ಅನನ್ಯಳಿಗೆ ಮೂರು ತಿಂಗಳು ತುಂಬುವ ವೇಳೆಗೆ, ಅತ್ತೆ, ಅಮ್ಮ -ಅಪ್ಪ ಎಲ್ಲರಿಗೂ ಭಾರತದ ಗೀಳು ಕಾಡತೊಡಗಿತು. ಅನನ್ಯ ಮತ್ತು ರಮ್ಯಳನ್ನ ಕೂಡ ನಮ್ಮೊಂದಿಗೆ ಕಳುಹಿಸಿ ಬಿಡು ಒಂದೈದು ತಿಂಗಳು ಮಗು ದೊಡ್ಡದಾದ ಮೇಲೆ ವಾಪಸ್ಸು ಬರುತ್ತಾರೆ ಎನ್ನುವುದು ಅಮ್ಮನ ಮಾತಾಗಿತ್ತು. ಸರಿ ಎಂದು ತಲೆದೂಗಲು ಎರಡು ಕಾರಣಗಳಿದ್ದವು . ಹಿರಿಯರ ಮಾತಿಗೆ ಇಲ್ಲವೆನ್ನುವುದು ಹೇಗೆ ? ಎನ್ನುವುದು ಒಂದು ಕಾರಣವಾಗಿದ್ದರೆ , ಪುಟಾಣಿ ಅನ್ನಿಗೆ ಹಿರಿಯರ ಸಹಾಯವಿಲ್ಲದೆ ಸ್ನಾನ ಮಾಡಿಸುವುದು ಹೇಗೆ ? ಎನ್ನುವುದು ಇನ್ನೊಂದು. ಮಕ್ಕಳಿಗೆ ಸ್ನಾನ ಹೇಗೂ ಮಾಡಿಸಬಹದು ಆದರೆ ತಲೆಗೆ ನೀರು ಹಾಕಿ ಸ್ನಾನ ಮಾಡಿಸುವುದು ಬಹಳ ಕಷ್ಟದ ಕೆಲಸ.
ನನಗೆ ಅನ್ನಿಯನ್ನ , ರಮ್ಯಳನ್ನ ಬಿಟ್ಟಿರುವುದು ಬಹಳ ಕಠಿಣ ವಿಷಯ. ಆದರೆ ಬೇರೆ ದಾರಿಯಿಲ್ಲ. ರಮ್ಯ ' ಸದ್ಯಕ್ಕೆ ಹೋಗುತ್ತೇವೆ , ಐ ಪ್ರಾಮಿಸ್ ಐದು ತಿಂಗಳು ಇರುವುದಿಲ್ಲ' ಎಂದಳು. ಎಲ್ಲರಿಗೂ ಟಿಕೆಟ್ ಬುಕ್ ಮಾಡಿ ಬೆಂಗಳೂರಿಗೆ ಕಳಿಸಿದ ಮೇಲೆ ವಿಶಾಲವಾದ ಮನೆ ಬಿಕೋ ಎನ್ನುತ್ತಿತ್ತು . ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಹೋಗಲು ಮೂಡ್ ಕೂಡ ಇರುತ್ತಿರಲಿಲ್ಲ. ಅದು ನನ್ನ ಬದುಕಿನ ಅತ್ಯಂತ ಕಷ್ಟದ ದಿನಗಳು. ಗಳಿಗೆ ಗಳಿಗೆಗೂ ಅನ್ನಿ ಕಾಡುತ್ತಿದ್ದಳು. ಅವಳ ಸ್ಪರ್ಶಕ್ಕೆ ಮನಸ್ಸು ಸದಾ ಹಂಬಲಿಸುತ್ತಿತ್ತು.
ಬದುಕೆಂದರೆ ಇಷ್ಟೇ? ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯುವುದು ದೈವ!
