್ಪ ಕೊಂಚ ಸ್ಟ್ರಿಕ್ಟ್. ಅಪ್ಪನ ಮೂಡ್ ನೋಡಿಕೊಂಡು ನಾವು ಹೇಗಿರಬೇಕು ಅಂತ ಮೂಡ್ ಬದಲಿಸಿಕೊಂಡು ಇರುತ್ತಿದ್ದೆವು. ಅಪ್ಪ ಕೊಂಚ ಸೀರಿಯಸ್ ಆಗಿದ್ರು ಅಂದರೆ ಉಸಿರು ಜೋರಾಗಿ ಬಿಡಲೂ ಯೋಚನೆ ಮಾಡ್ತಿದ್ವಿ. ರಷ್ ಇದ್ದೆಡೆ, ಗಲಾಟೆ ಇದ್ದೆಡೆ ಅಪ್ಪನಿಗೆ ಹಿಂಸೆಯಾಗುತ್ತಿತ್ತು. ಪೂಜೆಗೆ ಅಂತ ಯಾರ ಮನೆಗೂ ಹೋಗಿದ್ದರೆ ಅಲ್ಲಿ ಎಲ್ಲರೂ ಸೈಲೆಂಟ್ ಆಗಿ ಕೂತು ಪೂಜೆ ನೋಡಬೇಕು ಅಂತ ಅವರಾಸೆ. ಆದರೆ ಅದು ಕಷ್ಟ ಸಾಧ್ಯ ಬಿಡಿ. ಒಮ್ಮೆ ಒಂದು ಮದುವೆ ಕೂಡಾ ಮಾಡಿಸಿದ್ದರು, ಆದರೆ ಆ ಗಲಭೆಗೆ ರೋಸಿ ಮತ್ತೊಮ್ಮೆ ಆ ಕೆಲಸಕ್ಕೆ ಕೈಹಾಕಲಿಲ್ಲ. reserved personality ಎನ್ನಬಹುದು. ವ್ಯಾವಹಾರಿಕವಾಗಿ ಬಹಳ ಅಚ್ಚುಕಟ್ಟು. ಕೊತ್ತಂಬರಿಗೆ ಇಷ್ಟಾಯ್ತು, ಕರಿಬೇವಿಗೆ ಇಷ್ಟಾಯ್ತು ಅಂತ ಒಂದೆಡೆ ಬರೆದು ಇಡುವಷ್ಟು ತತ್ವಬದ್ಧ. ಒಟ್ಟಿನಲ್ಲಿ ಒಂದು ತಿಂಗಳಿಗೆ ಎಷ್ಟು ಖರ್ಚು ಆಗುತ್ತದೆ ಎಂಬ ವಿಚಾರ ತಲೆಯಲ್ಲಿದ್ದಾಗ ಯಾವುದೇ ದೊಡ್ಡ ಖರ್ಚು ಬಂದರೂ ಅದಕ್ಕೆ ಸಿದ್ಧರಿದ್ದೇವೆಯೇ ಎಂಬುದು ಅವರಿಗೆ ಗೊತ್ತಿತ್ತು.

ತಲೆಕೆಟ್ಟರೆ ಮುಖಮೂತಿ ನೋಡದೇ ಹೊಡೆಯುವಾತ

ಇಷ್ಟೆಲ್ಲಾ ಯಾಕೆ ಹೇಳಿದೆ ಅಂದ್ರಾ? ಇಂದಿನ ಬರಹದ ಮುಖ್ಯ ಉದ್ದೇಶವೇ ಅದು. ನಿಮ್ಮ ಮನಗಳಲ್ಲಿ ತಂದೆ ಎಂದು ಮೂಡಿಸಿಕೊಂಡ ತಕ್ಷಣ ಮನಸ್ಸಿಗೆ ಬರುವ ಮೊದಲ ವಿಚಾರ ಯಾವುದು ಅಂತ ಹೇಳಿ. ಅಪ್ಪನ ಬಗ್ಗೆ ಹೇಳಲು ಬಹಳ ವಿಚಾರಗಳಿವೆ ಅಂತ ಅನ್ನಿಸಿದರೆ ಹೇಳಿ, ಅದಕ್ಕೇನಂತೆ. ಆದರೆ, ತಲೆಗೆ ಬರುವ ಮೊದಲ ವಿಷಯ ಯಾವುದು ಅಂತ ಹೇಳೋದು ಮರೆಯದಿರಿ.

