ಶ್ರೀನಾಥ್ ಭಲ್ಲೆ ಅಂಕಣ: ಕೇಂದ್ರಬಿಂದು ಎಷ್ಟು ಇಷ್ಟಾರ್ಥವೋ ಕಾಪಾಡಿಕೊಳ್ಳೋದು ಅಷ್ಟೇ ಕಷ್ಟ

By ಶ್ರೀನಾಥ್ ಭಲ್ಲೆ
|

ಕೇಂದ್ರಬಿಂದು ಎಂದರೆ focal point. ಹೀಗೆಂದರೆ ಏನು? ಬಿಂದು ಎಂದ ಮಾತ್ರಕ್ಕೆ ಅದೊಂದು ಚುಕ್ಕಿಯೇ ಆಗಬೇಕಿಲ್ಲ. ಅದೊಂದು ಪುಟ್ಟ ವೃತ್ತವೂ ಆಗಬಹುದು. ಆ ವೃತ್ತವು ಒಂದು ಚಿತ್ರವೂ ಆಗಬಹುದು ಅಥವಾ ವೃತ್ತಾಕಾರದ ಕಣ್ಣಿನ ಗುಡ್ಡೆಯೂ ಆಗಬಹುದು. ಇದಾವುದೂ ಆಗದೇ ಇರಬಹುದು ಕೂಡಾ. ಕೇಂದ್ರಬಿಂದು ಎಂಬುದು ಕೇಂದ್ರೀಕರಿಸಬೇಕಾದ ಬಿಂದು ಅಥವಾ ಗುರಿ. ಒಂದಷ್ಟು ಸನ್ನಿವೇಶಗಳಲ್ಲಿ ನೋಡೋಣ ಬನ್ನಿ.

ಸೀತಾ ಸ್ವಯಂವರದ ಕೇಂದ್ರಬಿಂದು

ಸೀತಾ ಸ್ವಯಂವರಕ್ಕೆ ಹೋಗಿದ್ದೀರಿ ಅಲ್ಲವೇ ಅಂತ ಕೇಳಲಾರೆ ಬದಲಿಗೆ ಓದಿದ್ದೀರಾ ಅಲ್ಲವೇ? ಜನಕ ಮಹಾರಾಜ ಹೇಳಿದ್ದು ಬಿಲ್ಲನ್ನು ಎತ್ತಿ, ಹೆದೆಯೇರಿಸಿದವಗೆ ಸೀತೆಯನ್ನು ಕೊಟ್ಟು ವಿವಾಹ ನಡೆಸುತ್ತೇನೆ ಎಂದು. ಆ ಬಿಲ್ಲು ಸಾಮಾನ್ಯವೇ? ಇಲ್ಲ, ಶಿವನಿಂದ ಜನಕನಿಗೆ ನೀಡಲಾಗಿದ್ದ ಆ ಬಿಲ್ಲನ್ನು ಒಮ್ಮೆ ಆಟ ಆಡುವಾಗ ಬಾಲೆ ಸೀತಾ ಸರಿಸಿದಳಂತೆ. ಅದನ್ನು ಕಂಡ ಜನಕನಿಗೆ, ಈವರೆಗೂ ತನ್ನ ಅರಮನೆಯಲ್ಲಿ, ಈ ಬಿಲ್ಲನ್ನು ಅಲ್ಲಾಡಿಸಲೂ ಆಗದೇ ಹೋಗಿರುವಾಗ ಸೀತೆ ಅದನ್ನು ಸರಿಸಿದಳು ಎಂದರೆ ಈ ಬಿಲ್ಲನ್ನೇ ಏಕೆ ಸೀತಾ ಸ್ವಯಂವರದ ಕೇಂದ್ರಬಿಂದು ಮಾಡಬಾರದು ಎಂದು ಅನ್ನಿಸಿತಂತೆ.

