ಸುನಂದಾಳ ಮನಸ್ಸಿನಲ್ಲಿ ಲಚ್ಮಕ್ಕ ಕೆಲವು ಪ್ರಶ್ನೆಗಳನ್ನು ಪ್ರವೇಶಗೊಳಿಸಿ ಕಾಡುತ್ತಿದ್ದಳು. ಭಿಕ್ಷೆ ಬೇಡಿಕೊಂಡು ಒಂದು ವಾರದಿಂದ ಊರಿನಲ್ಲಿದ್ದವಳು ಇದ್ದಕ್ಕಿದ್ದಂತೆ ತಿರುಪೆಯಿಂದ ಬಂದ ಹಣವನ್ನು ಊರಿಗೆ ನೀಡಿ ದೊಡ್ಡವಳಾಗಿಬಿಟ್ಟಳು. ಸಾಲದು ಅನ್ನುವಂತೆ ಊರೂರು ತಿರುಗಿ ಗಳಿಸಿದ್ದನ್ನು ಊರಿಗೆ ಕೊಟ್ಟು, ಅನ್ನವಿಕ್ಕದವರಲ್ಲಿ ಉಂಡು ವ್ಯಕ್ತಿ ಆದರ್ಶ ಹೀಗೆಯೂ ಇರುವುದೆಂದು ತೋರಿಸಿದ್ದಳು.
ಅವಳ ಮನಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದ ಅಗಣ್ಯ ಪ್ರಸಂಗಗಳು ಕೆಲವು ನೆನಪಾಗಿ ಬಂದವು. ಆದರೆ ಲಚ್ಮಕ್ಕನದು ತೀರಾ ಆಗಂತುಕ. ಎಲ್ಲಿಯವಳು, ಏನಾಗಿದ್ದಳು, ಮಾಡಿದ್ದೇನು, ಅರವತ್ತು ದಾಟಿದ್ದೀತು? ಸನ್ಯಾಸದಲ್ಲಿ ಇದೂ ಒಂದು ಬಗೆಯೆ?
ಸ.ರಘುನಾಥ ಅಂಕಣ: ಊರಿಗೆ ಊರೇ ಹೆಜ್ಜೆ ಹಾಕಿತು
ಸುನಂದ ಇದನ್ನೆಲ್ಲ ಹೇಳಿದಾಗ ಪರೋಪಕಾರಿ ಜೀವ ಎಂದಷ್ಟೇ ಹೇಳಿದ ನರಸಿಂಗರಾಯ. ಅವಳು ಹೊರಗಿನವಳಾಗಿಯೇ ಇದ್ದಿದ್ದರೆ ಇದೆಲ್ಲ ಪ್ರಶ್ನೆಗಳಿಗೆ ಉತ್ತರಬೇಕು. ಅವಳು ನಮ್ಮವಳು ಅಂತಾದ ಮೇಲೆ ಆಲೋಚನೆಯೇಕೆ ಅಂದಳು ಅಮ್ಮಯ್ಯ. ಎಂದೋ ಒಂದು ದಿನ ತಿಳಿದೀತು ಎಂದ ಅಪ್ಪಯ್ಯ.
ಸುನಂದಳ ತಲೆಗೊಂದು ವಿಷಯವನ್ನು ತುಂಬಿದ ನರಸಿಂಗರಾಯ. ಅದು ರೋಗ ಶುಶ್ರೂಷೆ ಮಾಡುವುದನ್ನು ಕಲಿಯುವುದು. ಸುನಂದಳಿಗೆ ಒಪ್ಪಿಗೆಯಾಯಿತಾದರೂ ಅದಕ್ಕೆ ಬಿಡುವು ಅವಕಾಶ ಎಲ್ಲದೆ ಎಂದಳು. ನಿನ್ನ ಕೆಲಸಗಳನ್ನು ಯಾರಾದರೂ ಹಂಚಿಕೊಂಡಾರು. ಅಮ್ಮನಿದ್ದಾಳೆ, ಕೆಂಪರಾಜನಿದ್ದಾನೆ, ನಾನಿದ್ದೇನೆ ಅಂದ. ಈ ಮಾತಿಗೆ ಅಮ್ಮಯ್ಯ, ಸಂಸಾರಿಯಾಗೊ ಅಂತ ಮದುವೆ ಮಾಡಿದರೆ, ಇವನು ಊರಿನ ಸಂಸಾರ ಕಟ್ಟಿಕೊಂಡಿರುವುದಲ್ಲದೆ, ನನ್ನನ್ನೂ ಹಾಗೆಯೇ ಮಾಡಲು ಹೊರಟಿದ್ದಾನೆ ಎಂದು ಗಂಡನ ಮುಖ ನೋಡಿದಳು. ಆಯಿತು ರಾತ್ರಿಯ ಅಡುಗೆ ಭಟ್ಟ ನಾನೇ ಎಂದ ಅಪ್ಪಯ್ಯ ನಗುತ್ತ.
