ಮುಂದಿನ ಕೆಲವು ದಿನಗಳಲ್ಲಿ ಚಿತ್ರ ಮಂದಿರಗಳು ಕೂಡ ಇಲ್ಲವಾಗಿ ಎಲ್ಲವನ್ನೂ ಒಟಿಟಿ ಆಕ್ರಮಿಸುತ್ತದೆ

By ರಂಗಸ್ವಾಮಿ ಮೂಕನಹಳ್ಳಿ
|

ಸ್ಪೇನ್ ಸೇರಿದ ಮೊದಲ ದಿನಗಳಲ್ಲಿ ನನ್ನ ಸಹೋದ್ಯೋಗಿಗಳು ನಾವು ನೋಡುತ್ತೇವೆ ಅದೆಷ್ಟು ದಿನ ನೀನು ಸಸ್ಯಹಾರಿಯಾಗಿ ಮತ್ತು ಬಿಯರ್ ಅಥವಾ ಆಲ್ಕೋಹಾಲ್ ಮುಟ್ಟದೆ ಜೀವನ ನೆಡೆಸುತ್ತೀಯ ಎನ್ನುವ ನೇರಾನೇರ ಸವಾಲನ್ನ ಹಾಕಿದ್ದರು. ಅವರ ಸವಾಲನ್ನ ಸ್ವೀಕರಿಸಿ ಒಂದೂವರೆ ದಶಕಕ್ಕೂ ಹೆಚ್ಚು ಅಲ್ಲಿನ ವಾಸದಲ್ಲಿ ಒಂದು ಹನಿ ಬಿಯರ್ ಕೂಡ ಸೇವಿಸದೇ ಮೊಟ್ಟೆಯನ್ನ ಕೂಡ ತಿನ್ನದೇ ಇದ್ದದ್ದು ಅವರ ಕಣ್ಣಲ್ಲಿ ನನ್ನ ಬಗ್ಗೆ ಹೆಚ್ಚಿನ ಹೆಮ್ಮೆ.

ನಮ್ಮತನ ಬಿಡದಿದ್ದರೆ ಗೌರವ ತಾನಾಗೇ ಬರುತ್ತದೆ. ಊಟ ತಿಂಡಿ ವಿಚಾರದಲ್ಲಿ ಬದಲಾವಣೆ ಮಾಡಿಕೊಳ್ಳದ ನಾನು ಅವರ ಭಾಷೆ ಮತ್ತಿತರ ಜೀವನ ಶೈಲಿಯನ್ನ ಬೇಗನೆ ಅಡಾಪ್ಟ್ ಮಾಡಿಕೊಂಡೆ.

ಬಾರ್ಸಿಲೋನಾ ದಲ್ಲಿ ಹೆಜ್ಜೆ ಹೆಜ್ಜೆಗೂ ಬಾರ್ ಗಳು ಕಾಣ ಸಿಗುತ್ತವೆ . ಅವೆಲ್ಲಾ ಸ್ಪ್ಯಾನಿಷ್ 'ತಾಪಸ್ ಬಾರ್ ' ಗಳು. ಇಲ್ಲಿ ಕಾಫಿ ಕೂಡ ಸಿಗುತ್ತದೆ . ಸ್ಪೇನ್ ನಲ್ಲಿ ಕೆಫೆ ಕೋನ್ ಲೇಚೆ ಅಂದರೆ ಹಾಲಿನೊಂದಿಗೆ ಕಾಫಿ ಕೊಡಿ ಎಂದರೆ ಕೊಡುವುದು 250/300 ಮಿಲಿ ಲೀಟರ್ ಕಾಫಿ .

ನೀನು ಮತ್ತು ನಿನ್ನ ಹೆಂಡತಿ ಸಸ್ಯಾಹಾರಿಗಳು ಓಕೆ. ಬಟ್ ನಿಮ್ಮ ಮಗಳು?