ದೇಶ ಸೇವೆಗಾಗಿ ತಮ್ಮ ಹೆತ್ತವರ , ತನ್ನ ಹೆಂಡತಿ ಮತ್ತು ಮಕ್ಕಳ ಬಿಟ್ಟು ಹೋಗುವ ಜನರನ್ನ ನೆನಪಿಸಿಕೊಂಡು ಒಂದಷ್ಟು ಸಮಾಧಾನ ಮಾಡಿಕೊಳ್ಳುತ್ತಿದೆ. ಅವರುಗಳ ತ್ಯಾಗದ ಮುಂದೆ ನನ್ನದೇನು ಮಹಾ ? ಎಂದು ಕೊಂಡು ಮನಸ್ಸಿಗೆ ಮಾಡಿಕೊಳ್ಳುತ್ತಿದ್ದ ಸಮಾಧಾನ ಎರಡು ನಿಮಿಷದಲ್ಲಿ ಠುಸ್ ಆಗಿಬಿಡುತ್ತಿತ್ತು. ತಿಂಗಳು ಕಳೆಯುವುದು ಬಹಳ ಕಷ್ಟವಾಯ್ತು. ಕೇವಲ ಮೂರು ದಿನದ ಮಟ್ಟಿಗೆ ಬೆಂಗಳೂರಿನ ಕಡೆಗೆ ದೌಡಾಯಿಸಿದ್ದೆ.
ರಮ್ಯಳನ್ನ ಒಪ್ಪಿಸಿ , ಇನ್ನೊಂದು ತಿಂಗಳಲ್ಲಿ ಬಂದು ಬಿಡು ಎಂದು ಬಂದಿದ್ದೆ. ಬೆಳೆಯುವ ಮಗುವನ್ನ ಹೀಗೆ ದೇಶಾಂತರ ಪದೇಪದೇ ಸುತ್ತಿಸುವುದು ಅಮ್ಮನಿಗೆ ಸುತರಾಂ ಇಷ್ಟವಿರಲಿಲ್ಲ. ಆಕೆಯನ್ನ ಕೂಡ ಓಲೈಸಿ ಬಾರ್ಸಿಲೋನಾ ಕಡೆಗೆ ಮುಖ ಮಾಡಿದ್ದೆ. ಹೋಗುವ ಮುನ್ನ ರಮ್ಯ ' ಅನ್ನಿಯನ್ನ ನಮ್ಮಿಬ್ಬರಿಂದ ಬೆಳೆಸಲು ಖಂಡಿತ ಸಾಧ್ಯವಿಲ್ಲ , ಮೆಯ್ಡ್ ಹುಡಕು ' ಎನ್ನುವ ಆದೇಶವನ್ನ ಬೇರೆ ನೀಡಿದ್ದಳು.
ಬಾರ್ಸಿಲೋನಾದಲ್ಲಿ ಇರುವ ಭಾರತೀಯರ ಸಂಖ್ಯೆ ಬಹಳ ಕಡಿಮೆ. ಇದ್ದವರು ಸಿಂಧಿಗಳು ಮತ್ತು ಪಂಜಾಬಿಗಳು. ಅವರು ತಮ್ಮ ತಮ್ಮ ಕಮ್ಯುನಿಟಿ ಕಟ್ಟಿಕೊಂಡು ಅದರಲ್ಲಿ ಸುಖವಾಗಿ ಬಾಳುತ್ತಿದ್ದರು. ದಕ್ಷಿಣ ಭಾರತೀಯರ ಸಂಖ್ಯೆಯಂತೂ ಬೆರಳೆಣಿಕೆ. ಬಾದಲೂನದಲ್ಲಿ ಪಾಕಿಸ್ತಾನಿ ಪಂಜಾಬಿಗಳ ಸಂಖ್ಯೆ ಹೇರಳವಾಗಿತ್ತು. ಪರ್ವೇಜ್ ಮೊಹಮದ್ ಎನ್ನುವ ಪಂಜಾಬಿಗೆ ಕೆಲಸ ಕೊಡಿಸುವಲ್ಲಿ ಸಹಾಯ ಮಾಡಿದ್ದೆ. ಅವನೊಬ್ಬ ಒಳ್ಳೆಯ ಮನುಷ್ಯ. ನನಗಾಗಿ ಎಂದು ತಿಂಗಳಲ್ಲಿ ಒಂದೆರೆಡು ಬಾರಿ ಸುಭ್ಝಿ ಬಿರಿಯಾನಿ ಮಾಡಿ ತರುತ್ತಿದ್ದ.
