ಎಲ್ಲರಿಗೂ ನಮಸ್ಕಾರಗಳು... ಈ ಬರಹ Thatskannada ಅಥವಾ Oneindia (ಕನ್ನಡ)ದ "ನವರಸಾಯನ' ಅಂಕಣದ ಅಡಿಯಲ್ಲಿನ ನನ್ನ ಸತತವಾದ ಇನ್ನೂರನೆಯ (200) ಬರಹ. ಈ ಮೂಲಕ ಮೊದಲಿಗೆ ದೈವಕ್ಕೆ ನಂತರ ಸಕಲ ಓದುಗರಿಗೂ ಮತ್ತು ಸಂಪಾದಕ ವರ್ಗಕ್ಕೆ ಹೃದಯ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೆಯೇ ಇರಲಿ.
ದಟ್ಸ್ ಕನ್ನಡದ ಈ ಹಿಂದಿನ ಸಂಪಾದಕ ವರ್ಗದ ಪ್ರಸಾದ್ ನಾಯಕ್ ಅವರು ಅಂಕಣ ಬರಹಗಾರನಾಗಲು ಅವಕಾಶ ನೀಡಿದಾಗ ಬಹಳ ಆನಂದವಾಗಿತ್ತು. ಅಂಕಣಕ್ಕೆ "ನವರಸಾಯನ' ಎಂಬ ನಾಮಕರಣವಾದ ಮೇಲೆ ಪ್ರಕಟಣೆಗೊಳ್ಳುವ ದಿನ ಪ್ರತಿ ಗುರುವಾರ ಎಂದೂ ನಿಗದಿಯಾದ ಮೇಲೆ ಮೂಡಿ ಬಂದ ಮೊದಲ ಬರಹ ದಿನಾಂಕ ಜೂನ್ 08, 2017.
ನನ್ನ ಅನುಭವ ಎಂಬ ಮಣ್ಣನ್ನು ಸಮರ್ಪಿಸಿದ್ದೇನೆ
ಮೊದಲ ಬರಹವಾಗಿ ನನ್ನನ್ನು ನಾನು ಪರಿಚಯ ಮಾಡಿಕೊಳ್ಳಬೇಕಲ್ಲವೇ? ಅದುವೇ "ನಿಂತ್ಕೊಂಡೇ ನನ್ ಪರಿಚಯ'. ಅಲ್ಲಿ ಹೇಳಿದ ವಿಷಯ "Self Roasting'. ಅರ್ಥಾತ್ ನಮ್ಮನ್ನು ನಾವೇ ಹುರಿದುಕೊಳ್ಳೋದು ಅಥವಾ ನಮ್ ಕಾಲು ನಾವೇ ಎಳೆದುಕೊಳ್ಳೋದು ಅಂತ. ಕಾಲು ಎಂದಾಗ ಮತ್ತೊಂದು ವಿಷಯ ತಲೆಗೆ ಬಂತು ನೋಡಿ. ಕಾಲು ಅಂದಾಗ ತಲೆಗೇಕೆ ವಿಷಯ ಏರಬೇಕು? ಹೋಗ್ಲಿ ಬಿಡಿ, ಇದು ಒಂಥರಾ ಜಗನ್ಮೋಹಿನಿ ಸ್ಟೈಲ್ ಥರ... ತನ್ನದೇ ಕಾಲನ್ನು ಅಗ್ಗಿಷ್ಟಿಕೆಯಲ್ಲಿ ನೂಕಿಕೊಂಡು ಬೆಂಕಿ ಹಚ್ಚಿಕೊಂಡಂತೆ! ಹೊತ್ತಿಕೊಂಡರೆ ನಮ್ದೇ ಉರಿಯೋದು! ಬೇರೆಯವರಿಗೆ ಬೇಸರವಾಗಿಲ್ಲ ನೋಡಿ.