ಇಲ್ಲಿನ ಕಾಫಿ ಅತ್ಯಂತ ರುಚಿಕರ . ನಮ್ಮ ಫಿಲ್ಟರ್ ಕಾಫಿಯನ್ನ ಹೋಲುತ್ತದೆ . ಎಲ್ಲವೂ ಫ್ರೆಶ್ . ಮಷಿನ್ ಮೇಲೆ ಕಾಫಿ ಬೀಜವಿರುತ್ತದೆ . ಅದು ಪುಡಿಯಾಗಿ ಇನ್ನೊಂದು ಡಬ್ಬದಲ್ಲಿ ಶೇಖರವಾಗಿರುತ್ತದೆ . ಅದನ್ನ ತೆಗೆದು ನಮ್ಮ ಕಣ್ಣ ಮುಂದೆ ಡಿಕಾಕ್ಷನ್ ಆಗಿ ಪರಿವರ್ತಿಸಿ ಬಿಸಿ ಬಿಸಿ ಹಾಲನ್ನ ಬೆರೆಸಿ ಕೊಡುತ್ತಾರೆ. ಭಾರತದಲ್ಲಿ ಕಾಫಿ ಅಷ್ಟೊಂದು ಕೊಡುವುದಿಲ್ಲ .ಮನೆಗಳಲ್ಲಿ 150 ಅಥವಾ 200 ಮಿಲಿ ಲೀಟರ್ ಕೊಡುತ್ತಾರೆ .

ಹೋಟೆಲ್ ಗಳಲ್ಲಿ 100 ಮಿಲಿ ಲೀಟರ್ ಕೊಡುವುದು ಭಾರತದಲ್ಲಿ ಸಾಮಾನ್ಯ . ಇದು ಸ್ಪೇನ್ ನಲ್ಲಿ 300 ಮಿಲಿ ಲೀಟರ್ ಕೊಡುವುದು ಸಾಮಾನ್ಯ. ನಿಮಗೆ ಕಡಿಮೆ ಬೇಕಿದ್ದರೆ 'ಕೂರ್ತಾದೋ ಪರ್ಫಾವೊರ್ ' ಎನ್ನಬೇಕು . ಆಗ ಕಡಿಮೆ ನೀಡುತ್ತಾರೆ . ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ . ಪ್ರಾರಂಭದಲ್ಲಿ ಇದೇನು ಇಷ್ಟೊಂದು ಕಾಫಿ ಎನ್ನಿಸುತ್ತಿತ್ತು . ಆಮೇಲೆ ಅದು ಅಭ್ಯಾಸವಾಗಿ ಹೋಯ್ತು.

ಹೀಗೆ ಬಾರ್ಸಿಲೋನಾ ದಲ್ಲಿನ ಪ್ರಥಮ ದಿನಗಳಲ್ಲಿ ಆಹಾರವಿಲ್ಲದೆ ಒದ್ದಾಡಿದ ದಿನಗಳಲ್ಲಿ ಒಂದಷ್ಟು ನೆಮ್ಮದಿ ಕೊಟ್ಟದ್ದು ಕಾಫಿ . ಭಾರತಕ್ಕೆ ಸನಿಹವಾದ ನಾನೂ ಯಾವುದೇ ಚಿಂತೆ ಇಲ್ಲದೆ ಸೇವಿಸಬಹುದಾಗಿದ್ದ ಏಕೈಕ ದ್ರಾವಣ ಕಾಫಿಯಾಗಿತ್ತು . ಶಾಲೆಗೆ ಹೋಗದೆ ಸ್ಪ್ಯಾನಿಷ್ ಕಲಿಕೆಯನ್ನ ಸರಾಗ ಮಾಡಿದ್ದು ಕೂಡ ಅಪರೋಕ್ಷವಾಗಿ ಕಾಫಿ . ಕಾಫಿ ಬಾರ್ ಗಳಲ್ಲಿ ವಾರಾಂತ್ಯ ಗಳಲ್ಲಿ ಗಂಟೆಗಟ್ಟಲೆ ಕೂತು ಅಲ್ಲಿನ ಸ್ಥಳೀಯರೊಂದಿಗೆ ಮಾತನಾಡಿ ಕಲಿತದ್ದು . ಈ ಕಾರಣಕ್ಕೆ ನನಗೆ ಸ್ಪ್ಯಾನಿಷ್ ಲೋಕಲ್ ಅಕ್ಸೆನ್ಟ್ ಬರುತ್ತದೆ ಎನ್ನುವ ಹೆಮ್ಮೆ ನನ್ನದು .