ವಿಶೇಷವೆಂದರೆ ಅಂದು ಅವರ ಮನೆಯಲ್ಲಿ ಮಾಂಸ ಮಾಡುತ್ತಿರಲಿಲ್ಲ. ನನಗೆ ಅದೆಲ್ಲ ಏನೂ ತೊಂದರೆಯಿಲ್ಲ ನಿಮ್ಮ ಪಾಡಿಗೆ ನೀವು ಬೇಕಾದ್ದು ತಿನ್ನಿ ನನಗೆ ಸ್ವಲ್ಪ ವೆಜ್ ಬಿರಿಯಾನಿ ಕೊಡಿ ಸಾಕು ಎನ್ನುತ್ತಿದ್ದೆ. ಆತ ಮಾತ್ರ ರಂಗ ಭಾಯ್ ಐಸಾ ತೋಡಿ ಹೊಸಕ್ತ ಹೈ ಎನ್ನುತ್ತಿದ್ದ. ಬಾಂಗ್ಲಾ , ಪಾಕಿಸ್ತಾನ , ಶ್ರೀಲಂಕಾ ದೇಶದ ಯಾರಾದರೂ 30 ವಯಸ್ಸು ಮೀರಿದ ಹುಡುಗಿ ಕೆಲಸಕ್ಕೆ ಸಿಕ್ಕರೆ ನೋಡು , ಮುಖ್ಯವಾಗಿ ಅನ್ನಿಯನ್ನ ಚನ್ನಾಗಿ ನೋಡಿಕೊಳ್ಳಬೇಕು ಎಂದು ನನ್ನ ಬೇಡಿಕೆಯನ್ನ ಪರ್ವೇಜ್ ಗೆ ಹೇಳಿದೆ. ಟಿ ಕೆ ಎಂದವನು , ಸಬೀನಾ ಎನ್ನುವ ಪಾಕಿಸ್ತಾನಿ ಹುಡುಗಿಯನ್ನ ಪರಿಚಯಿಸಿದ.
ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!!
ಮುಂದಿನ ಒಂದು ತಿಂಗಳಲ್ಲಿ ರಮ್ಯ ಮತ್ತು ಅನನ್ಯ ಬಾರ್ಸಿಲೋನಾ ಗೆ ಮರಳಿ ಬಂದರು. ಸಬೀನಾ ಎರಡು ಮಕ್ಕಳ ತಾಯಿಯಾಗಿದ್ದಳು , ಗಂಡನ ಕಿರುಕುಳ ತಾಳಲಾಗದೆ ಅವನಿಗೆ ತಲಾಕ್ ನೀಡಿದ್ದಳು. ಪಾಕಿಸ್ತಾನದಲ್ಲಿ ಟ್ರಾವೆಲ್ ಏಜೆನ್ಸಿ ಯಲ್ಲಿ ಕೆಲಸ ಮಾಡುತ್ತಿದ್ದಳಂತೆ , ಹೇಗೂ ವಿಸಿಟರ್ ವೀಸಾ ದಲ್ಲಿ ಬಾರ್ಸಿಲೋನಾ ಗೆ ಬಂದವಳು ವಾಪಸ್ಸು ಹೋಗಿರಲಿಲ್ಲ. ಆ ನಂತರ ಅವರಿವರ ಕಾಡಿಬೇಡಿ ವರ್ಕ್ ಪರ್ಮಿಟ್ ಗಳಿಸಿಕೊಂಡಿದ್ದ ಸಾಹಸಿ ಮಹಿಳೆ. ಸ್ಪ್ಯಾನಿಷ್ ಕೂಡ ಬಹಳಷ್ಟು ಚನ್ನಾಗಿ ಮಾತನಾಡುತ್ತಿದ್ದಳು.