ಶ್ರೀರಾಮಚಂದ್ರ ಅಲ್ಲಿಗೆ ಬಂದವನೇ ಬಿಲ್ಲನ್ನು ಎತ್ತಿದ

ಕೇಂದ್ರಬಿಂದುವಾದಾಗ ಎಲ್ಲರ ಕಣ್ಣೂ ಅದರತ್ತಲ್ಲೇ ಅಲ್ಲವೇ? ಒಬ್ಬೊಬ್ಬರೂ ಅದನ್ನು ಎತ್ತಲು ಕಷ್ಟ ಪಡುವಾಗ, ಸೋತ ಮೊಗ ಹೊತ್ತು ಹಿಂದಿರುಗುವಾಗ ಅಲ್ಲೊಂದು ಮನರಂಜನೆಯೇ ಇತ್ತು ಎನ್ನಬಹುದು. ಶ್ರೀರಾಮಚಂದ್ರ ಅಲ್ಲಿಗೆ ಬಂದವನೇ, ಬಿಲ್ಲನ್ನು ಎತ್ತಿದ್ದೇ ಅಲ್ಲದೆ, ಹೆದೆಯೇರಿಸುವಾಗ ಬಿಲ್ಲನ್ನೇ ಮುರಿದುಬಿಡೋದೇ ? ಈ ಸಂದರ್ಭವನ್ನು ನೋಡಿದಾಗ ಅನ್ನಿಸೋದು ಕೇಂದ್ರಬಿಂದು ಆಗೋದು ಚೆನ್ನ ಆದರೆ ಅಪಾಯವೂ ಇದೆ ಅಂತ.

ಇದೆಲ್ಲಾ ಆಟಕ್ಕಿಲ್ಲಪ್ಪಾ ! ಶ್ರೀರಾಮ ಯಾರು? ತ್ರಿಮೂರ್ತಿಗಳಲ್ಲೊಬ್ಬನಾದ ಮಹಾವಿಷ್ಣುವಿನ ಅವತಾರ. ಅವನು ಸೂಪರ್ ಸ್ಟ್ರಾಂಗ್ ಆಗಿರಲೇಬೇಕು ಹಂಗೆ ಹಿಂಗೆ ಎಂದರೆ, ಬನ್ನಿ ತ್ರೇತಾಯುಗದಿಂದ ದ್ವಾಪರಕ್ಕೆ ಬರೋಣ. ಇಲ್ಲಿ ಶ್ರೀಕೃಷ್ಣ ಕೂಡಾ ವಿಷ್ಣುವೇ ಅಲ್ಲವೇ ಎನ್ನದಿರಿ. ನಾವೀಗ ಅರ್ಜುನನ ಬಗ್ಗೆ ಮಾತನಾಡಲು ಬಂದಿರೋದು.

ಪಕ್ಷಿಯ ಕಣ್ಣಿನ ಗುಡ್ಡೆಯ ಮೇಲಿನ ಕಪ್ಪು ಭಾಗ

ಗುರು ದ್ರೋಣರು ಮರದ ಮೇಲಿರುವ ಒಂದು ಪಕ್ಷಿಯ ಆಟಿಕೆಯನ್ನು ಕೇಂದ್ರಬಿಂದುವಾಗಿ ಬಳಸಿಕೊಂಡು ತಮ್ಮ ವಿದ್ಯಾರ್ಥಿಗಳನ್ನು ಪರೀಕ್ಷಿಸುತ್ತಾರೆ. ಆ ಆಟಿಕೆಗೆ ಜೀವ ಇತ್ತು ಅಂತಲೇ ಅಂದುಕೊಳ್ಳಿ. ವಿದ್ಯಾರ್ಥಿಗಳ ಉತ್ತರಗಳನ್ನು ಕೇಳುತ್ತಾ ಕಿಚಿಕಿಚಿ ನಕ್ಕು ಎಂಜಾಯ್ ಮಾಡುತ್ತಿತ್ತು. ಅರ್ಜುನನ ಸರದಿ ಬಂದಾಗ, ಪಕ್ಷಿಯ ಕಣ್ಣಿನ ಗುಡ್ಡೆಯ ಮೇಲಿನ ಕಪ್ಪು ಭಾಗವೂ ಕಾಣುತ್ತಿದೆ ಎಂದು ನುಡಿದಾಗ, ಆಯ್ತು ನನ್ನ ಕಣ್ಣು ಗೋವಿಂದ ಅಂತ ಚೀರಬೇಕು ಎಂದು ಅನ್ನಿಸುತ್ತಿತ್ತೋ ಏನೋ. ಅಲ್ಲಿಯವರೆಗೆ ನಕ್ಕಿದ್ದೇ ಬಂತು, ನಂತರ ಕಣ್ಣೇ ಹೋಯಿತು. ಕೇಂದ್ರಬಿಂದುವಾಗಬೇಕೇ? ಬೇಡವೇ?