ಹೇಗೆ ಬ್ರಿಟನ್ ಇಂಗ್ಲಿಷ್ ಮಾತನಾಡುವುದು ಬೇರೆ ರೀತಿ ಇರುತ್ತದೆ , ಹೇಗೆ ಅಮೆರಿಕನ್ ಉಚ್ಚಾರಣೆ ಬೇರೆ ಇರುತ್ತದೆ , ಹಾಗೆ ಸ್ಪ್ಯಾನಿಷ್ ಕೂಡ ದೇಶದಿಂದ ದೇಶಕ್ಕೆ ಮಾತನಾಡುವ ರೀತಿ ಬೇರೆಯಿದೆ . ಸ್ಪೇನ್ ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ . ನನ್ನದು ಸ್ಪೇನ್ ಶೈಲಿಯ ಮಾತು . ನಿಮಗೆ ಗೊತ್ತಿರಲಿ ಇಂದಿಗೆ ಸ್ಪ್ಯಾನಿಷ್ ಜಗತ್ತಿನ 27 ದೇಶಗಳಲ್ಲಿ ಆಡಳಿತ ಭಾಷೆಯಾಗಿದೆ.

ಕೇಳಿಸಿಕೊಳ್ಳಿ.. ಗೋಡೆಗೂ ಕಿವಿ ಭಾರತದಲ್ಲಿ ಮಾತ್ರವಲ್ಲ ಸ್ಪೇನ್ ನಲ್ಲೂ ಇದೆ!

ಕಾಫಿ ವಿಷಯದಲ್ಲಿ ಯೂರೋಪಿನ್ ದೇಶಗಳು ಸೇಫ್ ಹೆವೆನ್ . ಮುಕ್ಕಾಲು ಪಾಲು ಯೂರೋಪಿಯನ್ನರು ಕಾಫಿ ಪ್ರಿಯರು . ಇತ್ತೀಚಿಗೆ ಗ್ರೀನ್ ಟೀ ಹಾವಳಿ ಸ್ವಲ್ಪ ಹೆಚ್ಚಾಗಿದೆ . ಅದು ಬೇರೆ ವಿಷಯ . ಕಾಫಿ ಬೆಲೆಯೂ ಅಷ್ಟೇ ದೇಶದಿಂದ ದೇಶಕ್ಕೆ ಒಂದಷ್ಟು ಬದಲಾವಣೆ ಇದ್ದೆ ಇದೆ . ಇದರ ಜೊತೆಗೆ ಕಾಫಿ ನೀಡುವ ವಿಧಾನದಲ್ಲೂ ಕೂಡ ಬದಲಾವಣೆ ಇದೆ . ಬಾರ್ಸಿಲೋನಾ ದಲ್ಲಿ ಕಾಫಿ ಮಾತ್ರ ಕೊಡುತ್ತಾರೆ . ಅಂದಲೂಸಿಯಾ ಎನ್ನುವ ರಾಜ್ಯಕ್ಕೆ ಹೋದರೆ ಅಲ್ಲಿ ಕಾಫಿ ಜೊತೆಗೆ ಒಂದೆರೆಡು ಬಿಸ್ಕತ್ ನೀವು ಕೇಳದೆ ಡಿಫಾಲ್ಟ್ ನೀಡುತ್ತಾರೆ .