ರಮ್ಯಳಿಗೆ ಸಬೀನಾ ಇಷ್ಟವಾದಳು. ಪ್ರತಿ ದಿನ ನಾಲ್ಕು ತಾಸು ಬಂದು ಮನೆ ಕೆಲಸ ಮತ್ತು ಅನ್ನಿಯ ಸ್ನಾನ , ಇತ್ಯಾದಿಗಳಲ್ಲಿ ಸಹಾಯ ಮಾಡಬೇಕು , ಶನಿವಾರ ಮತ್ತು ಭಾನುವಾರ ರಜಾ ಎನ್ನುವ ಮಾತಾಯ್ತು . 500 ಯುರೋ ಮಾಸಿಕ ವೇತನಕ್ಕೆ ಆಕೆ ಒಪ್ಪಿಕೊಂಡಳು. ತಿಂಗಳು ಕಳೆಯಿತು. ಮಗುವನ್ನ ಆಕೆ ಬಹಳ ಚನ್ನಾಗಿ ಆರೈಕೆ ಮಾಡುತ್ತಿದ್ದಳು. ಎಷ್ಟಾದರೂ ಆಕೆ ಕೂಡ ತಾಯಿಯಲ್ಲವೇ ? ಮಗುವಿಗೆ ಅನ್ನ ತಿನ್ನಿಸುವಾಗ ' ಬಿಸ್ಮಿಲ್ಲಾ ' ಎನ್ನದೆ ಆಕೆ ತಿನ್ನಿಸುತ್ತಿರಲಿಲ್ಲ. ನಿತ್ಯ ಬಂದವಳೇ ಮಗುವನ್ನ ಮೃದುವಾಗಿ ಎತ್ತಿಕೊಂಡು ' ಅಸ್ಸಲಾಮ್ ಮಾಲಿಕ್ ಹೂ ' ಎನ್ನದ ದಿನವಿರುತ್ತಿರಲಿಲ್ಲ.
ಹೋಗುವಾಗ ಖುದಾ ಹಫೀಸ್ ಎಂತಲೂ ಅಲ್ಲಾ ಹಫೀಜ್ ಎಂತಲೂ ಹೇಳಿ ಹೋಗುತ್ತಿದ್ದಳು. ನಮಗೆ ಆಕೆಯ ಕೆಲಸ ಕಾರ್ಯದಲ್ಲಿ ಯಾವುದೇ ತೊಂದರೆಯಿರಲಿಲ್ಲ . ಆದರೆ ದಿನದಿಂದ ದಿನಕ್ಕೆ ಆಕೆ ಮಗುವಿನ ಕಿವಿಯಲ್ಲಿ ನಾವು ಮಂತ್ರ ಹೇಳುವಂತೆ ಏನೂ ಹೇಳುತ್ತಿದ್ದಳು. ನಮಗೂ ಅದೇನೂ ಅರ್ಥವಾಗುತ್ತಿರಲಿಲ್ಲ. ಆದರೆ ಒಂದು ರೀತಿಯ ಭಯ ಶುರುವಾಯ್ತು. ಆಕೆಗೆ ' ನೋಡು ನಮಗೆ ಯಾವುದೇ ಧರ್ಮದಲ್ಲಿ ಭೇದವಿಲ್ಲ ಆದರೆ ನಾವು ಯಾವುದನ್ನೂ ಹೆಚ್ಚಾಗಿ ನಮ್ಮ ಮಗುವಿಗೆ ಹೇರಲು ಇಷ್ಟ ಪಡುವುದಿಲ್ಲ ಹೀಗಾಗಿ ನೀನು ನಮ್ಮ ಮಗುವಿನ ಜೊತೆ ಸ್ಪ್ಯಾನಿಷ್ ನಲ್ಲಿ ಮಾತನಾಡು ' ಎಂದೆವು.
ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!!
ಇದಾದ ಒಂದೆರೆಡು ದಿನ ಆಕೆ ಅನ್ನಿಯನ್ನ ಎತ್ತಿಕೊಂಡು ' ಬೋನಸ್ ದಿಯಾಸ್ ' ಎನ್ನುತ್ತಿದ್ದಳು ಹೋಗುವಾಗ ಆದಿಯೋಸ್ ಅಥವಾ ಚಾವ್ ಹೇಳಿ ಹೋಗುತ್ತಿದ್ದಳು. ಆಕೆ ಅದೆಷ್ಟು ಮುಗ್ದೆ ಮತ್ತು ಧರ್ಮಭೀರು ವಾಗಿದ್ದಳೆಂದರೆ ತನಗೆ ಗೊತ್ತಿಲ್ಲದೇ ವಾರದಲ್ಲಿ ಹಳೆಯ ಚಾಳಿಗೆ ಹೊರಳಿದ್ದಳು. ತಿಂಗಳ ವೇತನ ನೀಡಿ ಆಕೆಗೆ ನಾವು ಗುಡ್ ಬೈ ಹೇಳಿದೆವು. ಯಾರಾದರೂ ಸೌತ್ ಅಮೆರಿಕನ್ ಹೆಂಗಸನ್ನ ನೋಡು ಎನ್ನುವ ಸಲಹೆ ನೀಡಿದ್ದು ರಮ್ಯ. ಅವಳ ಅಣತಿಯಂತೆ ಹುಡಕುವಾಗ ಸಿಕ್ಕಿದ್ದು ದೊಮಿನಿಕಾ ರಿಪಬ್ಲಿಕಾ ದೇಶದ ಅಂದ್ರೆಯ !.
