10 ವರ್ಷದ ಬಾಲಕಿ ನೂತನ್‌ ಬ್ರಾಹ್ಮಣೆಗೆ ತನ್ನ ಅಜ್ಜಿ ಮುಂಬಯಿಗೆ ಹೊರಟಿರುವ ಪ್ರತಿಭಟನಾ ಮೆರವಣಿಗೆಗೆ ಯಾಕೆ ಹೋಗುತ್ತಿದ್ದಾರೆನ್ನುವ ಕುತೂಹಲವಿತ್ತು. ಹೀಗಾಗಿ ಜೀಜಾಬಾಯಿ ಅವಳನ್ನು ತನ್ನೊಂದಿಗೆ ಕರೆತಂದರು. “ನಾನು ಅವಳನ್ನು ಕರೆತರಲು ಕಾರಣವೆಂದರೆ ಅವಳಿಗೆ ಆದಿವಾಸಿಗಳ ಸಮಸ್ಯೆ ಮತ್ತು ನೋವು ಅರ್ಥವಾಗಲಿ ಎನ್ನುವುದು,” ಎಂದು ಜೀಜಾಬಾಯಿ ಹೇಳಿದರು. ಜನವರಿ 26ರಂದು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಸುಡುವ ಬಿಸಿಲಿನಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು.

“ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ [ಮೂರು ಕೃಷಿ ಕಾನೂನುಗಳ ವಿರುದ್ಧ] ರೈತರಿಗೆ ಬೆಂಬಲ ಸೂಚಿಸಲು ನಾವಿಲ್ಲಿಗೆ ಬಂದಿದ್ದೇವೆ. ಜೊತೆಗೆ ನಮ್ಮದೇ ಆದ ಸ್ಥಳೀಯ ಸಮಸ್ಯೆಗಳ ಕುರಿತೂ ಗಮನಸೆಳೆಯುವ ಉದ್ದೇಶವಿದೆ.” ಎಂದು 65 ವರ್ಷದ ಜೀಜಾಬಾಯಿ ಹೇಳಿದರು. ಇವರು ಜನವರಿ 25-26ರಂದು ನೂತನ್‌ ಜೊತೆ ಆಜಾದ್‌ ಮೈದಾನದಲ್ಲೇ ಉಳಿದಿದ್ದರು.

ಅವರು ನಾಸಿಕ್‌ ಜಿಲ್ಲೆಯ ಅಂಬೆವಾನಿ ಎನ್ನುವ ಊರಿನಿಂದ ಜನವರಿ 23ರಂದು ಅಲ್ಲಿನ ಸ್ಥಳೀಯ ರೈತರ ತಂಡದೊಡನೆ ಹೊರಟು ಇಲ್ಲಿಗೆ ಬಂದರು.

ಕೋಲಿ ಮಹಾದೇವ್‌ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಜೀಜಾಬಾಯಿ ಮತ್ತು ಅವರ 70 ವರ್ಷದ ಪತಿ ಶ್ರವಣ್‌ ಹಲವು ದಶಕಗಳ ಕಾಲದಿಂದ ಐದು ಎಕರೆ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. 2006ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಜಾರಿಗೆ ಬಂದ ನಂತರ ಅವರು ಆ ಭೂಮಿಯ ಮಾಲಿಕತ್ವವನ್ನು ಹೊಂದಿರಬೇಕಿತ್ತು. "ಆದರೆ ನಮ್ಮ ಹೆಸರಿಗೆ ಒಂದು ಎಕರೆಗಿಂತ ಕಡಿಮೆ ಭೂಮಿಯನ್ನು ನೀಡಲಾಯಿತು, ಅದರಲ್ಲಿ ನಾವು ಭತ್ತ, ಗೋಧಿ, ಉದ್ದು ಮತ್ತು ತೊಗರಿ ಬೆಳೆಯುತ್ತೇವೆ" ಎಂದು ಅವರು ಹೇಳಿದರು. "ಉಳಿದಿದ್ದು [ಜಮೀನು] ಅರಣ್ಯ ಇಲಾಖೆಯ ಅಡಿಯಲ್ಲಿದೆ, ಮತ್ತು ನಾವು ಆ ಜಾಗದ ಬಳಿ ಹೋದರೆ, ಅಧಿಕಾರಿಗಳು ನಮಗೆ ಕಿರುಕುಳ ನೀಡುತ್ತಾರೆ."

