ನಾವೆಲ್ಲಾ ಹೆಸರಿಗಷ್ಟೇ ಬೇರೆ ಬೇರೆ ! ನಮ್ಮ ಭಾವನೆಯ ಮೂಲ ಮಾತ್ರ ಒಂದೇ !!

By ರಂಗಸ್ವಾ,ಮಿ ಮೂಕನಹಳ್ಳಿ
|

ಇವತ್ತು ಜಗತ್ತು ಓಡುತ್ತಿರುವ ವೇಗದ ಲೆಕ್ಕಾಚಾರದಲ್ಲಿ ನಾವು ಬಂಧು -ಬಳಗದೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ದೂರದ ಮಾತಾಯಿತು . ಒಡಹುಟ್ಟಿದವರು ಕೂಡ ಒಬ್ಬರ ಮುಖ ಒಬ್ಬರು ನೋಡಿ ವರ್ಷಗಳು ಕಳೆದಿರುತ್ತವೆ . ಕೆಲಸ ಬದುಕು ಅರಸಿ ಭೂಪಟದ ಒಂದೊಂದು ಮೂಲೆಯಲ್ಲಿ ಬದುಕುವ ಜನರದ್ದು ಒಂದು ಮಾತಾದರೆ , ಪಕ್ಕದ ರಸ್ತೆಯಲ್ಲಿದ್ದೂ ಮುಖ ನೋಡದ ಸಂಬಂಧ ಇನ್ನಷ್ಟು ಜನರದ್ದು .

ಭೂಮಿಯ ಬೆಲೆ ಬೆಂಗಳೂರಿನಲ್ಲಿ ಗಗನ ಮುಟ್ಟಿದ್ದೆ ತಡ ಸಂಬಂಧಗಳು ಪಾತಾಳಕ್ಕಿಳಿದಿವೆ . ಹೀಗಾಗಿ ಇಂದು ಸಮಾನ ಮನಸ್ಕರ ಜೊತೆ ಮಾತನಾಡಿದಷ್ಟು ವೇಳೆ ಒಡಹುಟ್ಟಿದವರ ಜೊತೆ ಅಥವಾ ಬಂಧುಗಳ ಜೊತೆ ಮಾತಾಡುವುದಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದು 2003ರ ಡಿಸೆಂಬರ್ ತಿಂಗಳ ಕೊನೆಯ ದಿನ . ವರ್ಷದ ಕೊನೆಯ ದಿನದಂದು ಜಗತ್ತಿನೆಲ್ಲೆಡೆ ವಿವರಿಸಲಾಗದ ಹುಚ್ಚು ಉನ್ಮಾದ .

ಅದೇ ಭೂಮಿ, ಅದೇ ಆಕಾಶ, ನೀರು ,ಗಾಳಿ, ಆದರೂ ಮರದಿಂದ ಮರಕ್ಕೆ ಬದಲಾಗುತ್ತದೆ ಬೇರು!!

ಜಗತ್ತನ್ನ ಗೆದ್ದೇ ಬಿಟ್ಟೆವು ಎನ್ನುವಂತ ಹುಮ್ಮಸ್ಸು . ಯುವಜನತೆಯಂತೂ ನಾಳೆ ಕಂಡವರಾರು ಎನ್ನುವ ಫಿಲಾಸಫಿ ಯಲ್ಲಿ ನಿತ್ಯ ಬದುಕುವರು ಇನ್ನು ವರ್ಷದ ಕೊನೆಯ ದಿನ ಅಂದ ಮೇಲೆ ಕೇಳುವುದಿನ್ನೇನು ? 2003ರ ವೇಳೆಗೆ ನಾನು ಬಾರ್ಸಿಲೋನಾ ಸೇರಿ ಆಗಲೇ ನಾಲ್ಕು ವರ್ಷ ಕಳೆದಿತ್ತು . ಆದರೂ ಡಿಸೆಂಬರ್ 31ನನ್ನ ಪಾಲಿಗೆ ವರ್ಷದ ಎಲ್ಲಾ ದಿನದಂತೆ ಇನ್ನೊಂದು ದಿನವಷ್ಟೇ ! ಹೆಚ್ಚೆಂದರೆ ರಾತ್ರಿ 10 ಗಂಟೆಗೆ ನಿದ್ರಾದೇವಿಯ ಮಡಿಲಲ್ಲಿ ಗೊರಕೆ ಹೊಡೆಯುವುದು ಅಭ್ಯಾಸ .