ಅಂದ್ರೆಯಳನ್ನ ಮಾತನಾಡಿಸಿ ರಮ್ಯ ಓಕೆ ಎಂದಳು. ಈಕೆಗೆ ಮಾಸಿಕ 600 ಯುರೋ ಸಂಬಳ ನಿಗದಿಯಾಗಿತ್ತು. ಅಂದ್ರೆಯ ಅದೆಷ್ಟು ಟಿಪ್ ಟಾಪ್ ಆಗಿ ಬರುತ್ತಿದ್ದಳು ಎಂದರೆ ಆಕೆಯನ್ನ ಡೊಮೆಸ್ಟಿಕ್ ಹೆಲ್ಪ್ ಎಂದು ಹೇಳಿದರೂ ಯಾರೂ ನಂಬುತ್ತಿರಲಿಲ್ಲ. ಅಚ್ಚುಕಟ್ಟಾಗಿ ತನ್ನ ಕೆಲಸವನ್ನ ತಾನು ಮಾಡುತ್ತಿದ್ದಳು. ತನ್ನ ಕೆಲಸ ವೇಳೆಯ ನಂತರ ಅರೆಕ್ಷಣ ಕೂಡ ನಿಲ್ಲುತ್ತಿರಲಿಲ್ಲ. ಸಬೀನಾ ವೇಳೆಯ ಮುಖ ನೋಡಿದವಳಲ್ಲ. ಹೀಗೆ ಒಬ್ಬರಿಂದ ಒಬ್ಬರಿಗೆ ಒಂದಷ್ಟು ವ್ಯತ್ಯಾಸಗಳು ಇರುತ್ತಿದ್ದವು.
ಕೆಲವೊಂದು ವಿಷಯದಲ್ಲಿ ದೇಸಿ ಮೆಯ್ಡ್ ಬೆಸ್ಟ್ ಎನಿಸಿದರೆ ಕೆಲವೊಮ್ಮೆ ಸ್ಪ್ಯಾನಿಷ್ ಬೆಸ್ಟ್ ಎನ್ನಿಸುತ್ತಿತ್ತು . ದೈ ಶಲ್ ನಾಟ್ ಸೀಕ್ ಆಲ್ ಗುಡ್ ಕ್ವಾಲಿಟಿಸ್ ಇನ್ ಒನ್ ಮ್ಯಾನ್ ಅಂತ ಷೇಕ್ಸ್ಪಿಯರ್ ಹೇಳಿದ್ದು ಈ ಕಾರಣಕ್ಕೆ ಇರಬಹದು. ಹೀಗೆ ಒಂದು ದಿನ ಬಿಸಾಕಲು ಇಟ್ಟಿದ್ದ ಶೂಸ್ ಒಂದನ್ನ ತೆಗೆದುಕೊಂಡು ಮನೆಯ ಮುಂದೆ ಚಿತ್ರದಲ್ಲಿ ಕಾಣುವಂತೆ ನೇತು ಹಾಕಿದ್ದು ಅಂದ್ರೆಯ. ಇದೇನು ಈ ರೀತಿ ಮಾಡುತ್ತೀಯಾ ಎನ್ನುವುದಕ್ಕೆ ಆಕೆ ಹೇಳಿದ್ದು ಮನೆ ಮುಂದೆ ಹೀಗೆ ಚಪ್ಪಲಿ ಅಥವಾ ಶೂವನ್ನ ನೇತುಹಾಕುವ ಉದ್ದೇಶ ಪ್ರೇತಾತ್ಮ ಅಥವಾ ಕೆಟ್ಟ ಶಕ್ತಿ ಮನೆಯೊಳಗೇ ಸುಳಿಯದಿರಲಿ ಎನ್ನುವುದಕ್ಕಂತೆ !