ದ್ರೌಪದಿ ಸ್ವಯಂವರದ ಸಮಯ

ಅರ್ಜುನನದ್ದೇ ಮತ್ತೊಂದು ಸನ್ನಿವೇಶ ತೆಗೆದುಕೊಂಡರೆ ಅದು, ದ್ರೌಪದಿ ಸ್ವಯಂವರದ ಸಮಯ. ದ್ರುಪದ ರಾಜನು ಅರ್ಜುನನಿಗೆಂದೇ ಸ್ವಯಂವರ ಏರ್ಪಡಿಸಿದಂತೆ ಇತ್ತು. ಅಲ್ಲಿದ್ದ ಮೀನಿನ ಕಣ್ಣು ಅವನ ಪಾಲಿನ ಕೇಂದ್ರಬಿಂದು. ಅತಿರಥ ಮಹಾರಥರು ಸೋತಾಗ ಮೀನು ನಕ್ಕಿದ್ದೆ ನಕ್ಕಿದ್ದು ಅಂದುಕೊಳ್ಳೋಣ. ಬ್ರಾಹ್ಮಣ ವೇಷಧಾರಿ ಅರ್ಜುನ, ಬಿಲ್ಲಿಗೆ ಬಾಣ ಹೂಡಿದಾಗಲೇ ಮೀನು ಒಂದೇ ಕಣ್ಣಲ್ಲಿ ಅಳತೊಡಗಿತ್ತು. ಬಿಲ್ಲಿನಿಂದ ಹೊರಟ ಬಾಣ, ಕ್ಷಣಮಾತ್ರದಲ್ಲೇ ಆ ಮೀನಿನ್ನು ಒಕ್ಕಣ್ಣನನ್ನಾಗಿಸಿತ್ತು. ಅಲ್ಲಿಯವರೆಗೆ ಹೀರೋ ಆಗಿದ್ದ ಮೀನು, ಜೀರೋ ಆಗಿತ್ತು. ಕೇಂದ್ರಬಿಂದುವಾಗಬೇಕೇ? ಬೇಡವೇ?

ಮೂಗಿಗೆ ಕ್ಲಿಪ್ ಹಾಕಿದರೆ ಎಲ್ಲಾ ರಹಸ್ಯಗಳೂ ಆಚೆಗೆ

ಇಂದಿನ ಯುಗದಲ್ಲಿ ಕೇಂದ್ರಬಿಂದು ಎಂದರೆ ಬಲಗೈ ಬಂಟರು ಒಂದು ಉದಾಹರಣೆ. ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಬಲಗೈ ಬಂಟ ಒಪ್ಪಿಗೆ ಕೊಟ್ಟರೆ ಮಾತ್ರ ಆ ಹಿರಿಯರನ್ನು ಭೇಟಿ ಮಾಡಲು ಸಾಧ್ಯ. ಆತನೇ ಕೇಂದ್ರಬಿಂದು. ಅವನು ಯಸ್ ಎಂದರೆ ಯಸ್, ಇಲ್ಲಾ ಎಂದರೆ ಇಲ್ಲಾ ಅಷ್ಟೇ. ಇಷ್ಟೆಲ್ಲಾ ಪ್ರಾಮುಖ್ಯತೆ ಇದ್ದು, ಆ ಹಿರಿಯರಿಗೆ ಏನಾದರೂ ಆಯ್ತು ಅಂದುಕೊಳ್ಳಿ, ಮೊದಲು ರೂಬ್ಬೋದು ಈ ಕೇಂದ್ರಬಿಂದುವನ್ನೇ. ಇವನ ಮೂಗಿಗೆ ಕ್ಲಿಪ್ ಹಾಕಿದರೆ ಎಲ್ಲಾ ರಹಸ್ಯಗಳೂ ಆಚೆಗೆ ಬರುತ್ತದೆ ಅಂತ ಬಲ್ಲವರಿಗೆ ಗೊತ್ತು. ಇಂಥಾ ಕೇಂದ್ರಬಿಂದುವಾಗಬೇಕೇ? ಬೇಡವೇ?