ಆದರೇನು ಮಾಡುವುದು ನನ್ನ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದ ನನ್ನ ಸ್ಪಾನಿಷ್ ಗೆಳೆಯರ ಒತ್ತಾಯಕ್ಕೆ ಕಟ್ಟು ಬಿದ್ದು ಲಾಸ್ ರಾಂಬ್ಲಾಸ್ ರಸ್ತೆಗೆ ಹೋಗಿದ್ದೆ . ಲಾಸ್ ರಾಂಬ್ಲಾಸ್ ಬಾರ್ಸಿಲೋನಾದ ಟೈಮ್ ಸ್ಕ್ವೇರ್. ಅಮೇರಿಕಾದಲ್ಲಿ ಟೈಮ್ ಸ್ಕ್ವೇರ್ ಎಷ್ಟು ಪ್ರಸಿದ್ಧವೂ ಬಾರ್ಸಿಲೋನಾ ದಲ್ಲಿ ರಾಂಬ್ಲಾಸ್ ಅಷ್ಟೇ ಪ್ರಸಿದ್ಧ. ರಸ್ತೆಯಲ್ಲಿ ಅಲ್ಲಲ್ಲಿ ಪುಕ್ಕಟೆ ಬಿಯರ್ ಹಂಚುತ್ತಿದ್ದರು . ಜನ ನಿನ್ನೆ- ನಾಳೆಗಳ ಮರೆತು ಕೇವಲ ಆ ಕ್ಷಣದಲ್ಲಿ ಜೀವಿಸುತ್ತಿರುವರಂತೆ ಕಂಡು ಬರುತ್ತಿದ್ದರು .

ನಾನು ಮಾತ್ರ ಪೂರ್ಣವಾಗಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಚಡಪಡಿಸುತ್ತಲೇ ಇದ್ದೆ . ಜೊತೆಗೆ ನಿತ್ಯವೂ ಹತ್ತಕ್ಕೆ ಮುಂಚೆ ಮಲಗಿ ಅಭ್ಯಾಸವಾಗಿದ್ದರಿಂದ ನಿದ್ರಾದೇವಿಯ ಸೆಳೆತ ಕೂಡ ಜೋರಾಗೆ ಇತ್ತು . ನನ್ನ ಗಮನಿಸಿದ ಗೆಳೆಯ ಕಾರ್ಲೋಸ್ ' ರಂಗ ನೋ ಥೇ ಪ್ರೊಕ್ಯೂಪೆಸ್ ( Ya que estamos en el baile, bailemos.)ಯಾ ಕೆ ಎಸ್ತಮೋಸ್ ಇನ್ ಎಲ್ ಬೈಲೆ , ಬೈಲಾಮೊಸ್ ' ಎಂದ .

ಜಗತ್ತಿನ ಒಂದು ಭಾಗ ಚೆನ್ನಾಗಿ ಬಾಳಬೇಕೆಂದರೆ ಉಳಿದರ್ಧವೇಕೆ ಸಾಯಬೇಕು? ಕ್ರೂಜ್ ಶಿಪ್ಪಿನ ಕಥೆ!

ಅಂದರೆ ರಂಗ ಚಿಂತಿಸಬೇಡ , ನಾವು ನೃತ್ಯ ಮಾಡಲು ಬಂದಾಗಿದೆ , ನೃತ್ಯ ಮಾಡೋಣ ಎಂದರ್ಥ. ಕಾರ್ಲೋಸ್ ಮಾತು ಕೇಳಿ ತಕ್ಷಣ ನನಗೆ ನೀರಿಗಿಳಿದ ಮೇಲೆ ಮಳೆಯೇನು , ಚಳಿಯೇನು ಎನ್ನುವ ಮಾತು ನೆನಪಿಗೆ ಬಂದಿತು. ನಾವೆಲ್ಲ ಹೆಸರಿಗಷ್ಟೇ ಬೇರೆ ಬೇರೆ ಮೂಲದಲ್ಲಿ ನಮ್ಮ ಭಾವನೆಯೊಂದೇ ಎನ್ನುವುದನ್ನ ಬದುಕು ಕಲಿಸುತ್ತಾ ಹೋಯಿತು. ನನ್ನ ಸ್ಪಾನಿಷ್ ಗೆಳೆಯರಿಗೆ ನಮ್ಮ ದೇಶದ ವರ್ಣ ವ್ಯವಸ್ಥೆ ಬಗ್ಗೆ ಅತಿ ಕುತೂಹಲ .

