ಸ.ರಘುನಾಥ್ ಅಂಕಣ: ಮರಳಿ ನಾಟಕಕ್ಕೆ

By ಸ ರಘುನಾಥ್
|

ಸಿದ್ದಯ್ಯದಾಸರು ನರಸಿಂಗರಾಯನಿಗೆ ಬರಬೇಡ ಎಂದಿದ್ದು, ತಮಗೂ ಎಂದು ತಿಳಿದ ಜನ ಅವರನ್ನು ಹಿಂಬಾಲಿಸಲಿಲ್ಲ. ಅವರು ಬಂದ ದಾರಿಯಲ್ಲೇ ಹೋಗುವುದನ್ನು ಕಂಡಿದ್ದವರು. ಹುಣಿಸೆತೋಪಿನ ದಾರಿ ಹಿಡಿದದ್ದು ಕಂಡು ಚಕಿತರಾದರು. ಏಕೆಂದು ತಿಳಿಯದ್ದರಿಂದ ತಮಗೆ ತೋಚಿದಂತೆ ಮಾತಾಡಿಕೊಂಡರು.

ಒಂದು ತಿಂಗಳ ಕಾಲ ಅಭ್ಯಾಸದಲ್ಲಿ ನಿರತಳಾದಳು

ಕನಕದಾಸರೆ ಎದುರು ಕುಳಿತು ಹೇಳಿ ಬರೆಸಿದರೆಂದು ನರಸಿಂಗರಾಯನಿಗೆ ಅನ್ನಿಸಿತು. 'ದಾಸನ ಮಾಡಿಕೊ ಎನ್ನ... ಎಂದು ಹಾಡುತ್ತ ಪುಸ್ತಕವನ್ನು ಮಡದಿಯ ಕೈಗೆ ಕೊಟ್ಟು ಅವಳಿಗೆ ನಮಸ್ಕರಿಸಿದ. ಅವಳು ವಂದಿಸಿ ತೆಗೆದುಕೊಂಡು ಕಣ್ಣಿಗೊತ್ತಿಕೊಂಡಳು.

ಸುನಂದ ಒಂದು ತಿಂಗಳ ಕಾಲ ಅಭ್ಯಾಸದಲ್ಲಿ ನಿರತಳಾದಳು. ತಾನು ಅಭ್ಯಾಸ ಮಾಡುತ್ತಿಲ್ಲ. ಗರ್ಭದಲ್ಲಿ ಬೆಳೆಯುತ್ತಿರುವ ಕೂಸಿಗೆ ಹೇಳುತ್ತಿದ್ದೇನೆ. ಅದು ಕೇಳುತ್ತಿದೆ ಎಂಬ ಭಾವದಲ್ಲಿ ನುಡಿಯುತ್ತಿದ್ದಳು. ಆ ಅವಧಿಯಲ್ಲಿ ನರಸಿಂಗರಾಯ ಅನ್ನಮಾಚಾರ್ಯರ ಕಥೆಯನ್ನು ಪೂರೈಸಿದ.

ಸಾವಿರ ಕೀರ್ತನೆಗಳನ್ನು ರಚಿಸಿದ ಮಹಾನುಭಾವ

ತನ್ನ ಆರಾಧ್ಯದೈವ ವೆಂಕಟೇಶ್ವರನ ಕುರಿತು ಮೂವತ್ತೆರಡು ಸಾವಿರ ಕೀರ್ತನೆಗಳನ್ನು ರಚಿಸಿದ ಆ ಮಹಾನುಭಾವ ಹಾಡಿದ 'ಒಂದು ಸಂಕೀರ್ತನೆಯೆ ಸಾಕು ನಿನ್ನ ಬಳಿಗೆ, ಉಳಿದವು ಭಂಡಾರದಲಿ ಭದ್ರವಿರಲಿ' ಎಂಬ ಕೀರ್ತನೆಯನ್ನು ಅನುವಾದಿಸಿದಾಗ ಎಂತಹ ಭಕ್ತಿ, ಶರಣಾಗತಿ ಅನ್ನಿಸಿ ಈ ಅರಿವನ್ನು ನಮಗೂ ಕೊಡು ಎಂದು ಬೇಡಿದ. ಕಥೆಗೆ 'ಅನ್ನಮಯ್ಯ ನಮನ' ಎಂದು ಹೆಸರಿಟ್ಟು ಸುನಂದಳಿಗೆ ಕೊಡುತ್ತ, 'ಎನ್ನಟಿಕಿ ವಿಜ್ಞಾನಮು ನಾಕು... ಶ್ರೀವೆಂಕಟನಾಥಾ' (ಎಂದಿಗೆ ವಿಜ್ಞಾನವು ನನಗೆ...ಶ್ರೀವೆಂಕಟನಾಥಾ) ಎಂದು ಹಾಡಿದ.

ಸುನಂದ ಅದರ ಅಭ್ಯಾಸದಲ್ಲಿರುವಾಗಲೇ ಭದ್ರಾಚಲ ರಾಮದಾಸರ ಕುರಿತ ಕಥೆಯನ್ನು ಬರೆದು ಮುಗಿಸಿದ. ಪ್ರಾರಂಭಕ್ಕೆ ಕನಕದಾಸರ 'ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ' ಪದವನ್ನು ತೆಗೆದುಕೊಂಡಿದ್ದ. ಏಕೆಂದು ಸುನಂದ ಕೇಳಿದಾಗ, ಒಟ್ಟಿಗೆ ಗಣಪತಿ, ಶಾರದೆ, ಪಾರ್ವತಿಯರನ್ನು ನುತಿಸಿದಂತಾಗುವುದು ಎಂದ.

