ಒಂದು ಭಾನುವಾರ ರೋಗಿಗಳನ್ನು ನೋಡಿಯಾದ ಮೇಲೆ ಡಾ.ವೆಂಕಟಾಚಲ ಊರಿನಲ್ಲಿ ಹತ್ತನೆ ತರಗತಿ ಅಥವಾ ಪಿಯುಸಿ ಮುಗಿಸಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಇಲ್ಲವೆ ಎಂದು ಕೇಳಿದರು. ಅಲ್ಲಿಯೇ ಇದ್ದ ಹನುಮನ ಬೋವಿ, ನನ್ನ ಮಗಳಿದ್ದಾಳೆ ಯಾಕೆ? ಅಂದ.
ಅವಳನ್ನು ಪ್ಯಾರಾ ಮೆಡಿಕಲ್ ಕೋರ್ಸ್ ಗೆ ಸೇರಿಸುವುದಾದರೆ ನಮ್ಮ ಕಾಲೇಜಿನಲ್ಲಿ ಉಚಿತ ಪ್ರವೇಶ ಕೊಡುತ್ತೇನೆ. ಆದರೆ ಕೋರ್ಸ್ ಮುಗಿದ ಮೇಲೆ ಇಲ್ಲಿಯೇ ಕೆಲಸ ಮಾಡಬೇಕು. ಈ ಕಂಡೀಷನ್ನಿಗೆ ಒಪ್ಪಬೇಕು ಎಂದರು. ಹೊಟ್ಟೆ ಪಾಡಿಗೆ ಎಂದ ಹನುಮನಬೋವಿ. ಅವಳು ಓದಿ ಬರಲಿ, ಏನಾರ ಮಾಡೋಣ ಎಂದ ದುಗ್ಗಪ್ಪ. ಇತರೆ ಖರ್ಚನ್ನು ಶಿಕ್ಷಣ ನಿಧಿಯಿಂದ ಭರಿಸಲು ತೀರ್ಮಾನವಾಯಿತು. ಉದ್ದಮ್ಮ ವೆಂಕಟಾಚಲರ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾದಳು. ಶಿಕ್ಷಣ ನಿಧಿಯ ಮೊದಲ ಖರ್ಚು ಅದು.
ಸ.ರಘುನಾಥ್ ಅಂಕಣ: ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಆ ವಾರದ ಭಜನೆಯಲ್ಲಿ ಸುನಂದ 'ಆದದ್ದೆಲ್ಲ ಒಳಿತೆ ಆಯಿತು' ಎಂಬ ಪುರಂದರದಾಸರ ಕೀರ್ತನೆಯನ್ನು ಹಾಡಿದಳು. ನರಸಿಂಗರಾಯ ಕನಕದಾಸರ 'ಮಾನವ ಜನ್ಮ ದೊಡ್ಡದು' ಪದವನ್ನು ಹಾಡಿದ. ಕುತೂಹಲದಿಂದ ಅಂದು ಭಜನೆಗೆ ಬಂದಿದ್ದ ಡಾ.ವೆಂಕಟಾಚಲ, ಭಜನೆ ಮಾಡುವಾಗ ಎರಡೂ ಕೈಗಳನ್ನೆತ್ತಿ ತಾಳಕ್ಕೆ ತಕ್ಕಂತೆ ಚಪ್ಪಾಳೆ ಹಾಕುವುದನ್ನು ಅಭ್ಯಾಸ ಮಾಡುವಂತೆ ಸಲಹೆ ಮಾಡಿ, ಅದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುವುದಲ್ಲದೆ, ಕತ್ತಿನ ಭಾಗದಲ್ಲಿ ನೋವಿದ್ದರೆ ನಿವಾರಣೆಯಾಗುವುದೆಂದು ಹೇಳಿದರು. ಅಂದಿನಿಂದ ಭಜನೆಯ ತಾಳಕ್ಕೆ ಚಪ್ಪಾಳೆಯೂ ಸೇರಿತು.