ನನ್ನ ಕಾಲನ್ನು ನಾನೇ ಎಳೆದುಕೊಂಡ ಮೊದಲ ಬರಹದಿಂದ ಇದು ನನ್ನ ಇನ್ನೂರನೆಯ ಹೆಜ್ಜೆ. ಅಂದ ಹಾಗೆ, ಇದು ಕೇವಲ 200ನೇ ಹೆಜ್ಜೆ ಅಷ್ಟೇ! ಇನ್ನೂ ಬಹಳಷ್ಟು ದೂರ ಸಾಗುವುದಿದೆ. ಪ್ರತೀ ಬರಹದಿಂದ ನನಗೆ ಹಲವಾರು ಅನುಕೂಲಗಳಾಗಿದೆ. ಯಾವ ವಿಷಯದ ಬಗ್ಗೆ ಬರೆಯಬೇಕು ಎಂಬ ಸಸಿ ನೆಟ್ಟು, ಅದಕ್ಕೆ ನನ್ನ ಅನುಭವ ಎಂಬ ಮಣ್ಣನ್ನು ಸಮರ್ಪಿಸಿ, ಇತರರ ಅನುಭವಗಳ ನೀರೆರೆದು, ಅಧ್ಯಯನವೆಂಬ ಗೊಬ್ಬರ ಹಾಕಿದ ಮೇಲೆ, ಅಲ್ಲೊಂದು ಬರಹ ಸಿದ್ಧವಾಗಿ ಹೊರಗೆ ಬರುತ್ತದೆ.
ಹೂವಾಗಿ ಅರಳಿದಾಗ ಅಲ್ಲೊಂದು ಸಾರ್ಥಕತೆ
ಆದರೆ ಇದು ಕೇವಲ ಮೊದಲ ಹಂತವಷ್ಟೇ. ಆ ಬರಹವು ಓದುಗರ ಮನದಲ್ಲಿ ಹೂವಾಗಿ ಅರಳಿದಾಗ ಅಲ್ಲೊಂದು ಸಾರ್ಥಕತೆ ಮೂಡುತ್ತದೆ. ಹೂವಾಗಿ ಅರಳಿದ ಮನದಿಂದ ತಮ್ಮನಿಸಿಕೆಯ ಪ್ರತಿಕ್ರಿಯೆ ಹಾಕಿ ತಮ್ಮ ಜ್ಞಾನವನ್ನು ಹಂಚಿಕೊಂಡಾಗ ಅದರಿಂದ ನನಗಷ್ಟೇ ಅಲ್ಲದೆ ಮಿಕ್ಕೆಲ್ಲಾ ಓದುಗರಿಗೂ ಜ್ಞಾನ ಎಂಬ ಫಲವನ್ನು ಹಂಚಿದಂತೆ ಆಯಿತಲ್ಲವೇ?
ಈಗ ನನ್ನ ಮುಂದಿನ ಹೆಜ್ಜೆಯಾಗಿ ಈವರೆಗೆ ಬರೆದಿರುವ ಎಲ್ಲಾ ಬರಹಗಳಿಂದ ಆಯ್ದ ಸಾಲುಗಳನ್ನು ನಿಮ್ಮ ಮುಂದೆ ಇಡುತ್ತಿಲ್ಲ, ಧೈರ್ಯವಾಗಿರಿ. ಅಲ್ಲಲ್ಲೇ ಒಂದಷ್ಟು ಸಾಲುಗಳನ್ನು ಆಯ್ದು ನಿಮ್ಮ ಮುಂದೆ ಇಡುತ್ತಿದ್ದೇನೆ.
ನಮ್ ಹಸ ನೀರು ಜಾಸ್ತಿ ಕುಡಿದುಬಿಟ್ಟೈತೆ
ಹತ್ತನೆಯ ಬರಹವಾದ "ನಾಮಕ್ಕೆ ಹಣೆ, ಟೋಪಿಗೆ ತಲೆ ಸದಾ ಸಿದ್ಧವಾಗಿರಲಿ"ನಲ್ಲಿ ಹೇಳಿದ ಮಾತು- "ನಮ್ಮ ಮನೆಗೆ ಹಾಲು ತಂದುಕೊಡುತ್ತಿದ್ದ ಹುಡುಗಿ "ಏನಮ್ಮಾ ಹಾಲು ಇಷ್ಟು ನೀರಾಗಿದೆ?" ಎಂದರೆ "ಹೌದಾ ಅಣ್ಣಾ, ನೆನ್ನೆ ನಮ್ ಹಸ ನೀರು ಜಾಸ್ತಿ ಕುಡಿದುಬಿಟ್ಟೈತೆ' ಅನ್ನುತ್ತಿದ್ದಳು. ಅವಳಿಗೆ ತಂದು ಹಾಕೋದು ಅಷ್ಟೇ ಕೆಲಸ. ನೀರು ಹಾಕುತ್ತಿದ್ದವರು ಬೇರೆ ಯಾರೋ ಆಗಿದ್ದರು ಬಿಡಿ.