ಹೌದು ಹೀಗೆ ಶೂ ನೇತು ಹಾಕಿರುವ ಬಡಾವಣೆಯ ಜನರ ನಂಬಿಕೆ ಅಲ್ಲೆಲ್ಲೂ ಆತ್ಮ ಓಡಾಡುತ್ತಿದೆ ಎನ್ನುವುದು . ಹೀಗೆ ಶೂ ನೇತು ಹಾಕುವುದರಿಂದ ಅದು ಹೆದರಿ ಮನೆಯೊಳಗೇ ಬರುವುದಿಲ್ಲ ಎನ್ನುವುದು ಇನ್ನೊಂದು ನಂಬಿಕೆ. 21ನೇ ಶತಮಾನದಲ್ಲೂ ಯೂರೋಪಿನಲ್ಲಿ ಇಂದಿಗೂ ಇಂತಹ ಹಲವು ಹತ್ತು ಮೂಢನಂಬಿಕೆಗಳು ಇವೆ. ಮೂಢನಂಬಿಕೆಗಳು ಭಾರತದಲ್ಲಿ ಮಾತ್ರ ಇದೆ ಅಂತ ನೀವು ಅಂದುಕೊಂಡರೆ ಅದು ಕೂಡ ಮೂಢನಂಬಿಕೆಯ ಅಡಿಯಲ್ಲೇ ಬರುತ್ತದೆ.
ಮೂರು ತಿಂಗಳ ನಂತರ ಅಪ್ಪ ಅಮ್ಮ ಬಾರ್ಸಿಲೋನಾ ಗೆ ಬಂದರು . ಅವರಿಗೂ ಅನ್ನಿಯನ್ನ ಬಿಟ್ಟಿರುವುದು ಬಹಳ ಕಷ್ಟವಾಗಿತ್ತಂತೆ , ಆ ದಿನಗಳಲ್ಲಿ ಕಾಂತ ಪ್ಯಾರಿಸ್ ಬಿಟ್ಟು ಲಂಡನ್ ನಗರವನ್ನ ಸೇರಿದ್ದ. ಅಪ್ಪ ಅಮ್ಮನಿಗೆ ಒಂದು ತಿಂಗಳು ಅಲ್ಲೂ ಸುತ್ತಾಡಿಸುವುದು ಎಂದು ತೀರ್ಮಾನಿಸಿದ್ದೆವು. ಅಮ್ಮನಿಗೆ ಅಂದ್ರೆಯಳನ್ನ ಕಂಡರೆ ಅದೇನೋ ಕಾಳಜಿ. ಅವಳು ಬಂದ ತಕ್ಷಣ ಅವಳನ್ನ ಸೋಫಾ ಮೇಲೆ ಕೂರಿಸಿ ಕಾಫಿ ಕೊಡುತ್ತಿದ್ದರು. ತಿಂಡಿ ತಿನ್ನುತ್ತೀಯಾ ಎಂದು ಕೆಲವೊಮ್ಮೆ ಕೇಳುತ್ತಿದ್ದರು , ಕೆಲವೊಮ್ಮೆ ತಟ್ಟೆಯಲ್ಲಿ ಹಾಕಿ ಅವಳಿಗೆ ಕೊಟ್ಟು ಬಿಡುತ್ತಿದ್ದರು.
ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ!
ಅವಳಿಗೆ ಅಮ್ಮ ಬಂದ ಮೇಲೆ ಸಿಗುತ್ತಿದ್ದ ರಾಜ ಮರ್ಯಾದೆ ಅಚ್ಚರಿ ತರಿಸಿತ್ತು. ಅಮ್ಮನಿಗೆ ಎಲ್ಲರನ್ನೂ ಪ್ರೀತಿಯಿಂದ ಕಂಡು ಅಭ್ಯಾಸ. ನಾನು ಅಮ್ಮನಿಗೆ ' ಅಮ್ಮ ಇದು ಭಾರತವಲ್ಲ , ಅವರ ಕೆಲಸಕ್ಕೆ ನಾವು ಹಣ ನೀಡಿದ್ದೇವೆ , ನೀನು ಕಾಫಿ , ತಿಂಡಿ ನೀಡುವ ಮತ್ತು ಆಕೆಯನ್ನ ಕೂರಿಸಿ , ಉಪಚರಿಸುವ ಅವಶ್ಯಕತೆಯಿಲ್ಲ' ಎಂದು ಹೇಳಿದರೂ ಆಕೆ ಮಾತ್ರ ನನ್ನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ.
