• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ.ರಘುನಾಥ್ ಅಂಕಣ: ನಾಟಕದ ಯಶಸ್ಸಿನ ಕಿರೀಟ ಊರಿನದೆಂದ ನರಸಿಂಗರಾಯ

|

ಮೋಟಪ್ಪ ಆಡಿದ ಊರೂಟದ ಮಾತು ಅಪ್ಪಯ್ಯನನ್ನು ಚಿಂತೆಗೀಡು ಮಾಡಿತು. ಊರೂಟ ಮಾಡಿಸುವಷ್ಟು ಸಾಮರ್ಥ್ಯ ತನ್ನದೆ ಎಂದು ಪೇಚಾಡಿದ. ವಿಷಯ ತಿಳಿದು ಬೀರಣ್ಣ, ದುಗ್ಗಪ್ಪ, ಮುನೆಂಕಟೇಗೌಡ ಹೇಳಿದ್ದು ಒಂದೇ ಮಾತು 'ಹೆಣ್ಣು ಗಂಡು ನಮ್ಮ ಮನೆಯವರು. ಊಟ ಹಾಕಿಸುವ ಚಿಂತೆ ನಿನಗೆ ಯಾಕೆ ಅಪ್ಪಯ್ಯ?'

ಊರೂಟ ಭರ್ಜರಿಯಾಗಿ ನಡೆಯಿತು. ಅರಿಸಿನದ ಮೈ ಆರಿಲ್ಲ. ಹೊರಗೆ ಹೋಗುವಂತಿಲ್ಲ ಎಂದು ಹೆಂಗಸರು ಕಟ್ಟಪ್ಪಣೆ ಮಾಡಿದ್ದರಿಂದ ನರಸಿಂಗರಾಯನ ಪರವಾಗಿ ಪಿಲ್ಲಣ್ಣ ಒತ್ತಾಯದಿಂದ ಕುಳ್ಳಪ್ಪನನ್ನು ಊಟಕ್ಕೆ ಕರೆತಂದ. ಅವನ ಹೆಂಡತಿ ಲಗುಮಕ್ಕ ಇದಕ್ಕಾಗಿ ಕಾದಿದ್ದವಳಂತೆ ಹೇಳಿಸಿಕೊಳ್ಳದೆಯೇ ಹೊರಟಳು.

ಸ ರಘುನಾಥ ಅಂಕಣ; ಟ್ರಂಕು ಸೇರಿದ ಸದಾರಮೆ ನಾಟಕದ ನೋಟುಬುಕ್ಕು

ಊಟ ಮುಗಿಸಿ, ಅವಳಿಗೆ ಪ್ರಿಯವಾದ ನಾಟಿಎಲೆ, ಬಟ್ಟಲಡಿಕೆ ಬಾಯಿತುಂಬಿಸಿಕೊಂಡು, ಅದರ ಆನಂದವನ್ನು ಅನುಭವಿಸುತ್ತ, ಗಂಡನೊಡನೆ ಮನೆಗೆ ಹೆಜ್ಜೆ ಹಾಕುತ್ತ, ನೋಡಿದಿಯಾ ಅವರ ದೊಡ್ಡಗುಣಾನಾ? ಅವರ ಜೊತೆ ಕಂಟು (ಹಗೆ) ಕಟ್ಟಿಕೋಬ್ಯಾಡ. ನ್ಯಾಸ್ತಾ (ಗೆಳತನ) ಮಾಡು' ಅಂದು ಅವನ ಮೂತಿಗೆ ಹೆಟ್ಟಿದಳು. ಆಯ್ತಾಯ್ತು ನಡಿನಡಿ ಅಂದ ಕುಳ್ಳಪ್ಪ. ಏನಾದುದು ಅಂದಳು. ಅದೇ ನೀನು ಹೇಳಿದ್ದು ಅಂದ.

ಇನ್ನು ಬೇಕಾದ ಹಾಗೆ ಓಡಾಡಿಕೊಳ್ಳಪ್ಪ ಎಂದು ಅಮ್ಮಯ್ಯ ಹೇಳಿದಾಗ, ಅಬ್ಬಾ! ಸೆಂಟ್ರಲ್ ಜೈಲಿನಿಂದ ಬಿಡುಗಡೆ ಆದಂತಾಯಿತು ಅಂದು ನರಸಿಂಗರಾಯ, ಅಮ್ಮನ ಮುಂದೆಯೇ ಸುನಂದಳ ಜಡೆ ಹಿಡಿದೆಳೆದು ನಕ್ಕ. ಎಲ್ಲಿ ಹೋಗುತ್ತೆ ಅಪ್ಪನ ಗುಣ ಅಂದ ಅಮ್ಮಯ್ಯ ನಾಲಗೆ ಕಚ್ಚಿಕೊಂಡಳು. ಸುನಂದ ನಾಚಿ ಅಡುಗೆ ಮನೆಗೆ ಓಡಿದಳು.