ಇಪ್ಪತ್ತನೆಯ ಬರಹವಾದ "Unsung Heroes"ನಲ್ಲಿ ನಮನ ಸಲ್ಲಿಸಿದ ಹಲವರಲ್ಲಿ ಒಂದು ವರ್ಗ ಎಂದರೆ ಟ್ರಾಫಿಕ್ ಪೊಲೀಸರು. ಬೆಳಿಗ್ಗೆ ನಾವು ಹೋದ ಹಾದಿಯಲ್ಲಿ ಮತ್ತು ಸಂಜೆ ಅಥವಾ ರಾತ್ರಿ ನಾವು ಹಿಂದಿರುಗುವ ದಾರಿಯಲ್ಲಿ ನಮ್ಮಂತಹ ನೂರಾರು ವಾಹನಗಳ ಹೊಗೆ ಕುಡಿಯುತ್ತ, ಪ್ರತಿ ಘಳಿಗೆ ಥರಾಥರಾವರಿ ಹಾರ್ನ್ ಶಬ್ದ ಕೇಳುತ್ತಾ, ಒಂದು ಕ್ಷಣ ಆಚೆ ಈಚೆ ನೋಡಿದ್ದಕ್ಕೆ Inspector ಕೈಲಿ ಬೈಸಿಕೊಳ್ಳುವ ಪೇದೆಯ ಬಗ್ಗೆ ಒಂದಿಷ್ಟೂ ಕನಿಕರವಿಲ್ಲದೆ ಅರ್ಥವಿಲ್ಲದೇ ಬೈಯುತ್ತೇವೆ ಅಥವಾ ಬೈದುಕೊಳ್ಳುತ್ತೇವೆ. ಥ್ಯಾಂಕ್ಸ್ ಅಂತೂ ದೂರ ಉಳಿಯಿತು, ಅದೆಂದೂ ಹೇಳುವುದೇ ಇಲ್ಲ.
2017ರಲ್ಲಿ ಪಯಣಿಸಿದ ಅನುಭವವೇ ನಾ ಕಂಡ ಮೆಕ್ಸಿಕೋ
December 2017ರಲ್ಲಿ ಪಯಣಿಸಿದ ಅನುಭವವೇ, "ನಾ ಕಂಡ ಮೆಕ್ಸಿಕೋ" ಎಂಬ ಬರಹದಲ್ಲಿ ಒಂದು ಕುತೂಹಲಕರವಾದ ವಿಷಯ ಹೇಳಿದ್ದೆ. ಆದರೆ ಇಂದು ಆ ವಿಷಯ ಕುತೂಹಲವಲ್ಲದೇ, ಅನಿವಾರ್ಯವಾಗಿದೆ. ಏನದು ಅಂದಿರಾ? ಅಂದಿನ ದಿನಗಳಲ್ಲಿ "ದೈವದತ್ತವಾದ ಮುಖವನ್ನು ಎಲ್ಲರಿಗೂ ತೋರಿ ಅಪವಿತ್ರ ಮಾಡಬಾರದು ಎಂದೇ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸುತ್ತಿದ್ದರು" ಎಂದು ಗೈಡ್ ಹೇಳಿದ. ಇಂದು ಮೂಗು-ಬಾಯಿ ಮುಚ್ಚಿದ್ದೇವೆ. ಇಡೀ ಮುಖ ಮುಚ್ಚಿಕೊಳ್ಳುವ ದಿನ, ಬೇಡಾ ಬಿಡಿ.