ಹೀಗೆ ಒಂದು ದಿನ ಸ್ನಾನ ಮುಗಿಸಿ ' ರಮ್ಯ , ಅಂದ್ರೆಯ ಬಂದ ತಕ್ಷಣ ಟಾಯ್ಲೆಟ್ ಕ್ಲೀನ್ ಮಾಡಲು ಹೇಳು ' ಎಂದು ರಮ್ಯಳಿಗೆ ಹೇಳುತ್ತಿದ್ದೆ . ಅಮ್ಮ ಮಧ್ಯ ಬಂದು ನಿನ್ನೆ ತಾನೇ ನಾನೇ ತೊಳೆದಿದ್ದೇನೆ ಎಂದಳು. ನನಗೆ ಶಾಕ್ ಆಯ್ತು. ನೀನೇಕೆ ತೊಳೆಯಲು ಹೋದೆ ? ಅಂದ್ರೆಯ ಇರುವುದು ಏತಕ್ಕೆ ? ಎಂದು ಸ್ವಲ್ಪ ಧ್ವನಿ ಏರಿಸಿ ಕೇಳಿದೆ. ' ಅಯ್ಯೋ ರಂಗಣ್ಣಿ ಅವಳನ್ನ ನೋಡಿದರೆ ಟಾಯ್ಲೆಟ್ ತೊಳಿ ಎಂದು ಹೇಳಲು ಮನಸ್ಸೇ ಬರುವುದಿಲ್ಲ ಕಣೋ ' ಅಂದಳು ನಮ್ಮಮ್ಮ.
ಅಮ್ಮನಿಗೆ ಹೇಳಿ ಪ್ರಯೋಜನವಿಲ್ಲ ಎಂದುಕೊಂಡು , ಅಂದ್ರೆಯಳನ್ನ ಕರೆದು ನಮ್ಮಮ್ಮ ಇರುವುದು ಹೀಗೆ , ನೀನು ಮಾತ್ರ ನಿನಗೆ ಹೇಳಿದ ಕೆಲಸವನ್ನ ಮಾಡು , ಅವರು ಹೇಳಲಿ ಎಂದು ಕಾಯುವುದು ಬೇಡ ಎಂದು ತಾಕೀತು ಮಾಡಿದೆ. ಆಕೆಯೂ ಹೇಳಿದ ರೀತಿ ನಡೆದುಕೊಂಡಳು. ಮುಂದಿನ ಮೂರು ತಿಂಗಳು ಅಮ್ಮ ವಾಪಸ್ಸು ಹೋಗುವವರಿಗೆ ಆಕೆಗೆ ಅಂದ್ರೆಯ ನಿತ್ಯ ತನ್ನ ಡ್ರೆಸ್ ಗೆ ತಕ್ಕಂತೆ ತೊಟ್ಟು ಬರುವ ಶೂಸ್ , ಹೇರ್ ಬ್ಯಾಂಡ್ , ಲಿಪ್ಸ್ಟಿಕ್ ಮೇಲೆ ಕಣ್ಣೀರುತಿತ್ತು.
ಅವಳಿಗೆ ಮಾಸಿಕ ವೇತನವೆಷ್ಟು ಎಂದು ಅಮ್ಮ ಐದಾರು ಬಾರಿ ಕೇಳಿದರೂ ನಾನು ಹೇಳಲು ಹೋಗಿರಲಿಲ್ಲ. ಕೊನೆಗೆ ರಮ್ಯಳಿಂದ ಅಮ್ಮ ಮಾಹಿತಿ ಕಲೆಹಾಕಿ ಅಯ್ಯೋ ಅಷ್ಟೊಂದೇ ಎನ್ನುವ ಉದ್ಘಾರ ತೆಗೆದಿದ್ದಳು. ಮನೆಕೆಲಸದವರ ಉತ್ತಮ ಜೀವನ ಮಟ್ಟವನ್ನ ನೋಡಿ ಅಮ್ಮ ಮೂಗಿನ ಮೇಲೆ ಬೆರಳಿಟ್ಟಿದ್ದಳು. ಮಗು ಸಾಕುವುದು ಸುಲಭದ ಕೆಲಸವಲ್ಲ. ಅಂದ್ರೆಯ ಒಂದಷ್ಟು ವರ್ಷ ಅನ್ನಿಗೆ ಉತ್ತಮ ಸೇವೆಯನ್ನ ನೀಡಿದಳು.