ನಿಮ್ಮ ಸಮಾಜ ಸ್ಥೂಲವಾಗಿ ನಾಲ್ಕು ವಿಭಾಗವಾಗಿ ವಿಭಜಿಸಲಾಗಿದೆ ಅಲ್ವಾ ಎಂದು ಮೊದಲ ಬಾರಿಗೆ ಕಾರ್ಲೋಸ್ ಕೇಳಿದಾಗ ನನಗೆ ಬಹಳ ಆಶ್ಚರ್ಯವಾಗಿತ್ತು . ಕಾರ್ಲೋಸ್ ಗೆ ನಮ್ಮ ಜಾತಿ ಪದ್ದತಿಯ ಬಗ್ಗೆಯೂ ಸಾಕಷ್ಟು ಅರಿವಿತ್ತು . ಒಬ್ಬ ವ್ಯಕ್ತಿ ಯಾವುದೊ ಒಂದು ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಅವನು ಶ್ರೇಷ್ಠ ಅಥವಾ ನಿಕೃಷ್ಟ ಎಂದು ಹೇಳುವುದು ಬಹಳ ತಪ್ಪು . ರಾಜನ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ರಾಜನ ಮಗ ರಾಜನಾಗುವುದು ಕೂಡ ತಪ್ಪು ..

ನಮ್ಮ ದೇಶದಲ್ಲಿ ನೋಡು ರಾಜನ ಮಕ್ಕಳು ರಾಜರಾಗುತ್ತಾರೆ ಇದು ತಪ್ಪು ಎನ್ನುವುದು ಕಾರ್ಲೋಸ್ ವಾದ .ಜನ ಸಾಮಾನ್ಯನಲ್ಲಿ ಶಕ್ತಿಯಿದ್ದರೆ ರಾಜನಾಗಲು ಬೇಕಾಗುವ ಅರ್ಹತೆಗಳಿದ್ದರೆ ಅವನು ರಾಜನಾಗಬಾರದೇಕೆ ? ಎನ್ನುವುದು ಕಾರ್ಲೋಸ್ ಪ್ರಶ್ನೆ . ' ರಂಗ ಹಾಗೆ ನೋಡಲು ಹೋದರೆ ನಾವೆಲ್ಲಾ ಒಂದೇ .. ಇಂದಿಗೂ ನಮ್ಮಲ್ಲಿ ಕೂಡ ರಾಯಲ್ ಬ್ಲಡ್ ಎನ್ನುವ ಪದ ಬಳಸುತ್ತೇವೆ ., ಭಾರತವನ್ನ ಮೂರನೇ ದರ್ಜೆ ದೇಶ ಎನ್ನುತ್ತೇವೆ ., ಹಾಗೆ ಹೇಳಲು ನಮಗೇನು ಹಕ್ಕಿದೆ ಅಲ್ಲದೆ ನಾವೇನು ಬಿನ್ನರಲ್ಲ ನಮ್ಮದೂ ಅದೇ ಮನಸ್ಥಿತಿ ಎಂದಿದ್ದನಾತ.

ಮೂಲದಲ್ಲಿ ಮನುಷ್ಯನ ಗುಣಗಳು ಒಂದೇ ಎನ್ನುವುದನ್ನ ತಿಳಿಯಬೇಕಾದರೆ ಹತ್ತಾರು ಕೆರೆಯ ನೀರನ್ನ ಕುಡಿಯಲೇ ಬೇಕಾಗುತ್ತದೆ. ವಿಷಯದ ತಳ ಮುಟ್ಟುವುದು ಇಂದು ಯಾರಿಗೂ ಬೇಡದ ಕೆಲಸ ಅವತ್ತಿನ ದಿನ ಜೈ ಎನ್ನಿಸಿಕೊಳ್ಳಲು ಎಷ್ಟು ಬೇಕು ಅಷ್ಟು ಮಾತ್ರ ಮಾಡಿ ಕೈ ತೊಳೆದುಕೊಂಡರೆ ಸಾಕು ಎನ್ನುವರ ಸಂಖ್ಯೆ ದೊಡ್ಡದಿದೆ . ಇಂತಹ ಸಂದರ್ಭದಲ್ಲಿ ಅಲ್ಪಸ್ವಲ್ಪ ತಿಳಿದುಕೊಂಡವರೇ ಮೇಧಾವಿ ಪಟ್ಟಕ್ಕೆ ಏರಿ ಬಿಡುತ್ತಾರೆ .

