ಸ.ರಘುನಾಥ್ ಅಂಕಣ: ಅಂಗಡಿಯ ಗಲ್ಲೆದ ಮುಂದೆ ಕುಳಿತಳು ಗೌರಿ

By ಸ.ರಘುನಾಥ್
|

ದನಕರುಗಳ ಕಣ್ಣುಗಳಲ್ಲಿ ಅಸಹಾಯಕ ಶೋಕ ಕಂಡ ನರಸಿಂಗರಾಯ ಮತ್ತಷ್ಟು ದುಃಖಿತನಾದ. ಮೌನವೇ ತಾನೇನೋ ಎಂಬಂತಿದ್ದ ಸುನಂದಳ ಪಕ್ಕ ಕುಳಿತು ಸಾದಮ್ಮ, ಮುನೆಂಕಟೇಗೌಡ 'ಅಮ್ಮಯ್ಯ ನರಸಿಂಗನಿಗೆ ನೀನೀಗ ಅಮ್ಮಯ್ಯನಂತಾಗಬೇಕು. ನಿನ್ನ ಹೊಟ್ಟೇಲಿರೊ ಕೂಸೂ ಒಂದೆ, ಇವನೂ ಒಂದೆ.

ಏನೆಲ್ಲ ಪಾಡುಪಟ್ಟು ಗೆದ್ದವಳು ನೀನು. ವಿವೇಕದಲ್ಲಿ ನರಸಿಂಗನಿಗಿಂತ ಒಂದು ಹೆಜ್ಜೆ ಮುಂದೆ ಇರೋಳು ನೀನು. ನಾವೆಲ್ಲ ಇರೋವರೆಗೆ ನಿಮಗೆ ಭಯಬೇಡ. ಹೋದವರರಾರೂ ಇರುವವರ ಬದುಕನ್ನು ಕೊನೆಗೊಳಿಸಿದವಲ್ಲ' ಎಂದು ಹೇಳುತ್ತಿರುವಾಗಲೇ ಸಿದ್ದಪ್ಪನೂ ಬಂದ. ನನ್ನ ಮಗ ತೀರಿಕೊಂಡಾಗ ಏನೆಂದಿದ್ದೆ ನರಸಿಂಗ? ಆಂ, ಬಂದುದನುಗೈಕೊ ಮಂಕುತಿಮ್ಮ ಎಂದಲ್ಲವೆ? ಈಗ ನಿನಗೆ ಇನ್ನೋಬ್ಬರು ಹೇಳಬೇಕೆ ಅಂದ. ಅವನ ಹಿಂದೆಯೇ ಬಂದಿದ್ದ ಬೀರಪ್ಪ, ಸೋಮೇಶ ಹೋದಾಗಲೇ ಅವನೇ ನೀನು ಅಂದುಕೊಂಡವನು ನಾನು ಅಂದು ನರಸಿಂಗರಾಯನ ಕೈ ಹಿಡಿದುಕೊಂಡ.

ಸ.ರಘುನಾಥ್ ಅಂಕಣ: ಶ್ರೀಕೃಷ್ಣನಿಲ್ಲದೆ ನಿನಗೆಲ್ಲಿ ಪಾರ್ಥ ಪರಾಕ್ರಮ

ಸುನಂದಳನ್ನು ಅಪ್ಪಿಕೊಂಡು ಗಳಗಳ ಅತ್ತುಬಿಟ್ಟ

ಬಂದವರೆಲ್ಲ ಆಡಿದ್ದು ಮನದಾಳದ ಮಾತುಗಳನ್ನು ಎಂದು ನರಸಿಂಗರಾಯ ಬಲ್ಲ. ಅಪ್ಪಯ್ಯ, ಅಮ್ಮಯ್ಯ, ಮುನೆಕ್ಕ ಆತ್ಮರೂಪಿಗಳಾಗಿ ನಮಗಿದ್ದಾರೆ ಎಂದ ಸುನಂದಳನ್ನು ಅಪ್ಪಿಕೊಂಡು ಗಳಗಳ ಅತ್ತುಬಿಟ್ಟ. ಕೂಸು ಮನುಷ್ಯರೂಪ ಧರಿಸುತ್ತಿದ್ದ ಅವಳ ಹೊಟ್ಟೆಯನ್ನು ನೇವರಿಸಿದ.

ಸದಾರಮೆ ಮತ್ತೊಮ್ಮೆ ಮಾಲೂರಿನ ಪ್ರೇಕ್ಷಕರ ಮನ ಗೆದ್ದಳು. ಇದಾದ ತಿಂಗಳಿಗೆ ಸುನಂದ ನಾಟಕವಾಡಿದ್ದು ಸಾಕು. ಮಾವ ಹರಿಕಥೆಯನ್ನು ಕೈಗೆತ್ತಕೊ ಅನ್ನುತ್ತಿದ್ದರು. ನನಗೆ ಕನಕದಾಸ, ಅನ್ನಮಾಚಾರ್ಯ, ಭದ್ರಾಚಲ ರಾಮದಾಸರ ಕಥೆ ಮಾಡುವ ಆಸೆ. ಅವನ್ನು ಬರೆ ಎಂದು ಕೇಳಿದಳು. ನರಸಿಂಗರಾಯ ಅದರಲ್ಲಿ ತಲ್ಲೀನನಾದ.