ಪೋರ್ಚುಗಲ್ ಕಥೆಯೂ ಸೇಮ್ . ಕೇಳದೆ ಬಿಸ್ಕತ್ ಕಾಫಿಗೆ ಜೊತೆಯಾಗುತ್ತೆ . ಇನ್ನು ಫ್ರಾನ್ಸ್ ಕಥೆ ಬೇರೆ . ಇಲ್ಲಿ ಕಾಫಿಗಿಂತ ಕೆಫೆಚಿನೋ ಜಾಸ್ತಿ ಸೇವಿಸುತ್ತಾರೆ . ಕಾಫಿಯ ಜೊತೆ ಲೈಟಾಗಿ ಚಾಕೋಲೇಟ್ ಬೆರೆಸಿರುತ್ತಾರೆ . ಜರ್ಮನಿ , ಸ್ವಿಸ್ ಹೀಗೆ ದೇಶ ಯಾವುದೇ ಇರಲಿ ಕಾಫಿಯಂತೂ ಸಿಗುತ್ತದೆ . ಅದು ಚನ್ನಾಗಿ ಕೂಡ ಇರುತ್ತದೆ . ಸ್ವಿಸ್ ದೇಶದ್ದು ಸ್ವಲ್ಪ ವಿಚಿತ್ರ ಕಥೆ . ಇಲ್ಲಿ ಸ್ಟಾರ್ ಬಕ್ಸ್ ಸಾಮಾನ್ಯ ಕಾಫಿ ಬಾರ್ ನಂತೆ ಎಲ್ಲೆಡೆ ಇದೆ .

ಲೋಕಲ್ ಬಾರ್ ನಲ್ಲಿ ಸಿಗುವ ಕಾಫಿಗಿಂತ ಕಡಿಮೆ ಬೆಲೆಯಲ್ಲಿ ಸ್ಟಾರ್ ಬಕ್ಸ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ . ಜಗತ್ತಿನೆಲ್ಲೆಡೆ ಇದು ಉಲ್ಟಾ ! ಲೋಕಲ್ ಬಾರ್ಗಳಲ್ಲಿ ಕಡಿಮೆ ಇರುತ್ತದೆ . ಇಲ್ಲಿ ಮಾತ್ರ ಲೋಕಲ್ ಬಾರ್ ಗಳು ಹೆಚ್ಚು ಪ್ರಸಿದ್ಧ . ಕಾಫಿಯ ರುಚಿಯಲ್ಲೂ ಒಂದಷ್ಟು ಬದಲಾವಣೆ ಅಲ್ಲಿನ ಜನರ ಟೇಸ್ಟ್ ಪ್ರಿಫೆರನ್ಸ್ ಮೇಲೆ ಬದಲಾಗುತ್ತದೆ . ಹೀಗಾಗಿ ಬಾರ್ ಹೊಕ್ಕು ಕಾಫಿ ಕೊಡಿ ಎನ್ನುವ ನಿವೇದನೆ ಇಟ್ಟರೆ ಮರುಕ್ಷಣದಲ್ಲಿ ಹಾಲು ಬಿಸಿ ಎಷ್ಟಿರಬೇಕು ? ಸ್ಟ್ರಾಂಗ್ ಅಥವಾ ಲೈಟ್ ? ವಿಥ್ ಕೆಫೆಯಿನ್ ಅಥವಾ ವಿಥೌಟ್ ? ಹೀಗೆ ಹಲವಾರು ಪ್ರಶ್ನೆ ಕೇಳುತ್ತಾರೆ .