ನಾನು-ನೀವು -ಅವರು, ಯಾರಾದರೇನು? ಎಲ್ಲರೂ ಒಂದಲ್ಲ ಒಂದು ನಂಬಿಕೆಯಲ್ಲಿ ಬಂಧಿಗಳೇ ಅಲ್ಲವೇನು ?

ಆಗೆಲ್ಲಾ ಸಾಮಾನ್ಯವಾಗಿ ಅಂತಹ ವ್ಯಕ್ತಿಯ ಕುರಿತು ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೆ ರಾಜ ಎನ್ನುವ ಮಾತನ್ನ ಬಳಸುತ್ತೇವೆ . ಅರ್ಥ ಏನೂ ತಿಳಿವಳಿಕೆ ಇಲ್ಲದವರ ಮಧ್ಯೆ ಅಲ್ಪವಾದರೂ ತಿಳಿದುಕೊಂಡವನು ಎಂದು ಹೇಳುವುದಾಗಿದೆ . ದಿನ ಕಳೆದಂತೆ ಈ ಅಲ್ಪ ಜ್ಞಾನಿಗಳು ಕೂಡ ಪ್ರಚಂಡ ಜ್ಞಾನಿಗಳಂತೆ ಓಡಾಡುವುದಕ್ಕೆ ಶುರು ಮಾಡಿಬಿಡುತ್ತಾರೆ . ಆಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ' ಹಾಳೂರಿಗೆ ಉಳಿದವನೇ ಗೌಡ ' ಎನ್ನುವ ಇನ್ನೊಂದು ಮಾತನ್ನ ಕೂಡ ನಮ್ಮಲ್ಲಿ ಬಳಸುತ್ತೇವೆ .

ಅಂದು ಹೀಗೆ ಆಯಿತು ನಮ್ಮ ಸಂಸ್ಥೆಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಅಂದ್ರೆಯ ಎನ್ನುವ ಹುಡುಗಿಗೆ ಬಿಯಟ್ರಿಸ್ ಎನ್ನುವ ಹುಡುಗಿ ಏನನ್ನೋ ತಿಳಿಸಿ ಹೇಳುತ್ತಿದ್ದಳು . ನನ್ನ ವಿಭಾಗದ ಉಪ ಮುಖ್ಯಸ್ಥೆ ,ಗೆಳತಿ ಎವಾ ಅವರನ್ನ ನೋಡಿ ' ಮಿರಾ * ರಂಗ un ciego guiando a otro ciego ( ಉನ್ ಸಿಯಗೊ ಗಿಯಾಂದೋ ಆ ಒತ್ರೋ ಸಿಯಗೊ) ಎಂದಳು . ನಾನು ಎನ್ನಾಯ್ತು ಎನ್ನುವಂತೆ ಅವಳತ್ತ ನೋಡಿದೆ .

ಅವಳು ಮುಂದುವರಿದು ಬಿಯಟ್ರಿಸ್ ಕೆಲಸಕ್ಕೆ ಸೇರಿ ಇನ್ನು ವಾರ ಆಗಿಲ್ಲ ಆಗಲೇ ಅವಳನ್ನ ನಿನ್ನೆ ಸೇರಿದವಳಿಗೆ ಟ್ರೈನ್ ಮಾಡು ಎನ್ನುವುದು ಎಷ್ಟು ಸಮಂಜಸ ಈಸ್ ಕೊಮೊ ಉನ್ ಸಿಯಗೊ ಗಿಯಾಂದೋ ಆ ಊತ್ರೋ ಸಿಯಗೊ ಅಂದಳು . ಅರ್ಥ ಕಣ್ಣಿಲ್ಲದವನು/ವಳು ಇನ್ನೊಬ್ಬ ಕಣ್ಣಿಲ್ಲದವನಿಗೆ /ವಳಿಗೆ ಗೈಡ್ ಮಾಡುವಂತಿದೆ ಎನ್ನುವುದಾಗಿದೆ . ಅಂದರೆ ಈ ಸಂದರ್ಭದಲ್ಲಿ ಅಂದ್ರೆಯ ಮತ್ತು ಬಿಯಟ್ರಿಸ್ ಇಬ್ಬರೂ ಸಂಸ್ಥೆಗೆ ಹೊಸಬರು ಯಾರಿಗೂ ವಿಷಯದ ಮೇಲೆ ಹಿಡಿತವಿಲ್ಲ ಒಬ್ಬಳು ಇನ್ನೊಬ್ಬಳಿಗೆ ಏನು ತಾನೇ ಹೇಳಿಕೊಟ್ಟಾಳು ?