ಜನರ ಸ್ಮೃತಿಪಟಲದಿಂದ ದೂರವಾದಂತೆಯೇ ಸರಿ

ಈ ಕೇಂದ್ರಬಿಂದುತ್ವವೇ ಎಷ್ಟೋ ಸಿನಿ ನಟ-ನಟಿಯರ ಆಸ್ತಿ. ಜನ ಅವರ ಬಗ್ಗೆ ಮಾತನಾಡಿಕೊಳ್ಳುತ್ತಿರಲಿ, ಪೇಜ್ 3ಯಲ್ಲಿ ತಮ್ಮ ಬಗ್ಗೆ ವಿಷಯ ಬಿತ್ತರವಾಗುತ್ತಲೇ ಇರಲಿ, ಎಂಬೆಲ್ಲಾ ವಿಷಯಗಳಲ್ಲಿ ಅವರುಗಳು ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಹೆಸರು ಕೇಳಿಸದೇ ಹೋದರೆ, ಜನರ ಸ್ಮೃತಿಪಟಲದಿಂದ ದೂರವಾದಂತೆಯೇ ಸರಿ. ಹೀಗಾಗಿ ನಟ-ನಟಿಯರು ಕೇಂದ್ರಬಿಂದುವಾಗಲೇ ನಿತ್ಯ ಪರಿಶ್ರಮಪಡುತ್ತಾರೆ. ಹೀಗಿರುವಾಗ ಇವರ ಹೆಸರನ್ನು ಬಳಸಿಕೊಳ್ಳುವ ಮಂದಿಗೇನೂ ಕೊರತೆ ಅಲ್ಲವೇ? ಎಲ್ಲೋ ಎಡವಟ್ಟಾಯಿತು ಎಂದಾಗ, ಮಾಧ್ಯಮದ ಬಾಯಿಗೆ ಅವರು ಸಿಕ್ಕಿದರು ಅಂದುಕೊಂಡರೆ, ಅಲ್ಲಿಗೆ ಮುಗೀತು ಅವರ ಜೀವನ. ಈಗ ಹೇಳಿ, ಕೇಂದ್ರಬಿಂದುವಾಗಬೇಕೇ? ಬೇಡವೇ?