ಮುಂಬೈನಲ್ಲಿ ನಡೆದ ಗಣರಾಜ್ಯೋತ್ಸವ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಲು, ನೂತನ್ ತಂದೆ, ಜೀಜಾಬಾಯಿಯವರ ಮಗ ಸಂಜಯ್ ತನ್ನ ಮಗಳನ್ನು ಅಜ್ಜಿಯೊಂದಿಗೆ ಕಳಿಸಲು ಸುಲಭವಾಗಿ ಒಪ್ಪಿಕೊಂಡರು. "ಅವಳು 2018ರಲ್ಲಿ ನಡೆದ ರೈತರ ಸುದೀರ್ಘ ಪ್ರದರ್ಶನಾ ಮೆರವಣಿಗೆಯಲ್ಲಿ ( ಕಿಸಾನ್ ಲಾಂಗ್ ಮಾರ್ಚ್‌ ) ಭಾಗವಹಿಸಲು ಬಯಸಿದ್ದಳು, ಅಂದು ನಾವು ನಾಸಿಕ್‌ನಿಂದ ಮುಂಬೈಗೆ ಒಂದು ವಾರದ ನಡೆದಿದ್ದೆವು. ಆದರೆ ಆಗ ಅವಳು ತುಂಬಾ ಚಿಕ್ಕವಳಿದ್ದಳು. ಅವಳು ಅಷ್ಟು ದೂರ ನಡೆಯಲು ಸಾಧ್ಯವಾಗುತ್ತದೆನ್ನುವ ಕುರಿತು ನನಗೆ ಖಾತ್ರಿಯಿರಲಿಲ್ಲ. ಈಗ ಅವಳು ಸಾಕಷ್ಟು ದೊಡ್ಡವಳಾಗಿದ್ದಾಳೆ. ಮತ್ತು ಈ ಬಾರಿ ಅಷ್ಟೇನೂ ಹೆಚ್ಚು ನಡೆಯುಂತಿರಲಿಲ್ಲ" ಎಂದು ಜೀಜಾಬಾಯಿ ಹೇಳಿದರು.

PHOTO • Shraddha Agarwal
PHOTO • Riya Behl

ಎಡ: ನಾಸಿಕ್‌ನ ರೈತರು ಮುಂಬೈಗೆ ಹೋಗುವ ಮಾರ್ಗದಲ್ಲಿ ಕಸರಾ ಘಾಟ್ ಮೂಲಕ ನಡೆದು ಬರುತ್ತಿರುವುದು. ಬಲ: ಆಜಾದ್ ಮೈದಾನದಲ್ಲಿ ನೂತನ್ ಬ್ರಾಹ್ಮಣೆ ಮತ್ತು ಜೀಜಾಬಾಯಿ (ಮಾಸ್ಕ್‌ ಧರಿಸಿದವರು)

ಜೀಜಾಬಾಯಿ ಮತ್ತು ನೂತನ್  ನಾಶಿಕ್ ರೈತರ ಗುಂಪಿನೊಂದಿಗೆ ಪಿಕ್-ಅಪ್ ಟ್ರಕ್ ಮತ್ತು ಟೆಂಪೊಗಳಲ್ಲಿ ಪ್ರಯಾಣಿಸಿದರು - 12 ಕಿಲೋಮೀಟರ್ ಉದ್ದದ ಕಸರಾ ಘಾಟ್ ಹೊರತುಪಡಿಸಿ, ಅಲ್ಲಿ ಎಲ್ಲರೂ ವಾಹನಗಳಿಂದ ಇಳಿದು ಕಾಲ್ನಡಿಗೆಯಲ್ಲಿ ನಡೆದು ತಮ್ಮ ಬಲವನ್ನು ಪ್ರದರ್ಶಿಸಿದರು. "ನಾನು ಸಹ ಅಜ್ಜಿಯೊಂದಿಗೆ ನಡೆದಿದ್ದೇನೆ" ಎಂದು ನೂತನ್ ನಾಚಿಕೆಯಿಂದ ನಗುತ್ತಾ ಹೇಳಿದಳು. "ನನಗೆ ಒಂದಿಷ್ಟೂ ದಣಿವಾಗಲಿಲ್ಲ." ಅವರು ನಾಶಿಕ್‌ನಿಂದ ಸುಮಾರು 180 ಕಿಲೋಮೀಟರ್ ದೂರ ಪ್ರಯಾಣದ ನಂತರ ಮೈದಾನವನ್ನು ತಲುಪಿದರು.