ಹೊರಗಿನಿಂದ ಎಷ್ಟೇ ಪ್ರೇರೇಪಣೆ ಸಿಕ್ಕರೂ ಅದು ಮನಸ್ಸಿನ ಕೂಗಿಗೆ ಸಮವಲ್ಲ!

ಇವತ್ತು ದೇಶ , ಭಾಷೆ ಗಡಿಗಳ ಮೀರಿ ಜಗತ್ತು ಎದಿರುಸುತ್ತಿರುವ ಮಹಾನ್ ಸಮಸ್ಯೆ ವಿಷಯ ಪರಿಣಿತರ ಅಥವಾ ವಿಷಯದಲ್ಲಿ ಆಸಕ್ತಿ ಇರುವರ ಕೊರತೆ . ಹೇಳಿಕೊಳ್ಳಲು ಜಗತ್ತಿನಲ್ಲಿ 700ಕೋಟಿಗೂ ಮೀರಿದ ಜನಸಂಖ್ಯೆಯಿದೆ . ಆದರೇನು ಕೆಲವೊಂದು ಹುದ್ದೆ ನಿರ್ವಹಿಸಲು ಜನರ ಕೊರತೆಯಿದೆ . ತತ್ಕಾಲಕ್ಕೆ ಯಾರನ್ನೋ ಆ ಜಾಗಕ್ಕೆ ತುಂಬಬಹುದು ಆದರೆ ಅಲ್ಲಿಗೆ ಬೇಕಾದ ನಿಖರತೆ , ನೈಪುಣ್ಯತೆ ಕೊರತೆ ಇದ್ದೆ ಇರುತ್ತದೆ .

ಇವತ್ತು ನಮಗೇನು ಬೇಕು ಅದಾಗಲು ಯಾರ ಅಡ್ಡಿಯೂ ಇಲ್ಲ , ಹಿಂದಿನಂತೆ ನೂರಾರು ಕಷ್ಟಗಳು ಕೂಡ ಇಲ್ಲ . ಹೀಗಿದ್ದೂ ಭಾರತ ಅಂತಲ್ಲ , ಜಗತ್ತಿನ ಎಲ್ಲೆಡೆ ಇಚ್ಚೆಯ ಕೊರತೆ ಜನರಲ್ಲಿ ಕಾಣುತ್ತಿದೆ. ಸ್ಪೇನ್ ನಲ್ಲಿ ಹಿತಾನೊ ಎನ್ನುವ ಒಂದು ಜನಾಂಗವಿದೆ. ಇದನ್ನ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ. ಜಿಪ್ಸಿ ಎಂದರೆ ಎಲ್ಲರಿಗು ಸುಲಭವಾಗಿ ಅರ್ಥವಾಗುತ್ತದೆ.

ನಮ್ಮಲ್ಲಿ ಸಂತೆ ನಡೆಯುವಂತೆ ಇಲ್ಲಿಯೂ ಸಂತೆಗಳು ನಡೆಯುತ್ತವೆ. ಭಾನುವಾರದ ಸಂತೆ , ಬುಧವಾರದ ಸಂತೆ , ಹೀಗೆ ಇಲ್ಲಿ ಸಂತೆಗಳ ಸಾಮ್ರಾಜ್ಯ ಇನ್ನೂ ಚಾಲ್ತಿಯಲ್ಲಿದೆ. ಉಪಯೋಗಿಸಿದ ವಸ್ತುಗಳಿಂದ , ಹೊಸ ವಸ್ತುಗಳವರೆಗೆ , ತರಕಾರಿಯಿಂದ , ತಿಂಡಿ , ಬಟ್ಟೆ , ಬ್ಯಾಗು ಹೀಗೆ ಇಲ್ಲಿ ಸಿಕ್ಕದಿರುವ ವಸ್ತುಗಳಿಲ್ಲ. ಇಲ್ಲಿ ವ್ಯಾಪಾರ ಮಾಡುವವರು ಮುಕ್ಕಾಲು ಪಾಲು ಹಿತಾನೊ ಸಮುದಾಯಕ್ಕೆ ಸೇರಿದವರು.