ಅಂಗಡಿಯನ್ನು ನೋಡಿಕೊಳ್ಳುವ ಮನಸ್ಸು ಸುನಂದಳಿಗಿರಲಿಲ್ಲ

ದನಕರುಗಳು ರಂಗನ ಮನೆ ಸೇರಿದವು. ಇಂದಿನಿಂದ ಅವು ನಿನ್ನವು. ಅವುಗಳ ಮೇಲೆ ನನಗಾವ ಹಕ್ಕೂ ಇಲ್ಲ. ಆದರೆ ಚೆನ್ನಾಗಿ ನೋಡಿಕೊ ಎಂದ ನರಸಿಂಗರಾಯ. ರಂಗನ ಕುಟುಂಬಕ್ಕೆ ಇಂಥ ಒಂದು ಆಸ್ತಿಯ ಅಗತ್ಯವಿತ್ತು. ರಂಗ ಈ ಉಪಕಾರವನ್ನು ಮರೆಯಲಿಲ್ಲ. ಬೇಡವೆಂದರು ಅವನ ಹೆಂಡತಿ ಚಿಕ್ಕಮಲ್ಲಮ್ಮ ದಿನಾ ಬೆಳಿಗ್ಗೆ ಒಂದು ಪಡಿ ಹಾಲು ತಂದು ಕೊಡುತ್ತಿದ್ದಳು.

ಮನೆಯಲ್ಲಿದ್ದ ದವಸ ಆರು ತಿಂಗಳಿಗಾಗುವಷ್ಟಿತ್ತು. ಆ ಮುಂದಿನ ದಿನಗಳ ಬಗ್ಗೆ ಚಿಂತಿಸುವ ಕಾರಣವಿರಲಿಲ್ಲ. ಗೆಳೆಯರಿದ್ದರು. ಊರಿನ ಜನರೂ ಇದ್ದರು. ಅಂಗಡಿಯನ್ನು ನೋಡಿಕೊಳ್ಳುವ ಮನಸ್ಸು ಸುನಂದಳಿಗಿರಲಿಲ್ಲ. ಅದರ ವ್ಯವಹಾರ ಸಾಕು ಅನ್ನಿಸಿತ್ತು. ಅದನ್ನೇ ನರಸಿಂಗರಾಯನಿಗೂ ಹೇಳಿದಳು. ಆದರೆ ಮುನೆಕ್ಕನ ಪ್ರೀತಿಯ ಅಂಗಡಿಯನ್ನು ಮುಚ್ಚುವುದು ಅವನಿಗೆ ಇಷ್ಟವಿರಲಿಲ್ಲ.

ಬದುಕು ಕೆಟ್ಟು ಬಂದ ಗೌರಿ

ಗೆಳೆಯರನ್ನು ಬಿಟ್ಟು ಯಾವ ಮುಖ್ಯ ನಿರ್ಣಯವನ್ನೂ ತೆಗೆದುಕೊಳ್ಳದ ಅವನು ಅವರೊಂದಿಗೆ ಚರ್ಚಿಸಿ, ಬದುಕು ಕೆಟ್ಟು ಬಂದ ಗೌರಿಗೆ ಅಂಗಡಿಯನ್ನು ವಹಿಸುವ ಮಾತಾಡಿದ. ಗೌರಿ ಈ ಕುಟುಂಬದೊಂದಿಗೆ ಮನೆಕ್ಕನಂತೆಯೇ ಇರುವಳೆ ಎಂದು ಚರ್ಚಿಸಿದರು. ಇರಲೇಬೇಕೆಂದಿಲ್ಲ ಅಂದಳು ಸುನಂದ. ಅವಳು ಅಂತಹವಳಲ್ಲ ಅಂದ ಪಿಲ್ಲಣ್ಣ. ಈ ಮಾತು ಎಲ್ಲರಿಗೂ ಸಮ್ಮತವಾಯಿತು.

ಒಂದು ಒಳ್ಳೆಯ ದಿನ ಗೌರಿ ಮುನೆಕ್ಕನ ಭಾವಚಿತ್ರಕ್ಕೆ ನಮಸ್ಕರಿಸಿ ಗಲ್ಲೆದ ಮುಂದೆ ಕುಳಿತಳು.

ಇನ್ನಷ್ಟು sa raghunathaಸುದ್ದಿಗಳು