ಎರಡು ದಿನ ಅಲ್ಲಿಗೆ ಹೋದರೆ ಸಾಕು ಪ್ರಶ್ನೆಗಳು ಇರುವುದಿಲ್ಲ ! ನಿಮ್ಮ ಅಭಿರುಚಿ ಅವರಿಗೆ ಗೊತ್ತಾಗಿರುತ್ತದೆ . ಕುಳಿತೆಡೆಗೆ ಕಾಫಿ ತಂದಿಟ್ಟು , ಆಸ್ವಾದಿಸಿ ಎನ್ನುವ ಮಾತನ್ನ ತಪ್ಪದೆ ಹೇಳಿ ಹೋಗುತ್ತಾರೆ .ಹೀಗೆ ಹತ್ತಾರು ದೇಶದ ಕಾಫಿ ಕುಡಿದಿದ್ದರೂ ನನಗೆ ಅರೇಬಿಕಾ ತುಂಬಾ ಇಷ್ಟ . ಅದರಲ್ಲೂ ಕೊಲಂಬಿಯಾ ದೇಶದ ಅರೇಬಿಕಾ ಕಾಫಿ ಬಹಳ ಇಷ್ಟ . ಬಾರ್ಸಿಲೋನಾ ಗೆ ಬಂದಾಗ ಇಲ್ಲಿ ಯಾವುದೇ ಭಾರತೀಯ ಚಾನಲ್ ಇರಲಿಲ್ಲ .

ಭಾರತೀಯ ಚಾನಲ್ ಅಥವಾ ಚಲನಚಿತ್ರ ನೋಡಬೇಕಂದರೆ ದೊಡ್ಡ ಜರಡಿಯಾಕಾರದ ಆಂಟೆನಾ ಹಾಕಬೇಕಿತ್ತು . ಅದೂ ಕೂಡ ಬಾರ್ಸಿಲೋನಾ ದಲ್ಲಿ ಸಿಗುತ್ತಿರಲಿಲ್ಲ . ಇಂಗ್ಲೆಂಡ್ ನಲ್ಲಿ ಒಬ್ಬ ಸರ್ದಾರ್ಜಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದ . ಪೂರ್ಣ ಸಾವಿರ ಯುರೋ ಇದನ್ನ ಸ್ಥಾಪಿಸಲು ಖರ್ಚಾಗುತ್ತಿತ್ತು . ಆಮೇಲೆ ಪ್ರತಿವರ್ಷ 350 ಯುರೋ ಕೊಟ್ಟು ಕಾರ್ಡ್ ರಿನ್ಯೂವಲ್ ಮಾಡಿಸಬೇಕಿತ್ತು . ಇದೇನೋ ಸುಲಭದ ಕೆಲಸ . ಆದರೆ ಬಿಲ್ಡಿಂಗ್ ಮೇಲೆ ಇಂತಹ ಆಂಟೆನಾ ಅಳವಡಿಸಲು ನಾವಿದ್ದ ಅಪಾರ್ಟ್ಮೆಂಟ್ ಕಮ್ಯುನಿಟಿ ಇಂದ ಅನುಮತಿ ಪಡೆಯಬೇಕಿತ್ತು .

ನಾವೆಲ್ಲಾ ಹೆಸರಿಗಷ್ಟೇ ಬೇರೆ ಬೇರೆ ! ನಮ್ಮ ಭಾವನೆಯ ಮೂಲ ಮಾತ್ರ ಒಂದೇ !!