ಪ್ರತಿ ಭಾನುವಾರ ಈ ಸಂತೆಯಲ್ಲಿ ಒಂದು ರೌಂಡ್ ಹೊಡೆಯುವುದು ನನಗೆ ಖುಷಿ ನೀಡುತ್ತಿದ್ದ ಕೆಲಸಗಳಲ್ಲಿ ಒಂದು , ಈ ಸಂತೆ ಅಣ್ಣ (ಅಪ್ಪ) ನ ಜೊತೆ ಯಶವಂತಪುರ ಸಂತೆಗೆ ಹೋಗುತ್ತಿದ್ದ ದಿನಗಳನ್ನ ನೆನಪಿಸುತ್ತಿತ್ತು . ಹೀಗೆ ವರ್ಷಾನುಗಟ್ಟಲೆ ಒಂದು ನೆಲದಲ್ಲಿ ನೆಲೆ ಅಲ್ಲಿನ ಜನರ ಪರಿಚಯ ಆಗುವುದು ಕೂಡ ಸಾಮಾನ್ಯ. ಈ ನಿಟ್ಟಿನಲ್ಲಿ ಸಂತೆಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಫ್ರಾನ್ಸಿ ಎನ್ನುವ ಹುಡುಗ ಪ್ರತಿವಾರ ಸಿಕ್ಕಾಗೆಲ್ಲ ' ಓಲಾ ಅಮಿಗೋ ಹಾಸ್ ಕಾಮಿದೊ ಬೊಕದಿಯೋ ?' ಎನ್ನುತ್ತಿದ್ದ . (ಗೆಳೆಯ ಬೊಕದಿಯೋ ತಿಂದೆಯಾ ? ಎನ್ನುವ ಅರ್ಥ .

ಬೊಕದಿಯೋ ಗಟ್ಟಿ ಬ್ರೆಡ್ಡಿನ ಮಧ್ಯೆ ಚೀಸ್ ಅಥವಾ ಮಾಂಸದ ತುಂಡು ಇಟ್ಟು ತಯಾರಿಸಿದ ಸ್ಯಾಂಡ್ವಿಚ್ ) ಫ್ರಾನ್ಸಿ ಈ ಪ್ರಶ್ನೆ ಕೇಳಿದಾಗೆಲ್ಲ ನನಗೆ ಪೀಣ್ಯ ಸ್ಲಂ ನಲ್ಲಿನ ಸಂದೇಶ ಎನ್ನುವ ಹುಡುಗ ನೆನಪಾಗುತ್ತಾನೆ. ಬೆಳಿಗ್ಗೆ ಎಂಟರ ಆಸುಪಾಸಿನಲ್ಲಿ ಶಾಲೆಗೆ ಹೊರಡುತ್ತಿದ್ದ ಸಂದೇಶ ನಿತ್ಯವೂ ತಪ್ಪದೆ ' ಅಣ್ಣ ಚಿತ್ರಾನ್ನ ಆಯ್ತಾ ' ಎಂದು ಕೇಳುತ್ತಿದ್ದ. ಆ ಮಗುವಿನ ಬದುಕು ಅದೆಷ್ಟು ಏಕತಾನತೆಯಿಂದ ಕೂಡಿರಬಹದು ? ಅಣ್ಣ ತಿಂಡಿ ಆಯ್ತಾ ? ಎನ್ನುವ ಬದಲು ಚಿತ್ರಾನ್ನ ಆಯ್ತಾ ಎನ್ನಬೇಕಾದರೆ ಆ ಮಗು ಅದೆಷ್ಟು ದಿನ ಚಿತ್ರಾನ್ನ ತಿಂದಿರಬೇಡ ? ಚಿತ್ರಾನ್ನ ಬೆಳಗಿನ ಉಪಹಾರ ಎಂದು ಆ ಮಗು ಒಪ್ಪಿಯಾಗಿತ್ತು.