ನೆಲಗಳು ನುಣುಪಾಗುತ್ತಿವೆ, ಮನಸ್ಸುಗಳು ಒರಟಾಗುತ್ತಿವೆ
"ನೆಲಗಳು ನುಣುಪಾಗುತ್ತಿವೆ, ಮನಸ್ಸುಗಳು ಒರಟಾಗುತ್ತಿವೆ"ನಲ್ಲಿ ಹೇಳಿದ ವಿಷಯ ಹೀಗಿತ್ತು. ಪ್ರತಿ ಅಂಗಡಿಯಲ್ಲೂ ನುಣುಪಾದ ಬೊಂಬೆಗಳು (mannequin) ಇದ್ದು ಅವಕ್ಕೆ ಬಟ್ಟೆ ತೊಡಿಸಿರುತ್ತಾರೆ. ಎಷ್ಟೋ ಸಾರಿ ಅದರ ಮೇಲಿರೋ ಬಟ್ಟೆ ನಮಗೂ ಚೆನ್ನಾಗಿ ಕಾಣುತ್ತೆ ಅಂತ ತೊಗೋತೀವಿ. ಕೊಂಡ ಬಟ್ಟೆ ಹಾಕ್ಕೊಂಡ್ ತಿರುಗಿದರೆ ನಮ್ಮ ಕಡೆ ಯಾರೂ ತಿರುಗಿ ನೋಡೋದಿಲ್ಲ. ಏಕೆ?
"ಮಾತನಾಡೋದು ಒಂದು ಕಲೆ ಆದರೆ ಕೆಲವರಿಗೆ ಅದೇ ಕಪ್ಪುಕಲೆ"ನಲ್ಲಿ "Toastmasters club' ಬಗ್ಗೆ ಹೇಳಿದ್ದೆ. ಇದರ ಉದ್ದೇಶವೇ ಸಂವಹನ (ಕಮ್ಯುನಿಕೇಷನ್), ಸಾರ್ವಜನಿಕ ಸಭೆಯಲ್ಲಿ ಮಾತನಾಡುವುದು ಹೇಗೆ, ಮತ್ತು ನಾಯಕತ್ವದ ಸೂಕ್ಷ್ಮಗಳನ್ನು ತಿಳಿಸಿಕೊಡುವುದು. ಪ್ರತೀ ಮೀಟಿಂಗ್'ಗೆ ಒಂದು ವಿಷಯ ಅಂತ ಆಯ್ಕೆ ಮಾಡಿ ಮಾತನಾಡಲು ಒಂದಷ್ಟು ಮಂದಿ ಸಿದ್ಧವಿರುತ್ತಾರೆ. ಪುಸ್ತಕ ಅಥವಾ ಪೇಪರ್ ಹಿಡಿಯದೇ ಮಾತನಾಡಬೇಕು. ವಿಷಯ ಏನಪ್ಪಾ ಎಂದರೆ, ಜ್ಞಾನ ಬೇಕಾದಷ್ಟು ಇರಬಹುದು ಆದರೆ ಅದನ್ನು ಮತ್ತೊಬ್ಬರಿಗೆ ಹಂಚುವುದೂ ಒಂದು ಕಲೆ.
ನೂರು ವರ್ಷ ಬದುಕಿದ್ದರೂ ಸಾಧನೆಗಳು ಮಾತ್ರ ಸಾವಿರಾರು ವರ್ಷ
ಜೀವನದಲ್ಲಿ ಸಾವು ಎಂಬುದು ಒಂದು ಅವಿಭಾಜ್ಯ ಅಂಗ. "ಹಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ, ನಮ್ಮದೂ ಅಂತ ಸ್ಟೇಷನ್ ಬಂದಾಗ ಇಳಿಯಲೇಬೇಕು" ಎಂಬ ಬರಹದಲ್ಲಿ ಹೇಳಿದ್ದು ಏನೆಂದರೆ "ಕೊನೆಯುಸಿರೆಳೆದರು" - ಈ ಉಸಿರು ತೆಗೆದುಕೊಳ್ಳುವಿಕೆಗೆ muscular ಶಕ್ತಿ ಬೇಕು. ಉಸಿರು ಬಿಡುವಿಕೆ ತಂತಾನೇ ಬೇಕಿದ್ದರೂ ನಡೆಯುತ್ತದೆ. ಒಂದು candle ಊದಬೇಕು ಎಂದಾಗ ಉಸಿರು ತೆಗೆದುಕೊಂಡೇ ಬಿಡಬೇಕು ಎಂದೇನಿಲ್ಲ. ಕೊನೆಯ ಘಳಿಗೆಯಲ್ಲಿ ಜೀವಕ್ಕೆ ಸತ್ವವೇ ಇಲ್ಲದಿರುವಾಗ, ಉಸಿರು ಎಳೆದುಕೊಳ್ಳಲೂ ಚೈತನ್ಯ ಇಲ್ಲದೆ ಹೋದಾಗ, ಉಸಿರು ಆಚೆ ಹಾಕಲಷ್ಟೇ ಸಾಧ್ಯವಾಗೋದು.