ಒಂದು ಮಾಡುವುದೆಂದರೆ ಅದಕ್ಕೆ ಇನ್ನೊಂದು ಪೋಣಿಸಿಕೊಳ್ಳತೊಡಗಿತು. ಹೀಗಾಗಿ ಬಿಡುವಿನ ಕಾಲವೂ ಚಟುವಟಿಕೆಯಿಂದ ಕೂಡಿತು. ಜನರ ನಡವಳಿಕೆಯಲ್ಲಿ ಅವರಿಗರಿವಿಲ್ಲದೆಯೇ ಕೆಲವು ಬದಲಾವಣೆಗಳಾಗುತ್ತಿತ್ತು. ಮುಖ್ಯವಾಗಿ ಪರಸ್ಪರ ಗೌರವದಿಂದ ಕಾಣುವುದು, ಮನೆಯೊಂದಿಗೆ ಊರಿನ ಬಗ್ಗೆಯೂ ಕೊಂಚ ಯೋಚಿಸುವುದು, ಸಹಕಾರದಿಂದ ಕೃಷಿ ಕೆಲಸ ಮಾಡುವುದು. ಒಗ್ಗಟ್ಟನ್ನು ಕೆಡಿಸುವವರನ್ನು ದೂರವಿಡುವುದು.
ಇನ್ನೊಂದು ದಿನ ಭಜನೆಗೆ ಸೇರಿದಾಗ ನರಸಿಂಗರಾಯ ಗಂಡುಮಕ್ಕಳಿಗೆ, 'ಗಿಡಮರ ಬೆಳೆಸುವ ಹಿರಿಮಗ ನಾನು' ಎಂದು, ಹೆಣ್ಣುಮಕ್ಕಳಿಗೆ 'ಗಿಡಮರ ಬೆಳೆಸುವ ಹಿರಿಮಗಳು ನಾನು' ಎಂದು ಹೇಳಿಕೊಟ್ಟ. ಜನ ಇದು ಯಾವ ಸೀಮೆ ಭಜನೆ ನರಸಿಂಗನದು ಅಂದುಕೊಂಡರು. ಹೀಗೆ ನಾಲ್ಕು ಭಜನೆ ದಿನಗಳಲ್ಲಿ ನಡೆಯಿತು. ಇದು ಏನು ಹೇಳುತ್ತದೆ ಎಂದು ನರಸಿಂಗರಾಯ ಕೇಳಿದ. ಮಕ್ಕಳೆಲ್ಲ ಗಿಡನೆಡಲು ಹೇಳುತ್ತಿದೆ ಎಂದು ಕೂಗಿದರು. ಕಡಿಮೆ ನೀರಿನಿಂದ ಬೆಳೆಯುವ ಗಿಡಗಳನ್ನು ನೆಡಬೇಕು. ಅದರಿಂದ ಉಪಯೋಗವೂ ಇರಬೇಕೆಂದ. ಭಾನುವಾರ ಆ ಕೆಲಸ ಆಗಬಹುದೊ ಅಂದ. ಮಕ್ಕಳು ಹೋ ಎಂದವು.
ಶಾಲೆ ಆವರಣದಲ್ಲಿ ಲೋಳೆಸರ, ಮಂಗರವಳ್ಳಿ, ತುಳಸಿ, ಬಿಳಿದಾಸವಾಳ, ನೇರಳೆ, ಹೊಂಗೆ ಮೊದಲ ಬಾರಿಗೆ ಮಕ್ಕಳ ಕೈಯಿಂದ ನೀರುಂಡವು. ನುಗ್ಗೆ ಮರಗಳು ಇದ್ದವರಿಂದ ಕೊಂಗೆಗಳನ್ನು ತಂದು ಮನೆಮನೆ ಹಿತ್ತಲು, ಅಂಗಳಗಳಲ್ಲಿ ನೆಟ್ಟರು. ಇದರೊಟ್ಟಿಗೆ ಸಂಪಿಗೆ, ಗೋರಂಟಿ ಇಂಥವು ಬಂದವು. ಪ್ರತಿಯೊಂದು ಮನೆ ಆವರಣದಲ್ಲಿ ಒಂದಾದರೂ ಗಿಡ ಹಸುರುಡತೊಗಿತು. ಮಕ್ಕಳು ಶಾಲೆಗೆ ಹೋದ ಕೂಡಲೆ ನರಸಿಂಗರಾಯ ಹೇಳಿಕೊಟ್ಟದ್ದನ್ನು ಹೇಳುತ್ತ, ಯಾವುದಾದರು ಗಿಡಕ್ಕೆ, ಎಲೆಗೆ, ಹುವ್ವಿಗೆ ಮುತ್ತು ಕೊಡವುದನ್ನು ಸುನಂದ ಕಲಿಸಿಕೊಟ್ಟಳು.