ನಮ್ಮಲ್ಲಿ ಮೊದಲಿಂದಲೂ ಅಪ್ಪ-ಅಮ್ಮ ಎಂದಾಗ ಅವರ ಬಗ್ಗೆ ಒಂದು ಚಿತ್ರಣ ಸ್ಪಷ್ಟವಾಗಿದೆ. ಯಾವುದೋ ಒಂದು ಹಾಡಿನಲ್ಲಿ ಹೇಳಿದ್ದಾರೆ ಅಪ್ಪ ದುಡೀಬೇಕು, ಅಮ್ಮ ಹಡೀಬೇಕು ಅಂತ. ಅಮ್ಮ ಎಂದ ಕೂಡಲೇ ಅಲ್ಲೊಂದು ಮಮತಾಮಯಿ ಇರುವಂತೆ, ಅಪ್ಪ ಎಂದ ಕೂಡಲೇ ಅಲ್ಲೊಬ್ಬ ಗಿರಿಜಾಮೀಸೆಧಾರಿ, ಗಡುಸು ಮುಖ, ತಲೆಕೆಟ್ಟರೆ ಮುಖಮೂತಿ ನೋಡದೇ ಹೊಡೆಯುವಾತ, ಮಹಾ ತಪ್ಪು ಮಾಡಿದರೆ ಬೆಲ್ಟಿನಿಂದ ಹೊಡೆಯುವಾತ ಹೀಗೆ. ಇಂಥಾ ಚಿತ್ರಣವೇ ಅಥವಾ ಸನ್ನಿವೇಶವೇ ಪಬ್ಲಿಕ್ ಪರೀಕ್ಷೆಗಳಲ್ಲಿ ಡುಮ್ಕಿ ಹೊಡೆದ ಮಕ್ಕಳು ಮನೆಗೆ ಸೇರಲು ಹೆದರುವಂತೆ ಮಾಡುತ್ತಿದ್ದುದು.

ಒಬ್ಬ ಗಂಡಿನ ಆರೋಗ್ಯ ಬೇಗ ಹಾಳಾಗುತ್ತದೆ

ಅಪ್ಪ ಎಂದಾಗ ಅಲ್ಲೊಂದು ಇಸಮ್ ಅಥವಾ ಇಗೋ ಇರಬೇಕು ಅಥವಾ ಇದ್ದುಬಿಡುತ್ತದೆ. ಅತೀ ಚಿಕ್ಕ ಉದಾಹರಣೆ ತೆಗೆದುಕೊಂಡರೆ ಎದೆಯಲ್ಲೇ ದುಃಖ ಕಟ್ಟಿಕೊಂಡಿದ್ದರೂ ಕಣ್ಣಿಂದ ನೀರನ್ನು ಹೊರಚೆಲ್ಲಲಾಗುವುದಿಲ್ಲ. ಎವೆಬಡಿಸಿ ಆ ಹಾನಿಯನ್ನು ಕೆಡವಿದರೆ ಆ ಗಂಡಿನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತೆ. ಇದೇ ಕಾರಣಕ್ಕಾಗಿ, ಒಬ್ಬ ಗಂಡಿನ ಆರೋಗ್ಯ ಬೇಗ ಹಾಳಾಗುತ್ತದೆ. ಒಬ್ಬ ಗಂಡಿನ ದುಃಖವನ್ನು ಬಹಳ ಹತ್ತಿರದಿಂದ ಕಂಡಿರುವುದೇ ಬಚ್ಚಲುಮನೆ. ಅದೊಂದೇ ಜಾಗದಲ್ಲಿ ಆತನ ದುಃಖ, ಸ್ನಾನದ ನೀರಿನೊಂದಿಗೆ ಮೋರಿಗೆ ಹೋಗೋದು. ಅಲ್ಲೂ ಹಗುರಾಗದವನ ಆರೋಗ್ಯ ಹಾಳಾಗುತ್ತದೆ.