ಫ್ರಾನ್ಸಿ ಹಾಸ್ ದಿಸಾಯುನಾದೋ ? (ತಿಂಡಿ ಆಯ್ತಾ ) ಎನ್ನುವ ಬದಲು ಹಾಸ್ ಕಾಮಿದೊ ಬೊಕದಿಯೋ ? (ಬೊಕದಿಯೋ ತಿಂದೆಯಾ ?) ಎಂದು ಕೇಳುತ್ತಿದ್ದ. ಥೇಟ್ ಸಂದೇಶ ಚಿತ್ರಾನ್ನ ಆಯ್ತಾ ಎಂದಂತೆ . ಚಿತ್ರಾನ್ನದ ಜಾಗದಲ್ಲಿ ಬೊಕದಿಯೋ ಸ್ಥಾನ ಪಡೆದಿತ್ತು ಅಷ್ಟೇ. ನಮ್ಮ ಹುಟ್ಟು ನಮ್ಮ ಕೈಲಿಲ್ಲ . ನಾವು ಇಂತಹ ಕುಟುಂಬದಲ್ಲಿ ಹುಟ್ಟಬೇಕು ಎಂದು ಬಯಸುವುದು ಕೂಡ ಸಾಧ್ಯವಿಲ್ಲ . ಜಗತ್ತಿನ ವ್ಯವಹಾರಗಳು ತಿಳಿಯಲು ಶುರುಮಾಡಿದ ಮೇಲಷ್ಟೇ ಓಹ್ಹೋ ನಾನು ಇಂತಹ ಜಾತಿಗೆ , ಧರ್ಮಕ್ಕೆ ಅಥವಾ ಇಂತಹ ಪ್ರಭಾವಿ ಅಥವಾ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ ಎನ್ನುವುದು ತಿಳಿಯುತ್ತದೆ .

ವ್ಯಕ್ತಿಯ ಮಟ್ಟಿಗೆ ಹುಟ್ಟಿನ ಮತ್ತು ಸಾವಿನ ಮೇಲೆ ಎಳ್ಳಷ್ಟೂ ನಿಯಂತ್ರಣವಿಲ್ಲ . ಇವುಗಳ ನಡುವಿನ ಜೀವನದಲ್ಲೂ ಕೂಡ ನಮ್ಮ ನಿಯಂತ್ರಣ ಅಷ್ಟಕಷ್ಟೇ . ನಮ್ಮ ಕೈಲಿರುವುದು ಯಾವ ಮಾರ್ಗದಲ್ಲಿ ಬದುಕ ಸಾಗಿಸಬೇಕು ಎನ್ನುವುದಷ್ಟೆ ನಂತರದ ಪ್ರಯಾಣದಲ್ಲಿ ಎದುರಾಗುವ ಗೆಲುವು ಅಥವಾ ಸೋಲುಗಳಲ್ಲಿ ಕೂಡ ನಮ್ಮ ನಿಯಂತ್ರಣ ಹೇಳಿಕೊಳ್ಳುವಂತದ್ದಲ್ಲ . ಫಲಿತಾಂಶ ನಮ್ಮ ಕೈಲಿಲ್ಲ. ಜೀವನದಲ್ಲಿ ನಡೆಯುವ 99ಪ್ರತಿಶತ ಘಟನೆಗಳ ಮೇಲೆ ನಮ್ಮ ಹಿಡಿತವಿಲ್ಲ. ನಮ್ಮ ಕೈಲಿರುವುದು 1ಪ್ರತಿಶತ ಮಾತ್ರ ! ನಮ್ಮ ಕೈಲಾದದ್ದ ಸರಿಯಾಗಿ ನಿಷ್ಠೆಯಿಂದ ಮಾಡುವುದು , ಫಲಿತಾಂಶ ಅಂದುಕೊಂಡ ಮಟ್ಟಕ್ಕೆ ಬರದಿದ್ದರೆ ಮರಳಿ ಪ್ರಯತ್ನಿಸುವುದು ಮಾತ್ರ ನಮ್ಮ ಕೈಲಿದೆ. ಉಳಿದ ಬದುಕನ್ನ ಬಂದಂತೆ ಸ್ವೀಕರಿಸುವುದು ಜಾಣತನ.

ಇನ್ನಷ್ಟು spain ಸುದ್ದಿಗಳು