ನರಸಿಂಗರಾಯನಿಗೆ ಡಾಕ್ಟರ್ ವೆಂಕಟಾಚಲ ಆಪ್ತರು. ಅವರಲ್ಲಿ ವಿಷಯ ಪ್ರಸ್ತಾಪಿಸಿದ. ಇದು ಒಳ್ಳೆಯದೇ. ಇದರಿಂದ ಆರೋಗ್ಯ ಕಾರ್ಯಕರ್ತೆಯರಿಗೆ, ವೈದ್ಯರಿಗೆ ಕಾರ್ಯಭಾರದ ಒತ್ತಡ ಕಡಿಮೆಯಾಗುತ್ತದೆ. ಸುನಂದ ಒಂದಾರು ತಿಂಗಳು ನಮ್ಮ ನರ್ಸಿಂಗ್ ಹೋಮಿಗೆ ಬಂದು ಕಲಿಯಲಿ. ಸಂಜೆ ಮನೆಗೆ ಹೋಗಲು ಅನುಕೂಲವಾಗದ ದಿನ ನಮ್ಮ ಆಂಬ್ಯುಲೆನ್ಸ್‍ನಲ್ಲಿ ಬಿಟ್ಟು ಬರುವ ವ್ಯವಸ್ಥೆ ಮಾಡೋಣ. ಈ ಆರು ತಿಂಗಳು ಮುಗಿದ ಮೇಲೆ ತಿಂಗಳಿಗೊಂದು ದಿನ ನಾನು ನಿಮ್ಮೂರಿಗೆ ಬರುತ್ತೇನೆ. ನಿಮ್ಮನ್ನು ಸ್ಫೂರ್ತಿಯಾಗಿ ಪಡೆದು ಇಂಥವರು ಮುಂದೆ ಬರುವಂತಾಗಲಿ ಎಂದರು.
ಆರು ತಿಂಗಳು ಅಂದುಕೊಂಡಿದ್ದು ಎಂಟು ತಿಂಗಳಾಯಿತು. ಗರಡಿಗೆಂದು ಕಟ್ಟಿದ ಗುಡಿಸಲ ನೆತ್ತಿಯಲ್ಲಿ 'ನಮ್ಮೂರ ಧನ್ವಂತರಿ ಆಲಯ' ಎಂಬ ಬೋರ್ಡು ಕುಳಿತುಕೊಂಡತು. ಅಡಿಯಲ್ಲಿ ಡಾ. ವೆಂಕಟಾಚಲ, ಚಿಕಿತ್ಸಾ ಮಾರ್ಗದರ್ಶಕರು ಎಂದು ಬರೆಯಲಾಯಿತು.
ಹಿರಿಯ ವೈದ್ಯ ಊಲವಾಡಿ ಚೌಡರೆಡ್ಡಿ, ಹಾಗು ಜಿಲ್ಲಾ ಅಧಿಕಾರಿ ಡಾ. ಚಂದನ್ ಕುಮಾರ್ ರಿಂದ ಉದ್ಘಾಟನೆ ನೆರವೇರಿದ್ದಲ್ಲದೆ, ಈ ಕಾರಣದಿಂದ ಆ ಮುವ್ವರೂ ಊರ ವೈದ್ಯರಾದರು. ವಿಷಯ ತಿಳಿದ ಸ್ತ್ರೀ ರೋಗತಜ್ಞೆ ಚಂದ್ರಕಲಾ ನಾನೂ ಜೊತೆಗಿದ್ದೇನೆ ಎಂದು ಮುಂದೆ ಬಂದರು. ತಿಂಗಳ ನಾಲ್ಕು ಭಾನುವಾರ ವೈದ್ಯರ ದಿನಗಳಾದವು. ಹತ್ತಿರದ ಊರುಗಳ ಜನ ಇದರ ಉಪಯೋಗ ಪಡೆದರು.
ಈ ಬೆಳವಣಿಗೆಯಿಂದ ಪೇಶೆಂಟುಗಳನ್ನು ಗಣನೀಯವಾಗಿ ಕಳೆದು ಕೊಂಡ ಕೆಲವರು ಆರೋಗ್ಯ ಇಲಾಖೆಗೆ ಮೂಗರ್ಜಿ ಬರೆದು, ಯಾವುದೇ ರೀತಿಯ ಅಧೀಕತ ವೈದ್ಯಕೀಯ ಶಿಕ್ಷಣವಿಲ್ಲದ ಮಹಿಳೆಯೊಬ್ಬರು ನಿಯಮ ಬಾಹಿರವಾಗಿ, ಹೈಜನಿಕ್ ಅಲ್ಲದ ಗುಡಿಸಲಿನಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿ ದೂರು ನೀಡಿದರು. ಅದರ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಡಾ. ಚಂದನ್‍ಕುಮಾರ್ ಅವರಿಗೆ ಆದೇಶ ಸಿಕ್ಕಿತು. ಅವರು, ಸುನಂದ ಅಪಕಾಲೀನ ತರಬೇತಿ ಪಡೆದ ದಾಖಲೆಯನ್ನು ನೀಡಿ, ಆಕೆ ಕೇವಲ ವೈದ್ಯರ ಸೂಚನಾ ಪಾಲಕಿಯಷ್ಟೆ ಎಂದು ವರದಿ ಸಲ್ಲಿಸಿದರು..