ಮುಕ್ಕಾಲು ಪಾಲು ಅಪಾರ್ಟ್ಮೆಂಟ್ ಗಳು ಇದಕ್ಕೆ ಅನುಮತಿ ಕೊಟ್ಟಿರಲಿಲ್ಲ . ಅವರಿಗೆ 'ಈ ಪಾಕಿಸ್ತಾನಿ ಅವರ ದೇಶದ ಜೊತೆ ಏನೋ ಗುಟ್ಟಾಗಿ ಮಾತನಾಡಲು ಇಂತಹ ಆಂಟೆನಾ ಹಾಕಿಸುತ್ತಿದ್ದಾನೆ ' ಎನ್ನುವ ಗುಮಾನಿ . ಅಯ್ಯಗಳಿರಾ ನಾನು ಪಾಕಿಸ್ತಾನಿಯಲ್ಲ ಎಂದು ವಿಧ ವಿಧವಾಗಿ ಗೋಗರೆದರು ಅದು ಸ್ಪಾನಿಷ್ ಜನಕ್ಕೆ ಅರ್ಥವಾಗುತ್ತಲೇ ಇರಲಿಲ್ಲ . 2004ರ ಅಂತ್ಯಕ್ಕೆ ಸ್ವಂತ ಮನೆಯನ್ನ ಕೊಂಡೆ . 2005ರಲ್ಲಿ ಮದುವೆಯಾಯ್ತು ,ರಮ್ಯ ಜೊತೆಯಾದಳು .

ಪ್ಯಾರಾಬೋಲಿಕ್ ಆಂಟೆನಾ ಹಾಕಿಸು ಎನ್ನುವುದು ಅವಳ ಒತ್ತಾಯ . ಸರಿ ಇಷ್ಟು ದಿನ ಬಾಡಿಗೆ ಮನೆ ಕಮ್ಯುನಿಟಿ ಯವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಆಗಿತ್ತು . ಈಗ ಸ್ವಂತ ಮನೆ ಏನೇ ಆದರೂ ಸರಿ ಈ ಆಂಟೆನಾ ಹಾಕಿಸಿಯೇ ಸರಿ ಎಂದು, ನಮ್ಮ ಕಮ್ಯುನಿಟಿ ಪ್ರೆಸಿಡೆಂಟ್ ಅನ್ನು ವಿಚಾರಿಸಿದೆ . ಅವನು ಇಲ್ಲ ಅಂತ ಉದ್ದುದ್ದ ಕೈ ಆಡಿಸಿದ .ನಾನು ಬಿಡಲಿಲ್ಲ .ಮುಂದಿನ ಮೀಟಿಂಗ್ ನಲ್ಲಿ ವಿಷಯ ಪ್ರಸ್ತಾಪ ಮಾಡು ಎನ್ನುವುದು ಅವನ ಉತ್ತರವಾಗಿತ್ತು.

ಮುಂದಿನ ಮೀಟಿಂಗ್ ನಲ್ಲಿ ನಮ್ಮ ಬಿಲ್ಡಿಂಗ್ ನಲ್ಲಿದ್ದ 36 ಫ್ಲ್ಯಾಟ್ಗಳಲ್ಲಿ 24 ಫ್ಲಾಟ್ ನಲ್ಲಿದ್ದವರು ಸ್ಪಾನಿಷರು. ನಾನು ಮತ್ತು ಇನ್ನೊಂದು ಸೌತ್ ಅಮೆರಿಕನ್ ಕುಟುಂಬ ಮಾತ್ರ ವಿದೇಶಿಯರು . ಅದೂ ಹೇಳಿಕೇಳಿ ಮುಕ್ಕಾಲು ಪಾಲು ಅಲ್ಲಿನ ಸ್ಪ್ಯಾನಿಷ್ ನಿವಾಸಿಗಳು ಹಿರಿಯ ನಾಗರಿಕರು . ಬದಲಾವಣೆಗೆ ಬಡಪೆಟ್ಟಿಗೂ ಒಪ್ಪದವರು. ಕೊನೆಗೆ ಮೂರು ತಿಂಗಳ ಹೋರಾಟದ ನಂತರ ಒಬ್ಬ ಪಕ್ಕದ ಮನೆಯ ತಾತ ಎಲ್ಲರಿಗೂ ನೀನು ಪಾಕಿಸ್ತಾನದ ಜೊತೆ ಗುಟ್ಟಾಗಿ ಮಾತನಾಡಲು ಇದನ್ನ ಹಾಕಿಸುತ್ತಿದ್ದೀಯ ಅಂತ ಗುಮಾನಿ ಅದಕ್ಕೆ ಅವರು ಒಪ್ಪುತ್ತಿಲ್ಲ ಎಂದ.

