ಸ ರಘುನಾಥ ಅಂಕಣ; ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ...
ಕೂತರೆ ನಿಂತರೆ ನಾಟಕದ ಧ್ಯಾನವಾಯಿತು ನರಸಿಂಗರಾಯನಿಗೆ. ಅಪ್ಪಯ್ಯ ಪೂರ್ಣಗೊಳಿಸದ 'ಕಣ್ವಪುತ್ರಿ'ಯನ್ನು ಪೂರ್ಣಗೊಳಿಸಲು ಹೇಳಿದ. ಆ ಮಾತಿಗೆ ಅಪ್ಪಯ್ಯ, ನನಗೆ ಹೊತ್ತೆಲ್ಲೋ ಇದೆ ಅಂದು, ನಂತರ ಆಯ್ತು ಅಂದ.
ನರಸಿಂಗರಾಯ ದೃಶ್ಯಗಳ ಚಿತ್ರ ಬಿಡಿಸಲು ಸುನಂದಾಳ ನೆರವು ಪಡೆದ. ಊರಿನ ಜನರಿಗೆ ಶಕುಂತಲೆಯ ಕಥೆ ಅಪರಿಚಿತವಾದ್ದರಿಂದ ಸಖಿ, ಸೂತ್ರಧಾರರ ಮೂಲಕ ಪದ್ಯ, ಹಾಡಿನ ರೂಪದಲ್ಲಿ ಶಕುಂತಲೆ ಕನ್ಯೆಯಾಗುವವರೆಗೆ ಹೇಳಿಸುವುದು. ಹಿನ್ನೆಲೆಯಾಗಿ ಪರದೆಯ ಮೇಲೆ ವಿಶ್ವಾಮಿತ್ರ, ಮೇನಕೆಯರ ಮಿಲನದ ಚಿತ್ರ, ಅದು ಸರಿದಾಗ ಕಣ್ವನು ಮಗುವಿನೊಂದಿಗೆ ಆಶ್ರಮಕ್ಕೆ ಬರುವ ಚಿತ್ರ, ಅದು ಸರಿಯುತ್ತಲೆ, ಶಕುಂತಲೆ, ಪ್ರಿಯಂವದೆ, ಅನಸೂಯೆ ಕೊಳದಲ್ಲಿ ಜಳಕವಾಡುವ ಚಿತ್ರ. ಪರದೆ ಸರಿಯುತ್ತಲೆ ರಂಗದ ಮೇಲೆ ಬೆಳದಿಂಗಳು. ಹಿನ್ನೆಲೆಯ ಪರದೆಯಲ್ಲಿ ಅಶೋಕ ವೃಕ್ಷಗಳ ನಡುವೆ ಹುಣ್ಣಿಮೆ ಚಂದ್ರ. ಶಕುಂತಲೆ, ಸಖಿಯರ ಹಾಡು, ಲಾಸ್ಯ. ಪರದೆ ಇಳಿದು ಮೇಲೆದ್ದಾಗ ವನ ವರ್ಣನೆಯ ಪದ್ಯ ಹಾಡುತ್ತ ದುಷ್ಯಂತನಾಗಮನ. ಶಕುಂತಲೆಯ ದರ್ಶನ. ಗಾಂಧರ್ವ ವಿವಾಹ, ಉಂಗುರ ಪ್ರದಾನ.
ಸ ರಘುನಾಥ ಅಂಕಣ; ಹಾರುಗುದುರೆ ಬೆನ್ನು ಏರಿದ ನಾಟಕದ ಉತ್ಸಾಹ
ಮೈರೆತು ಕುಳಿತ ಶಕುಂತಲೆ. ದುರ್ವಾಸ ಪ್ರವೇಶ. ಶಾಪ, ವಿಮೋಚನೆಯ ವರ. ಮುಂದಿನ ದೃಶ್ಯ ಕಣ್ವಾದಿ ಮುನಿಜನ ನದಿ ದಡದಲ್ಲಿ ಶಕುಂತಲೆಯನ್ನು ಬೀಳ್ಕೊಡುವ ದೃಶ್ಯ. ತೆರೆಯ ಮೇಲೆ ನದಿಯಲ್ಲಿ ದೋಣಿ ಸಾಗುವಾಗ ಶಕುಂತಲೆ ನೀರಿನಲೆಯಲ್ಲಿ ಕೈಯಾಟವಾಡುವ ಚಿತ್ರ. ಹಿನ್ನೆಲೆಯಲ್ಲಿ ಜಿ.ಎಸ್.ಶಿವರುದ್ರಪ್ಪನವರ ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರ' ಗೀತೆ.