ಸುನಂದ ಬಹಳವೇ ದಣಿದಿದ್ದಳು

ಕನಕದಾಸರ ಕಥೆ ಊರಿನ ಗೋಪಾಲಸ್ವಾಮಿ ಗುಡಿಯ ಮುಂದೆ ಆದರೆ, ಅನ್ನಮಾಚಾರ್ಯರ ಕಥೆಯನ್ನು ಕಡತೂರಿನಲ್ಲಿ ಸಿದ್ದಪ್ಪ ಏರ್ಪಡಿಸಿದ. ಗೌನಿಪಲ್ಲಿಯ ರಾಮದೇವರ ಗುಡಿಯ ಮುಂದೆ ಭದ್ರಾಚಲ ರಾಮದಾಸರ ಕಥೆಯನ್ನು ಆ ಊರಿನವರ ಆಹ್ವಾನ ಮನ್ನಿಸಿ ನಡೆಸಿಕೊಟ್ಟರು. ಈ ಕೀರ್ತಿ ಊರಿನ ಹೆಸರಿನೊಂದಿಗೆ ಮನೆಮಾತಾಯಿತು. ಸುನಂದ ಬಹಳವೇ ದಣಿದಿದ್ದಳು. ಪರೀಕ್ಷಿಸಿದ ಡಾ. ಚಂದ್ರಕಲಾ ಒಂದು ತಿಂಗಳ ಕಡ್ಡಾಯ ವಿಶ್ರಾಂತಿ ವಿಧಿಸಿದರು.

ಈ ಅವಧಿಯಲ್ಲಿ ನರಸಿಂಗರಾಯನ ಮನಸ್ಸು ನಾಟಕದತ್ತ ಹೊರಳಿತು. ಹೊಸ ನಾಟಕ ಬರೆಯುವ ಬಗ್ಗೆ ಆಲೋಚಿಸುತ್ತಿರುವಾಗ ಮಾಸ್ತಿಯವರ 'ಟಾಲ್‍ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳು' ಕಥೆ ನೆನಪಾಯಿತು. ಅದನ್ನು ನಾಟಕಕ್ಕೆ ಅಳವಡಿಸಲು ತನ್ನಿಂದ ಸಾಧ್ಯವೆ ಎಂದು ಚಿಂತಿಸಿದ. ಮಹಾನುಭಾವ ಶಕ್ತಿಕೊಡು ಎಂದು ಪ್ರಾರ್ಥಿಸಿ ಲೇಖನಿ ಹಿಡಿದ.

ಮನಸ್ಸಿನ ಭಾವನೆಗಳಿಗೆ ನಾಟಕದಲ್ಲಿ ನ್ಯಾಯ ಸಿಕ್ಕಿಲ್ಲ

ಟಾಲ್‍ಸ್ಟಾಯ್ ಅವರ ಆಸ್ತಿ ಹಕ್ಕು ನಿರಾಕರಣೆ, ಅವರು ತುಡಿತ, ಮಿಡಿತ, ಅನುಭವಿಸಿದ ಒಳಮನದ ಹಿಂಸೆ, ಕಂಡ ವಿಫಲತೆ, ಅದರ ನೋವು ನಾಟಕದಲ್ಲಿ ಧ್ವನಿಸುವಂತೆ ಎಚ್ಚರ ವಹಿಸಿದ. ನಾಟಕ ಓದಿದ ಸುನಂದ, ಅವರ ಪತ್ನಿ ಸೋಫಿಯಾಳ ಮನಸ್ಸಿನ ಭಾವನೆಗಳಿಗೆ ನಾಟಕದಲ್ಲಿ ನ್ಯಾಯ ಸಿಕ್ಕಿಲ್ಲ. ಗೃಹಿಣಿಯಾಗಿ, ಕುಟುಂಬದ ನಿರ್ವಹಣೆಯ ಹೊಣೆಯಲ್ಲಿದ್ದ ಅವಳ ಚಿಂತೆಯನ್ನು ಆ ಪಾತ್ರದ ಮೂಲಕ ನೋಡಬೇಕಿತ್ತು.

ಆಕ್ಷೇಪಿಸುವುದೇ ಅವಳ ಗುಣವೆಂಬಂತೆ ಚಿತ್ರಿಸಿರುವೆ. ಮಾಸ್ತಿ ಅವಳನ್ನು ಸೋಫಿಯಾ ದೇವಿ ಎಂದು ಸಂಬೋಧಿಸಿದ್ದಾರೆ. ನಾಟಕದಲ್ಲಿ ಸೋಫಿಯಾ ಎಂದೇ ಬರೆದಿರುವೆ ಎಂದು ವಿಮರ್ಶಿಸಿದಳು. ಬರೆದಾಗಿದೆ ಎಂದು ಹಾರಿಕೆಯ ಮಾತಾಡಿದ. ರಂಗಕ್ಕೆ ಬಂದಿಲ್ಲವಲ್ಲ. ಮತ್ತೆ ಬರೆಯಬಹುದೆಂದು ವಾದಿಸಿದಳು. ನರಸಿಂಗರಾಯ ಒಪ್ಪಿ ಬರೆದ. ನಾಟಕ ಮಾಸ್ತಿ ಗ್ರಾಮದಲ್ಲೇ ಪ್ರದರ್ಶನಗೊಂಡಿತು. ಆದರೆ ಜನ ಮೆಚ್ಚುಗೆ ಗಳಿಸುವಲ್ಲಿ. ಗಂಡ ಹೆಂಡಿರು ಮನನೊಂದರು.

ಇನ್ನಷ್ಟು columnಸುದ್ದಿಗಳು