ನನಗಿಷ್ಟು ಸಾಕಾಗಿತ್ತು. ಲಾಯರ್ ಒಬ್ಬನನ್ನ ನೇಮಿಸಿ ಅವನಿಗೆ ನನ್ನ ಕಷ್ಟವನ್ನ ಹೇಳಿಕೊಂಡೆ. ಮುಂದಿನ ಮೀಟಿಂಗ್ ನಲ್ಲಿ ಆತ ನನ್ನ ಜೊತೆಗೆ ಬಂದ, ಅವರಿಗೆ ಒಂದಷ್ಟು ತಿಳಿ ಹೇಳಿದ. ನೀವು ಒಪ್ಪದಿದ್ದರೆ ಬೇರೆ ದಾರಿಯಿಲ್ಲ ನಾನು ನೋಟೀಸ್ ಕಳಿಸುತ್ತೇನೆ. ಕೊನೆಗೆ ಅವನಿಗೆ ಗೆಲುವಾಗುತ್ತದೆ. ನನ್ನ ಫೀಸ್ ಸಹಿತ ಅವನ ಮಾನಸಿಕ ನೆಮ್ಮದಿ ಕಸಿದ ಆಧಾರದ ಮೇಲೆ ಸಾಕಷ್ಟು ಹಣ ನಿಮ್ಮಿಂದ ಕೈ ಬಿಡುತ್ತದೆ ಎನ್ನುವ ಧಮಕಿಯನ್ನ ಹಾಕಿದ. ಕೊನೆಗೂ ವರ್ಕ್ ಆಗಿದ್ದು ಆ ಧಮಕಿ .

ಅಂತೂ ಇಂತೂ ಮೂರ್ನಾಲ್ಕು ತಿಂಗಳ ಹೋರಾಟದ ನಂತರ ಪ್ಯಾರಾಬೋಲಿಕ್ ಸ್ಥಾಪಿಸಿ ಆಗ ಬರುತ್ತಿದ್ದ zee ಮೂವೀಸ್ ಮತ್ತು B4U ಮೂವೀಸ್ ನೋಡಿ ಖುಷಿಪಟ್ಟೆವು. ಮೂರು ದಶಕದಲ್ಲಿ ಬದುಕು , ಜಗತ್ತು ಬದಲಾದ ರೀತಿ , ವೇಗ ಅಚ್ಚರಿ ಹುಟ್ಟಿಸುತ್ತದೆ . ಈಗ ಎಲ್ಲವೂ ಕೈ ಬೆರಳ ತುದಿಯಲ್ಲಿದೆ ! . ನೆಟ್ ಫ್ಲಿಕ್ಸ್ , ಅಮೆಜಾನ್ ಪ್ರೈಮ್ ಜೊತೆಗೆ ಇನ್ನೂ ಅಸಂಖ್ಯಾತ ಸರ್ವಿಸ್ ಪ್ರೊವೈಡರ್ಸ್ ಇಂದು ಮಾರುಕಟ್ಟೆಯಲ್ಲಿದ್ದಾರೆ .

ಅದೇ ಭೂಮಿ, ಅದೇ ಆಕಾಶ, ನೀರು ,ಗಾಳಿ, ಆದರೂ ಮರದಿಂದ ಮರಕ್ಕೆ ಬದಲಾಗುತ್ತದೆ ಬೇರು!!