ಉತ್ತರಕುಮಾರ ಹೆಂಗಳ ಕಣ್ಣಲ್ಲಿ ಕೇಂದ್ರಬಿಂದುವೇ ಆಗಿದ್ದ

ಹೆಂಗೆಳೆಯರ ಮಧ್ಯೆ ಕೂತು ತನ್ನ ಪೌರುಷವನ್ನು ಕೊಚ್ಚಿಕೊಳ್ಳುತ್ತಿದ್ದ ಉತ್ತರಕುಮಾರ ಹೆಂಗಳ ಕಣ್ಣಲ್ಲಿ ಕೇಂದ್ರಬಿಂದುವೇ ಆಗಿದ್ದ. ಶತ್ರುಪಾಳ್ಯದ ವೀರಾಧಿವೀರರನ್ನು ಕಂಡು ಭಯಭೀತನಾಗಿ ಓಡುವಾಗ ವೀರರ ಕಣ್ಣಲ್ಲಿ ಕೇಂದ್ರಬಿಂದುವೇ ಆಗಿದ್ದ. ಬೇರೆ ಬೇರೆ ರೀತಿಯಲ್ಲಿ ಗಮನ ಸೆಳೆಯುತ್ತ ಕೇಂದ್ರಬಿಂದುವಾದವ ಒಂದು ಹಾಸ್ಯದ ವಸ್ತುವಾಗಿಯೇ ಉಳಿಯುತ್ತಾನೆ. ಆದರೆ ಮಹಾಭಾರತದ ಯುದ್ಧ ಸಮಯದಲ್ಲಿನ ಕೇಂದ್ರಬಿಂದು ಯಾರು ಎಂಬುದನ್ನು ಆಲೋಚಿಸಿದಾಗ ಒಬ್ಬನ ಹೆಸರು ಮೇಲೆದ್ದು ಬರುತ್ತದೆ.

ಚಕ್ರವ್ಯೂಹದಲ್ಲಿ ಇರುವವನೇ ಅಭಿಮನ್ಯು

ಗೋಡೆಗೆ ನೇತು ಹಾಕುವ Dartboard ಬಗ್ಗೆ ನಿಮಗೆ ಗೊತ್ತಿರಬಹುದು. ನೇತುಹಾಕುವುದು ಬೋರ್ಡ್ ಆದರೆ, ಗುರಿ ಇಟ್ಟು ಹೊಡೆಯುವ ಅಸ್ತ್ರವೇ Dart. ಈ ಅಸ್ತ್ರವನ್ನು ಗುರಿಯಿಟ್ಟು ಆ ಬೋರ್ಡ್'ನ ಮಧ್ಯಭಾಗಕ್ಕೆ ಹೊಡೆಯಬೇಕು. ಈ ಬೋರ್ಡ್ ಒಂದು ಚಕ್ರವ್ಯೂಹದಂತೆ. ಮಧ್ಯೆ ಇರುವವನೇ ಅಭಿಮನ್ಯು. ಎಲ್ಲರ ಗುರಿಯೂ ಇವನತ್ತಲೇ. ಅವನೇ ಕೇಂದ್ರಬಿಂದು. ಅವನನ್ನು ಕೊಲ್ಲಬೇಕು ಎಂಬುದೇ ಎಲ್ಲರ ಧ್ಯೇಯ. ಅಭಿಮನ್ಯುವಿನ ಮೇಲೆ ಯಾರಿಗೂ ದ್ವೇಷ ಇರಲಿಕ್ಕಿಲ್ಲ, ಆದರೆ ಆ ಅಭಿಮನ್ಯುವಿನಲ್ಲಿ ಅವರು ಕಂಡಿದ್ದು ಅರ್ಜುನನನ್ನು. ಈ ಕೇಂದ್ರಬಿಂದುವನ್ನು ಕೊಂದರೆ ಅರ್ಜುನ ಹತಾಶನಾಗಿ ಅರ್ಧ ಸಾಯುತ್ತಾನೆ ಎಂಬುದು ಅವರ ನಂಬಿಕೆ. ಯುದ್ಧವನ್ನು ಗೆಲ್ಲಬೇಕಾದರೆ ಹಂತ ಹಂತವಾಗಿಯೇ ಗೆಲ್ಲುತ್ತಾ ಬರಬೇಕು ಅಲ್ಲವೇ? ಐಪಿಎಲ್ ಕಪ್ ಗೆಲ್ಲಬೇಕು ಎಂದರೆ ಫೈನಲ್ಸ್ ಗೆದ್ದರೆ ಸಾಕು ಎನ್ನಲಾದೀತೇ?