ಅಪ್ಪ ಎಂದರೆ ಬಾಹುಬಲಿ ಅಷ್ಟೇ

ಹಲವು ಮನೆಗಳಲ್ಲಿನ ಅಪ್ಪನದ್ದು ಕಾಳಜಿಯ ಸ್ವಾಭಿಮಾನ. ತನಗೆ ನೆಗಡಿ ಕೆಮ್ಮು ಆಗಿದೆ ಎಂದು ಹೇಳಿಕೊಳ್ಳಲೂ ಆತನ ಸ್ವಾಭಿಮಾನ ಅಡ್ಡಬರುತ್ತದೆ. ಇನ್ನು ಜ್ವರ ಅಂತ ಬಂದರಂತೂ ರಗ್ ಹೊದ್ದು ಮಲಗಿದರೆ ನನ್ನ ಲೆವೆಲ್ ಏನು ಎಂಬ ಹುಂಬತನದಿಂದ ಒಂದೋ ಆ ಜ್ವರವನ್ನೇ ಓಡಿಸುತ್ತಾರೆ ಅಥವಾ ಹೆಚ್ಚಿಸಿಕೊಳ್ಳುತ್ತಾರೆ. ಇನ್ನು ಮುಂದಿನ ಹಂತಗಳಾದ ಹಲ್ಲುನೋವು, ಕಾಲುನೋವು, ಕೈನೋವುಗಳು ಒಂದು ರೀತಿ ಅವಮಾನ ಎಂಬಂತೆ. ದೈಹಿಕವಾಗಿ ಹೇಗೆ ಇದ್ದರೂ ಅಪ್ಪ ಎಂದರೆ ಬಾಹುಬಲಿ ಅಷ್ಟೇ. ಮಕ್ಕಳಿಗೆ ತಮ್ಮಪ್ಪ ಎಂದರೆ superman ನಂತೆ. ಜ್ವರ ಬಂದು ಕಚೇರಿಗೆ ರಜೆ ಹಾಕಿದ್ದಾರೆ ಅಂತ ಪಕ್ಕದಮನೆಯರೊಂದಿಗೆ ಹೇಳಿಕೊಂಡರೆ ಅವರ ಮುಂದೆ ನನ್ನ ಬಗ್ಗೆ ಯಾಕೆ ಹೇಳಿದ್ದು ಎಂದು ಮೂದಲಿಕೆ ಸಿಕ್ಕರೆ ಅಚ್ಚರಿಯೇ ಬೇಡ.