ಸುನಂದಳಿಗೆ ತಾಳಿ, ಸೀರೆಯನ್ನು ಅರಿಸಿನ ಕುಂಕುಮ ಸಹಿತ ಕೊಟ್ಟ ದಿನದಿಂದ ಕೆಂಪರಾಜ ನರಸಿಂಗರಾಯನ ಗೆಳೆಯರ ಬಳಗದಲ್ಲಿ ಒಬ್ಬನಾಗಿದ್ದ. ಈ ಐವರೂ ಹುಣಿಸೆ ತೋಪಿಗೆ ಹೋದ ಸ್ವಲ್ಪ ಹೊತ್ತಿಗೆ ಕುಳ್ಳಪ್ಪ ಬಂದು ಕುಳಿತಿದ್ದು, ಗೆಳೆಯರನ್ನು ಆಶ್ಚರ್ಯದಲ್ಲಿ ಮುಳುಗಿಸಿತು. ಮಾತನಾಡುತ್ತಿದ್ದವರು ತನ್ನನ್ನು ಕಂಡು ಮೌನವಾದುದನ್ನು ಗಮನಿಸಿದವನು, ನಾನು ನಿಮ್ಮ ಜೊತೆಗೆ ಬೇಡ ಅನ್ನೋದಾದರೆ ಹೋಗ್ತೀನಿ ಅಂದ. ಬೇಡವಂದೋರಾರೊ ಮಾರಾಯ, ಟೂ ಬಿಟ್ಟೋನು ನೀನೆ ಅಲ್ವ? ನಾವು ಯಾರಾದ್ರು ಬಿಟ್ಟೆವ? ಜೊತೆ ಸೇರುತೀನಿ ಅಂದ್ರೆ ಬೇಡ ಅಂತೀವ ಎಂದು ಆಟವಾಡುವ ಹುಡುಗರಂತೆ ಹೇಳಿ, ಬಾ ಎಂದು ಪಕ್ಕದಲ್ಲಿ ಕೂರಿಸಿಕೊಂಡ ನರಸಿಂಗರಾಯ.

ಸ ರಘುನಾಥ ಅಂಕಣ; ವ್ಯವಹಾರ ಕುದುರಿಸಿ ಸಾಕ್ಷಿಯಾದ ನರಸಿಂಗರಾಯ

ಮಾತು ನಾಟಕದ ದಿನಕ್ಕೆ ಹೋಯಿತು. ಶಕುಂತಲೆ ದೋಣಿಯಲ್ಲಿ ಹೋಗುವ ದೃಶ್ಯದಲ್ಲಿ ಸ್ಟೇಜನ್ನು ಕಣ್ಗತ್ತಲೆಗೊಳಿಸಿ ಸುನಂದಳಿಂದ ಹಾಡಿಸಿದ 'ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರ' ಹಾಡು ತುಂಬ ಅದ್ಭುತವಾಗಿತ್ತು. ಈ ಐಡಿಯ ಹೇಗೆ ಬಂತು ಎಂದು ಬೋಡೆಪ್ಪ ಕೇಳಿದ.

ಶಿವರುದ್ರಪ್ಪನವರ ಗೀತೆಯನ್ನೇನೋ ಆರಿಸಿಬಿಟ್ಟೆ. ಆದರೆ ಅದನ್ನು ರಂಗದಲ್ಲಿ ಕೇಳಿಸುವ ಬಗ್ಗೆ ಚಿಂತೆಯಿತ್ತು. ಸುನಂದಳೇ ಈ ತಂತ್ರವನ್ನು ತಿಳಿಸಿದ್ದು. ನಾಟಕದಲ್ಲಿನ ಅವಳ ಅನುಭವಿದು ಎಂದು ಮೆಚ್ಚುಗೆಯಿಂದ ಹೇಳಿದ ನರಸಿಂಗರಾಯ. ಸ್ಟೇಜಿನ ಹಿಂದೆ ಇದ್ದು ಕೋಲಾರದ ಪುರುಷೋತ್ತಮರಾಯ ಹಾಡಿದ 'ಸಿಂಹನೊಡನಾಡುತ್ತ' ಹಾಡು ಕೇಳುತ್ತಿರುವಾಗಲೆ ದುಷ್ಯಂತನ ಪ್ರವೇಶವಾದುದಂತೂ ಜನ ತಲೆದೂಗುವಂತಿತ್ತು.