"ಅವಳು ಒಮ್ಮೆ ಕೂಡ ಅಳಲಿಲ್ಲ, ಮಕ್ಕಳಂತೆ ಯಾವುದೇ ತಂತ್ರಗಳನ್ನು ಸಹ ಮಾಡಲಿಲ್ಲ." ಬದಲಿಗೆ, ಮುಂಬೈ ತಲುಪಿದ ನಂತರ ಅವಳು ಇನ್ನಷ್ಟು ಚೈತನ್ಯನ್ನು ಪಡೆದಳು” ಎಂದು ಜೀಜಾಬಾಯಿ ಹೆಮ್ಮೆಯಿಂದ ಮೊಮ್ಮಗಳ ತಲೆ ಸವರುತ್ತಾ ಹೇಳಿದರು. “ನಾವು ಪ್ರಯಾಣದ ಸಮಯದಲ್ಲಿ ತಿನ್ನಲೆಂದು ಭಖ್ರಿ ಮತ್ತು ಹಸಿ ಮೆಣಸಿನಕಾಯಿ ಚಟ್ನಿ ತಂದಿದ್ದೆವು. ನಮ್ಮಿಬ್ಬರಿಗೂ ಅವು ಸಾಕಾಗುವಷ್ಟಿದ್ದವು ”ಎಂದು ಅವರು ವಿವರಿಸಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅಂಬೆವಾನಿಯಲ್ಲಿನ ನೂತನ್ ಹೋಗುತ್ತಿದ್ದ ಶಾಲೆಯನ್ನು ಮುಚ್ಚಲಾಗಿದೆ. ಕುಟುಂಬದ ಬಳಿ ಸ್ಮಾರ್ಟ್‌ಫೋನ್ ಇಲ್ಲ, ಆದ್ದರಿಂದ ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. "ನೂತನ್ ಪಾಲಿ‌ಗೆ ಇದೊಂದು ಉತ್ತಮ ಕಲಿಕೆಯ ಅನುಭವ ಎಂದು ನಾನು ಭಾವಿಸಿದೆ" ಎಂದು ಜೀಜಾಬಾಯಿ ಹೇಳಿದರು.

"ಇದು ಎಷ್ಟು ದೊಡ್ಡದಾಗಿರಲಿದೆ ಎಂದು ತಿಳಿಯಲು ಬಯಸಿದ್ದೆ" ಎಂದು 5ನೇ ತರಗತಿಯಲ್ಲಿ ಓದುತ್ತಿದ್ದ ಮತ್ತು ಮುಂಬಯಿಗೆ ಬರುವ ಬಯಕೆಯನ್ನು ಸದಾ ಹೊಂದಿದ್ದ ನೂತನ್ ಹೇಳಿದಳು. "ನಾನು ಊರಿಗೆ ಹೋದ ನಂತರ ನನ್ನ ಸ್ನೇಹಿತರಿಗೆ ಇದರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ."

ನೂತನ್‌ಗೆ ತನ್ನ ಅಜ್ಜಿ ಹಲವು ವರ್ಷಗಳಿಂದ ಭೂ ಹಕ್ಕುಗಳಿಗಾಗಿ ಒತ್ತಾಯಿಸುತ್ತಿರುವುದು ತಿಳಿದಿದೆ. ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವ ತನ್ನ ಹೆತ್ತವರಿಗೆ ಗ್ರಾಮದಲ್ಲಿ ಹೆಚ್ಚು ಕೆಲಸವಿಲ್ಲವೆನ್ನುವುದೂ ಅವಳಿಗೆ ತಿಳಿದಿದೆ. 2020ರ ಸೆಪ್ಟೆಂಬರ್‌ನಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿರುವ, ಆದರೆ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿರುವ ಮೂರು ಕೃಷಿ ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಅವಳು ಪ್ರಯತ್ನಿಸುತ್ತಿದ್ದಾಳೆ.