ಕೆಲವರಿಗೆ ತಂದೆ ಇದ್ದೂ ಇಲ್ಲದಂತೆ ಇರಬಹುದು

ನಮ್ಮಲ್ಲಿ ಎಷ್ಟೋ ಮಂದಿ ಅಪ್ಪನನ್ನು ಕಂಡಿದ್ದೆವೇ, ಜೊತೆಯಾಡಿ ಬೆಳೆದಿದ್ದೇವೆ. ಇಂಥಾ ದಿವಸದಂದು ನೆನಪಿಸಿಕೊಳ್ಳುತ್ತೇವೆ ಕೂಡ. ಆದರೆ ಕೆಲವರ ಜೀವನದಲ್ಲಿ ಈ ಪುಣ್ಯ ಇಲ್ಲದೇ ಇರಬಹುದು ಕೂಡ. ಕೆಲವರಿಗೆ ತಂದೆ ಇದ್ದೂ ಇಲ್ಲದಂತೆ ಇರಬಹುದು. ಕೆಲವರ ಜೀವನದಲ್ಲಿ ಆ ತಂದೆ ಅಸುನೀಗಿರಬಹುದು. ಕೆಲವರ ಜೀವನದಲ್ಲಿ ಆ ಪಿತ ಮನೆಯನ್ನೇ ತೊರೆದು ಹೋಗಿರಬಹುದು ಕೂಡ. ಅಮೇರಿಕಾದ ಜೀವನದಲ್ಲಿ ಹಲವಾರು single mom ಗಳನ್ನು ಕಂಡಿದ್ದೇನೆ. ತನ್ನ ಮಕ್ಕಳಿಗೆ "ನಾನೇ ತಾಯಿ, ನಾನೇ ತಂದೆ' ಎಂಬಂತೆ ನೋಡಿಕೊಳ್ಳುವ ಆ ತಾಯಿಗೆ ಅಮ್ಮಂದಿರ ದಿನದ ಶುಭಾಶಯವೂ, ಅಪ್ಪಂದಿರ ದಿನದ ಶುಭಾಶಯವೂ ಸಲ್ಲುತ್ತದೆ.

ಯಶಸ್ವಿ ಹೆಣ್ಣಿನ ಹಿಂದೆ ಒಬ್ಬ ಗಂಡು ಏಕೆ ಇರಬಾರದು

ಹಲವು ವರ್ಷಗಳ ಹಿಂದೆ ಇಲ್ಲೊಂದು ವಿಷಯ ಬಹಳಷ್ಟು ಸುದ್ದಿ ಮಾಡಿತ್ತು. ಗಂಡ- ಹೆಂಡತಿ- ಮಗುವಿನ ಒಂದು ಸಂಸಾರ. ಆ ಕೂಸಿಗೆ ಹೆಚ್ಚೆಂದರೆ ಒಂದು ವರ್ಷ. ಹೆಂಡತಿ ತನ್ನ ವೃತ್ತಿ ಜೀವನದಲ್ಲಿ ದೊಡ್ಡ ಪದವಿಯಲ್ಲಿದ್ದಳು. ಕೆಲಸದಲ್ಲಿ ಇನ್ನೂ ಹೆಚ್ಚಿನದ್ದು ಸಾಧಿಸಬೇಕು ಎಂಬ ಅವಳ ಆಶಯಕ್ಕೆ ಬೆಲೆಕೊಟ್ಟು ಗಂಡನಾದವನು ತಾನು ಕೆಲಸ ಬಿಟ್ಟು ಮಗುವಿನ ಲಾಲನೆ ಪಾಲನೆ ಮಾಡುತ್ತಿದ್ದ. ಒಬ್ಬ ಯಶಸ್ವಿ ಹೆಣ್ಣಿನ ಹಿಂದೆ ಒಬ್ಬ ಗಂಡು ಏಕೆ ಇರಬಾರದು ಎಂದೇ ತನ್ನ ಸಂದರ್ಶನದಲ್ಲಿ ಪ್ರಶ್ನೆ ಕೇಳಿದ್ದ. ಮನೆಯಲ್ಲಿದ್ದುಕೊಂಡು ಮಗುವನ್ನು ನೋಡಿಕೊಳ್ಳುವುದರಲ್ಲಿ ಅದೇನಿದೆ ದೊಡ್ಡ ವಿಷಯ ಎಂದು ಕೇಳುವವರಿಗೆ ಒಂದು ಸನ್ನಿವೇಶ ಹೇಳುತ್ತೇನೆ. ವಾರದ ದಿನಗಳಲ್ಲಿ ತನ್ನ ಕೂಸನ್ನು ಕರೆದುಕೊಂಡು ಪಾರ್ಕ್‌ಗೆ ಹೋದಾಗ ಅಲ್ಲಿ ನೆರೆದಿರುವವರೆಲ್ಲ ಹೆಂಗಳೇ. ಅವರ ನಡುವೆ ಈತನೊಬ್ಬ ಇರುವ ಸನ್ನಿವೇಶವನ್ನು ಊಹಿಸಿಕೊಂಡಾಗ ಒಬ್ಬ ತಂದೆಯೇ ತಾಯಿಯೂ ಆಗಬಹುದು ಎಂಬುದು ಸಾಬೀತಾಗುತ್ತದೆ. ಆ ಹೆಣ್ಣಿಗೆ ತನ್ನ ಗಂಡನ ಬಗ್ಗೆ ಬೆಟ್ಟದಷ್ಟು ಗೌರವ ಇದ್ದುದೂ ಸಂದರ್ಶನದಲ್ಲಿ ಕಂಡಿತ್ತು.