ಎಲ್ಲಿಂದ ಹಿಡಿದು ತಂದೆ ಅವರನ್ನು ಎಂದು ರಂಗ ಕೇಳಿದ, ಅವನು ಹಳೆಯ ನೇಸ್ತ. ಹಾಡೋದನ್ನ ನಿಲ್ಲಿಸಿಬಿಟ್ಟಿದ್ದ. ಒಪ್ಪಿಸಲು ಕಾಲಿಗೆ ಬೀಳುವುದೊಂದು ಬಾಕಿಯಿತ್ತು. ಮೊಂಡ ಅಂದರೆ ಮೊಂಡ. ಅವನ ಮನೆಯವರನ್ನು ಮುಂದೆ ಹಾಕಿ ಒಪ್ಪಿಸಿದ್ದು ಸಾರ್ಥಕವಾಯಿತು ಎಂದ ನರಸಿಂಗರಾಯ. ಪಿಲ್ಲಣ್ಣ ಸಂಭಾಷಣೆ ಮರೆತು ನಿಂತದನ್ನು ಆಕ್ಷೇಪಣೆಯೊಂದಿಗೆ ಹೇಳಿದ. ಅವನ ಹುಡುಗಿ ಪುಟ್ಟೀರಿನ ನೋಡ್ತ ಮಾತು ಮರೆತಿದ್ದು ಎಂದು ರಂಗ. ತಪ್ಪಾಯ್ತು ಅಂದ ಪಿಲ್ಲಣ್ಣ, ಮುಂದಿನ ಟೀಕೆಗಳಿಂದ ಬಚಾವಾದ.

ಅಪ್ಪಯ್ಯ ಕಣ್ವನ ಪಾತ್ರ, ಹಾರ್ಮೋನಿಯಂ ಅನ್ನು ನಿಭಾಯಿಸಿದ ರೀತಿಯ ಬಗ್ಗೆ ಎಲ್ಲರೂ ಅಭಿಮಾನಪಟ್ಟರು. ತಬಲದ ಮೇಲೆ ಆಡುತ್ತಿದ್ದ ಮೋಟಪ್ಪನ ಕೈ ಬೆರಳುಗಳನ್ನು ನೋಡುವುದೇ ಒಂದು ಸೊಬಗು ಅನ್ನಿಸುತ್ತಿತ್ತು ಎಂದು ಕುಳ್ಳಪ್ಪ ಹೇಳುವ ಹೊತ್ತಿಗೆ, ಏನದು ನನ್ನ ಹೆಸರು ಹಿಡಿದು ಆಡುತ್ತಿರುವ ಮಾತು ಅನ್ನುತ್ತ ಮೋಟಪ್ಪ ಬಂದ.

ಏನಿಲ್ಲ, ನೀನು ತಬಲ ನುಡಿಸೊ ಸೊಗಸಿಗೆ ತೊಲ ಬಂಗಾರ ಐವತ್ತು ರೂಪಾಯಿ ಆದ ಕೂಡಲೆ ನಿನ್ನ ಕೈಗಳಿಗೆ ಕಡಗ ಮಾಡಿಸೋಣ ಅಂತ ನರಸಿಂಗ ಹೇಳ್ತಿದ್ದ ಎಂದು ಕೆಂಪರಾಜ ನಕ್ಕ. ನೀವು ಕಡಗ ಮಾಡಿಸೋದೂ ಗಿಣಿ ಬಾಯಿಗೆ ಬೂರುಗದ ಕಾಯಿ ಸಿಕ್ಕೋದು ಎರಡೂ ಒಂದೆ ಅಂದವನು, ನರಸಿಂಗ ನಾಟಕದ ಯಶಸ್ಸಿನ ಕಿರೀಟ ಪಡೆದುಕೊಂಡಬಿಟ್ಟ ಅಂದ. ಆ ಮಾತಿಗೆ ನರಸಿಂಗರಾಯ, ಈ ಕಿರೀಟ ನಾಟಕ ನೋಡಿ ಮೆಚ್ಚಿದವರದು. ಮುಖ್ಯವಾಗಿ ಊರಿನದು ಅಂದ.

English summary
"man and woman are our family. Why worry about having lunch?' Munenkategowda Said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X