ನರಸಿಂಗರಾಯ ಹುಣಿಸೆತೋಪಿಗೆ ಹೋದ. ಮರಮರ ಸುತ್ತಿ ತುಳಸಿಕಟ್ಟೆ ಬಳಿ ಬಂದಾಗ ಗೌರಿ ನೀರು ಹಾಕುತ್ತಿದ್ದಳು. ಅವಳ ಹೆಗಲನ್ನು ಮೃದುವಾಗಿ ತಟ್ಟಿದ. ಬಿಲ್ವವೃಕ್ಷದತ್ತ ನೋಡಿದ. ಅದು ಹುವ್ವಿಟ್ಟಿತ್ತು.
ಸೂರ್ಯ ಮುಳುಗುತ್ತಿದ್ದ, ಅವನು ಹೊಮ್ಮಿಸುತ್ತಿದ್ದ ಹೊಂಬಣ್ಣ ಉದಯದ ಹೊಂಬಣ್ಣದಂತೆಯೇ ಇತ್ತು. ಗೌರಿಗೆ ಮನೆಗೆ ಹೋಗಲು ಹೇಳಿ, ಕೆರೆಯತ್ತ ಹೆಜ್ಜೆ ಹಾಕಿದ.
ಕೆರೆಯಲ್ಲಿ ಹೊನ್ನೀರು. ಮುಖ ತೊಳೆಯಬೇಕೆನ್ನಿಸಿತು. ಮೊಣಕಾಲ ಮಟ್ಟಕ್ಕಿಳಿದು ಮುಖ ತೊಳೆದುಕೊಂಡ. ಕಟ್ಟೆಯ ಮೇಲೆ ತಾನೇ ನೆಟ್ಟಿದ್ದ ಅತ್ತಿಮರ ಗೊಂಚಲು ಗೊಂಚಲು ಹಣ್ಣುಗಳನ್ನು ಮೈ ತುಂಬ ತುಂಬಿಕೊಂಡಿತ್ತು. ಎಷ್ಟೊಂದು ಹಣ್ಣು ಹೆತ್ತಿದ್ದೀಯೆ ತಾಯಿ ಎಂದ. ಅತ್ತಿಹಣ್ಣು ಪೂರ್ತಿಯಲ್ಲದಿದ್ದರೂ ಅಂಜೂರದಷ್ಟೇ ರುಚಿ ಅನ್ನುತ್ತಿದ್ದಳು ಸುನಂದ. ಒಂದು ಹಣ್ಣನ್ನಿ ಕಿತ್ತು ಬಾಯಿಗಿಟ್ಟುಕೊಂಡ.
'ದೇವರು ರುಜು ಮಾಡಿದನು'
ಕೆರೆಯಲ್ಲಿ ಕಳೆಗಿಡ ಗುಂಪು ಗುಂಪಾಗಿ ಬೆಳೆದಿತ್ತು. ಅವನ್ನು ಕೀಳಿಸಬೇಕು ಅಂದುಕೊಂಡ. ಆ ಕ್ಷಣದಲ್ಲೇ ಅದನ್ನು ಆಶ್ರಯಿಸಿದ ಹಕ್ಕಿಗಳು ಕಂಡವು. ಅವುಗಳಿಗಾಗಿ ಕೆಲವನ್ನು ಉಳಿಸಿ ಕೀಳಿಸಬೇಕು ಅಂದುಕೊಳ್ಳುತ್ತಿರುವಾಗ ಕಣ್ಣು ಆಕಾಶದತ್ತ ಹಾಯಿತು. ಕೊಕ್ಕರೆಗಳು ಸಾಲು ಹಿಡಿದು ಹಾರುತ್ತಿದ್ದವು. ಕುವೆಂಪು ಅವರ 'ದೇವರು ರುಜು ಮಾಡಿದನು' ಕವಿತೆ ಮನದಲ್ಲಿ ಸುಳಿಯಿತು. ಎಂಥ ದರ್ಶನ ನಿನ್ನದು ಮಹಾನುಭಾವ ಎಂದು ಕೈಮುಗಿದ.
ಉತ್ತುತ್ತಿ (ತಿತ್ತಿರಿ) ಹಕ್ಕಿ ಬಾನಿಗೇರಿ ಉತ್ತುತ್ತಿ ಎಂದು ಕೂಗುತ್ತ ಬಂದು ಸುತ್ತು ಹಾಕಿ ಕಣ್ಮರೆಯಾಯಿತು. ಪುಟ್ಟಪುಟ್ಟ ಮೀನುಗಳು ಗುಂಪಾಗಿ ಚಲಿಸುತ್ತಿದ್ದುದನ್ನು ನೋಡಿ ಜಲವಿಹಾರ ಹೊರಟಿವೆ ಎಂದು ಅವಕ್ಕೆ ಕೈಬೀಸಿದ.