ರಂಗದಲ್ಲಿ ದುಶ್ಯಂತನ ಸಭೆ. ಶಕುಂತಲೆಯ ಪ್ರವೇಶ. ದುಶ್ಯಂತ, ಅಭಿಜ್ಞಾನ ಕೇಳಿ, ತಿರಸ್ಕರಿಸುವ ಪದ್ಯವನ್ನು ಹಾಡುತ್ತಾನೆ. ಇಲ್ಲಿ ಶಕುಂತಲೆಗೆ ನಿಂದಾತ್ಮಕ ನುಡಿಗಳ ಹಾಡು ಇರುತ್ತದೆ. ಪರದೆಯಲ್ಲಿ ಕಾಡಿನ ಮಧ್ಯೆ ಮಾರೀಚ ಮುನಿಯ ಆಶ್ರಮದ ಚಿತ್ರ ಇರುವುದೆಂದು ಮುಂದಿನ ದೃಶ್ಯದ ವಿವರಣೆಗೆ ಹೋದಾಗ, ಸುನಂದಾ ಆ ಹಾಡು ಯಾವುದೆಂದು ಕೇಳಿದಳು. ಪ್ರಾಕ್ಟೀಸಿನಲ್ಲಿ ಬರುತ್ತದೆ ಬಿಡು ಎಂದರೂ ಕೇಳಲಿಲ್ಲ. ಮಣಿದ ನರಸಿಂಗರಾಯ ಹಾಡನ್ನು ಅವಳ ಕೈಗೆ ಕೊಟ್ಟ. ಎರಡು ಸಲ ಮನಸ್ಸಿಟ್ಟು ಓದಿಕೊಂಡವಳು ಕಣ್ಣು ಮುಚ್ಚಿ ಹಾಡಿದಳು:
ಸ ರಘುನಾಥ ಅಂಕಣ; ನರಸಿಂಗರಾಯನಲ್ಲಿ ಅವನದೇ ಪ್ರಶ್ನೆಗಳು
ಏನನಾಡಿದೆ ರಾಜ್ಯವಾಳೊ ಅರಸ ನಿನಗೆ
ಇಂಥ ನುಡಿಯು ಗುಣವೆ?
ಹೆಣ್ಣು ಇಂತು ಸಭೆಗೆ ಬಂದು
ನಿಂದುದಿದಿಯೆ ಲೋಕದೆ?
ನುಡಿಯ ಕಿಚ್ಚನುಂಡೆ ಮಾಡಿ
ಎಸೆದೆ ನೊಂದ ಹೃದಯಕೆ.
ಕಾಡಿನಲ್ಲೆ ಬೇಟೆಯಲ್ಲ
ನಾಡಿನಲ್ಲು ಇರುವುದೆಂದು
ನುಡಿಯ ಬಾಣದಿಂದ ನನ್ನ
ಬೇಟೆಯಾಡಿ ತೋರಿದೆ.
ಹಾಡುತ್ತಿದ್ದವಳ ಕಣ್ಣಂಚಿನಲ್ಲಿ ನೀರು ಕಂಡು ಬೆರಗಾದ ನರಸಿಂಗರಾಯ, ಈ ಹಾಡಿನಿಂದಲೇ ಇವಳು ಅರ್ಧ ನಾಟಕವನ್ನು ಗೆಲ್ಲಿಸುತ್ತಾಳೆ ಎಂದುಕೊಂಡು ಸಂತೋಷಗೊಂಡ. ಆದರೆ ಸುನಂದಾ ಇನ್ನೂ ಆ ದುಃಖಾದ್ರತೆಯಲ್ಲಿಯೇ ಇರುವುದನ್ನು ಕಂಡು ಬೆರಗಾದ. ಇಂದಿಗೆ ಇಲ್ಲಿಗೆ ನಿಲ್ಲಿಸೋಣವೆಂದ. ಅವಳು ಮುಂದುವರೆಸಲು ಹೇಳಿದಳು.
ಬೆಸ್ತನಿಂದ ದೊರೆತ ಉಂಗುರ ಹಿಡಿದು, ಶಕುಂತಲೆಯನ್ನು ನೆನೆಯುತ್ತ ಪರಿತಪಿಸುತ್ತ ಕುಳಿತ ದುಷ್ಯಂತ. ಹಾಡು.
ಮುಂದಿನ ದೃಶ್ಯದಲ್ಲಿ ಮಾರೀಚಾಶ್ರಮ. ಕುಮಾರ ಭರತ ಸಿಂಹದೊಡನೆ ಆಡುತ್ತಿರುವಾಗ ಹಿನ್ನೆಲೆಯಲ್ಲಿ ಹಾಡು. ಇಲ್ಲಿ ಬಿ.ಎ.ಸನದಿಯವರ 'ಸಿಂಹನೊಡನಾಡುತ್ತ ಹಲ್ಲುಗಳ ಎಣಿಸಿದವ ನಮ್ಮ ಭರತ' ಗೀತೆ ಎಂದು ಗುರುತು ಹಾಕಿದ. ಹಾಡು ಮುಗಿಯುತ್ತಿದ್ದಂತೆ ಭರತನ ಆಗಮನ. ತಾಯತ್ತಿನ ಮಹತ್ವ. ಶಕುಂತಲೆ, ದುಷ್ಯಂತರ ಮರುಕೂಡಿಕೆ.
ಮಂಗಳ ದೃಶ್ಯದಲ್ಲಿ ಎಲ್ಲ ಪಾತ್ರಗಳೂ ರಂಗದ ಮೇಲೆ ನೆರೆಯುವಂತೆ ರೂಪಿಸಿದರೆ ಹೇಗೆಂದು ಸುನಂದಾ ಕೇಳಿದಳು. ಅದಕ್ಕೆ ಸರಿಹೋಗದೇನೊ ಎಂದು ಅನುಮಾನಿಸಿದ ನರಸಿಂಗರಾಯ. ಇದರಿಂದ ಅಪ್ಪಯ್ಯ, ಮೋಟಪ್ಪ, ದುಗ್ಗಪ್ಪ, ಬೀರಣ್ಣ ಚರ್ಚೆಗೆ ಕೂರಬೇಕಾಯಿತು. ಹರಿಕಥೆ ಮಾಡಿದ ಅನುಭವದಲ್ಲಿ ಅವಳು ಹೇಳಿದ್ದು ಸರಿಯಿದೆ. ಈ ದೃಶ್ಯ ಮನದಲ್ಲಿ ನಿಲ್ಲುತ್ತೆ ಎಂಬ ಅಭಿಪ್ರಾಯವನ್ನು ನರಸಿಂಗರಾಯ ಒಪ್ಪಿದ.