ನಮಗೆ ಬೇಕಾದ ಫಿಲಂ , ಬೇಕಾದ ಡಾಕ್ಯುಮೆಂಟರಿ ಇತರ ಏನೇ ಆದರೂ ಎಲ್ಲವನ್ನೂ ನಮಗಿಷ್ಟದ ಸಮಯದಲ್ಲಿ ನಾವು ನೋಡಬಹುದು . ಇಂತಹ ಬದಲಾವಣೆ ನೋಡಿದಾಗೆಲ್ಲ ಹಿಂದಿನ ದಿನಗಳಲ್ಲಿ ಒಂದು ಚಲನಚಿತ್ರ ವೀಕ್ಷಿಸಲು ಇಷ್ಟಲ್ಲಾ ಹರಸಾಹಸ ಪಟ್ಟಿದ್ದೆವು ಎನ್ನುವುದು ನೆನೆದಾಗ ಇವತ್ತಿನ ದಿನ ನಿಜವೋ ಸುಳ್ಳೋ ಎನ್ನುವ ಭಾವನೆ ಬರುತ್ತದೆ . ಮುಂದಿನ ಕೆಲವು ದಿನಗಳಲ್ಲಿ ಚಿತ್ರ ಮಂದಿರಗಳು ಕೂಡ ಇಲ್ಲವಾಗಿ ಎಲ್ಲವನ್ನೂ ಒಟಿಟಿ ಆಕ್ರಮಿಸುತ್ತದೆ . ಚಲನಚಿತ್ರ ಮಾತ್ರ ಅಂತಲ್ಲ ಎಂಟರ್ಟೈನ್ಮೆಂಟ್ ಕ್ಷೇತ್ರ ಪೂರ್ಣ ಬದಲಾಗುತ್ತಿದೆ.

ನಂತರದ ದಿನಗಳಲ್ಲಿ ವೀಕ್ ಎಂಡ್ ಬಂದರೆ ಸಾಕು ಬಾರ್ಸಿಲೋನಾ ದಿಂದ 'ಈಜಿ ಜೆಟ್' ಏರಿ ಇಂಗ್ಲೆಂಡ್ ನ ಲಂಡನ್ ನಗರವನ್ನ ತಲುಪುತ್ತಿದ್ದೆವು . ಲಂಡನ್ ನಗರದ ಸಿಂಗಲ್ ಸ್ಕ್ರೀನ್ ಥಿಯೇಟರ್ ನಲ್ಲಿ ಗುಜರಾತಿ ಹುಡುಗಿಯರು , ಮಹಿಳೆಯರು , ಅಜ್ಜಿಯರು ಸಿನಿಮಾವನ್ನ ಕೇಕೆ ಹಾಕುತ್ತ , ವಿಸಲ್ ಹೊಡೆಯುತ್ತ ನೋಡುವುದಕ್ಕೆ ಸಾಕ್ಷಿಯಾದೆವು . ಗಜನಿ , ರಬ್ ನೇ ಬನಾದಿಯ ಜೋಡಿ ಹೀಗೆ ಅಲ್ಲಿ ನೋಡಿದ ಸಿನೆಮಾಗಳ ಲಿಸ್ಟ್ ದೊಡ್ಡದು .

ನನಗೆ ಸಿನಿಮಾ ಅಂದರೆ ಅಷ್ಟೇನೂ ಹುಚ್ಚಿಲ್ಲ . ವಾರ ಪೂರ್ತಿ ಸೋಶಿಯಲ್ ಲೈಫ್ ಇಲ್ಲದ ರಮ್ಯಳಿಗೆ ಈ ಸಿನಿಮಾಗಳು ಲೈಫ್ ಲೈನ್ ಆಗಿದ್ದವು . ಬಾರ್ಸಿಲೋನಾ ಮತ್ತು ಲಂಡನ್ ನಗರದ ಗಲ್ಲಿಗಲ್ಲಿಯನ್ನ ಬಿಡುಬೀಸಾಗಿ ಸುತ್ತಿದ ಆ ದಿನಗಳ ನೆನಪು ಸುಖಕರ.

ಇನ್ನಷ್ಟು spain ಸುದ್ದಿಗಳು