ಹೂವುಗಳು ಸೌಂದರ್ಯವನ್ನು ತರುತ್ತವೆ
ಮತ್ತೆ ಕಳೆಗಿಡಗಳತ್ತ ಚಿತ್ತ ಹರಿಯಿತು. ಗಂಟೆಯಾಕಾರದ ಬಿಳಿ ಮಿಶ್ರಿತ ನೀಲಿ ಹೂಗಳನ್ನು ಅವು ಮುಡಿದಿದ್ದವು. ಹೂವುಗಳು ಕಳೆಗಿಡಕ್ಕೂ ಎಂಥ ಸೌಂದರ್ಯವನ್ನು ತರುತ್ತವೆ ಅಲ್ಲವೆ ಸುನಂದ ಎಂದ. ಆದರೆ ಹೂಂ ಎನ್ನಲು ಅವಳು ಬಳಿಯಲ್ಲಿರಲಿಲ್ಲ. ಕರುಳು ಕಿವುಚಿತು. ಕಣ್ಣಲ್ಲಿ ನೀರಾಡಿತು.
ಹೊರಡುವ ಮುಂಚೆ ನೀರಿಗಿಳಿಯಬೇಕು ಅಂದುಕೊಂಡ. ನೀರು ಹಾವೊಂದು ತಲೆಯನ್ನು ನೀರಿನ ಮಟ್ಟದಲ್ಲಿರಿಸಿ ಮೈಯನ್ನು ತೇಲಿಸಿ, ಮುಳುಗಿಸುತ್ತ ಒಯ್ಯಾರ ಮಾಡುತ್ತಿತ್ತು. ಕಪ್ಪೆಯೊಂದು ಅದನ್ನು ನೋಡಿ ಆನಂದಿಸುತ್ತಿತ್ತು.
ರಾಜಕುಮಾರಿಯ ಕಥೆ
ಗಿಳಿ ಜೋಡಿ ಏರಿಯ ಮೇಲಿನ ಆಲದ ಕೊಂಬೆಯಲ್ಲಿ ಕುಳಿತಿತ್ತು. ಒಂದು ಗಿಳಿ ಇನ್ನೊಂದಕ್ಕೆ ಏನೋ ಹೇಳುತ್ತಿತ್ತು. ಯಾವ ದೇಶದ ರಾಜಕುಮಾರಿಯ ಕಥೆ ಹೇಳುತ್ತಿರಬಹುದದು ಅಂದುಕೊಂಡ. ಅದರ ಭಾಷೆ ತಿಳಿದಿದ್ದರೆ ತಾನೂ ಕೇಳಿಸಿಕೊಳ್ಳಬಹುದಿತ್ತು ಅಂದುಕೊಂಡು ಮನೆಯತ್ತ ಹೊರಟ.
ರಂಗನ ಮಗಳು ತಂದ ಮುದ್ದೆ ಉಂಡು ಮಲಗಿದಾಗ ಸಿದ್ದಯ್ಯದಾಸ ಹಾಡುತ್ತಿದ್ದ ಅಚಲ ತತ್ವಪದವೊಂದರ ನುಡಿಯೊಂದು ನೆನಪಾಗಿ ಹಾಡಿದ,
ನೀನು ಬಯಲಲಿ ಇರುವೆಯೋ- ನಿನ್ನಲಿ ಬಯಲು
ತುಂಬಿ ಇದ್ದರು ತಿಳಿಯದಿರುವಿಯೊ
ನಿನಗೆ ಬಯಲು ಸೂಚನೆಯಾದರೆ ನಿಲ್ಲಲಾರೆ ನಿಮಿಷ ಕೂಡ
ನಿನಗಿತ್ತಲತ್ತ ಸ್ಥಾವರವೆ ಪರಿಪೂರ್ಣವಾದುದು
ಸ್ಥಾವರದಿಂದಲೇ ಬಯಲಿಗೆ ಹೋಗಬೇಕು
ಈ ಸಮಾಜ ಸ್ಥಾವರ. ಈ ಸ್ಥಾವರದಿಂದಲೇ ಬಯಲಿಗೆ ಹೋಗಬೇಕು. ಬಯಲಿಗೆ ಹೋಗುವ ಮೊದಲು ಸ್ಥಾವರದಲ್ಲಿದ್ದು, ಮಾಡುವುದನ್ನು ಮಾಡಬೇಕು ಅಂದುಕೊಂಡ.
ಮಲಗಬೇಕು ಅಂದುಕೊಂಡಾಗ, ಹಾಸಿಕೆ, ದಿಂಬು ಬೇಡವನಿಸಿತು. ನೆಲಕ್ಕೆ ತಲೆಯಿಟ್ಟು ಮಲಗಿದ. ಅರೆನಿದ್ದೆ, ಅರೆ ಎಚ್ಚರ. ತಲೆಯಡಿ ಮೆತ್ತನೆ ಸ್ಪರ್ಶ! ಅದು ಸುನಂದಳ ತೊಡೆ. ಸುನಂದಳ ತೊಡೆ. ನೀನಿನ್ನೂ ಮಲಗಿಲ್ಲವೆ ಎಂದು ಕೇಳಬೇಕೆಂದುಕೊಂಡರೂ ಕೇಳಲಾಗದಷ್ಟು ನಿದ್ದೆ.