ಇಂದಿಗೂ ನಾನೇ ಈರುಳ್ಳಿ ಹೆಚ್ಚೋದು

ತಂದೆ ಎಂದ ಮಾತ್ರಕ್ಕೆ ಬೆಟ್ಟವೇ ಆಗಬೇಕಿಲ್ಲ, ತಾಯಿ ಎಂದರೆ ಹೂವಿನಂತೆಯೇ ಇರಬೇಕಿಲ್ಲ. ಸಂಸಾರದ ನೊಗವನ್ನು ಹೊತ್ತ ಹೆಣ್ಣು ಬೆಟ್ಟದಂತೆ ನಿಲ್ಲಬಲ್ಲಳು, ಹಾಗೆಯೇ ಒಬ್ಬ ತಂದೆಯೂ ಹೂವಿನ ಹೃದಯಿ ಆಗಿರಬಹುದು ಅಲ್ಲವೇ? ಇದರಲ್ಲೇನಿದೆ ತಪ್ಪು? ಮಗಳನ್ನು ಅತ್ತೆಯ ಮನೆಗೆ ಕಳುಹಿಸಿಕೊಡುವಾಗ ನಮ್ಮತ್ತೆ ಕಣ್ಣೀರು ಹಾಕಲಿಲ್ಲ. ಅದರಂತೆಯೇ ಅವರ ಮಗಳ ಕಣ್ಣಲ್ಲೂ ಒಂದು ಹನಿ ನೀರು ಇರಲಿಲ್ಲ. ನನ್ನ ಮಾವ ಅತ್ತಿದ್ದರು. ಅದನ್ನು ಕಂಡು ನಮ್ಮಮ್ಮ ಚಿಂತೆ ಮಾಡಬೇಡಿ ಅಂತ ಭರವಸೆ ನೀಡಿದ್ದರು. ನಿಮ್ಮ ಮಗಳ ಕಣ್ಣಲ್ಲಿ ನೀರು ಹಾಕಿಸಲಾರೆ ಅಂತ ಮಾತು ಕೊಟ್ಟಿದ್ದಕ್ಕೆ ಇಂದಿಗೂ ನಾನೇ ಈರುಳ್ಳಿ ಹೆಚ್ಚೋದು.

ಒಬ್ಬ ತಂದೆಯ ಸ್ವರೂಪಿ ಬಹುಗುಣಗಳ ಖನಿಜ ಎಂದರೆ ತಪ್ಪಾಗಲಾರದು. ಈ ಸುದಿನದಂದು ನಿಮ್ಮ ಜೀವನದ ಆ ತಂದೆಯನ್ನು ಸ್ಮರಿಸಿ ಅವರ ಬಗ್ಗೆ ಒಂದು ವಿಷಯವಾದರೂ ಹೇಳುವಿರಲ್ಲಾ?

ಇನ್ನಷ್ಟು srinath bhalle ಸುದ್ದಿಗಳು  

Read more about:
English summary
Father's Day is celebrated on the 3rd Sunday of June in America. The same day is also celebrated in India.