PHOTO • Riya Behl
PHOTO • Riya Behl

ನೂತನ್‌ಗೆ (ಎಡ) ಮೊದಲಿನಿಂದಲೂ ಮುಂಬಯಿ ನೋಡುವ ಬಯಕೆಯಿತ್ತು. ಜೀಜಾಬಾಯಿ (ಬಲ) ಆಕೆಯನ್ನು 'ಬುಡಕಟ್ಟು ಜನಾಂಗದವರ ನೋವುಗಳು ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು' ಪ್ರತಿಭಟನೆಗೆ ಕರೆತಂದಿದ್ದಾರೆ.

ಆ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ.

ರೈತರು ಈ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ಹಾನಿಕಾರಕವೆಂದು ನೋಡುತ್ತಿದ್ದಾರೆ ಏಕೆಂದರೆ ಇವು ದೊಡ್ಡ ಕಾರ್ಪೊರೇಟ್‌ಗಳಿಗೆ ರೈತರು ಮತ್ತು ಕೃಷಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತವೆ. "ನಾವು ಕೃಷಿಯಲ್ಲಿ ಹೆಚ್ಚಿನ ದೊಡ್ಡ ಕಂಪನಿಗಳನ್ನು ನೋಡಲು ಬಯಸುವುದಿಲ್ಲ. ಅವುಗಳು ನಮ್ಮ ಹಿತವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ” ಎಂದು ಜೀಜಾಬಾಯಿ ಹೇಳಿದರು.

ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ರೈತ ವಿರೋಧಿ ನೀತಿಗಳ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ರೈತರು ಬೀದಿಗಿಳಿಯಬೇಕು ಎಂದು ಜೀಜಾಬಾಯಿ ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆ ಅವರ "ವೃದ್ಧರು ಮತ್ತು ಮಹಿಳೆಯರನ್ನು ಪ್ರತಿಭಟನೆಯಲ್ಲಿ ಏಕೆ ಇರಿಸಲಾಗಿದೆ?" ಎನ್ನುವ ಪ್ರಶ್ನೆಯನ್ನು ಉಲ್ಲೇಖಿಸಿ, "ವಿಶೇಷವಾಗಿ ಮಹಿಳೆಯರು," ಎಂದು ಹೇಳಿದರು

"ನಾನು ನನ್ನ ಇಡೀ ಜೀವನವನ್ನು ಕೃಷಿಗಾಗಿ ದುಡಿದು ಕಳೆದಿದ್ದೇನೆ" ಎಂದು ಜೀಜಾಬಾಯಿ ಹೇಳಿದರು. "ಮತ್ತು ನಾನು ನನ್ನ ಗಂಡ ಮಾಡಿದಷ್ಟೇ ಕೆಲಸವನ್ನು ಮಾಡಿದ್ದೇನೆ."

ನೂತನ್ ಮಂಬೈಗೆ ತನ್ನನ್ನೂ ಕರೆದುಕೊಂಡು ಹೋಗುವಂತೆ ಕೇಳಿದಾಗ ಅವರಿಗೆ ಸಂತೋಷವಾಯಿತು. “ಚಿಕ್ಕ ವಯಸ್ಸಿನಲ್ಲಿ ಈ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಅವಳ ಪಾಲಿಗೆ ಬಹಳ ಮುಖ್ಯ. ನಾನು ಅವಳನ್ನು ಸ್ವತಂತ್ರ ಮಹಿಳೆಯನ್ನಾಗಿ ಬೆಳೆಸಲು ಬಯಸುತ್ತೇನೆ."

ಅನುವಾದ - ಶಂಕರ ಎನ್. ಕೆಂಚನೂರು

Shankar N. Kenchanur is a poet and freelance translator. He can be reached at [email protected]

Reporter : Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Photographer : Riya Behl

Riya Behl is a Content Coordinator at the People’s Archive of Rural India.

Other stories by Riya Behl