ನೂರನೆಯ ಬರಹದಲ್ಲಿ ನೂರ್ಕಾಲ ಬಾಳಿದವರನ್ನು ನೆನೆದ ಬಗೆ ಹೀಗಿತ್ತು. ನೂರಕ್ಕೂ ಹೆಚ್ಚು ವರ್ಷ ಬಾಳಿ ಬದುಕಿ, ಇಂದಿಗೂ ಜನರ ಮನಗಳಲ್ಲಿ ಮನೆಮಾಡಿರುವ ಹಿರಿಯ ಚೇತನಗಳು ಎಂದರೆ ನಮ್ಮ ಸರ್ ಎಂ.ವಿಶ್ವೇಶ್ವರಯ್ಯ, ಶ್ರೀ ಶಿವಕುಮಾರ ಸ್ವಾಮೀಜಿಗಳು ಮುಂತಾದವರು. ಇವರುಗಳು ನೂರು ವರ್ಷಗಳು ಬದುಕಿದ್ದರೂ ಸಾಧನೆಗಳು ಮಾತ್ರ ಸಾವಿರಾರು ವರುಷಗಳಲ್ಲೂ ಸಾಧಿಸಲಾಗದಷ್ಟು ಎಂದರೆ ಅತಿಶಯೋಕ್ತಿಯಲ್ಲಾ ಅಲ್ಲವೇ?
ನಿಮ್ಮೆಲ್ಲರ ಪ್ರೋತ್ಸಾಹ ಒಂದಿದ್ದರೆ ಸಾಕು
ಆಡಬೇಕಿರುವುದು ಇನ್ನೂ ಸಾವಿರಾರು ಇದೆ. ನಿಮ್ಮೆಲ್ಲರ ಪ್ರೋತ್ಸಾಹ ಒಂದಿದ್ದರೆ ಸಾಕು. "ತಲೆಯಲ್ಲಿ ಹುಳ ಬಿಡುವುದು" ಎಂದರೇನು? ಎಂದು ಹೇಳಿದ್ದಾಗ, ಅತ್ಯಂತ ಬುದ್ಧಿಶಾಲಿ ಮೆದುಳು ತುಂಬಾ ಅಮಾಯಕ. ನಾವೇನು ವಿಷಯ ತುಂಬಿದರೂ ಮೆದುಳು ತುಂಬಿಕೊಳ್ಳುತ್ತೆ. ಮೆದುಳಿನ ಹೊಟ್ಟೆ ತುಂಬಾ ದೊಡ್ಡದು. ಒಳಿತನ್ನೇ ತುಂಬಿಕೊಂಡು ಆಗಾಗ ಆಲೋಚಿಸಿದರೆ ಕನಸಿನಲ್ಲೂ, ನಿದ್ದೆಯಲ್ಲೂ ಅಂಥಾ ಆಲೋಚನೆಗಳೇ ಮೂಡಿಬರುತ್ತದೆ. ಅದರಂತೆಯೇ ಕೆಡುಕು ಆಲೋಚನೆಗಳನ್ನೂ ಸಹ ಬಿತ್ತರಿಸುವ ಮೆದುಳಿಗೆ ತಾರತಮ್ಯವಿಲ್ಲ.
ದಿನನಿತ್ಯದಲ್ಲಿ ಈ ಮೆದುಳಿಗೆ ಸಾಧ್ಯವಾದಷ್ಟೂ ಒಳಿತನ್ನೇ ಉಣಿಸುವಾ. ನನ್ನ ಬರಹಗಳನ್ನು ಒಪ್ಪುಗಳಿದ್ದಾಗ ಪ್ರೋತ್ಸಾಹಿಸುವ ಓದುಗರೇ, ತಪ್ಪುಗಳಿದ್ದಾಗ ತಿದ್ದಲು ಮರೆಯದಿರಿ. ಇನ್ನೂರನೇಯ ಹೆಜ್ಜೆ ಮುಗಿಸುವ ಮುನ್ನ ಆಡುವ ಮಾತು ಏನಪ್ಪಾ ಅಂದ್ರೆ ದಿನನಿತ್ಯದಲ್ಲಿ ಕಲಿಯೋಣ, ಕಲಿಸೋಣ. ಏನಂತೀರಾ?