ಅಭಿಮನ್ಯುವಿನಂಥಾ ಕೇಂದ್ರಬಿಂದುವಾಗಬೇಕೇ? ಬೇಡವೇ? ಅಂತ ನಾನು ಕೇಳಲಿಲ್ಲ. ಕಾರಣವಿಷ್ಟೇ, ನಾವೆಲ್ಲರೂ ಒಂದಲ್ಲಾ ಒಂದು ರೀತಿ ಅವನಂತೆಯೇ ಕೇಂದ್ರಬಿಂದುಗಳು.

ಅಧಃಪತನವಾದಾಗ ಆಳಿಗೊಂದು ಕಲ್ಲು

ಎಲ್ಲರೂ ನಮ್ಮನ್ನೇ ನೋಡುತ್ತಿದ್ದಾರೆ, ಜನ ಏನಂದುಕೊಂಡಾರು, ಸಮಾಜ ಏನೆಂದುಕೊಳ್ಳಬಹುದು ಎಂದೆಲ್ಲಾ ಚಿಂತಿಸುವ ನಾವು ಕೇಂದ್ರಬಿಂದುಗಳು. ಒಂದು ಹಂತದ ಓದು ಮುಗಿದ ಮೇಲೆ, ಮತ್ತಷ್ಟು ಪರೀಕ್ಷೆಗಳನ್ನು ಬರೆದು ಸರಕಾರಿ ಕೆಲಸ ಅದರಲ್ಲೂ ಕೇಂದ್ರ ಸರಕಾರದ ಕೆಲಸ ಸಿಕ್ಕಿತು ಎಂದಾಗ ಎಲ್ಲರ ಕಣ್ಣಿಗೆ ಗುರಿಯಾಗುವ ಕೇಂದ್ರಬಿಂದುಗಳು ನಾವು. "ಯಾರಿಗೆ ಎಷ್ಟು ತಿನ್ನಿಸಿದ್ದಾರೋ ಏನೋ?' ಎಂಬ dart ನಾವು ಎಂಬ board ಗೆ ದಿನನಿತ್ಯದಲ್ಲಿ ಬಡಿಯುತ್ತಲೇ ಇರುತ್ತದೆ. ಅದೃಷ್ಟವಶಾತ್ ಒಂದು ಹೆಣ್ಣು ಸಿರಿವಂತರ ಮನೆ ಸೇರಿ ಸುಖವಾಗಿದ್ದಾಳೆ ಎಂದರೆ ಆಕೆ ಕೇಂದ್ರಬಿಂದು. ಉತ್ತುಂಗದಲ್ಲಿರುವವರು ತಮ್ಮದೇ ತಪ್ಪಿಗೆ ಅಥವಾ ಮತ್ತೊಬ್ಬರ ಹುನ್ನಾರದಿಂದ ಅಧಃಪತನವಾದಾಗ ಆಳಿಗೊಂದು ಕಲ್ಲು ಎಂಬ ಕೇಂದ್ರಬಿಂದುವಾಗುತ್ತಾರೆ. ಒಟ್ಟಾರೆ ಹೇಳುವುದಾದರೆ ಒಬ್ಬೊಬ್ಬರೂ ಮಿಕ್ಕೆಲ್ಲರ ಕಣ್ಣಿಗೆ ಕೇಂದ್ರಬಿಂದುಗಳೇ.

ಕೇಂದ್ರಬಿಂದುವಾಗೋದು ಒಂದು ಪದವಿ ಎಂದುಕೊಂಡರೆ, ಅದನ್ನು ಪಡೆದುಕೊಳ್ಳಲು ಸಾಧನೆ ಬೇಕು. ಪದವಿ ಎಂಬ ಪುಕ್ಕ ತಲೆಗೇರಿತು ಅಂತ ಅಹಂಭಾವವನ್ನು ತಲೆಗೇರಿಸಿಕೊಳ್ಳದಂತೆ ಜಾಗರೂಕರಾಗಿರೋಣ. ನೀವು ಕೇಂದ್ರಬಿಂದುವಾದಾಗಿನ ಅನುಭವ ಹೇಳುವಿರಲ್ಲಾ?

ಇನ್ನಷ್ಟು columnಸುದ್ದಿಗಳು